Advertisement
ಎಲ್ಲಿಂದ ಬಂದವಿವು?ಜಾಗತಿಕ ಮಿಡತೆಗಳ ಸಮಸ್ಯೆಯ ಮೂಲವಿರುವುದು 2018ರಲ್ಲಿ. ಅರಬ್‌ನ ಮರುಭೂಮಿಯಲ್ಲಿ ಕಾಣಿಸಿಕೊಂಡ ಅಸಹಜ ಚಂಡಮಾರುತ, ಭಾರೀ ಮಳೆಯಿಂದಾಗಿ ಅಲ್ಲಿ ನೀರು ಶೇಖರಣೆಯಾಗಿ, ಮಿಡತೆಗಳ ಪ್ರಜನನಕ್ಕೆ ಪುಷ್ಕಳ ಅವಕಾಶವನ್ನು ಒದಗಿಸಿಬಿಟ್ಟಿತು. ಆಹಾರವನ್ನು ಅರಸುತ್ತಾ ಇವು ಸಾಗರೋಪಾದಿಯಲ್ಲಿ ದೇಶದೇಶಗಳಿಗೆ ನುಗ್ಗುತ್ತಿವೆ. ಅಲ್ಲಿಂದ ಆರಂಭವಾದ ಸಮಸ್ಯೆ ಆಫ್ರಿಕಾ ಖಂಡದ ಹಲವು ದೇಶಗಳು, ಭಾರತ, ಪಾಕ್, ಚೀನಕ್ಕೂ ತಲುಪಿತು…
ಜಗತ್ತಿನ ಅತ್ಯಂತ ಅಪಾಯಕಾರಿ ಮಿಡತೆಗಳೆಂದು ಕುಖ್ಯಾತಿ ಪಡೆದಿರುವ ಮರುಭೂಮಿಯ ಮಿಡತೆಗಳು ದಿನಕ್ಕೆ 150 ಕಿಲೋಮೀಟರ್ ಸಂಚರಿಸಬಲ್ಲವು. ಇವುಗಳ ಒಂದು ಚಿಕ್ಕ ತಂಡ, ಒಂದೇ ದಿನದಲ್ಲಿ 35000 ಜನರು ಸೇವಿಸುವಷ್ಟು ಆಹಾರವನ್ನು ತಿಂದು ತೇಗಬಲ್ಲದು ಎನ್ನುತ್ತದೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ. ಇವುಗಳ ಗುಂಪು ಎಷ್ಟು ದಟ್ಟವಾಗಿ ಇರುತ್ತದೆಂದರೆ, ಯಾವುದೋ ಬೃಹತ್ ಚಾದರ ಹಾರಿಬಂದಂತೆ ಭಾಸವಾಗುತ್ತದೆ. ಸೂರ್ಯನ ಬಿಸಿಲನ್ನೂ ತಡೆದುಬಿಡುವಷ್ಟು ದಟ್ಟವಾಗಿ ಬರುತ್ತವೆ ಇವು.
ಮೊದಲೇ ಆಹಾರದ ಕೊರತೆಯಿಂದ ಬಳಲುತ್ತಿರುವ ಆಫ್ರಿಕಾ ಖಂಡದ ಹಲವು ರಾಷ್ಟ್ರಗಳೀಗ ಮಿಡತೆಗಳ ದಾಳಿಗೆ ತತ್ತರಿಸಿವೆ. ಈಗಾಗಲೇ ಮಿಡತೆಗಳು ಸುಡಾನ್, ಉಗಾಂಡಾ, ಕೀನ್ಯಾ, ಇಥಿಯೋಪಿಯಾ, ಸೋಮಾಲಿಯಾದಲ್ಲಿ ಲಕ್ಷಾಂತರ ಹೆಕ್ಟೇರ್ ಬೆಳೆಗಳನ್ನು ತಿಂದುಹಾಕಿವೆ. ಇತ್ತೀಚೆಗಷ್ಟೇ ದಕ್ಷಿಣ ಸುಡಾನ್ ಮತ್ತು ಉಗಾಂಡಾದಲ್ಲಿ ಮಿಡತೆಗಳು ದಾಂಗುಡಿಯಿಟ್ಟಿದ್ದು, ಕ್ಷಣಾರ್ಧದಲ್ಲಿ ಬೆಳೆಗಳು ಕಾಣೆಯಾಗಲಾರಂಭಿಸಿವೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಸುಡಾನ್ ಸರ್ಕಾರ ಅಮೆರಿಕಕ್ಕೆ 20 ಮಿಲಿಯನ್ ಡಾಲರ್‌ಗಳ ಸಹಾಯ ಯಾಚಿಸಿದೆ. ಅಲ್ಲದೇ, ಮಿಡತೆಗಳ ತಡೆಗೆ ಕ್ರಿಮಿನಾಶಕಗಳು, ಸ್ಪ್ರೆàಗಳನ್ನು ಪೂರೈಸುವಂತೆ ದೊಡ್ಡ ರಾಷ್ಟ್ರಗಳಿಗೆ ಮನವಿ ಮಾಡುತ್ತಿದೆ. ಮಿಡತೆಗಳ ದಾಳಿಯ ಪ್ರಮಾಣ ಕೀನ್ಯಾದಲ್ಲಿ 70 ವರ್ಷಗಳಲ್ಲೇ ಅತಿಘೋರವಾಗಿದ್ದು, ಸೋಮಾಲಿಯಾದಲ್ಲಿ 25 ವರ್ಷಗಳ ಹಿಂದೆ ಈ ರೀತಿಯ ಸಮಸ್ಯೆ ಏರ್ಪಟ್ಟಿತ್ತು. ಆಗ ಸಾವಿರಾರು ಜನರು ಆಹಾರವಿಲ್ಲದೇ ಸಾವನ್ನಪ್ಪಿದ್ದರು. ಕೀನ್ಯಾದಲ್ಲಂತೂ ಕಪ್ಪುಮೋಡದಂತೆ ಸಾಗಿಬರುತ್ತಿರುವ ಈ ಮಿಡತೆಗಳು, ಹುಲ್ಲು, ಮೆಕ್ಕೆ ಜೋಳ, ಬಟಾಣಿ ಮತ್ತು ಇತರೆ ದವಸ ಧಾನ್ಯಗಳನ್ನು ಖಾಲಿ ಮಾಡುತ್ತಿವೆ. ಇಥಿಯೋಪಿಯಾ ಒಂದರಲ್ಲೇ ಮಿಡತೆಗಳು ಅಲ್ಲಿನ ಪ್ರಮುಖ ಬೆಳೆಗಳಾದ ಟೀ ಮತ್ತು ಕಾಫಿ ಸೇರಿದಂತೆ 65000 ಹೆಕ್ಟೇರ್ ಪ್ರದೇಶಗಳ ದವಸ ಧಾನ್ಯಗಳನ್ನು ತಿಂದುಹಾಕಿವೆ. ಇಂದು ಸಬ್ ಸಹಾರನ್ ರಾಷ್ಟ್ರಗಳ 23.9 ಕೋಟಿ ಜನರು ಹಸಿವು ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಮಿಡತೆಗಳ ದಾಳಿಯನ್ನು ಹತ್ತಿಕ್ಕದೇ ಹೋದರೆ, ಕೆಲವೇ ದಿನಗಳಲ್ಲಿ ಆಹಾರ ಕೊರತೆ ಊಹಿಸಲಾಗದಷ್ಟು ಹದಗೆಡಲಿದೆ ಎಂಬ ಕಳವಳ ವಿಶ್ವಸಂಸ್ಥೆಯದ್ದು. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ(ಎಫ್ಎಓ), ಮಿಡತೆಗಳ ಮಹಾಮಾರಿಯನ್ನು ತಡೆಯಲು ಎಲ್ಲಾ ರಾಷ್ಟ್ರಗಳೂ ಕೈಜೋಡಿಸಬೇಕು ಎಂದು ಕರೆಕೊಟ್ಟಿದೆ.
Related Articles
ಭಾರತದ ಪಾಲಿಗೆ ಕಳೆದ 60 ವರ್ಷಗಳಲ್ಲೇ ಇದು ಮಿಡತೆಗಳ ಅತಿ ಭೀಕರ ದಾಳಿಯಾಗಿದ್ದು, ಡಿಸೆಂಬರ್ ತಿಂಗಳಲ್ಲಿ ಪಾಕಿಸ್ತಾನದಿಂದ ಹಾರಿಬಂದ ಮಿಡತೆಗಳು, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಸಾವಿರಾರು ಎಕರೆ ಫಸಲನ್ನು ನಾಶಮಾಡಿವೆ. ಆಲೂಗಡ್ಡೆ, ಗೋದಿ, ಜೀರಿಗೆ, ಹತ್ತಿ, ಸಾಸಿವೆ ಮತ್ತು ಇತರೆ ಬೆಳೆಗಳು ಮಿಡತೆಗಳ ಸಮೂಹ ದಾಳಿಯಿಂದ ನಾಶವಾಗಿವೆ. ಈಗಲೂ ಹಾನಿಯ ಪ್ರಮಾಣವನ್ನು ಲೆಕ್ಕ ಹಾಕಲಾಗುತ್ತಿದೆಯಾದರೂ, ಸದ್ಯಕ್ಕಂತೂ ಬೆಳೆಹಾನಿ ಮೊತ್ತ 100 ಕೋಟಿ ರೂಪಾಯಿಯ ಗಡಿ
ದಾಟಿದೆ. ಒಟ್ಟು 65000 ರೈತರು ಮಿಡತೆಗಳ ದಾಳಿಗೆ ಸಂತ್ರಸ್ತರಾಗಿದ್ದಾರೆ. ಸ್ಥಳೀಯ ಆಡಳಿತಗಳು ಅಪಾಯದ ಗಾಂಭೀರ್ಯವನ್ನು ಕಡೆಗಣಿಸಿದ್ದರಿಂದಲೇ ಈ ಹಾನಿಯಾಯಿತು. ಈಗ ಪರಿಸ್ಥಿತಿ ಬಹುತೇಕ ಹಿಡಿತಕ್ಕೆ ಬಂದಿದೆ. ಕ್ರಿಮಿನಾಶಕಗಳನ್ನು ಬಳಸಿ ಮಿಡತೆಗಳನ್ನು ಕೊಲ್ಲಲಾಗಿದೆ, ಅಲ್ಲದೇ ಗಾಳಿಯ ದಿಕ್ಕೂ ಬದಲಾಗಿರುವುದರಿಂದ ಮಿಡತೆಗಳ ಪ್ರಮಾಣ ಕಡಿಮೆಯಾಗಿದೆ. ಹಾಗೆಂದು, ಅಪಾಯದ ತೂಗುಗತ್ತಿ ಸರಿದಿಲ್ಲ, ಈಗಲೂ ನೆರೆಯ ಪಾಕಿಸ್ತಾನದಲ್ಲಿ ಮಿಡತೆಗಳ ಕಾಟ ಅತಿಯಾಗಿದ್ದು, ಅಲ್ಲಿಂದ ಮತ್ತೆ ಈ ಕ್ರಿಮಿರಾಕ್ಷಸರು ಹಾರಿಬರುವ ಅಪಾಯವಂತೂ ಇದ್ದೇ ಇದೆ.
Advertisement
1915ರಲ್ಲಿ ತತ್ತರಿಸಿದ್ದ ಸಿರಿಯಾ, ಪ್ಯಾಲಸ್ತೀನ್20ನೇ ಶತಮಾನದ ಆರಂಭದಿಂದಲೂ ಮರುಭೂಮಿಯ ಮಿಡತೆಗಳ ಮಹಾಮಾರಿ ಜಗತ್ತನ್ನು ಅನೇಕ ಬಾರಿ ನಲುಗಿಸಿದೆ. 1915-1917, 1926- 1934, 1940-1948, 1967- 1969, 2003- 2005 ರಲ್ಲೂ ಇವು ಗಳು ಹಲವು ರಾಷ್ಟ್ರಗಳ ಆರ್ಥಿಕತೆಯನ್ನು ನೆಲ ಕಚ್ಚುವಂತೆ ಮಾಡಿದ್ದವು. ಅದರಲ್ಲೂ 1915ರಲ್ಲಿ ಅಂದಿನ ಒಟ್ಟೋಮನ್ ಪ್ಯಾಲಸ್ತೀನ್, ಸಿರಿಯಾ, ಮೌಂಟ್ ಲೆಬನಾನ್‌ಗೆ ಬಂದಪ್ಪಳಿಸಿದ ಮಿಡತೆಗಳು ಅಲ್ಲಿನ ಸಸ್ಯರಾಶಿಯನ್ನೆಲ್ಲ ಅಜಮಾಸು ಖಾಲಿಮಾಡಿಬಿಟ್ಟಿದ್ದವು. ಮೊದಲೇ ಮಳೆಯ ಅಭಾವದಿಂದ ನರಳುತ್ತಿದ್ದ ಈ ಪ್ರದೇಶಗಳಲ್ಲಿ ತೀವ್ರ ಆಹಾರ ಬಿಕ್ಕಟ್ಟು ಸೃಷ್ಟಿಯಾಗಿಬಿಟ್ಟಿತು. ಸಾವಿರಾರು ಜನರು ಹಸಿವಿನಿಂದ ಮೃತಪಟ್ಟರೆ, ಲಕ್ಷಾಂತರ ಜನರ ಮಹಾವಲಸೆಗೂ ಇವು ಕಾರಣವಾಗಿದ್ದವು. ಭಾರತದ ಸಹಾಯ ಯಾಚಿಸಲು ಪಾಕ್ ಯೋಚನೆ?
ಪಾಕಿಸ್ಥಾನವೀಗ ಇಕ್ಕಟ್ಟಿಗೆ ಸಿಲುಕಿದೆ. ಮೊದಲೇ ಆಹಾರ ಕೊರತೆ ಎದುರಿಸುತ್ತಿರುವ ಆ ರಾಷ್ಟ್ರ, ಮಿಡತೆಗಳ ಕಾಟ ತಾಳಲಾಗದೇ “ರಾಷ್ಟ್ರೀಯ ತುರ್ತುಸ್ಥಿತಿ’ ಘೋಷಿಸಿದೆ. ಭಾರತವು ಕಾಶ್ಮೀರದಲ್ಲಿ ಆರ್ಟಿಕಲ್ 370 ಹಿಂಪಡೆದ ನಂತರದಿಂದ ಪಾಕಿಸ್ಥಾನ ಭಾರತದೊಂದಿಗಿನ ವ್ಯಾಪಾರವನ್ನು ಬಹುತೇಕ ನಿಲ್ಲಿಸಿಬಿಟ್ಟಿದೆ. ಅದರಲ್ಲೂ, ಚೀನವನ್ನು ನಂಬಿ ಅದು ಭಾರತದಿಂದ ಕ್ರಿಮಿನಾಶಕಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿಬಿಟ್ಟಿತ್ತು. ಆದರೆ ಈಗ ಅದರ ಲಕ್ಷಾಂತರ ಹೆಕ್ಟೇರ್ ಬೆಳೆಗಳನ್ನು ಮಿಡತೆಗಳು ಮುತ್ತಿಕೊಂಡಿವೆ. ಚೀನಾ ಈಗ ಪಾಕಿಸ್ಥಾನಕ್ಕೆ ಸಹಾಯ ಮಾಡುವ ಸ್ಥಿತಿಯಲ್ಲಿ ಇಲ್ಲ. ಅದು ಕೊರೊನಾವನ್ನು ಹತ್ತಿಕ್ಕಲು ಹೆಣಗಾಡುತ್ತಿದೆ. ಹೀಗಾಗಿ, ಪಾಕಿಸ್ಥಾನಕ್ಕೆ ಇದೊಂದು ದೊಡ್ಡ ಸಮಸ್ಯೆಯಾಗಿ ಬದಲಾಗಿದೆ. ಒಂದು ಬಾರಿ ತಾನು ಹೇರಿದ್ದ ನಿಷೇಧವನ್ನು ಹಿಂಪಡೆದು, ಭಾರತದಿಂದ ಕ್ರಿಮಿನಾಶಕಗಳನ್ನಷ್ಟೇ ಆಮದು ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದೆ. ಆದರೆ ಪಾಕ್ ನಾಯಕರಲ್ಲಿ ಈ ಬಗ್ಗೆ ಒಮ್ಮತ ಮೂಡುತ್ತಿಲ್ಲ. ದಿನಕ್ಕೆ 150 ಕಿ.ಮೀ ಸಂಚರಿಸಬಲ್ಲ ಮರುಭೂಮಿಯ ಮಿಡತೆಗಳ ಒಂದು ಚಿಕ್ಕ ತಂಡ, ಒಂದೇ ದಿನದಲ್ಲಿ 35000 ಜನರು ಸೇವಿಸುವಷ್ಟು ಆಹಾರವನ್ನು ತಿಂದು ತೇಗಬಲ್ಲವು ಆಫ್ರಿಕನ್ ದೇಶಗಳಲ್ಲಿ ಹೆಚ್ಚುತ್ತಿದೆ ಆಹಾರ ಕೊರತೆ. ಚೀನಾ ಪಾಕ್ ತತ್ತರ. ಭಾರತಕ್ಕೂ ತಪ್ಪಿಲ್ಲ ಅಪಾಯ