Advertisement

ಒಂದು ವಾರ ಪೂರೈಸಿದ ಲಾಕ್‌ಡೌನ್‌; ಹೆಚ್ಚುತ್ತಿರುವ ಜನ ಜಾಗೃತಿ

11:42 PM Mar 30, 2020 | Sriram |

ಕೋವಿಡ್‌-19 ವೈರಸ್‌ ಸಾಮಾಜಿಕವಾಗಿ ಹರಡಿ ಪ್ರಬಲವಾಗದಂತೆ ಜನರನ್ನು ಮನೆಯಲ್ಲೇ ಇರಿ ಹೊರಗೆ ಬರಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 21 ದಿನಗಳ ಲಾಕ್‌ಡೌನ್‌ ಘೋಷಿಸಿದ್ದರು. ಕೋವಿಡ್‌-19 ಮಹಾಮಾರಿ ನಿಯಂತ್ರಿಸಲು ಇದೊಂದು ಅನಿವಾರ್ಯ ಸ್ಥಿತಿಯಾಗಿತ್ತು. ಜನ ಕೂಡ ನಿಧಾನವಾಗಿ ಇದನ್ನು ಅರ್ಥೈಸಿಕೊಳ್ಳಲಾರಂಭಿಸಿದ್ದು, ಆರಂಭದಲ್ಲಿದ್ದ ಸ್ಥಿತಿಗೂ ಈಗಿನ ಸ್ಥಿತಿಗೂ ಸಾಕಷ್ಟು ಬದಲಾವಣೆಗಳಾಗಿವೆ. ಜೀವನಾವಶ್ಯಕ ವಸ್ತುಗಳು ಲಭಿಸುವಂತೆ ಸರಕಾರ ಕ್ರಮ ಕೈಗೊಂಡಿದ್ದರೂ ಕೆಲವೆಡೆ ಕೊರತೆ ಕಾಣಿಸಿದೆ. ಜೀವರಕ್ಷಕ ಔಷಧಗಳ ಸ್ಥಿತಿಯೂ ಇದೆ ಆಗಿದೆ. ಇದರ ಪೂರೈಕೆಯತ್ತ ಆಡಳಿತ ಗಮನ ಹರಿಸಬೇಕಿದೆ.

Advertisement

ಉಡುಪಿ/ಕುಂದಾಪುರ/ಕಾರ್ಕಳ: ದೇಶಾದ್ಯಂತ ಬಂದ್‌, ಬಂದ್‌ ಬಂದ್‌… ವಾರಕ್ಕೆ ಕಾಲಿಡುತ್ತಿದೆ… ನರೇಂದ್ರ ಮೋದಿಯವರು ಕೋವಿಡ್‌-19 ಮುನ್ನೆಚ್ಚರಿಕೆ ಕ್ರಮವಾಗಿ ಮಾ.22 ರಂದು ಜನತಾ ಕರ್ಫ್ಯೂಗೆ ಕರೆ ನೀಡಿದ್ದರು. ಮಾ. 23ರಂದು ಸಂಪೂರ್ಣ ದೇಶವನ್ನು ಲಾಕ್‌ ಡೌನ್‌ ಮಾಡಿ ಮಾ.31ಕ್ಕೆ 8ನೇ ದಿನ ತಲುಪಿದೆ. ಉಡುಪಿ ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕು ಒಟ್ಟು ಮೂವರಿಗೆ ದೃಢಪಟ್ಟಿದೆ. ಆದರೆ ಸೋಂಕಿತ ವ್ಯಕ್ತಿಯಿಂದ ಇತರರಿಗೆ ಪಸರಿಸಿದೆಯೇ ಇಲ್ಲವೇ ಎಂಬುದು ಇನ್ನೂ ಗೊತ್ತಾಗಿಲ್ಲ. ಅದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು. ಆದುದರಿಂದ ಜನರು ಮುಂದೆಯೂ ಜಿಲ್ಲಾಡಳಿತದ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸುವುದು ಅಗತ್ಯ.

ಎಚ್ಚೆತ್ತ ಜನತೆ
ಲಾಕ್‌ಡೌನ್‌ ಘೋಷಣೆಯಾದರೂ ಆರಂಭದಲ್ಲಿ ಜನರು ಅದನ್ನು ಗಂಭೀರವಾಗಿ ಪರಿಗಣಿಸಿ ರಲಿಲ್ಲ. ಆದರೆ ಜಿಲ್ಲೆಯಲ್ಲಿ ಕೋವಿಡ್‌-19 ವೈರಸ್‌ ಕೇಸ್‌ ದೃಢವಾದ ಬಳಿಕ ಹೆಚ್ಚಿನವರು ಜಾಗೃತ ರಾಗತೊಡಗಿದರು. ಪೊಲೀಸ್‌ ಮತ್ತು ಜಿಲ್ಲಾಡಳಿತದಿಂದಲೂ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳು ನಡೆದವು.

21 ದಿನ ದೇಶ ಬಂದ್‌
ಲಾಕ್‌ಡೌನ್‌ ಘೋಷಣೆ ಬಳಿಕ ನಗರದಲ್ಲಿ ಹೊಟೇಲ್‌ಗ‌ಳು, ಮಾಲ್‌ಗ‌ಳು, ಚಿತ್ರಮಂದಿರಗಳು ಬಂದ್‌ ಆದವು. ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ ಓಡಾಟ ಸ್ಥಗಿತವಾಯಿತು. ಮೆಡಿಕಲ್‌, ದಿನಸಿ ಅಂಗಡಿ, ತರಕಾರಿ, ಹಣ್ಣುಹಂಪಲುಗಳ ಅಂಗಡಿಗಳು ನಿಗದಿತ ಅವಧಿಯಲ್ಲಿ ಮಾತ್ರ ತೆರೆದಿದ್ದು, ಜನರಿಗೆ ಆವಶ್ಯಕ ವಸ್ತುಗಳನ್ನು ಒದಗಿಸುತ್ತಿವೆ.

ಕಟ್ಟುನಿಟ್ಟಿನ ಕ್ರಮ
ಕೋವಿಡ್‌-19 ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಂಗಡಿಗಳ ಎದುರು ಸಾಮಾಜಿಕ ಅಂತರದಲ್ಲಿ ಕಡ್ಡಾಯವಾಗಿ ಪೈಂಟ್‌ ಅಥವಾ ಇನ್ನಿತರ ಬಣ್ಣದ ವಸ್ತುಗಳಿಂದ ಗುರುತು ಹಾಕುವಂತೆ, ಗ್ರಾಹಕರು ಸರತಿ ಸಾಲಿನಲ್ಲಿ ಬರುವಂತೆ ತಿಳಿಸಿದಂತೆ ವಹಿವಾಟು ನಡೆಯುತ್ತಿದೆ. ಸಿಆರ್‌ಪಿ ಸೆಕ್ಷನ್‌ 144(3)ನ್ನು ಬಹಳ ವರ್ಷಗಳ ಬಳಿಕ ಹೊರಡಿಸಲಾಗಿದೆ.

Advertisement

ಹೊರರಾಜ್ಯದಿಂದ ಬಂದ ಕಾರ್ಮಿಕರು ದೂರ ದೂರಿಗೆ ತೆರಳಲು ಪರದಾಡುವ ದೃಶ್ಯಗಳು ನಗರದ ಪ್ರಮುಖ ಬೀದಿಗಳಲ್ಲಿ ಕಂಡುಬಂದವು. ಈ ಸಮಸ್ಯೆ ಈಗ ಗ್ರಾಮಾಂತರದಲ್ಲಿ ಕಂಡುಬಂದಿದೆ. ಕೆಲವು ಸಂಘ-ಸಂಸ್ಥೆಯಿಂದ ಹೊರ ರಾಜ್ಯ,ಹೊರ ಜಿಲ್ಲೆಯ ಬಡಕೂಲಿಕಾರ್ಮಿಕರಿಗೆ ಅಗತ್ಯ ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಆದೇಶವನ್ನು ಉಲ್ಲಂ ಸಿ ರಸ್ತೆಯಲ್ಲಿ ಅನಗತ್ಯ ಓಡಾಡುತ್ತಿದ್ದ ಮಂದಿಗೆ ಪೊಲೀಸರೇ ಎಚ್ಚರಿಸುತ್ತಿದ್ದಾರೆ.

ಸೋಮವಾರವು ಪೇಟೆಯಲ್ಲಿ ಜನ ಅಗತ್ಯ ವಸ್ತುಗಳನ್ನು ಪಡೆಯಲು ದಿನಸಿ ಅಂಗಡಿ, ಮೆಡಿಕಲ್‌ ಸೇರಿದಂತೆ ಬ್ಯಾಂಕ್‌ಗಳಲ್ಲಿ ಕ್ಯೂ ನಿಂತಿರುವ ದೃಶ್ಯ ಕಂಡುಬಂದವು. ಇವೆಲ್ಲರ ನಡುವೆ ಅತೀ ಹೆಚ್ಚು ಸಮಸ್ಯೆಗೆ ಒಳಗಾದವರೆಂದರೆ ವಲಸೆ ಕಾರ್ಮಿಕರು. ಊರಿಗೂ ಹೋಗಲಾಗದೆ ಕೆಲಸವೂ ಇಲ್ಲದೆ ಈಗ ಜಿಲ್ಲೆಯಲ್ಲಿಯೇ ಪರಿತಪಿಸುತ್ತಿದ್ದಾರೆ.

ಮಾ. 23ರಿಂದ ಲಾಕ್‌ಡೌನ್‌
ಕೆಲವು ಜಿಲ್ಲೆಗಳಿಗೆ ಮಾತ್ರ ಘೋಷಿಸಿದ ಲಾಕ್‌ಡೌನ್‌ ಅನ್ನು ಮಾ. 23ರ ರಾತ್ರಿ ಮುಖ್ಯಮಂತ್ರಿಗಳು ರಾಜ್ಯಾದ್ಯಂತ ಮಾ. 24ರಿಂದ ಮಾ. 31ರ ವರೆಗೆ ವಿಸ್ತರಿಸಿರುವ ನಿರ್ಧಾರ ಕೈಗೊಳ್ಳಲಾಯಿತು. ಅಂತೆಯೇ ಉಡುಪಿಯಲ್ಲಿ ಕಟ್ಟೆಚ್ಚರ ಕೈಗೊಳ್ಳ ಲಾಯಿತು. ಸಾರ್ವಜನಿಕ ಬಸ್‌ ಮೊದಲಾದ ಸೇವೆ ಗಳಲ್ಲೂ ವ್ಯತ್ಯಯ ಕಂಡುಬಂದವು.

ಮನೆಯಲ್ಲಿ ಬಾಕಿಯಾದ ಆ 168 ಗಂಟೆಗಳು
ಕುಂದಾಪುರ: ಕಳೆದ ರವಿವಾರ ದೇಶಾದ್ಯಂತ ಪ್ರಧಾನಿ ಮೋದಿ ಅವರ ಮನವಿಯಂತೆ ಜನತಾ ಕರ್ಫ್ಯೂ ನಡೆಯಿತು. ಅಭೂತಪೂರ್ವವಾಗಿ ಜನ 24 ತಾಸು ಮನೆಯಿಂದ ಹೊರಗೆ ಬರದೇ ಪ್ರಧಾನಿ ಕರೆಗೆ ಸ್ಪಂದಿಸಿದರು. ಅದಾದ ಬಳಿಕ ಸೋಮವಾರ ಮಂಗಳವಾರದಿಂದ ಮಾ.31ರವರೆಗೆ ಕರ್ನಾಟಕದಾದ್ಯಂತ ಲಾಕ್‌ಡೌನ್‌ ಘೋಷಿಸಲಾಯಿತು.

ಮಂಗಳವಾರ ಒಂದು ದಿನ ಕಳೆಯುವುದೇ ಕಷ್ಟ ಎಂದು ಜನ ಕುಳಿತಾಗಲೇ ಅದೇ ದಿನ ರಾತ್ರಿ ದೇಶಾದ್ಯಂತ ಬಂದ್‌ ಘೋಷಣೆಯಾಯಿತು. ಎ.14ರವರೆಗೆ ಲಾಕ್‌ಡೌನ್‌ ಕಡ್ಡಾಯವಾಗಿ ಆಚರಿಸಲೇಬೇಕಾದ ಆರೋಗ್ಯ ತುರ್ತುಸ್ಥಿತಿ ಉಂಟಾಗಿತ್ತು. ಇದೀಗ 1 ವಾರದ 168 ಗಂಟೆಗಳನ್ನು ಮನೆ ಪರಿಸರದಲ್ಲೇ ಕಳೆದ ಲಕ್ಷಾಂತರ ಮಂದಿ ಇದ್ದಾರೆ. ಕೆಲವರಷ್ಟೇ ಅಗತ್ಯಗಳಿಗಾಗಿ ಹೊರಗೆ ಬಂದಿದ್ದರು.

ಕೋವಿಡ್‌ 19 ವೈರಸ್‌ ಸಾಮಾಜಿಕವಾಗಿ ಹರಡುವ ಮೂರನೇ ಹಂತ ಪ್ರಬಲವಾಗದಂತೆ ಮಾಡಿದ ಈ ಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ದೇಶಾದ್ಯಂತ ಜನತಾ ಕರ್ಫ್ಯೂ ಎಂದರೆ ಹೇಗೆಂದೇ ಈಗಿನ ಜನಸಾಮಾನ್ಯರಿಗೆ ಕಲ್ಪನೆ ಇರಲಿಲ್ಲ. ಅದಾದ ಬಳಿಕ ಲಾಕ್‌ಡೌನ್‌ ಕೂಡಾ ಈ ತಲೆಮಾರಿನ ಎಲ್ಲರಿಗೂ ಮೊದಲ ಅನುಭವ. ಸ್ವಾತಂತ್ರಾéನಂತರವೂ, ಪೂರ್ವದಲ್ಲೂ ದೇಶಕ್ಕೆ ದೇಶವೇ ಹೀಗೆ ಕಾಯಿಲೆಗೆ ಜಾಗರೂಕರಾಗಿ ಹೊಸಿಲು ದಾಟದೇ ಉಳಿದ ದಿನಗಳಿಲ್ಲ ಎಂದೇ ಜನರ ಅಭಿಮತ.
ಕುಂದಾಪುರ ಉಪ ವಿಭಾಗ ಚಾಕಚಕ್ಯತೆಯಿಂದ ಇದನ್ನು ಅನುಷ್ಠಾನಗೊಳಿಸಿದೆ.

ಮೊದಲ ಒಂದೆರಡು ದಿನ ಅನಾವಶ್ಯಕವಾಗಿ ಮನೆ ಬಿಟ್ಟು ಬಂದವರಿಗೆ, ಬೀದಿ ಸುತ್ತಲು ಬಂದವರಿಗೆ, ಪೇಟೆ ಬಂದ್‌ ದಿನ ಹೇಗಿರುತ್ತದೆ ಎಂದು ನೋಡಬಂದವರಿಗೆ, ಕಾಲು ಕೆಜಿ ತರಕಾರಿಗಾಗಿ ನಿತ್ಯ ಪೇಟೆಗೆ ಬಂದವರು, ರಸ್ತೆ ಖಾಲಿ ಇದೆ ಎಂದು ವೀಲಿಂಗ್‌ ಮಾಡಲು ಬಂದವರಿಗೆಲ್ಲ ಪೊಲೀಸರು ಲಾಠಿ ರುಚಿ ತೋರಿಸಿದ್ದರು. ಈ ವಿಡಿಯೋಗಳೆಲ್ಲ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಹಾಗೆ ಸುಮ್ಮನೆ ಬರುವವರ ಸಂಖ್ಯೆ ತೀರಾ ವಿರಳವಾಯಿತು. ಪೊಲೀಸ್‌ ಅಧಿಕಾರಿಗಳು ಲಾಠಿ ಕೈಗೆತ್ತಿಕೊಳ್ಳದಂತೆ ಸೂಚನೆ ನೀಡಿದ್ದೂ ಆಯಿತು. ಈಗ ಆವಶ್ಯಕ ವಸ್ತು ಖರೀದಿಗೆ ಸಮಯ ಮಿತಿ ಮಾಡಲಾಗಿದೆ. ಬೆಳಗ್ಗೆ 7ರಿಂದ ಸಂಜೆ 11 ಗಂಟೆವರೆಗೆ ಮಾತ್ರ ತರಕಾರಿ, ಹಾಲು, ದಿನಸಿ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಅನಂತರ ಮೆಡಿಕಲ್‌ ಹಾಗೂ ಆಸ್ಪತ್ರೆ ಮಾತ್ರ ತೆರೆದಿರುತ್ತದೆ. ಪರಿಣಾಮವಾಗಿ ಜನರ ಓಡಾಟ 11 ಗಂಟೆ ನಂತರ ತೀರಾ ಕಡಿಮೆ ಎಂಬಂತೆ ಇರುತ್ತದೆ. ಲಾಕ್‌ಡೌನ್‌ ಘೋಷಣೆಯಾಗುತ್ತಿದ್ದಂತೆಯೇ ಬೆಂಗಳೂರಿನಿಂದ ಸಾವಿರಾರು ಮಂದಿ ಊರಿಗೆ ಬಂದರು. ಆದರೆ ತಡವಾಗಿ ಹೊರಟ ಸಾವಿರಾರು ವಲಸೆ ಕಾರ್ಮಿಕರು ಇಲ್ಲೇ ಬಾಕಿಯಾದರು.

ಖಾಸಗಿ ವೈದ್ಯರು ಹೊರರೋಗಿ ವಿಭಾಗ ಚಿಕಿತ್ಸೆ ಸ್ಥಗಿತಗೊಳಿಸಿದ್ದರು. ಆದರೆ ಆಸ್ಪತ್ರೆಗಳನ್ನು ಮುಚ್ಚಬಾರದು ಎಂದು ಜಿಲ್ಲಾಡಳಿತ ಸೂಚನೆ ನೀಡಿದ ಮೇರೆಗೆ ಆಸ್ಪತ್ರೆಗಳಲ್ಲಿ ಸೇವೆ ಲಭ್ಯವಿದೆ. ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್‌-19 ಶಂಕಿತರ ತೀವ್ರ ನಿಗಾ ವಾರ್ಡ್‌ ಸಿದ್ಧಗೊಳಿಸಲಾಗಿತ್ತು. ಅಲ್ಲಿ ಸೌಲಭ್ಯಗಳ ಕೊರತೆಯಾಗುವ ಹಿನ್ನೆಲೆಯಲ್ಲಿ ಹಳೆ ಆದರ್ಶ ಆಸ್ಪತ್ರೆಯನ್ನು ಸಜ್ಜುಗೊಳಿಸಲಾಗಿದೆ.

ಕಾರ್ಕಳದ ಮೆಡಿಕಲ್‌ಗ‌ಳಲ್ಲಿ ಹೆಚ್ಚಿನ ಜನಸಂದಣಿ
ಕಾರ್ಕಳ: ಕಾರ್ಕಳದಲ್ಲಿಯೂ ಲಾಕ್‌ಡೌನ್‌ ಆದೇಶದಿಂದ ಜನರು ಮನೆಯಲ್ಲೇ ಉಳಿದು ಅಗತ್ಯವಸ್ತುಗಳಿಗಾಗಿ ಆಗಾಗ್ಗೆ ಬಂದು ಹೋಗುತ್ತಿದ್ದರು. ಸೋಮವಾರ ದಿನಸಿ ಅಂಗಡಿ ಗಳಿಗಿಂತ ಹೆಚ್ಚಿನ ಕ್ಯೂ ಮೆಡಿಕಲ್‌ನಲ್ಲಿ ಕಂಡು ಬಂತು. ಹೊಸ್ಮಾರು, ಬೆಳ್ಮಣ್‌ ಭಾಗದಲ್ಲಿ ಮೆಡಿಕಲ್‌ ಮುಂದೆ ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಗುಂಪು ಗುಂಪಾಗಿದ್ದ ದೃಶ್ಯ ಕಂಡುಬರುತ್ತಿತ್ತು. ಬೆಳಗ್ಗೆ 11 ಗಂಟೆ ಅನಂತರ ಸಾರ್ವಜನಿಕ ಓಡಾಟಕ್ಕೆ ಪೊಲೀಸರು ಕಡಿವಾಣ ಹಾಕಿದರು. ಪೆಟ್ರೋಲ್‌ ಬಂಕ್‌ಗಳಲ್ಲಿ ಜನ ವಿರಳವಿತ್ತು. ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಕೊರತೆಯೂ ಇದೆ ಎನ್ನಲಾಗು ತ್ತಿದ್ದು, ಸದ್ಯ ಕೇವಲ ಮೂರು ವೆಂಟಿಲೇಟರ್‌ ಆಸ್ಪತ್ರೆಯಲ್ಲಿದೆ ಎಂದು ತಿಳಿದುಬಂದಿದೆ.

ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಐಸೋಲೇಶನ್‌ ವಾರ್ಡ್‌ನಲ್ಲಿರುವ ಐವರ ಗಂಟಲು ದ್ರವ ಪರೀಕ್ಷೆ ನೆಗೆಟಿವ್‌ ಕಂಡುಬಂದಿರುವುದು ಸಮಾಧಾನಕರ ಸಂಗತಿ. ವಿದೇಶದಿಂದ ಬಂದಿರುವ ಕಾಪು ಮೂಲದ ವ್ಯಕ್ತಿಯೋರ್ವರು ಈ ಹಿಂದೆ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿದ್ದು ಅವರಿಗೆ ಕೋವಿಡ್‌-19 ಪಾಸಿಟಿವ್‌ ದೃಢವಾದ ತತ್‌ಕ್ಷಣ ಅವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಆದಾಗ್ಯೂ ಬೇರೆ ತಾಲೂಕಿನ ಕೋವಿಡ್‌-19 ಶಂಕಿತರನ್ನು ಕಾರ್ಕಳ ಆಸ್ಪತ್ರೆಯಲ್ಲಿ ದಾಖಲಿಸುವ ಕುರಿತು ಸಾರ್ವಜನಿಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದರಿಂದ ಸಾರ್ವಜನಿಕರು ಮಾತ್ರವಲ್ಲದೇ ಆಸ್ಪತ್ರೆ ಸಿಬಂದಿ ಕೂಡ ಆತಂಕಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next