Advertisement
ಇಂದಿನ ದಿನ ಸುದಿನ. ಆದರೆ, ಮುಂಬರುವ ದಿನಗಳೂ ಉತ್ತಮವಾಗಿರಲು ನಾವು ಕೈಗೊಳ್ಳಬೇಕಾದ ದೃಢಸಂಕಲ್ಪವೇ ಉಳಿತಾಯ ಯೋಜನೆ. ಇದರ ಲಾಭವೇ ಸಂತಸ-ಸಮೃದ್ಧಿಗಳಿಂದ ಕೂಡಿದ ಜೀವನ. ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬುದು ನಾಣ್ನುಡಿ. ಯಾವತ್ತೂ ನಮ್ಮ ಜೀವನದ ಆವಶ್ಯಕತೆಗಳ ಪೂರೈಕೆಗೆ ಮೂಲಾಧಾರವೇ ಹಣ. ಇಂದು ನಮಗೆ ದುಡಿಯುವ ಶಕ್ತಿ ಇದೆ. ನಾಳೆಯೂ ಹೀಗೆಯೇ ಇರಬೇಕಾಗಿಲ್ಲ. ಬರುವ ನಾಳೆಗಳ ಬಗ್ಗೆ ನಾವು ಯೋಚಿಸಲೇ ಬೇಕು. ಕಿಂಚಿತ್ತಾದರೂ ಉಳಿಸಲೇ ಬೇಕು. ಈ ನಿಟ್ಟಿನಲ್ಲಿ ಮಹಿಳೆಯರ ಜವಾಬ್ದಾರಿ ಹಿರಿದಾಗಿದೆ. ಮಹಿಳೆಯರು ಸ್ವಲ್ಪವಾದರೂ ಆದಾಯ ಬರುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಉತ್ತಮ. ಸದೃಢ ಜೀವನಕ್ಕೆ ಅವಶ್ಯವಾದ ಅದೆಷ್ಟೋ ಸರಳ ಕೆಲಸಗಳನ್ನು ನಮ್ಮ ವಿರಾಮದ ವೇಳೆಯಲ್ಲಿ ಮಾಡಲು ಸಾಧ್ಯವಿದೆ. ಟೈಲರಿಂಗ್, ಗೊಂಬೆ ತಯಾರಿ, ಹಾಳೆ ತಟ್ಟೆ ತಯಾರಿ, ಕಸೂತಿ, ಜೇನು ಕೃಷಿ, ಮಲ್ಲಿಗೆ ಕೃಷಿ, ತರಕಾರಿ ಕೃಷಿ- ಇತ್ಯಾದಿ. ಹೀಗೆ ಮಹಿಳೆ ತನ್ನ ಕಾಲ ಮೇಲೆ ತಾನು ನಿಲ್ಲುವ ಮೂಲಕ ಜೀವನದಲ್ಲಿ ಸ್ವಂತಿಕೆ ಬೆಳೆಸಿಕೊಳ್ಳಬಹುದು.
Related Articles
Advertisement
ಹಬ್ಬ-ಹರಿದಿನಗಳು ನಮ್ಮ ಜೀವನದ ಅವಿಭಾಜ್ಯ ಸಂಗತಿಗಳು.ಹಬ್ಬಗಳ ಸಂದರ್ಭ ಅವಶ್ಯವಿಲ್ಲದಿದ್ದರೂ ಇತರರಂತೆ ಸಮಾನತೆ ಅಥವಾ ಸ್ವಪ್ರತಿಷ್ಠೆಗಾಗಿ ಖರ್ಚು-ವೆಚ್ಚಗಳು ಕೈಮೀರಿ ಹೋಗುತ್ತವೆ. ಮನೆ ತುಂಬ ಬಟ್ಟೆಯಿದ್ದರೂ ಹೊಸಬಟ್ಟೆಯ ಕ್ರೇಜ್. ಅಗತ್ಯಕ್ಕಿಂತ ಹೆಚ್ಚಿನ ಸಿಹಿತಿಂಡಿಗಳು, ಪಂಚ ಭಕ್ಷ್ಯಪರಮಾನ್ನಗಳು. ಹಬ್ಬ ಮುಗಿದಂತೆ ಎಲ್ಲ ಮೂಲೆಗುಂಪು. ಮುಂದಿನ ಬಾರಿ ಹಬ್ಬ ಬಂದಾಗ ಅತ್ಯಂತ ಅನಿವಾರ್ಯವಾದರೆ ಮಾತ್ರ ಬಟ್ಟೆ ಕೊಳ್ಳೋಣ. ಕೇವಲ ಪ್ರತಿಷ್ಠೆ ಮೆರೆದು ಕಪಾಟು ತುಂಬಿಸುವ ಯೋಚನೆ ಬೇಡ. ಮನೆಯ ಜನರಿಗೆ ಸರಿದೂಗುವಷ್ಟೇ ಆಹಾರಗಳನ್ನು ತಯಾರಿಸಿಕೊಳ್ಳೋಣ. ಇದರಿಂದ ಹಣದ ಜತೆ ಸಮಯ, ಶ್ರಮಗಳೂ ಉಳಿತಾಯವಾಗುತ್ತವೆ. ಪ್ರತಿ ಹಬ್ಬದಲ್ಲೂ ಇತಿಮಿತಿಯೊಳಗೆ ಖರ್ಚು ಸರಿದೂಗಿಸಿ ಒಂದಷ್ಟು ಉಳಿಸಿ ಅದನ್ನು ಸ್ವಂತಕ್ಕಾಗಿ ಅಥವಾ ಬಡವರಿಗೆ ನೀಡುವ ಮೂಲಕ ದೇಶದ ಒಳಿತಿಗೆ ಕಾರಣರಾಗೋಣ. ನಾವು ಆಗಾಗ್ಗೆ ಕುಟುಂಬದ ಜತೆ ಸಣ್ಣಪುಟ್ಟ ಪ್ರವಾಸ ಕೈಗೊಳ್ಳುತ್ತಿರುತ್ತೇವೆ. ಇಂತಹ ಸಂದರ್ಭ ಎಲ್ಲರೂ ಹೊಟೇಲ… ಊಟಕ್ಕೆ ಶರಣಾದರೆ ಆರೋಗ್ಯವೂ ಹಾಳು, ಖರ್ಚೂ ಹೆಚ್ಚು. ಅದಕ್ಕಾಗಿ ಸಾಧ್ಯವಿದ್ದಷ್ಟು ಮನೆಯಲ್ಲೇ ಆಹಾರ ಪದಾರ್ಥಗಳನ್ನು ತಯಾರಿಸಿ ಒಯ್ಯುವ ಪರಿಪಾಠ ಬೆಳೆಸಿಕೊಳ್ಳೋಣ. ಇದೂ ಉಳಿತಾಯದ ಒಂದು ವಿಧಾನ ಅಲ್ಲವೆ?
ಹಾಂ! ಹೆಂಗಸರೆಂದರೆ ಅಡುಗೆಯಲ್ಲಿ ತಲ್ಲೀನರೆಂದೇ ಅರ್ಥ. ಹಿಂದಿನ ಇದ್ದಿಲ ಒಲೆ, ಸೌದೆ, ಸೀಮೆಎಣ್ಣೆಗಳ ಬದಲಿಗೆ ಈಗ ಇಂಡಕ್ಷನ್ ಒಲೆ, ಗ್ಯಾಸ್ ಸ್ಟವ್‌ಗಳು ಅಡುಗೆಮನೆಯನ್ನಾಳುತ್ತಿವೆ. ನಾವು ಅಡುಗೆಯ ಕೆಲಸದಲ್ಲಿ ಕೂಡ ಉಳಿತಾಯದ ದಾರಿ ಹುಡುಕುತ್ತ ಸಾಗಬಹುದು. ಹೇಗೆನ್ನುತ್ತೀರಾ? ಬೆಳಗಾತ ಎದ್ದು ಮಾಡಬೇಕಾದ ಅಡುಗೆಗಳನ್ನೆಲ್ಲ ಮನಸ್ಸಲ್ಲೇ ಪಟ್ಟಿ ಮಾಡಿಕೊಳ್ಳೋಣ. ಅನ್ನ-ಸಾರು-ಸಾಂಬಾರು-ಪಲ್ಯ ಇತ್ಯಾದಿ. ಇವುಗಳನ್ನು ತಯಾರಿಸಲು ಬೇಕಾದ ವಸ್ತುಗಳನ್ನೆಲ್ಲ ಸಿದ್ಧಪಡಿಸಿಕೊಳ್ಳೋಣ. ಒಂದು ಬಾರಿ ಗ್ಯಾಸ್ ಉರಿಸಿದ ನಂತರ ಒಂದರ ಹಿಂದೆ ಒಂದರಂತೆ ಬೇಗಬೇಗನೆ ಎಲ್ಲ ಕೆಲಸಗಳನ್ನೂ ಮಾಡಿ ಮುಗಿಸೋಣ. ಇದರಿಂದ ಇಂಧನ ವ್ಯರ್ಥ ಪೋಲಾಗುವುದೂ ತಪ್ಪುತ್ತದೆ. ಕೆಲಸ ಬೇಗನೇ ಆಗಿ ಸಮಯದ ಉಳಿತಾಯಕ್ಕೂ ದಾರಿಯಾಗುತ್ತದೆ.
ನಮ್ಮ ಮನೆಯ ಸುತ್ತಮುತ್ತಣ ಒಂದಷ್ಟು ಸ್ಥಳಾವಕಾಶ ಬಳಸಿಕೊಂಡು ಪುಟ್ಟ ಕೈತೋಟ ನಿರ್ಮಿಸೋಣ. ಕಾಯಿಮೆಣಸು, ಶುಂಠಿ, ಕರಿಬೇವು, ಹರಿವೆ, ಬಸಳೆ, ತೊಂಡೆ ಇತ್ಯಾದಿಗಳನ್ನು ಬೆಳೆಯುವುದರಿಂದ ದುಬಾರಿ ಬೆಲೆ ತೆತ್ತು ತರಕಾರಿ ತರುವುದೂ ತಪ್ಪುತ್ತದೆ. ಅಲ್ಲದೆ, ಮನೆಯಲ್ಲಿ ಉಂಟಾಗುವ ತ್ಯಾಜ್ಯಗಳಾದ ಗಂಜಿ ನೀರು, ಅಕ್ಕಚ್ಚು , ತರಕಾರಿಸಿಪ್ಪೆ ಇತ್ಯಾದಿಗಳು ಇಂತಹ ಕೈತೋಟಗಳಿಗೆ ಗೊಬ್ಬರವಾಗುತ್ತದೆ.
ದೂರದರ್ಶನದ ಬೇರೆ ಬೇರೆ ಚಾನೆಲ…ಗಳಲ್ಲಿ ಬರುವ ಕಸದಿಂದ ರಸ ಕಾರ್ಯಕ್ರಮ ವೀಕ್ಷಿಸಿದರೆ ಹಲವಾರು ಆಲಂಕಾರಿಕ ವಸ್ತುಗಳನ್ನು ನಾವು ತಯಾರಿಸಲು ಸಾಧ್ಯ. ಇದು ಉಳಿತಾಯದ ಜತೆಗೆ ಸೃಜನಶೀಲತೆಗೂ ನಾಂದಿಯಾಗುತ್ತದೆ.
ನೀರೆಂದರೆ ನಮಗೆಲ್ಲ ಏನೋ ತಾತ್ಸಾರ. ಕಾಸಿಲ್ಲದೆ ಸಿಗುವುದೆಂದೋ ಏನೋ ಪೋಲುಮಾಡುವುದೇ ನಮ್ಮ ಜನ್ಮಸಿದ್ಧ ಹಕ್ಕು ಎಂದು ಭಾವಿಸುತ್ತಾರೆ ಜನರು. ಪಂಚಾಯತ್ ನೀರಿನ ನಳ್ಳಿ ಮುರಿದು ಹೋಗಿದ್ದರೂ ಕ್ಯಾರೇ ಅನ್ನುವವರಿಲ್ಲ. ಉಳಿತಾಯವೆಂದರೆ ಕೇವಲ ಹಣವಷ್ಟೇ ಎಂದು ತಿಳಿಯಬಾರದು. ಒಂದೊಂದು ಹನಿ ನೀರು ಕೂಡ ನಮ್ಮ ಜೀವನದ ಅತ್ಯಮೂಲ್ಯ ಆಸ್ತಿ. ಇವತ್ತು ನೀರನ್ನು ನಾವು ಉಳಿಸಿದರೆ ಅದರಿಂದಾಗುವ ಅಂತರ್ಜಲ ಮುಂದೊಂದು ದಿನ ನಮ್ಮನ್ನು ಉಳಿಸುತ್ತದೆ. ಆದುದರಿಂದ ಹಿತವಾದ ಮಿತವಾದ ನೀರಿನ ಬಳಕೆ ಕೂಡ ಉಳಿತಾಯದ ಕೈಗನ್ನಡಿ.
ಆದರ್ಶ ನಾರಿಯರಾಗಬೇಕಾದರೆ ಮೊದಲಿಗೆ ನಮ್ಮ ಕಾಲುಗಳ ಮೇಲೆ ನಿಲ್ಲಬೇಕು. ಬಿಡಿಗಾಸಿಗೂ ಗಂಡಂದಿರ ಬಳಿ ಕೈಚಾಚದೆ ಸ್ವಾವಲಂಬನೆಯ ಹಾದಿ ಹಿಡಿಯಬೇಕು. ತಿನ್ನುವ ಆಹಾರ, ಕುಡಿಯುವ ನೀರು, ಬಳಸುವ ಇಂಧನಗಳು ಗೃಹೋಪಯೋಗಿ ವಸ್ತುಗಳ ಮೇಲೆ ಹಿಡಿತವಿರಬೇಕು. ಅನಗತ್ಯ ಖರ್ಚು-ವೆಚ್ಚಗಳಿಲ್ಲದ ಆಡಂಬರರಹಿತ ಜೀವನ ನಮ್ಮದಾಗಬೇಕು.
ಪುಷ್ಪಾ ತಿಲಕ್