ಲಂಡನ್: 2017ರಲ್ಲಿ ಅಂಟಾರ್ಟಿಕ್ ನ ಮಂಜಿನ ಗೋಡೆಯನ್ನೇ ಒಡೆದುಹಾಕಿದ್ದ, ವಿಶ್ವದ ಅತಿದೊಡ್ಡ ಮಂಜುಗಡ್ಡೆಯ ತುಂಡು (ಐಸ್ ಬರ್ಗ್) ಈಗ ದಕ್ಷಿಣ ಅಟ್ಲಾಂಟಿಕ್ ಸಮುದ್ರದ ದಕ್ಷಿಣ ಜಾರ್ಜಿಯಾ ದ್ವೀಪದತ್ತ ಸಂಚಾರ ಆರಂಭಿಸಿರುವುದು ಆತಂಕಕ್ಕೆ ಕಾರಣವಾಗಿದೆ.
ಈ ಬೃಹತ್ ಮಂಜುಗಡ್ಡೆಗೆ ರಾಷ್ಟ್ರೀಯ ಮಂಜುಗಡ್ಡೆ ಕೇಂದ್ರ(ಎನ್‌ಐಸಿ) ಎ68ಎ ಎಂದು ನಾಮಕರಣ ಮಾಡಿದೆ. ಸಮುದ್ರದ ನೀರಿನ ಹರಿವಿನ ವೇಗಕ್ಕೆ ಸಿಲುಕಿ ಈ ಮಂಜುಗಡ್ಡೆಯು ಜಾರ್ಜಿಯಾ ದ್ವೀಪವನ್ನು ಸಮೀಪಿಸುತ್ತಿದೆ. ಪ್ರಸ್ತುತ ಇದು ದಕ್ಷಿಣ ಜಾರ್ಜಿಯಾ ಕರಾವಳಿಯಿಂದ 31 ಮೈಲುಗಳಷ್ಟು ದೂರದಲ್ಲಿದೆ.
ಈ ದ್ವೀಪವು ಭಾರೀ ಸಂಖ್ಯೆಯ ಪೆಂಗ್ವಿನ್‌ಗಳು, ಸೀಲ್ ಮತ್ತು ಇತರೆ ವಿಶಿಷ್ಟ ವನ್ಯಜೀವಿಗಳ ಆವಾಸಸ್ಥಾವವಾಗಿದೆ. ಈಗ ಒಂದು ವೇಳೆ ಸಮುದ್ರದ ನೀರು 650 ಅಡಿ ದಪ್ಪನೆಯ ಈ ಮಂಜುಗಡ್ಡೆಯ ತುಂಡನ್ನು ಉತ್ತರ ದಿಕ್ಕಿನತ್ತ ನೂಕಿಬಿಟ್ಟರೆ, ಅದು ಬಂದು ಈ ದ್ವೀಪಕ್ಕೆ ಡಿಕ್ಕಿ ಹೊಡೆಯುವ ಭೀತಿಯಿದೆ.
ಹೀಗಾದರೆ, ಅಲ್ಲಿರುವಂಥ ಜೀವಿಗಳಿಗೆ ಭಾರೀ ಅಪಾಯ ಎದುರಾಗಲಿದೆ ಎಂದು ಈ ಐಸ್‌ಬರ್ಗ್ ಅನ್ನು ಟ್ರ್ಯಾಕ್ ಮಾಡುತ್ತಿರುವ ಬ್ರಿಘಾಂ ಯಂಗ್ ವಿವಿಯ ರಿಮೋಟ್ ಸೆನ್ಸಿಂಗ್ ಕೇಂದ್ರದ ನಿರ್ದೇಶಕರು ಆತಂಕ ವ್ಯಕ್ತಪಡಿಸಿದ್ದಾರೆ.