Advertisement
ವಾಸ್ತುಶಿಲ್ಪದ ಪ್ರಕಾರವು ಗುಹಾಂತರವಿರಲಿ ಅಥವಾ ರಚನಾತ್ಮಕ ದೇವಾಲಯವಿರಲಿ ಚಾಲುಕ್ಯರು ಶ್ರೇಷ್ಠತೆಯ ಪರಾಕಾಷ್ಠೆಯನ್ನೇ ಮೆರೆದರು. ಚಾಲುಕ್ಯರು ಬಾದಾಮಿಯ ಚಾಲುಕ್ಯರೆಂದೇ ಪ್ರಸಿದ್ಧರು. ವಾತಾಪಿ ಎಂದೇ ಬಾದಾಮಿ ಇತಿಹಾಸದಲ್ಲಿ ಅಚ್ಚಳಿಯದೇ ಉಳಿದಿದೆ. ವಾತಾಪಿ ಜೀರ್ಣೋ ಭವ ಎಂದು ಹೊಟ್ಟೆಯನ್ನು ನಿವಾಳಿಸಿಕೊಂಡ ಅಗಸ್ತ್ಯ ಮಹರ್ಷಿಗಳ ಅಗಸ್ತ್ಯ ತೀರ್ಥವೂ ಬಾದಾಮಿಯ ಹೆಗ್ಗಳಿಕೆ.
Related Articles
Advertisement
ಮೊದಲ ಗುಹೆಯಲ್ಲಿ ವಿಶ್ವವಿಖ್ಯಾತ ನಟರಾಜನಿರುವುದು. ಅವನು ಹದಿನೆಂಟು ಕೈಗಳ ನಾಟ್ಯಭಂಗಿಯ ನಟರಾಜ. ಎರಡನೆಯ ಹಾಗೂ ಮೂರನೆಯದ್ದು ವಿಷ್ಣುವಿನ ಗುಹಾಲಯಗಳು. ನಾಲ್ಕನೇಯದ್ದು ಜೈನ ತೀರ್ಥಂಕರರ ಗುಹಾದೇಗುಲ. ಎಲ್ಲ ರಚನೆಗಳು ಹೆಸರಿಗಷ್ಟೇ ಗುಹೆ, ಒಳ ಪ್ರವೇಶಿಸಿದರೆ ಮೊಗಸ್ಸಾಲೆ, ಸಭಾಮಂಟಪ, ಗರ್ಭಗುಡಿ ರಚನಾ ದೇಗುಲಗಳಷ್ಟೇ ವ್ಯವಸ್ಥಿತವಾದವು.
ಹಿರಿದಾದ ಕಂಬಗಳು, ಒಳಗೆ ಚಾಚುವ ಸ್ವಾಭಾವಿಕ ಬೆಳಕು, ನೆಲ-ಭಿತ್ತಿ-ಛಾವಣಿಗಳಲ್ಲೆಲ್ಲ ಉಬ್ಬು ಶಿಲ್ಪಗಳದ್ದೇ ಕಾರುಬಾರು. ಕಂಬಗಳ ವಿನ್ಯಾಸ ಹೊಯ್ಸಳ ರೀತಿಯ ನುಣುಪಿಲ್ಲದಿದ್ದರೂ ಶೃಂಗಾರಮಯ. ಚಾಲುಕ್ಯ ಶಿಲ್ಪಗಳಲ್ಲಿನ ಬೃಹದಾಕಾರದ ದೇವತಾ ವಿಗ್ರಹಗಳು -ನಟರಾಜ, ವರಾಹ ರೂಪಿ ವಿಷ್ಣು, ಐದು ಹೆಡೆಯ ನಾಗನಿಂದ ಆವೃತ ವಿಷ್ಣು, ತೀರ್ಥಂಕರರ ವಿಗ್ರಹಗಳನ್ನು ಬಾದಾಮಿಯ ಗುಹಾಂತರ್ಗತ ದೇವಾಲಯದಲ್ಲಿ ನೋಡಬಹುದು.
ಈ ಗುಹಾಲಯಗಳಿಗೆ ವಿಶಾಲ ಹಜಾರ, ಗಾಳಿಯಪ್ಪಳಿಸುವಷ್ಟು. ಈ ದಕ್ಷಿಣದ ಗಿರಿದುರ್ಗದ ಮೇಲೆ ಬಾದಾಮಿಯ ಕಿಲ್ಲೆಯಿದೆ. ಅದಾದರೂ ಎಂತಹ ಕೋಟೆ, ದಂಡೆತ್ತಿ ಬಂದವರು ದಂಗಾಗಿ ಹೋಗ್ಯಾರು, ಬಾದಾಮಿ ಭದ್ರಕೋಟೆಯ ಕಾಣುತ್ತ, ಚಾಲುಕ್ಯರಿಗೆ ಶರಣು ಆಗ್ಯಾರೊ ಎಂಬ ಜನಪದರ ನುಡಿಯ ಅಭೇದ್ಯ ಕೋಟೆ.
ಗುಹಾಲಯಗಳ ಪಡಸಾಲೆಯಲ್ಲಿ ಗಾಳಿಗೆ ಒರಗಿ ಅಗಸ್ತ್ಯ ತೀರ್ಥ, ಶಿವಾಲಯ, ಭೂತನಾಥನ ದೇಗುಲಗಳನ್ನು ವೀಕ್ಷಿಸುವುದು ಕಣ್ಣಿಗೇ ಹಬ್ಬವೇರ್ಪಟ್ಟಂತೆ. ಎತ್ತ ನೋಡಿದರಲ್ಲಿ ಕೆಂಬಣ್ಣ ಕಲ್ಲುಗಳು, ಕಲ್ಲುಗಳ ಮೇಲೆ ಶಿಖರಗಳು ವಾತಾಪಿಯ ಸಾಮಾನ್ಯ ದೃಶ್ಯಗಳಲ್ಲೊಂದು.
ಉತ್ತರದ ಕಲ್ಲಿನ ಗೋಡೆಯೊಂದರಲ್ಲಿ ಅಂಶ ತ್ರಿಪದಿಯ ಕಪ್ಪೆ ಅರಭಟ್ಟನ ಕಲಿಯುಗವಿಪರೀತನ್ ಮಾಧವನ್ ಈತನ್ ಪೆರನಲ್ಲ ಎಂದ ಪ್ರಸಿದ್ಧ ಶಾಸನವಿದೆ. ಅನೇಕ ಶಾಸ್ತ್ರೀಯ ಶಿಲ್ಪಸಾಮಗ್ರಿಗಳನ್ನು ಸಂಗ್ರಹಿಸಿ ಅಲ್ಲಿನ ಮ್ಯೂಸಿಯಂನಲ್ಲಿ ಪ್ರಸ್ತುತಪಡಿಸಲಾಗಿದೆ.
ನೋಡುಗನ ನೋಟದ ತರ್ಕಕ್ಕೆ ಈ ಎಲ್ಲ ಶಿಲ್ಪರಚನೆಗಳು ಊಹಿಸಲೂ ಅಸಾಮಾನ್ಯ ಮತ್ತು ಅಪೂರ್ವ. ಗುಹೆಗಳಲ್ಲಿಯ ಭಿತ್ತಿನೊಳಗಿನ ಮೂರ್ತಿಗಳನ್ನು ಅಂಗಾತ ಮಲಗಿಕೊಂಡೋ, ಏರಿಕೊಂಡೋ, ಬೆಳಕಿನ ಪ್ರತಿಫಲನದಲ್ಲೋ ಕೆತ್ತಿರಬಹುದು. ಎಲ್ಲೋ ಕೆತ್ತಿ ತಂದು ಇಟ್ಟಿದ್ದಲ್ಲ, ಇರುವ ಅವಕಾಶದಲ್ಲೋ ರಚಿಸಿದ್ದು. ಮೂರ್ತಿ ಗಳಲ್ಲಿನ ಭಂಗಿ, ಸೂತ್ರ, ಮಾಪನದ ಖಚಿತತೆ ದಂಗುಬಡಿಸುವಷ್ಟು ಸುಂದರ ಮತ್ತು ಉತ್ಕೃಷ್ಟ.
ಬಾದಾಮಿಯ ಮರಳ ಕಲ್ಲಿನ ಈ ಕುಸುಮಗಳು ಯುನೆಸ್ಕೋ ಪಾರಂಪರಿಕ ಪಟ್ಟಿಯಲ್ಲಿ ಸೇರಿವೆ. ವಿದೇಶಿಗರೂ ಬೆರಗಾಗಿ ನೋಡುವ ವಾಸ್ತುಶಿಲ್ಪದ ಸ್ವರ್ಗಸದೃಶ ರಚನೆಗಳನ್ನು ಭವಿಷ್ಯಕ್ಕೆ ಸಂರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ. ಕಲಾಕೃತಿಗಳು ಹವಾಮಾನದ ಬದಲಾವಣೆಗೋ, ನಮ್ಮ ಅವಜ್ಞೆಗೋ ರೂಪವನ್ನು ಕಳೆದುಕೊಳ್ಳುವ ಭಯ ಇದ್ದದ್ದೇ.
ಅಗಸ್ತ್ಯತೀರ್ಥದಂತಹ ಪುಷ್ಕರಿಣಿಯು ಜಲಸಂರಕ್ಷಣೆಯ ಪಾಠ ಮಾಡುವ ರಚನೆಗಳು. ನಗರೀಕರಣದ ಹಪಹಪಿಯಲ್ಲಿ ನಾಗರಿಕತೆಯು ಮೇಳೈಸಿದ್ದ ಚಾರಿತ್ರಿಕ ಕಥೆ ಮತ್ತೆ ಉತVನನವಾಗುವಷ್ಟು ಹುದುಗದಿರಲಿ. ಐತಿಹಾಸಿಕ ಸ್ಮಾರಕಗಳನ್ನು ಜವಾಬ್ದಾರಿಯಿಂದ ಸಂರಕ್ಷಿಸೋಣ.
-ವಿಶ್ವನಾಥ ಭಟ್
ಧಾರವಾಡ