Advertisement

ಸುಸ್ಥಿತಿಯಲ್ಲಿದ್ದ ಕಟ್ಟಡ ನವೀಕರಣ

02:55 PM Sep 05, 2017 | |

ಚಾಮರಾಜನಗರ: ತಾಲೂಕಿನ ಪುಣಜನೂರು ತಾಲೂಕು ಪಂಚಾಯ್ತಿ ಕ್ಷೇತ್ರ ವ್ಯಾಪ್ತಿಗೆ ಬರುವ ಕೆ.ಗುಡಿ ಆಶ್ರಮ ಶಾಲೆಯ ಕಟ್ಟಡ ನವೀಕರಣ ಕಾಮಗಾರಿ ತೀರಾ ಕಳಪೆಯಿಂದ ಕೂಡಿದ್ದು, ಸುಸ್ಥಿತಿಯಲ್ಲಿದ್ದ ಕಟ್ಟಡವನ್ನು ನವೀಕರಣ ಮಾಡುವ ನೆಪದಲ್ಲಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ತಾಪಂ ಉಪಾಧ್ಯಕ್ಷ ಪಿ.ಎನ್‌.ದಯಾನಿಧಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗಸುಂದರಮ್ಮ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗೆ ದೂರು ನೀಡಿದ್ದಾರೆ. 

Advertisement

ತಾಲೂಕಿನ ಕೆ.ಗುಡಿ ಆಶ್ರಮ ಶಾಲೆಗೆ ಭೇಟಿ ನೀಡಿದ್ದ ತಾಪಂ ಉಪಾಧ್ಯಕ್ಷ ಪಿ.ಎನ್‌.ದಯಾನಿಧಿ, ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗಸುಂದ್ರಮ್ಮ, ಆಶ್ರಮ ಶಾಲೆ ನಿರ್ವಹಣೆ ಮತ್ತು ಕಟ್ಟಡ ಕಾಮಗಾರಿಯನ್ನು ವೀಕ್ಷಣೆ ಮಾಡಿ, ಕಳಪೆಯಾಗಿ ನಿರ್ವಹಣೆ ಮಾಡಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಅಲ್ಲದೇ ಆಶ್ರಮ ಶಾಲೆಗೆ ಭೇಟಿ ನೀಡಿರುವ ವಿಷಯ ತಿಳಿದು ಸಹ ತಾಲೂಕು ಸಮಾಜ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮತ್ತು ನಿರ್ಮಿತಿ ಕೇಂದ್ರದ ಎಂಜಿನಿಯರ್‌ ಸ್ಥಳಕ್ಕೆ ಬರದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. 

ಕೆ.ಗುಡಿ ಅಶ್ರಮ ಶಾಲೆಯು ಬಹಳಸುಸ್ಥಿತಿಯಲ್ಲಿದೆ. ಹೀಗಿದ್ದರೂ ಶಾಲೆಯ ಕಟ್ಟಡವನ್ನು ದುರಸ್ತಿಗೊಳಿಸಲು ಪರಿಶಿಷ್ಟ ಪಂಗಡಗಳ ಕಲ್ಯಾಣಾ ಇಲಾಖೆಯಿಂದ 15 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ. ನಿರ್ಮಿತಿ ಕೇಂದ್ರ
ಮೂಲಕ ಕಾಮಗಾರಿ ಅನುಷ್ಠಾನಗೊಂಡಿದೆ. ಈಗಾಗಲೇ ವಸತಿ ಶಾಲೆಗೆ ಅಳವಡಿಸಲಾಗಿದ್ದ ಉತ್ತಮ ಗುಣಮಟ್ಟದ ಕಲಾರ್‌ ಸೀಟುಗಳನ್ನು ತೆಗೆದು ಹಾಕಿ, ತಗಡಿನ ಸೀಟ್‌ ಅನ್ನು ಅಳವಡಿಸಲಾಗಿದೆ. ಈ ಸೀಟು ತಕ್ಕು ಹಿಡಿಯುವ ಸಾಧ್ಯತೆ ಇದೆ. ಅಲ್ಲದೇ, ನಿರ್ಮಿತಿ ಕೇಂದ್ರದಿಂದ ಉಪ ಗುತ್ತಿಗೆ ಪಡೆದಿರುವವರು ಕಳಪೆ ಕಾಮಗಾರಿ ಮಾಡಿದ್ದಾರೆ ಎಂದು ದೂರಿದರು.

ಸಿಇಒಗೆ ದೂರು: ಈ ಸಂದರ್ಭ ತಾಪಂ ಉಪಾಧ್ಯಕ್ಷನಾದ ತಾನು ಕ್ರಿಯಾ ಯೋಜನೆಯ ಪ್ರತಿಯನ್ನು ನೀಡುವಂತೆ ಕಳೆದ 15 ದಿನಗಳಿಂದ ಮನವಿ ಮಾಡಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಿಯಾಯೋಜನೆಯ ಪಟ್ಟಿಯನ್ನು ನೀಡಿಲ್ಲ. ಇದೆಲ್ಲವನ್ನು ನೋಡಿದರೆ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದರ್ಥ. ಇದರಿಂದ ಅನುಮಾನಗೊಂಡು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ತಿಳಿಸಿದರು.

ನಿರ್ವಹಣೆ ತೃಪ್ತಿಕರವಾಗಿಲ್ಲ: ಆಶ್ರಮ ಶಾಲೆಯ ನಿರ್ವಹಣೆಯು ಸಹ ತೃಪ್ತಿಕರವಾಗಿಲ್ಲ. 58 ಮಕ್ಕಳು ಇದ್ದಾರೆ ಎಂದು ನಮೂದಿಸಲಾಗಿದೆ. ಆದರೆ, ಅಲ್ಲಿ 39 ಮಕ್ಕಳು ಮಾತ್ರ ಇದ್ದಾರೆ. ರಾಗಿ ಇದ್ದರೂ ಮಕ್ಕಳಿಗೆ ಮುದ್ದೆ ನೀಡುತ್ತಿಲ್ಲ. ರಾತ್ರಿ
ವೇಳೆಯಲ್ಲಿ ಶಾಲೆಯಲ್ಲಿ ಮಕ್ಕಳು ತಂಗುತ್ತಿಲ್ಲ. ಕತ್ತಲು ಆಗುವ ಮುನ್ನವೇ ಮಕ್ಕಳು ಊಟ ಮಾಡಿಕೊಂಡು ಅವರ ಪೋಡು ಹಾಗೂ ಕಾಲೋನಿಗೆ ಹೋಗುತ್ತಾರೆ ಎಂಬ ಮಾಹಿತಿ ಇದೆ. ಹಾಗಾದರೆ ಆಶ್ರಮ ಶಾಲೆಯನ್ನು ನಡೆಸುತ್ತಿರುವುದು ಯಾವ ಉದ್ದೇಶಕ್ಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ನಾಗಸುಂದ್ರಮ್ಮ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next