Advertisement

ಸ್ವಾಭಿಮಾನಕ್ಕೆ ಗೆಲುವಿನ ಹಾರ

10:00 PM Dec 09, 2019 | Team Udayavani |

ಹೊಸಕೋಟೆ: ಕ್ಷೇತ್ರದಲ್ಲಿ ಸ್ವಾಭಿಮಾನದ ಹೆಸರಿನಲ್ಲಿ ಕಣಕ್ಕಿಳಿದಿದ್ದ ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡ ಗೆಲುವು ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೂಲಕ ಕ್ಷೇತ್ರ ಕೈ ತಪ್ಪದಂತೆ ಗಟ್ಟಿ ಮಾಡಿಕೊಂಡಿದ್ದಾರೆ. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್‌ ವಿರುದ್ಧ ಸೋಲು ಅನುಭವಿಸಿದ್ದ ಅವರು,

Advertisement

ಒಂದೂವರೆ ವರ್ಷದ ನಂತರ ಪಕ್ಷೇತರ ಅಭ್ಯರ್ಥಿಯಾಗಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ನಾಗರಾಜ್‌ ಅವರನ್ನು ಸೋಲಿಸಿ ಸೇಡು ತೀರಿಸಿಕೊಂಡಿದ್ದಾರೆ. ಹದಿನೈದು ಕ್ಷೇತ್ರಗಳಲ್ಲಿ ಹೊಸಕೋಟೆ ಜಿದ್ದಾಜಿದ್ದಿನ ಕಣವಾಗಿತ್ತು. ಜೆಡಿಎಸ್‌-ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಎಂಟಿಬಿ ನಾಗರಾಜ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರ ಪತನಕ್ಕೆ ಕಾರಣವಾಗಿದ್ದರು.

ಬಂಡಾಯದ ಬಾವುಟ: ನಾಗರಾಜ್‌ ಸಚಿವ ಸ್ಥಾನ ಆ ನಂತರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೊದಲ ದಿನದಿಂದಲೇ ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಎಂಟಿಬಿ ನಾಗರಾಜ್‌ಗೆ ಬಿಜೆಪಿ ಟಿಕೆಟ್‌ ಸಿಗಬಹುದು ಎಂಬ ನಿರೀಕ್ಷೆ ಇದ್ದ ಕಾರಣ ಶರತ್‌ ಬಚ್ಚೇಗೌಡ ಬಂಡಾಯದ ಬಾವುಟ ಹಾರಿಸಲು ಮಾನಸಿಕವಾಗಿ ಸಜ್ಜಾದರು.

ಪ್ರತಿ ಗ್ರಾಮದಲ್ಲೂ ಸಂಚರಿಸಿ ಮತದಾರರು ಹಾಗೂ ಸಮುದಾಯದ ಪ್ರಮುಖ ನಾಯಕರ ಜತೆ ಮಾತುಕತೆ ನಡೆಸಿ ಬೆಂಬಲದ ಭರವಸೆ ಪಡೆದ ನಂತರವೇ ಅಖಾಡಕ್ಕಿಳಿಯುವ ಘೋಷಣೆ ಮಾಡಿದರು. ಬಿಜೆಪಿ ನಾಯಕರು ಶರತ್‌ ಬಚ್ಚೇಗೌಡರನ್ನು ಕಣದಿಂದ ಹಿಂದಕ್ಕೆ ಸರಿಸಲು ಮಾಡಿದ ಎಲ್ಲ ಪ್ರಯತ್ನಗಳು ವಿಫ‌ಲವಾದವು. ಅವರ ತಂದೆ ಬಿ.ಎನ್‌.ಬಚ್ಚೇಗೌಡರು ಬಿಜೆಪಿ ಸಂಸದರಾಗಿರುವುದರಿಂದ ಶರತ್‌ ಬಚ್ಚೇಗೌಡರು ಪಕ್ಷಕ್ಕೆ ವಿರುದ್ಧ ಹೋಗಲಾರರು ಎಂದೇ ಅಂದಾಜಿಸಲಾಗಿತ್ತು.

ಜತೆಗೆ, ಅವರನ್ನು ಸಮಾಧಾನಪಡಿಸಲು ಮುಂದಿನ ಬಾರಿ ಟಿಕೆಟ್‌ ನೀಡುವುದು. ಬಚ್ಚೇಗೌಡರ ನಂತರ ಚಿಕ್ಕಬಳ್ಳಾಪುರ ಸಂಸತ್‌ ಕ್ಷೇತ್ರಕ್ಕೆ ನಿಮಗೆ ಟಿಕೆಟ್‌ ಕೊಡಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಬಗ್ಗದಿದ್ದಾಗ ಗೃಹಮಂಡಳಿ ಅಧ್ಯಕ್ಷಗಿರಿ ನೀಡಿ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿತ್ತು. ಇದ್ಯಾವುದಕ್ಕೂ ಒಪ್ಪದ ಶರತ್‌ ಬಚ್ಚೇಗೌಡರು ಏನೇ ಆದರೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಧೃಢ ನಿರ್ಧಾರ ಮಾಡಿದರು.

Advertisement

ಅಂತಿಮವಾಗಿ ಪಕ್ಷೇತರರಾಗಿಯೇ ಕಣ ಕ್ಕಿಳಿದು ಸ್ವಾಭಿಮಾನದ ಹೆಸರಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಸಂಚರಿಸಿ ಮತದಾರರ ಮನ ಗೆಲ್ಲುವ ಪ್ರಯತ್ನ ನಡೆಸಿದರು. ಹುಲ್ಲೂರು ಮಂಜುನಾಥ್‌ ಸೇರಿದಂತೆ ಕ್ಷೇತ್ರದಲ್ಲಿದ್ದ ಬಚ್ಚೇಗೌಡರ ಬಹುತೇಕ ಬೆಂಬಲಿಗರು ಶರತ್‌ ಬಚ್ಚೇಗೌಡರ ಬೆಂಬಲಕ್ಕೆ ನಿಂತರು. ಎಷ್ಟೇ ಒತ್ತಡ ಬಂದರೂ ಕೊನೆವರೆಗೂ ಮನಸ್ಸು ಬದಲಿಸಲಿಲ್ಲ. ಜತೆಗೆ ಜೆಡಿಎಸ್‌ ಅಭ್ಯರ್ಥಿ ಹಾಕದೆ ಬೆಂಬಲ ಘೋಷಿಸಿದ್ದು ಲಾಭವಾಯಿತು. ಜತೆಗೆ ಕ್ಷೇತ್ರದಲ್ಲಿ ಈ ಹಿಂದೆ ಸೋತರೂ ಜನರೊಂದಿಗೆ ಸತತ ಸಂಪರ್ಕದಲ್ಲಿರುವುದು ಅನುಕೂಲವಾಗಿದೆ.

ಮುಂದಿನ ನಡೆ ನಿಗೂಢ: ಇದುವರೆವಿಗೂ ಬಿಜೆಪಿಗೆ ಸೇರ್ಪಡೆ ಯಾಗುವ ಬಗ್ಗೆ ಯಾವುದೇ ತೀರ್ಮಾನ ವನ್ನು ಕೈಗೊಂಡಿಲ್ಲ. ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗಲೀ ಪಕ್ಷೇತರರರಾಗಿಯೇ ಉಳಿಯುವ ಬಗ್ಗೆ ಕಾರ್ಯಕರ್ತರು, ಮತದಾರರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಜೇತ ಅಭ್ಯರ್ಥಿ ಶರತ್‌ ಬಚ್ಚೇಗೌಡ ತಿಳಿಸಿದ್ದಾರೆ.

ಬೈರತಿ ಸುರೇಶ್‌ ಪತ್ನಿ ಪದ್ಮಾವತಿ ಸೋಲು: ಎಂಟಿಬಿ ನಾಗರಾಜ್‌ ಅವರಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್‌ನ ಕುರುಬ ಸಮುದಾಯದ ಶಾಸಕ ಬೈರತಿ ಸುರೇಶ್‌ ಪತ್ನಿ ಪದ್ಮಾವತಿಯನ್ನು ಕಣಕ್ಕಿಳಿಸಲಾಯಿತು. ಇದು ಸಮುದಾಯ ಮತ ವಿಭಜನೆಗೂ ಕಾರಣವಾಗಿ ಶರತ್‌ ಬಚ್ಚೇಗೌಡರ ಹಾದಿ ಸುಗಮವಾಯಿತು. ಆಲ್ಪಸಂಖ್ಯಾತರು, ದಲಿತರು ಸೇರಿ ಕಾಂಗ್ರೆಸ್‌ ಸಾಂಪ್ರದಾಯಿಕ ಮತಗಳು ಪದ್ಮಾವತಿಗೆ ಬಂದಿದ್ದರಿಂದ ಒಕ್ಕಲಿಗ, ಮುಸ್ಲಿಂ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಶರತ್‌ ಬಚ್ಚೇಗೌಡರಿಗೆ ಬಂದಂತಿದೆ. ಎಂಟಿಬಿ ನಾಗರಾಜ್‌ಗೆ ವೈಯಕ್ತಿಕ ಪ್ರಭಾವದ ಮತ ಹಾಗೂ ಬಿಜೆಪಿ ಸಾಂಪ್ರದಾಯಿಕ ಮತಗಳಷ್ಟೆ ಬಂದಿದ್ದರಿಂದ ಸೋಲು ಅನುಭವಿಸುವಂತಾಗಿದೆ.

ಗೆದ್ದವರು
ಶರತ್‌ ಬಚ್ಚೇಗೌಡ (ಪಕ್ಷೇತರ)
ಪಡೆದ ಮತ: 81,671
ಗೆಲುವಿನ ಅಂತರ‌: 11, 486

ಸೋತವರು
ಎಂಟಿಬಿ ನಾಗರಾಜ್‌(ಬಿಜೆಪಿ)
ಪಡೆದ ಮತ: 70,185

ಪದ್ಮಾವತಿ ಸುರೇಶ್‌(ಕಾಂಗ್ರೆಸ್‌)
ಪಡೆದ ಮತ: 41,443

ಶರತ್‌ ಬಚ್ಚೇಗೌಡ ಗೆದ್ದದ್ದು ಹೇಗೆ?
-ಸ್ವಾಭಿಮಾನದ ಘೋಷಣೆ, ಆಮಿಷಕ್ಕೆ ಒಳಗಾಗದ ಚುನಾವಣೆಯ ದೃಢ ನಿರ್ಧಾರ

-ಕಳೆದ ಬಾರಿ ಎಲೆಕ್ಷನ್‌ನಲ್ಲಿ ಕ್ಷೇತ್ರದೊಂದಿಗೆ ಸಂಪರ್ಕ ಹೊಂದಿದ್ದರೂ ಸೋತಿದ್ದ ಅನುಕಂಪ

-ತಂದೆ ಬಚ್ಚೇಗೌಡರ ಪರೋಕ್ಷ ಆಶೀರ್ವಾದ

ಎಂಟಿಬಿ ನಾಗರಾಜ್‌ ಸೋಲಿಗೆ ಕಾರಣ
ತಮ್ಮದೇ ಸಮುದಾಯದವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದು ಸೋಲಿಗೆ ಕಾರಣ

-ಗೆಲ್ಲುವ ಬಗ್ಗೆ ಅತಿಯಾದ ಆತ್ಮವಿಶ್ವಾಸ, ಅನರ್ಹತೆಯ ಹಣೆಪಟ್ಟಿ ಹೊತ್ತು ಕೆಲವು ದಿನಗಳ ಕಾಲದ ಕ್ಷೇತ್ರದ ಜನರ ಸಂಪರ್ಕ ಕಡಿತ ಮಾಡಿಕೊಂಡದ್ದು

-ಚುನಾವಣೆಯಲ್ಲಿ ಮುಸ್ಲಿಂ ಮತದಾರರು ಕೈ ಹಿಡಿಯದಿದ್ದದ್ದು, ಕೊನೆ ಕ್ಷಣದಲ್ಲಿ ಪ್ರಚಾರಕ್ಕೆ ಮುಂದಾಗಿದ್ದು

ಸ್ವಾಭಿಮಾನಕ್ಕಾಗಿ ಮತದಾರರು ಕೊಟ್ಟ ತೀರ್ಪು. ಕ್ಷೇತ್ರದ ಅಭಿವೃದ್ಧಿ ಯೇ ನನ್ನ ಗುರಿ. ಜನರ ನನ್ನ ಕೈ ಬಿಡಲಿಲ್ಲ. ಅಧಿಕಾರ ಹಾಗೂ ಹಣಕ್ಕೆ ಬೆಲೆ ಕೊಡದೆ ನನಗೆ ಆಶೀರ್ವಾದ ಮಾಡಿದ್ದಾರೆ.
-ಶರತ್‌ ಬಚ್ಚೇಗೌಡ, ವಿಜೇತ ಅಭ್ಯರ್ಥಿ

ಬಿ.ಎನ್‌.ಬಚ್ಚೇಗೌಡರ ಪುತ್ರ ವ್ಯಾಮೋಹದಿಂದ ನನಗೆ ಸೋಲು ಉಂಟಾಗಿದೆ. ಆದರೂ ಮತದಾರರು 70 ಸಾವಿರದಷ್ಟು ಮತ ಬಂದಿದ್ದು, ನನ್ನ ಪರ ಕೆಲಸ ಮಾಡಿದವರಿಗೆ ಕೃತಜ್ಞತಗೆ ಸಲ್ಲಿಸುವೆ.
-ಎಂ.ಟಿ.ಬಿ.ನಾಗರಾಜ್‌, ಪರಾಜಿತ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next