Advertisement
ಕೈ ತುಂಬ ಇದ್ದ ಸಂಬಳದ ಹುದ್ದೆ ತೊರೆದು ಸಾವಯವ ಕೃಷಿಯ ಮೂಲಕ ಹೊಸ ಬದುಕು ಕಟ್ಟಿಕೊಂಡ ಮೀರತ್‌ನ ಯುವಕನೋರ್ವ ಇಂದು ಅನೇಕ ಕೃಷಿಕರಿಗೆ ಆದರ್ಶವಾಗಿದ್ದಾರೆ. ಅಲ್ಲದೇ ಅನೇಕ ಕಾರ್ಪೊರೇಟರ್ ಉದ್ಯೋಗಿಗಳಿಗೆ ಕೃಷಿಯತ್ತ ಮರಳಲು ಪ್ರೇರಣೆ ನೀಡುತ್ತಿರುವವರೇ ಮೀರತ್‌ನ ಅಜಯ್ ತ್ಯಾಗಿ.
ಕೃಷಿಯ ಆರಂಭ
ಜನರಿಗೆ ಉತ್ತಮ ಗುಣಮಟ್ಟದ ಆಹಾರ ಒದಗಿಸುವ ಉದ್ದೇಶದಿಂದ 2016ರಿಂದ ಅಜಯ್ ಅವರು ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. ಅಳತೆ ಮೀರಿ ಇಂದು ಉಪಯೋಗಿಸುತ್ತಿರುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳಿಂದ ಬೆಳೆಯುತ್ತಿರುವುದು ಶುದ್ಧ ಆಹಾರವಲ್ಲ ಅದು ವಿಷ ಎನ್ನುತ್ತಾರೆ ತ್ಯಾಗಿ. ಆರಂಭಿಕ ವೈಫಲ್ಯಗಳು
ಹೊಸತನ್ನು ಮಾಡುವಾಗ ಕಷ್ಟಗಳು ಎದುರಾಗುವುದು ಸಹಜ. ಹಾಗೇಯೆ ತ್ಯಾಗಿ ಅವರು ಆರಂಭಿಕವಾಗಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಒಂದೆಡೆ ಮನೆಯವರ ವಿರೋಧ ಮತ್ತೂಂದೆಡೆ ಕೃಷಿಗೆ ಇವರು ಹೊಸಬರು. ಮೊದಲಿಗೆ ಹೈನುಗಾರಿಕೆ ಆರಂಭಿಸಿ ಅಲ್ಲಿ ಕಾರ್ಮಿಕರ ಅಗತ್ಯ ಮತ್ತು ಹೆಚ್ಚಿನ ಶ್ರಮದಿಂದ ಹೈರಾಣಾಗಿ ಮತ್ತೆ ಅವರ ಮೂಲ ಉದ್ದೇಶವಾದ ಸಾವಯವ ಕೃಷಿಗೆ ಮರಳುತ್ತಾರೆ.
Related Articles
ಹೇಗೋ ಮನೆಯವರನ್ನು ಒಪ್ಪಿಸಿ ತಮ್ಮ ಸ್ವಂತ ಜಮೀನಿನಲ್ಲಿ ಕೃಷಿ ಆರಂಭಿಸುತ್ತಾರೆ. ಅನಂತರ 10 ಎಕ್ರೆ ಭೂಮಿಯನ್ನು ಗುತ್ತಿಗೆ ಪಡೆದುಕೊಂಡು ಅಲ್ಲಿ ಸಾವಯವ ಕೃಷಿ ಆರಂಭಿಸಿದರು. ಮೊದಲು ಅಗತ್ಯ ಕೆಲಸಗಾರ ಸಹಾಯದಿಂದ ನಿರ್ವಹಣೆ ವೆಚ್ಚ ಕಡಿಮೆ ಮಾಡಿ ಮೊದಲ ವರ್ಷವೇ ಸಾಂಪ್ರದಾಯಿಕ ಕೃಷಿಗಿಂತ ಶೇ. 25 ರಷ್ಟು ಹೆಚ್ಚು ಲಾಭಗಳಿಸಿದರು.
Advertisement
ಕಾಬೋನಿಕ್ ಮಿಡೋವ್ಸ್ ಎಂಬ ಹೆಸರಿನ ತಮ್ಮದೇ ಆದ ಬ್ರ್ಯಾಂಡ್‌ನ್ನು ಆರಂಭಿಸಿ ಅದರ ಹೆಸರಿನಲ್ಲಿ ಧಾನ್ಯಗಳು, ತರಕಾರಿ, ಬಿತ್ತನೆ ಬೀಜಗಳು, ಮಸಾಲೆ ಪದಾರ್ಥಗಳನ್ನು ವ್ಯಾಪಕವಾಗಿ ಬೆಳೆಯುತ್ತಿದ್ದಾರೆ. ಏಕದಳ ಧಾನ್ಯಗಳಲ್ಲಿ ಸಾಂಪ್ರಾದಾಯಿಕ ವಿಧದ ಗೋಧಿ ಮತ್ತು ಭತ್ತ, ಅಕ್ಕಿ, ರಾಗಿ, ಅಗಸೆ , ಚಿಯಾ ಹಾಗೂ ಇದರ ಜತೆಗೆ ದ್ವಿದಳ ಧಾನ್ಯಗಳನ್ನೂ ವ್ಯಾಪಕವಾಗಿ ಬೆಳೆಯುತ್ತಿದ್ದಾರೆ. ಸ್ವಲ್ಪ ಸಮಯದ ಅನಂತರ ತರಕಾರಿ ಬೆಳೆಯುವುದು ಆರಂಭಿಸಿದರು. ತರಕಾರಿಗಳಲ್ಲಿ ಟೊಮೆಟೋ, ಮೆಣಸಿನಕಾಯಿ, ಮೂಲಂಗಿ, ಗಜ್ಜರಿ, ಹೂಕೋಸು, ಕೋಸುಗಡ್ಡೆ ಮತ್ತು ಕೊತ್ತಂಬರಿ ಬೆಳೆದಿದ್ದಾರೆ.
ತ್ಯಾಗಿ ಕೃಷಿಗೆ ಬೇಕಾದ ಹೆಚ್ಚಿನ ವಸ್ತುಗಳನ್ನು ತಮ್ಮ ಸ್ವಂತ ಜಮೀನಿನಿಂದಲೇ ತಯಾರಿಸುತ್ತಾರೆ. ಹೊಲದ ಕಳೆಯನ್ನು ಸಂಗ್ರಹಿಸಿ ಅದರಿಂದ ರಸಗೊಬ್ಬರವನ್ನು ಮತ್ತು ವರ್ಮಿ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಅದನ್ನೇ ಉಪಯೋಗಿಸಲಾಗುತ್ತಿದೆ.ದೇಶಾದ್ಯಂತ ಉತ್ಪನ್ನಗಳ ಮಾರಾಟ
ಕೃಷಿಯ ಉತ್ಪನ್ನಗಳ ಮಾರಾಟ ತ್ಯಾಗಿ ಅವರು ತಾವು ತಯಾರಿಸುವ ಉತ್ತಮ ತಳಿಯ ಬೀಜಗಳಿಗೆ ದೇಶಾದ್ಯಂತ ಗ್ರಾಹಕರನ್ನು ಸಂಪಾದಿಸಿದ್ದಾರೆ. ಪ್ರಮುಖ ನಗರಗಳಾದ ದೆಹಲಿ, ಮುಂಬಯಿ, ಬೆಂಗಳೂರು ಹೀಗೆ ಮುಂತಾದಡೆ ಮಾರಾಟ ಮಾಡುತ್ತಾರೆ. ಕಾರ್ಬಾನಿಕ್ ಮೆಡೋಸ್ ಒಂದು ಜನಪ್ರಿಯ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದ್ದು, ಕೇರಳ ರಾಜಸ್ಥಾನ ಇತರೆಡೆಗಳಲ್ಲಿ ಸಣ್ಣ ಪ್ರಮಾಣದ ಕೃಷಿಕರೊಂದಿಗೆ ಇವರು ಸಹಭಾಗಿತ್ವ ಹೊಂದಿದ್ದಾರೆ. ಅವರೊಂದಿಗೆ ವಸ್ತುಗಳನ್ನು ಖರೀದಿಸಿ ಉತ್ತಮ ವ್ಯಾಪಾರ ಜಾಲವೊಂದನ್ನು ರೂಪಿಸಿಕೊಂಡಿದ್ದಾರೆ. ರೈತರಿಗೆ ಕಾರ್ಯಾಗಾರ
ಆಗಾಗ ತ್ಯಾಗಿ ಅವರು ರೈತರಿಗಾಗಿ ಕಾರ್ಯಾಗಾರಗಳನ್ನು ಹಮ್ಮಿಕೊಂಡು ತಮ್ಮ ಜಮೀನಿನಲ್ಲೇ ತರಬೇತಿ ನೀಡುತ್ತಾರೆ. ಇದಕ್ಕೆ ರಾಜಸ್ಥಾನ, ಒಡಿಶಾ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಿಂದ ರೈತರು ಸೇರುತ್ತಾರೆ. ಹೀಗೆ ತ್ಯಾಗಿ ಅವರು ತಮ್ಮ ಜತೆಗೆ ಇನ್ನೂ ಹಲವಾರು ರೈತರ ಬಾಳು ಹಸನಾಗಿಸಿದ್ದಾರೆ. ಇವರಿಂದ ಸ್ಫೂರ್ತಿಗೊಂಡ ಯುವಕರು ಸಾವಯವ ಕೃಷಿಯಲ್ಲಿ ತೊಡಗಿದ್ದಾರೆ.