Advertisement

ರಾಜಕಾಲುವೆಗೆ ವರ್ಟಿಕಲ್‌ ಉದ್ಯಾನ ರೂಪ

01:10 PM Oct 16, 2022 | Team Udayavani |

ಹುಬ್ಬಳ್ಳಿ: ಅದು ಪ್ರತಿಷ್ಠಿತ ವ್ಯಕ್ತಿಗಳು ಸಂಚರಿಸುವ ಮಾರ್ಗ, ಪ್ರಮುಖವಾಗಿ ವಿವಿಧ ಸಮಾರಂಭಗಳು ನಡೆಯುವ ಸ್ಥಳ. ಆದರೆ ನಿರ್ಲಕ್ಷ್ಯದಿಂದ ಅದೊಂದು ಅಧ್ವಾನದ ಸ್ಥಳವಾಗಿ ಮಾರ್ಪಟ್ಟಿತ್ತು. ಇದೀಗ ಆ ಸ್ಥಳಕ್ಕೆ ಸೌಂದರ್ಯೀಕರಣ ರೂಪ ನೀಡಲು ಪಾಲಿಕೆ ಮುಂದಾಗಿದ್ದು, ಹಸಿರು ಹೊದಿಕೆಯಿಂದ ಕಂಗೊಳಿಸಲಿದೆ. ಈ ಮೊದಲ ಪ್ರಯೋಗ ಇತರೆಡೆಗೂ ಮಾದರಿಯಾಗಲಿದೆ.

Advertisement

ದೇಶಪಾಂಡೆ ನಗರದ ರಾಜಕಾಲುವೆ ಅವ್ಯವಸ್ಥೆಯ ಆಗರವಾಗಿತ್ತು. ಮಳೆ ಬಂದರೆ ಅರ್ಧ ನಗರದ ತ್ಯಾಜ್ಯ ಬಂದು ಸಂಗ್ರಹವಾಗುತ್ತಿತ್ತು. ಮಾರ್ಗದಲ್ಲಿ ಸಂಚರಿಸುವವರು ದುರ್ವಾಸನೆ ಸೇವಿಸಿಕೊಂಡೇ ಓಡಾಡಬೇಕಿತ್ತು. ಇನ್ನು ಇದನ್ನು ಸ್ವಚ್ಛಗೊಳಿಸಲು ಮುಂದಾದರೆ ಇಡೀ ರಸ್ತೆಯೇ ಕೊಳಚೆಮಯ. ಇದರಿಂದಾಗಿ ಒಂದೆರಡು ದಿನ ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇನ್ನು ಅಕ್ಕಪಕ್ಕದವರಿಗೆ ಮನೆ ಕಸ, ವಿವಿಧ ತ್ಯಾಜ್ಯ ಸುರಿಯುವ ಕಸದ ತೊಟ್ಟೆಯಾಗಿ ಪರಿಣಮಿಸಿತ್ತು. ಆದರೆ ಇದಕ್ಕೆಲ್ಲ ಪೂರ್ಣ ವಿರಾಮ ನೀಡಲು ಪಾಲಿಕೆ ಮುಂದಾಗಿದೆ. ಇಂತಹ ಕಾರ್ಯ ಕೈಗೊಳ್ಳಬೇಕು ಎನ್ನುವ ಚರ್ಚೆಗಳು ನಡೆದಿದ್ದರೂ ಕಾರ್ಯಗತಗೊಳಿಸಲು ಸಾಧ್ಯವಾಗಿರಲಿಲ್ಲ. ಇದೀಗ ರಾಷ್ಟ್ರಪತಿಗಳು ನಗರಕ್ಕೆ ಆಗಮಿಸಿರುವುದು ಇದಕ್ಕೆ ಮುನ್ನುಡಿ ಬರೆದಂತಾಗಿದೆ. ಆಕರ್ಷಣೀಯ ಸ್ಥಳವಾಗಲಿದೆ.

ಮುಖ್ಯಮಂತ್ರಿ, ಕೇಂದ್ರ ಸಚಿವರು ಸೇರಿದಂತೆ ಬಹುತೇಕ ಪ್ರತಿಷ್ಠಿತ ವ್ಯಕ್ತಿಗಳು ಓಡಾಡುವ ರಸ್ತೆಯಿದು. ಅಲ್ಲದೆ ಪಕ್ಕದಲ್ಲಿಯೇ ಪಂ| ಸವಾಯಿ ಗಂಧರ್ವ ಸಭಾಂಗಣ, ಗುಜರಾತ ಭವನ, ಜಿಮಖಾನಾ ಕ್ಲಬ್‌, ರಾಜನಗರದ ಕೆಎಸ್‌ಸಿಎ ಮೈದಾನಕ್ಕೆ ತೆರಳುವ ರಸ್ತೆಯಿದೆ. ಇನ್ನು ಇಲ್ಲಿರುವ ಸಭಾಭವನದಲ್ಲಿ ವಾರದಲ್ಲಿ ನಾಲ್ಕೈದು ವಿವಿಧ ಸಮಾರಂಭ ನಡೆಯುತ್ತವೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುತ್ತಿದ್ದ ಗಣ್ಯರು, ಜನರಿಗೆ ಈ ನಾಲಾದ ಅವಸ್ಥೆಯಿಂದಾಗಿ ಮಹಾನಗರದ ಜನತೆ ತಲೆ ತಗ್ಗಿಸುವಂತಾಗಿತ್ತು.

ಹೀಗಾಗಿಯೇ ರಾಷ್ಟ್ರಪತಿಗಳು ಈ ಮಾರ್ಗವಾಗಿ ಆಗಮಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಅವ್ಯವಸ್ಥೆ ಮರೆಮಾಚಲು ಗ್ರಿಲ್‌ಗ‌ಳನ್ನು ಹಾಕಿ ರಾಜ ಮರ್ಯಾದೆ ನೀಡಲಾಗಿತ್ತು. ಇದೊಂದು ಆಕರ್ಷಣೀಯ ತಾಣವಾಗಿ ಮಾರ್ಪಟ್ಟಿತ್ತು. ಆಗ ಅಳವಡಿಸಿದ್ದ ಗ್ರಿಲ್‌ಗ‌ಳನ್ನು ಹಾಗೆ ಉಳಿಸಿಕೊಂಡು ಉದ್ಯಾನದ ಸ್ಪರ್ಶ ನೀಡಲು ಮುಂದಾಗಿದ್ದಾರೆ.

Advertisement

ಈಗಾಗಲೇ ಬೆಂಗೇರಿ, ಉಣಕಲ್ಲ ಸಂತೆ ಮೈದಾನದಲ್ಲಿ ಸೇರಿದಂತೆ ಖಾಸಗಿ ಹೊಟೇಲ್‌ಗ‌ಳ, ಅಪಾರ್ಟ್‌ಮೆಂಟ್‌ ಮಂಭಾಗದಲ್ಲಿರುವ ವರ್ಟಿಕಲ್‌ ಉದ್ಯಾನ ಮಾಡಲು ಪಾಲಿಕೆ ಮುಂದಾಗಿದೆ. ಈ ವರ್ಟಿಕಲ್‌ ಉದ್ಯಾನಕ್ಕೆ ವಿಶೇಷವಾದ ಸಸಿ ಅಥವಾ ಬಳ್ಳಿಗಳನ್ನು ಬಳಸಲಾಗುತ್ತದೆ. ಅತ್ಯಂತ ಕಡಿಮೆ ನೀರನ್ನು ಪಡೆದು ಅತ್ಯಂತ ಕಡಿಮೆ ನಿರ್ವಹಣೆ ಹೊಂದಿರುವ ಹೂವಿನ ಸಸಿ ಅಥವಾ ಬಳ್ಳಿ ಹುಡುಕಲಾಗುತ್ತಿದೆ. ಕೇರಳದಲ್ಲಿ ಇಂತಹ ಸಸಿ, ಬಳ್ಳಿ ಲಭ್ಯವಿದ್ದು, ಪ್ರಾಯೋಗಿಕವಾಗಿ ಒಂದಿಷ್ಟು ತರಿಸುವ ಸಿದ್ಧತೆಗಳು ನಡೆದಿವೆ.

ಈ ಗಿಡಗಳು ವಾತಾವರಣದ ಉಷ್ಣಾಂಶ ಕಡಿಮೆ ಮಾಡುವ ಗುಣವಿದ್ದರೆ ಕೆಲ ಗಿಡಗಳಿಗೆ ಕಲುಷಿತ ಅಂಶ ಹೀರಿಕೊಳ್ಳುವ ಕೆಲಸ ಮಾಡುತ್ತವೆ. ಇನ್ನು ಸಾರ್ವಜನಿಕ ಸ್ಥಳದಲ್ಲಿ ದುಬಾರಿ ಬೆಲೆಯ ಸಸಿ ಅಥವಾ ಬಳ್ಳಿಯ ಉದ್ಯಾನ ಮಾಡುವುದರಿಂದ ಕಳ್ಳತನ, ಹಾಳು ಮಾಡುವ ಪ್ರವೃತ್ತಿಯ ಜನರಿರುತ್ತಾರೆ. ಇಂತಹ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಉದ್ಯಾನ ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಅಲ್ಲದೆ ಸುತ್ತಮುತ್ತಲಿನವರು ಕಸ ಸುರಿಯುವುದಕ್ಕೆ ಕಡಿವಾಣ ಬೀಳಲಿದ್ದು, ಇದರಿಂದ ನಾಲಾದ ಚಿತ್ರಣವೇ ಬದಲಾಗಲಿದೆ.

ಈ ಮೊದಲು ರಸ್ತೆ ತಿರುವಿನಲ್ಲೇ ತಡೆಗೋಡೆ ಒಡೆದು ಸಿಲುಕಿಕೊಂಡ ತ್ಯಾಜ್ಯವನ್ನು ಜೆಸಿಬಿ ಮೂಲಕ ತೆಗೆಯಲಾಗುತ್ತಿತ್ತು. ಇದರಿಂದ ಕೊಳಚೆ ನೀಡಿ ಇಡೀ ರಸ್ತೆಯ ತುಂಬೆಲ್ಲಾ ಹರಿದು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಇದೀಗ ನಾಲೆಯುದ್ದಕ್ಕೂ ಅಲ್ಲಲ್ಲಿ ಬಿಧ್ದೋಗಿದ್ದ ತಡೆಗೋಡೆಯನ್ನು ದುರಸ್ತಿ ಮಾಡಲಾಗಿದೆ. ಹೀಗಾಗಿ ಹಿಂದೆಯೇ ತ್ಯಾಜ್ಯ ಸಂಗ್ರವಾಗುವ ನಿಟ್ಟಿನಲ್ಲಿ ಕಂಬಗಳನ್ನು ನಿರ್ಮಿಸಿ ಅಲ್ಲಿಂದಲೇ ತ್ಯಾಜ್ಯ ಸಂಗ್ರಹಿಸುವ ಉದ್ದೇಶ ಹೊಂದಿದ್ದಾರೆ. ಆ ಭಾಗದಲ್ಲಿ ಯಾವುದೇ ಮನೆಗಳು, ವಾಹನ ಸಂಚಾರ ಇಲ್ಲದ ಕಾರಣ ಜನರಿಗೆ ಯಾವುದೇ ತೊಂದರೆಯಾಗಲ್ಲ. ಇನ್ನೂ ನಾಲಾದ ಹಿಂಭಾಗದಲ್ಲೂ ತಡೆಗೋಡೆ ನಿರ್ಮಿಸುವ ಯೋಜನೆಯಿದೆ.

ಇತರೆಡೆಗೂ ಪ್ರೇರಣೆ: ವಿವಿಧ ಅನುದಾನದಡಿ ಪಾಲಿಕೆ ಕೈಗೊಂಡಿರುವ ದೇಶಪಾಂಡೆ ನಗರದ ನಾಲೆ ಸೌಂದರ್ಯೀಕರಣ ಕಾರ್ಯ ಮೊದಲನೇಯದಾಗಿದೆ. ಇದು ಪೂರ್ಣಗೊಂಡರೆ ಇತರೆಡೆಗೂ ಮಾದರಿಯಾಗಲಿದೆ. ಈಗಾಗಲೇ ನಗರ ಸೌಂದರ್ಯೀಕರಣಕ್ಕೆ ಒತ್ತು ನೀಡಲಾಗಿದೆ. ಪ್ರಮುಖ ರಸ್ತೆಯ ಅಕ್ಕಪಕ್ಕದ ಕಾಂಪೌಂಡ್‌ ಗೋಡೆಗಳಿಗೆ ಕಲಾಕೃತಿಗಳನ್ನು ರಚಿಸಲಾಗುತ್ತಿದೆ.

ನಗರ ಪ್ರವೇಶ, ಪ್ರಮುಖ ರಸ್ತೆಗಳಲ್ಲಿರುವ ನಾಲಾ ಮರೆ ಮಾಚಲು ಇದೊಂದು ಉತ್ತಮ ಎಂಬುದು ಪಾಲಿಕೆ ಅಧಿಕಾರಿಗಳು ಅಭಿಪ್ರಾಯವಾಗಿದೆ. ಪ್ರಮುಖವಾಗಿ ಬಿಡ್ನಾಳ ಕ್ರಾಸ್‌, ಗೋಕುಲ ರಸ್ತೆಯ ಉಣಕಲ್ಲ ನಾಲಾ, ಶಿರೂರು ಪಾರ್ಕ್‌ ಸೇರಿದಂತೆ ವಿವಿಧ ಭಾಗಗಳಲ್ಲಿ ಇದೇ ಮಾದರಿಯನ್ನು ಅಳವಡಿಸಲು ಚಿಂತನೆ ನಡೆದಿದೆ.

ಇದಕ್ಕಾಗಿ ಖಾಸಗಿಯವರಿಂದ ಪ್ರಾಯೋಜಕತ್ವ ಪಡೆಯಲು ಚಿಂತನೆಗಳು ನಡೆದಿದ್ದು, ಅಂದುಕೊಂಡಂತೆ ನಡೆದರೆ ಕನಿಷ್ಠ ಪಕ್ಷ ಪ್ರಮುಖ ರಸ್ತೆಗಳ ನಾಲಾ ಅವ್ಯವಸ್ಥೆಗೆ ಒಂದಿಷ್ಟು ಪರಿಹಾರ ದೊರೆತಂತಾಗಲಿದೆ.

ನಗರ ಸೌಂದರ್ಯೀಕರಣದ ಭಾಗವಾಗಿ ನಾಲಾ ಬದಿಯಲ್ಲಿ ವರ್ಟಿಕಲ್‌ ಗಾರ್ಡನ್‌ ಮಾಡಲಾಗುತ್ತಿದೆ. ಇದರಿಂದ ನಾಲಾದ ಚಿತ್ರಣ ಬದಲಾಗಿದೆ. ಮೇಲಾಗಿ ನಾಲಾಗೆ ಕಸ ಸುರಿಯುವುದು ತಪ್ಪಲಿದೆ. ಗ್ರಿಲ್‌ ಅಳವಡಿಸಿದರೂ ಕೆಲವರು ಕಸ ಹಾಕುವುದು ಕಂಡುಬರುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಗ್ರಿಲ್‌ ಎತ್ತರ ಹೆಚ್ಚಿಸಲಾಗುವುದು. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇಂತಹ ಕಾರ್ಯಗಳಲ್ಲಿ ಜನರ ಸಹಕಾರ ಅತ್ಯಗತ್ಯವಾಗಿದೆ. ಇಲ್ಲಿನ ಪ್ರತಿಕ್ರಿಯೆ ನೋಡಿಕೊಂಡು ಇತರೆಡೆ ವಿಸ್ತರಿಸಲಾಗುವುದು.  –ಡಾ| ಬಿ.ಗೋಪಾಲಕೃಷ್ಣ, ಆಯುಕ್ತರು, ಹು-ಧಾ ಮಹಾನಗರ ಪಾಲಿಕೆ

ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next