Advertisement

ಅಲೆಯೊಂದು ಎದೆಗೆ ಬಡಿದು…

06:00 AM Jul 03, 2018 | |

ಅದೆಷ್ಟೋ ಬಾರಿ, ಆಗಸ ಮುಟ್ಟಿಯೇ ತೀರುತ್ತೇವೆ ಎನ್ನುವ ರಭಸದಲ್ಲಿ ಏಳುವ ಅಲೆಗಳು, ತೀರ ಮುಟ್ಟಿ ಮತ್ತೆ ನೀರಿನಲ್ಲಿ ಲೀನವಾದರೂ ಮತ್ತೆ ಅಲೆಯಾಗಿ ಏಳುತ್ತವೆ. ಒಂದಷ್ಟು ಹಿನ್ನಡೆ- ಮುನ್ನಡೆಗಳು ಕೂಡಿದರೆ ಬದುಕಿಗೊಂದು ಅರ್ಥ. ಹಿನ್ನಡೆಗಳಿಂದ ಕಲಿತರೆ ಮಾತ್ರ, ಅಲೆಗಳಂತೆ ಏಳುವ ಶಕ್ತಿ ಒಗ್ಗೂಡಿಸಿಕೊಂಡು ಮುನ್ನಡೆಯಬಹುದು…

Advertisement

ಎಲ್ಲರ ಕಣ್ಣಲ್ಲೂ ಒಂದು ಕಾತರ. ಅಲೆ ಏಳುತ್ತಿತ್ತು, ಆಳೆತ್ತರಕ್ಕೆ ಬಂದು ಅಪ್ಪಳಿಸುತ್ತಿತ್ತು, ಎದೆಯೊಡ್ಡಿದವರನ್ನು ಒಂದೊಂದು ಎತ್ತರಕ್ಕೆ ಒಯ್ದು, ಸುಮ್ಮನೆ ಕೂರಿಸುತ್ತಿತ್ತು. ಎಲ್ಲರ ಮೊಗದಲ್ಲೂ ನಗು. ಎಲ್ಲೋ ತೇಲಿದಂಥ ತಾಜಾ ಪುಳಕ. ಸುತ್ತಲಿನ ಜಗತ್ತು ಮರೆತು ಹೋದಷ್ಟು ಹಗುರ ಅವರೆಲ್ಲ. ಆರ್ಟಿಫಿಶಿಯಲ್‌ ಅಲೆಗಳೊಂದಿಗೆ ಹೋರಾಡಿ, ಆಳಕ್ಕೆ ತಲುಪಿದ ದೂರವನ್ನೊಮ್ಮೆ ನೋಡಿಕೊಂಡು, ಅಲೆಗಳ ವಿರುದ್ಧ ಗೆದ್ದೇಬಿಟ್ಟೆವೇನೋ ಎಂಬ ಅವರ ಕಣ್ಣೋಟ ಯಾಕೆ ನನ್ನನ್ನು ಕೆಣಕಿತು?

   ಅದೇಕೋ ಈ ಸಲ ನೀರಿಗಿಳಿಯಬೇಕೆನಿಸಲಿಲ್ಲ. ಎಲ್ಲರನ್ನೂ ಹೀಗೆ ನೋಡುವುದೇ ಹೆಚ್ಚೆನಿಸಿತು. ಆ ಅಲೆಗಳು ಅದೆಷ್ಟು ಪಾಠ ಕಲಿಸುತ್ತವೆಯಲ್ಲವೆ? ಪ್ರತಿ ಬಾರಿ ರಭಸವಾಗಿ ಮುನ್ನುಗ್ಗುತ್ತವೆ, ನಮ್ಮನ್ನು ಮೊದಲಿದ್ದ ಜಾಗಕ್ಕೆ ಎಸೆಯಲು… ಕೆಲವರು ಅವುಗಳ ವಿರುದ್ಧ ಸೆಣಸಿ ಆಳದವರೆಗೂ ತಲುಪುತ್ತಾರೆ. ಕೆಲವರು ಆ ಅಲೆಗಳ ಗೋಜೇ ಬೇಡವೆಂಬಂತೆ ತೀರದಲ್ಲೇ ನಿಂತುಬಿಟ್ಟಿದ್ದಾರೆ, ಮೌನಿಗಳಾಗಿ. ಇನ್ನೂ ಕೆಲವರು ಹಗ್ಗದ ಆಸರೆ ಪಡೆದು ಆಳ ತಲುಪಲೆತ್ನಿಸುತ್ತಿದ್ದಾರೆ, ಅಲೆಗ್ಸಾಂಡರ್‌ನ ಹುರುಪಿನಂತೆ.

   ಬದುಕಿಗೂ ಈ ಅಲೆಗಳಿಗೂ ಎಷ್ಟೊಂದು ಸಾಮ್ಯತೆ. ಪ್ರತಿ ಹೆಜ್ಜೆಗೂ ಊಹಿಸದ ತಿರುವು ನೀಡುವ ಅಲೆಗಳು, ಮೊದಲಿದ್ದ ಜಾಗಕ್ಕೆ ನಮ್ಮನ್ನು ಎಸೆಯಲೆಂದೇ ರಭಸವಾಗಿ ಮುನ್ನುಗ್ಗುತ್ತಿರುತ್ತವೆ. ಆಗ ಹೆಜ್ಜೆಗಳು ನಮ್ಮ ಮಾತು ಕೇಳುವ ಸ್ಥಿತಿಯಲ್ಲಿರುವುದೇ ಇಲ್ಲ. ಅಲೆಗಳ ಆರ್ಭಟಕ್ಕೆ ಹೆದರಿದವರಿಗೆ, ತೀರವೇ ಲೇಸು ಆಗಿರುತ್ತೆ. ಸೆಣಸಬೇಕೆಂದು ನಿರ್ಧರಿಸಿಬಿಟ್ಟಾಗ ಮಾತ್ರ, ನಮ್ಮ ಗಟ್ಟಿತನ ತಿಳಿಯುವುದು. ಅಲೆಗಳ ವಿರುದ್ಧ ಸಾಗುವುದೇ ಈ ಜೀವನ.

  ಅಲೆಗಳೇನೋ ತೀರಕ್ಕೆ ತಂದೆಸೆಯುತ್ತಲೇ ಸಾಗುತ್ತವೆ. ಮತ್ತದರ ವಿರುದ್ಧ ಸೆಣಸಿ ಮುಂದೆ ಸಾಗುವುದೋ, ತೀರದಲ್ಲೇ ಉಳಿಯುವುದೋ ಎಂಬುದು ಅವರವರ ಬದುಕಿನ ಭಾಷ್ಯ. ಆದರೆ, ಮೊದಲು ಅಸಾಧ್ಯವೆನಿಸಿದರೂ ಇಂಥ ಭಾರಿ ಅಲೆಗಳ ವಿರುದ್ಧ ನಡೆದವರು ಹೊಸ ಹಾದಿಗೆ ಮುನ್ನುಡಿಯನ್ನಂತೂ ಬರೆದೇ ತೀರುತ್ತಾರೆ. ಪ್ರಕಾಶ್‌ ಅಯ್ಯರ್‌ ಬರೆದ “ದಿ ಹ್ಯಾಬಿಟ್‌ ಆಫ್ ವಿನ್ನಿಂಗ್‌’ ಎಂಬ ಕೃತಿಯನ್ನು ಮೊನ್ನೆಯಷ್ಟೇ ಓದಿದೆ. ಅದರಲ್ಲಿನ ಒಬ್ಬ ವ್ಯಕ್ತಿ ಬಹಳ ದಿನಗಳವರೆಗೆ ನನಗೆ ಇಂಥದ್ದೇ ಗುಂಗು ಹಿಡಿಸಿಬಿಟ್ಟ.

Advertisement

   ಕೆರೋಲಿ ಟಕಾಸ್‌! ಈತನ ಹೆಸರನ್ನು ಹೆಚ್ಚಿನವರು ಕೇಳಿಯೇ ಇಲ್ಲ. ಈತ, 28ನೇ ವಯಸ್ಸಿಗೇ ಹಂಗೇರಿಯ ಮಿಲಿಟರಿ ಅಧಿಕಾರಿಯಾದ. ಅಲ್ಲದೇ, ಸುತ್ತಮುತ್ತಲಿನ ಊರುಗಳಲ್ಲೆಲ್ಲ ಪ್ರಖ್ಯಾತ ಶೂಟರ್‌ ಅವನು. ರಾಷ್ಟ್ರಮಟ್ಟದ ಅದೆಷ್ಟೋ ಪಂದ್ಯಗಳಲ್ಲಿ ಪದಕ ಗೆದ್ದಿದ್ದ. ಅದು 1940ರ ಒಲಿಂಪಿಕ್ಸ್‌. ಶೂಟಿಂಗ್‌ ವಿಭಾಗದಲ್ಲಿ ಬಂಗಾರದ ಪದಕ ಗೆದ್ದೇ ಗೆಲ್ಲುವೆನೆಂಬ ಭರವಸೆ ಇಟ್ಟುಕೊಂಡಿದ್ದ. ಆದರೆ, ಆ ಕನಸಿಗೆ ಆಘಾತದ ಸಿಡಿಲೊಂದು ಬಡಿಯಿತು. ಮಿಲಿಟರಿ ತರಬೇತಿ ವೇಳೆ ಸಿಡಿದ ಬಾಂಬಿನೊಂದಿಗೆ ಅವನ ಕನಸುಗಳೂ ನುಚ್ಚುನೂರಾಗಿದ್ದವು. ಬಲಗೈ ಮತ್ತು ಕಾಲು ಕಳಕೊಂಡ ಅವನು ಹಲವು ತಿಂಗಳು ಆಸ್ಪತ್ರೆಯಲ್ಲೇ ಮಲಗಿಬಿಟ್ಟ. ಒಂದು ವರ್ಷ ಯಾರಿಗೂ ಆತನ ಇರುವಿಕೆಯ ಸುಳಿವೇ ಸಿಗಲಿಲ್ಲ. ಟಕಾಸ್‌ನ ಶೂಟರ್‌ ಬದುಕು ಸಮಾಪ್ತಿ ಆಯಿತೆಂದೇ ಜಗತ್ತು ಲೆಕ್ಕಿಸಿತ್ತು.

   ವರುಷಗಳು ಉರುಳಿದವು. ಒಂದು ದಿನ ಹಂಗೇರಿಯ ನ್ಯಾಷನಲ್‌ ಶೂಟರ್ಸ್‌ ಇವೆಂಟ್‌ನಲ್ಲಿ ಟಕಾಸ್‌ ದಿಢೀರನೇ ಪ್ರತ್ಯಕ್ಷನಾಗಿಬಿಟ್ಟ! ಎಲ್ಲರಿಗೂ ಅಚ್ಚರಿ. ಆ ಅಜ್ಞಾತ ಅವಧಿಯಲ್ಲಿ ತನ್ನ ಎಡಗೈಯನ್ನು ಚೆನ್ನಾಗಿ ತರಬೇತುಗೊಳಿಸಿ, ಅದೆಷ್ಟು ಪಳಗಿಸಿದ್ದನೆಂದರೆ, ಆತ ಮತ್ತೆ ಮೊದಲಿನ ಸ್ಥಾನ ಪಡೆದ! ಮುಂದೆ ಒಲಿಂಪಿಕ್ಸ್ ನಲ್ಲಿ ಪದಕವನ್ನೂ ಗೆದ್ದುಬಿಟ್ಟ. ಬದುಕಿನ ಅಲೆಯು ಅವನನ್ನು ಎಲ್ಲಿಯೋ ಧೊಪ್ಪನೆ ಬಿಸಾಕಿದರೂ, ಭಲೇ ಭೀಮನಂತೆ ಅವನು ಬಂದಿದ್ದ. ಆದರೆ, ಬದುಕಿನ ಆ ಅಲೆಯನ್ನು, ಅವನಿಗಿದ್ದ ಶೂಟಿಂಗ್‌ ತುಡಿತದ ಅಲೆಗಳು ಮಣಿಸಿ, ಅವನನ್ನು ತೀರ ತಲುಪಿಸಿದ್ದವು.

  ಬದುಕಿನ ಆಘಾತದ ಅಲೆಗೆ ಎದೆಗೊಟ್ಟವರು ಹಲವರು. ಕ್ರಿಕೆಟರ್‌ ಯುವರಾಜ್‌ ಸಿಂಗ್‌, ಸಾವಿರಾರು ಅನಾಥರಿಗೆ ಅಮ್ಮನಾದ ಸಿಂಧೂ ತಾಯಿ ಸಪಾಲ್‌, ಕಣ್ಣು, ಕಿವಿ, ಮಾತು ಹೀಗೆ ಯಾವ ಆಧಾರವೂ ಇಲ್ಲದೇ ಮನುಕುಲಕ್ಕೆ ಹೊಸ ಭಾಷ್ಯ ಬರೆದ ಹೆಲನ್‌ ಕೆಲ್ಲರ್‌… ಒಬ್ಬರೇ ಇಬ್ಬರೇ? ಅಸಂಖ್ಯ ಜೀವನವೀರರು. ಇನ್ನು ಬದುಕು ಮುಗಿದೇ ಹೋಯಿತು, ಮುಂದೆ ದಾರಿಯೇ ಇಲ್ಲ ಎಂದು ಪಯಣ ನಿಲ್ಲಿಸಿದವರೂ, ಜೀವನದ ತಮ್ಮ ಪರಮಗುರಿಯನ್ನು ಛಲದ ಅಲೆಯಲ್ಲೇ ತಲುಪಿದ ಕತೆಗಳನ್ನೂ ಕೇಳುತ್ತಲೇ ಇರುತ್ತೇವೆ.

   ಇಸ್ಪೀಟಿನ ಆಟಕ್ಕೆ ಕುಳಿತಾಗ ಯಾವ ಎಲೆಗಳು ಬರುತ್ತವೆ ಎಂದು ತಿಳಿದಿರುವುದಿಲ್ಲ. ಬಂದ ಎಲೆಗಳನ್ನು ಉಪಯೋಗಿಸಿಯೇ ಆಡಬೇಕು, ಇಲ್ಲ ಆಟ ಬಿಡಬೇಕು. ಬದುಕು ಕೂಡ ಹೀಗೆಯೇ. ಅದು ಒಡ್ಡುವ ತಿರುವುಗಳನ್ನೇ ತಿರುಗಿಸಿಕೊಂಡು ಬದುಕಿನ ದಾರಿ ನಿರ್ಮಿಸಿಕೊಳ್ಳಬೇಕು. ಬಾಕ್ಸಿಂಗ್‌ ಕಿಂಗ್‌ ಮಹಮ್ಮದ್‌ ಅಲಿ ಹೇಳುವಂತೆ, “ಬಾಕ್ಸಿಂಗ್‌ನಲ್ಲಿ ಅತಿಹೆಚ್ಚು ನೋವುಂಡವನೇ ಅತಿಹೆಚ್ಚು ಬಾರಿ ಗೆದ್ದವನಾಗಿರುತ್ತಾನೆ’! ಕ್ಷೇತ್ರ ಯಾವುದೇ ಆಗಲಿ… ನಾವು ಎಷ್ಟು ಸವೆಯುತ್ತೇವೆ, ನೋವನ್ನು ಅದೆಷ್ಟು ಸಹಿಸಿಕೊಳ್ಳುತ್ತೇವೆ ಎನ್ನುವುದೇ ಗೆಲುವಿನ ಮಾನದಂಡ ಆಗಿರುತ್ತೆ.

   ಅದೆಷ್ಟೋ ಬಾರಿ, ಆಗಸ ಮುಟ್ಟಿಯೇ ತೀರುತ್ತೇವೆ ಎನ್ನುವ ರಭಸದಲ್ಲಿ ಏಳುವ ಅಲೆಗಳು, ತೀರ ಮುಟ್ಟಿ ಮತ್ತೆ ನೀರಿನಲ್ಲಿ ಲೀನವಾದರೂ ಮತ್ತೆ ಅಲೆಯಾಗಿ ಏಳುತ್ತವೆ. ಒಂದಷ್ಟು ಹಿನ್ನಡೆ- ಮುನ್ನಡೆಗಳು ಕೂಡಿದರೆ ಬದುಕಿಗೊಂದು ಅರ್ಥ. ಹಿನ್ನಡೆಗಳಿಂದ ಕಲಿತರೆ ಮಾತ್ರ, ಅಲೆಗಳಂತೆ ಏಳುವ ಶಕ್ತಿ ಒಗ್ಗೂಡಿಸಿಕೊಂಡು ಮುನ್ನಡೆಯಬಹುದು. ಮೇಲೆದ್ದು ಎವರೆಸ್ಟ್‌ ಏರಬಹುದು. 
     
ಬಾಕ್ಸಿಂಗ್‌ನಲ್ಲಿ ಅತಿಹೆಚ್ಚು ನೋವುಂಡವನೇ ಅತಿಹೆಚ್ಚು ಬಾರಿ ಗೆದ್ದವನೂ ಆಗಿರುತ್ತಾನೆ
– ಮಹಮದ್‌ ಅಲಿ

– ಮಂಜುಳಾ ಡಿ.

Advertisement

Udayavani is now on Telegram. Click here to join our channel and stay updated with the latest news.

Next