ಬೆಂಗಳೂರು: ಮತದಾನ ಮಾಡಲು ಬಂದ ಮಹಿಳೆಗೆ ವೈದ್ಯರೊಬ್ಬರು ಜೀವದಾನ ಮಾಡಿದ ಘಟನೆ ನಗರದ ಮತಗಟ್ಟೆ ಯೊಂದರಲ್ಲಿ ಶುಕ್ರವಾರ ನಡೆಯಿತು.
ಮತಗಟ್ಟೆಯೊಂದರಲ್ಲಿ ಸರದಿಯಲ್ಲಿ ನಿಂತಿದ್ದ ಮಹಿಳೆಯೊಬ್ಬರು ಏಕಾಏಕಿ ಕುಸಿದು ಬಿದ್ದರು. ಆಗ, ಅಲ್ಲಿಯೇ ಇದ್ದ ಮೂತ್ರಪಿಂಡಶಾಸ್ತ್ರಜ್ಞ ಹಾಗೂ ಮೂತ್ರಪಿಂಡ ಕಸಿ ವೈದ್ಯ ಡಾ.ಗಣೇಶ್ ಶ್ರೀನಿವಾಸ್ ಪ್ರಸಾದ್ ತಕ್ಷಣ ಅವರ ನೆರವಿಗೆ ಧಾವಿಸಿ ಜೀವ ಉಳಿಸಿದ್ದಾರೆ. ಮತ ಚಲಾಯಿಸಲು ಬಂದ ಮಹಿಳೆ ತಮ್ಮ ಎದುರು ಕುಸಿದುಬೀಳುತ್ತಿದ್ದಂತೆ ಡಾ. ಗಣೇಶ್ ಅವರು ಆ ಮಹಿಳೆ ಬಳಿ ಧಾವಿಸಿ ನಾಡಿಮಿಡಿತ ಪರಿಶೀಲಿಸಿದ್ದಾರೆ.
ಈ ವೇಳೆ ನಾಡಿಮಿಡಿತ ಇಲ್ಲದಿರುವುದು ಕಂಡುಬಂದಿದ್ದು, ಹೃದಯಸ್ತಂಭನ ಆಗಿರುವುದು ಖಾತ್ರಿಯಾಗಿದೆ. ತಕ್ಷಣ ಸಮಯಪ್ರಜ್ಞೆ ಮೆರೆದ ವೈದ್ಯರು, ಸಿಪಿಆರ್ (ಕಾರ್ಡಿಯೊ ಪಲ್ಮನರಿ ರೆಸಸಿಟೇಶನ್) ಮಾಡಿದ್ದಾರೆ. ಅಂದರೆ ಹಸ್ತಗಳಿಂದ ಹೃದಯವನ್ನು ಒತ್ತುತ್ತಾ ರಕ್ತವು ದೇಹದಾದ್ಯಂತ ಚಲಿಸುವಂತೆ ಮಾಡುವ ಪ್ರಕ್ರಿಯೆ. ಈ ಕ್ರಮದಿಂದ ಮತ್ತೆ ಹೃದಯವು ಪಂಪ್ ಮಾಡಲು ಆರಂಭಿಸಿದೆ. ಈ ಮೂಲಕ ನಾಡಿಮಿಡಿತ ವಾಪಸ್ ಬಂದಿದೆ. ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಮತಗಟ್ಟೆ ಭದ್ರತಾ ಸೇವೆಯಲ್ಲಿದ್ದ ಸಿಬ್ಬಂದಿ ಸ್ಟ್ರೆಚರ್‌ನೊಂದಿಗೆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಪ್ರಕ್ರಿಯೆಯನ್ನು ಸ್ವತಃ ಡಾ.ಗಣೇಶ್, ಸಾಮಾಜಿಕ ಜಾಲತಾಣ “ಎಕ್ಸ್’ನಲ್ಲಿ ಫೋಟೋ ಸಹಿತ ಪೋಸ್ಟ್ ಮಾಡಿದ್ದಾರೆ. ವೈದ್ಯರ ಈ ಕಾರ್ಯಕ್ಕೆ ಮೆಚ್ಚುಗೆಯೂ ವ್ಯಕ್ತವಾಗಿದೆ. ನಗರದಲ್ಲಿ ಬೇಸಿಗೆ ಧಗೆ ವಿಪರೀತ ಇದ್ದು, ಈ ಬಿಸಿಲಿನಲ್ಲಿ ಸಾಲುಗಟ್ಟಿ ನಿಂತಿದ್ದರಿಂದ ನಿರ್ಜಲೀಕರಣಗೊಂಡು ಕುಸಿದುಬಿದ್ದಿರ ಬಹುದು ಎನ್ನಲಾಗಿದೆ. ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ ಶುಕ್ರವಾರ ಗರಿಷ್ಠ ತಾಪಮಾನ 37.4 ಡಿಗ್ರಿ ಸೆಲ್ಸಿಯಸ್ ಇತ್ತು.