Advertisement

ಪಾಲಕರ ಜತೆ ಹೋಗಲು ನಿರಾಕರಿಸಿದ ಯುವತಿ

10:31 AM Apr 08, 2022 | Team Udayavani |

ಹುಬ್ಬಳ್ಳಿ: ಅನ್ಯ ಧರ್ಮೀಯ ಯುವಕ- ಯುವತಿ ಪ್ರೀತಿಸಿ ಮದುವೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕುಟುಂಬದವರೊಡನೆ ಹೋಗಲು ನಿರಾಕರಿಸಿದ ಘಟನೆ ನಡೆಯಿತು.

Advertisement

ಪ್ರತಿಭಟನೆಗೆ ಕಾರಣವಾಗಿದ್ದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಯುವತಿಯನ್ನು ಕೇಶ್ವಾಪುರ ಠಾಣೆಗೆ ಕರೆದುಕೊಂಡು ಬಂದಿದ್ದರು. ಈ ಸಮಯದಲ್ಲಿ ಯುವತಿ ಕುಟುಂಬದವರು ಹಾಗೂ ಎಸ್‌ಎಸ್‌ಕೆ ಸಮಾಜದ ಪ್ರಮುಖರನ್ನು ಠಾಣೆಗೆ ಕರೆಸಲಾಗಿತ್ತು. ಕುಟುಂಬದ ಸದಸ್ಯರು ಹಾಗೂ ಸಮಾಜದ ಪ್ರಮುಖರು ಯುವತಿಯ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಯಾವುದೇ ಕಾರಣಕ್ಕೂ ಕುಟುಂಬದವರೊಡನೆ ಹೋಗಲು ಒಪ್ಪಲಿಲ್ಲ.

ಈ ಸಂದರ್ಭದಲ್ಲಿ ಯುವತಿಯ ತಾಯಿ ನೋವಿನಿಂದ ಬೇಡಿಕೊಂಡರೂ ಯುವತಿ ಅವರೊಂದಿಗೆ ತೆರಳಲಿಲ್ಲ. ಹೆಚ್ಚಿಗೆ ಒತ್ತಡ ಹಾಕಿದರೆ ಪೊಲೀಸ್‌ ಆಯುಕ್ತರ ಬಳಿ ರಕ್ಷಣೆ ಕೋರುವುದಾಗಿ ಪ್ರತಿಕ್ರಿಯಿಸಿದ್ದಾಳೆ ಎಂದು ತಿಳಿದು ಬಂದಿದೆ.

ಅನ್ಯಧರ್ಮವಾಗಿದ್ದರಿಂದ ಇದು ಲವ್‌ ಜಿಹಾದ್‌ ಪ್ರಕರಣವೆಂದು ಕುಟುಂಬದ ಸದಸ್ಯರ ನೇತೃತ್ವದಲ್ಲಿ ಎಸ್‌ಎಸ್‌ಕೆ ಸಮಾಜ ಹಾಗೂ ಕೆಲ ಹಿಂದೂಪರ ಸಂಘಟನೆಗಳ ಪ್ರಮುಖರು ಉಪನಗರ ಠಾಣೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. ಒಂದು ದಿನ ಗಡುವು ನೀಡಿ ಯುವತಿಯನ್ನು ಕರೆತಂದು ಒಪ್ಪಿಸದಿದ್ದರೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ಬೆಂಡಿಗೇರಿ ಠಾಣೆ ಪೊಲೀಸರು ಯುವತಿಯನ್ನು ಕೇಶ್ವಾಪುರ ಠಾಣೆಗೆ ಕರೆದುಕೊಂಡು ಬಂದಿದ್ದರು. ಯುವತಿ ಕುಟುಂಬದವರೊಡನೆ ಬಾರದ ಹಿನ್ನೆಲೆಯಲ್ಲಿ ಸಮಾಜದ ಕೆಲವರು ಆಕ್ರೋಶ ವ್ಯಕ್ತಪಡಿಸಿ ಇಂತಹ ಘಟನೆಗಳು ನಡೆದಾಗ ಸಮಾಜದ ಪ್ರಮುಖರ ಗಮನಕ್ಕೆ ತರುವ ಕೆಲಸ ಆಗಬೇಕು ಎಂದರು.

Advertisement

ಯುವತಿಯ ತಾಯಿ ಮಾತನಾಡಿ, ಮನೆಯಲ್ಲಿ ಅಜ್ಜಿ ಅನಾರೋಗ್ಯದಿಂದ ಬಳಲುತ್ತಿದ್ದು, ಮಾತನಾಡಿಸಲು ಬರುವಂತೆ ಗೋಗರೆದರೂ ಇನ್ನೊಂದು ದಿನ ಬರುವುದಾಗಿ ಹೇಳಿದ್ದಾಳೆ. ಮಗಳನ್ನು ಮನಪರಿವರ್ತಿಸಿದ್ದಾರೆ. ನಮ್ಮ ಕುಟುಂಬದ ಬಗ್ಗೆ ಅವಳಿಗೆ ಯಾವುದೇ ಪ್ರೀತಿ ಇಲ್ಲದಂತೆ ಮಾಡಿದ್ದಾರೆ. ಅವನ ಜೊತೆಯಲ್ಲಿ ಇರುವುದಾಗಿ ಹೇಳುತ್ತಿದ್ದಾಳೆ. ಅವಳು ಇನ್ನೂ ಚಿಕ್ಕವಳಾಗಿದ್ದು, ಪ್ರೀತಿ ಹೆಸರಲ್ಲಿ ಮನ ಪರಿವರ್ತಿಸಲಾಗಿದ್ದು, ನನ್ನ ಮಗಳನ್ನು ನಮಗೆ ಕೊಡಿಸಬೇಕು ಎಂದು ಅಳಲು ತೋಡಿಕೊಂಡರು.

ಎಸ್‌ಎಸ್‌ಕೆ ಸಮಾಜದ ಧರ್ಮದರ್ಶಿ ನೀಲಕಂಠ ಸಾ ಜಡಿ ಮಾತನಾಡಿ, ಸಣ್ಣ ವಯಸ್ಸು ಏನೂ ಅರಿಯದೆ ಈ ಬಲೆಗೆ ಬಿದ್ದಿದ್ದಾಳೆ. ಇದನ್ನು ಸರಿಪಡಿಸಲು ಸಮಾಜದ ಮುಖಂಡರು, ಅವರ ಕುಟುಂಬದವರು ಕೂಡ ಪ್ರಯತ್ನ ಮಾಡಿದ್ದೇವೆ. ಎಷ್ಟೇ ಹೇಳಿದರೂ ನಮ್ಮ ಮಾತನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲ. ಅವಳಿಗೆ ಯಾವುದರ ಬಗ್ಗೆ ಗೊತ್ತಿಲ್ಲ. ಒಂದೇ ಕಡೆ ಮಾತನಾಡುತ್ತಿದ್ದಾಳೆ. ಸಹಜ ಸ್ಥಿತಿಗೆ ಬರಲು ಸಮಯ ಹಿಡಿಯುತ್ತದೆ ಎಂದರು.

ಸಮಾಜದ ಪ್ರಮುಖರಾದ ಭಾಸ್ಕರ ಜಿತೂರಿ, ರಾಜೇಶ್ವರಿ ಜಡಿ, ಹನುಮಂತಸಾ ನಿರಂಜನ, ಸುನಿಲ, ರಾಜೇಶ, ಹನುಮಂತ ಸಾದಲಬಂಜನ ಸೇರಿದಂತೆ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next