Advertisement

ಮಾಜಿ-ಹಾಲಿ ಸಿಎಂ ನಡುವೆ ವಾಕ್ಸಮರ

09:48 AM Dec 24, 2019 | Lakshmi GovindaRaj |

ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಡುವಿನ ವಾಕ್ಸಮರ ಮುಂದುವರಿದಿದೆ. ಮುಖ್ಯಮಂತ್ರಿಗೆ ನೈತಿಕತೆಯಿದ್ದರೆ ಗೃಹಸಚಿವರನ್ನು ಹುದ್ದೆಯಿಂದ ತೆಗೆದು ಹಾಕಬೇಕೆಂದು ಎಚ್ಡಿಕೆ ಮಂಗಳೂರಿನಲ್ಲಿ ಆಗ್ರಹಿಸಿದ್ದಾರೆ. ಎನ್‌ಆರ್‌ಸಿ, ಸಿಎಎ ಕಾಯ್ದೆಯಿಂದ ಯಾವ ರೀತಿಯಲ್ಲಿ ಮುಸ್ಲಿಂ ಬಂಧುಗಳಿಗೆ ಅನ್ಯಾಯವಾಗುತ್ತದೆ ಎಂಬುದನ್ನು ಕುಮಾರಸ್ವಾಮಿ ತಿಳಿಸುತ್ತಾರೆಯೇ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

Advertisement

ಗೊಂದಲ ಮೂಡಿಸುವುದು ಖಂಡನೀಯ
ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳಾದ ಸಿದ್ದ ರಾಮಯ್ಯ, ಎಚ್‌.ಡಿ.ಕುಮಾರಸ್ವಾಮಿಯವರು ಎನ್‌ಆರ್‌ಸಿ, ಸಿಎಎ ಎಂದರೇನು, ಇದರಿಂದ ಮುಸ್ಲಿಮ ರಿಗೆ ಯಾವ ರೀತಿಯಲ್ಲಿ ತೊಂದರೆಯಾಗುತ್ತದೆ ಎಂಬುದನ್ನು ತಿಳಿಸಲಿ. ಅದನ್ನು ಬಿಟ್ಟು ಉದ್ದೇಶ ಪೂರ್ವಕವಾಗಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಎಚ್‌.ಡಿ.ಕುಮಾರಸ್ವಾಮಿಯವ ರು ಮಾಡಿದ ಆರೋಪ ಕುರಿತಂತೆ ನಗರದ ಡಾಲರ್ ಕಾಲೋನಿ ನಿವಾಸದಲ್ಲಿ ಭಾನುವಾರ ಮಧ್ಯಾಹ್ನ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಅವರ ಹೇಳಿಕೆಗೆ ತಿರುಗೇಟು ನೀಡಿದರು. ಕುಮಾರಸ್ವಾಮಿಯವರು ಮಂಗಳೂರಿಗೆ ತೆರಳಿ, ಅಲ್ಲಿ ಬಂದಿದ್ದವರು ಪ್ರತಿಭಟನೆಗಾಗಿ ಸೇರಿದ್ದರೆ ಹೊರತು ಯುದ್ದಕ್ಕಲ್ಲ. ಕೇರಳದವರು ಮನುಷ್ಯರಲ್ಲವೇ, ಪ್ರಶ್ನಿಸಬಾರದೆ ಎಂದು ಪ್ರಶ್ನಿಸಿದ್ದಾರೆ.

ಇದೇ ಜನ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಲು ಯತ್ನಿಸಿ ಕಲ್ಲು ತೂರಾಟ ನಡೆಸಿದ್ದಾರೆ. ಶಸ್ತ್ರಾಗಾರಕ್ಕೆ ನುಗ್ಗಿ ಶಸ್ತ್ರಾಸ್ತ್ರ ತೆಗೆದುಕೊಂಡು ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಆಗ ನಿಯಂತ್ರಣಕ್ಕೆ ನಡೆಸಿದ ಎಲ್ಲ ಪ್ರಯತ್ನ ಫ‌ಲಿಸದಿದ್ದಾಗ ಗೋಲಿಬಾರ್‌ ನಡೆದಿದೆ. ದುಷ್ಕೃತ್ಯ ನಡೆಸುವುದು ಸಂವಿಧಾನ, ಕಾನೂನಿನ ವಿರುದ್ಧ ಸಮರ ಸಾರಿದಂತಲ್ಲವೇ. ದಯಮಾಡಿ ಕುಮಾರಸ್ವಾಮಿಯವರು ಎನ್‌ಆರ್‌ಸಿ, ಸಿಎಎ ಕಾಯ್ದೆ ಯಿಂದ ಯಾವ ರೀತಿಯಲ್ಲಿ ಮುಸ್ಲಿಂ ಬಂಧುಗಳಿಗೆ ಅನ್ಯಾಯವಾಗುತ್ತದೆ ಎಂಬುದನ್ನು ತಿಳಿಸುತ್ತಾರೆಯೇ ಎಂದು ಪ್ರಶ್ನಿಸಿದರು.

ಕಾಯ್ದೆ ಜನ ವಿರೋಧಿಯಲ್ಲ: ಸಿಎಎ, ಎನ್‌ಆರ್‌ಸಿಯಿಂದ ದೇಶದ ಯಾವುದೇ ನಾಗರಿಕನಿಗೆ ತೊಂದರೆ ಯಾಗದು. ಬೆಂಗಳೂರು, ಮಂಗಳೂರಿನಲ್ಲಿ ಮೌಲ್ವಿ ಗಳು, ಮುಸ್ಲಿಂ ಮುಖಂಡರೊಂದಿಗೆ ಚರ್ಚಿಸುವಾಗ ಇದರಿಂದ ಅನ್ಯಾಯವಾಗುತ್ತದೆ ಎಂದು ಒಬ್ಬ ಮುಸ್ಲಿಂ ಮುಖಂಡರೂ ಹೇಳಲಿಲ್ಲ. ಹಾಗಾಗಿ, ಸಿಎಎ, ಎನ್‌ಆರ್‌ಸಿ ಕಾಯ್ದೆಯು ಕಾಂಗ್ರೆಸ್‌ನವರು ಬಿಂಬಿಸಿ ದಂತೆ ಜನ ವಿರೋಧಿಯಲ್ಲ. ಈ ಬಗ್ಗೆ ಮನವರಿಕೆ ಮಾಡಿ ಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

Advertisement

ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಎರಡು ದಿನ ಲೋಕಸಭೆ, ರಾಜ್ಯಸಭೆಯಲ್ಲಿ ಸವಿಸ್ತಾರವಾಗಿ ಚರ್ಚೆಯಾಗಿದ್ದು, ಇಡೀ ದೇಶದ ಜನರಿಗೆ ಇದು ಗೊತ್ತಿದೆ. ಪ್ರತಿಪಕ್ಷಗಳ ನಾಯಕರು ಅಲ್ಪಸಂಖ್ಯಾತ ಮುಸ್ಲಿಮರನ್ನು ದಾರಿ ತಪ್ಪಿಸುವ ಕೆಲಸ ಬಿಡಬೇಕು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು ಈ ಹಿಂದೆ ಈ ವಿಚಾರ ಪ್ರಸ್ತಾಪಿಸಿದ್ದರು. ಈವರೆಗೆ ಅವರು ಕಾಯ್ದೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದರು.

ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಬಂದವರು ಕಲ್ಲು ಎಸೆದಿದ್ದಾರೆ. ಕೇರಳದಿಂದ ಬಂದಿದ್ದಾರೆ ಎಂದು ಅವರಿಗೆ ಇಲ್ಲಿ ಏನು ಕೆಲಸ. ಪ್ರತಿಭಟನೆ ವೇಳೆ ಈ ಮಟ್ಟಕ್ಕೆ ಇಳಿಯಲಿದ್ದಾರೆ ಎಂದು ಊಹೆ ಮಾಡಿರಲಿಲ್ಲ. ಇದೆಲ್ಲಾ ಪ್ರಚೋದನೆಯಿಂದ ಆಗಿರುವುದು. ಜನರ ಮಧ್ಯೆ ಇದ್ದುಕೊಂಡೇ ಸಮಾಜಘಾತುಕ ಶಕ್ತಿಗಳು ದುಷ್ಕೃತ್ಯ ಎಸಗುತ್ತವೆ ಎಂದು ಪ್ರತಿಕ್ರಿಯಿಸಿದರು.

ಇಡೀ ದೇಶದ ಜನರ ಅನುಕೂಲಕ್ಕಾಗಿ ಬಾಂಗ್ಲಾ, ಪಾಕಿಸ್ತಾನದ ವಲಸಿಗರನ್ನು ಹೊರಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಕಾಯ್ದೆ ಜಾರಿಗೊಳಿಸಿದೆ. ಹಾಗಾಗಿ, ಯಾರಿಗೂ ಯಾವುದೇ ತೊಂದರೆಯಾಗದು. ರಾಜ್ಯದಲ್ಲೂ ಕಾಯ್ದೆ ಜಾರಿಯಾಗಲಿದ್ದು, ಆ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.

ಮೂರೂವರೆ ವರ್ಷ ಏನೂ ಮಾಡಲಾಗದು: ಯಡಿಯೂರಪ್ಪ ಎಷ್ಟು ದಿನ ಅಧಿಕಾರದಲ್ಲಿ ಇರುತ್ತಾರೆ ಎಂದು ನೋಡುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆ ಪ್ರಸ್ತಾಪಿಸಿದ ಯಡಿಯೂರಪ್ಪ, ಇನ್ನೂ ಮೂರೂವರೆ ವರ್ಷ ನೀವ್ಯಾರೂ ನನಗೆ ಏನೂ ಮಾಡಲಾಗದು ಎಂದು ತಿರುಗೇಟು ನೀಡಿದರು.

ಬಹುಮತವಿದ್ದು ಮೂರೂವರೆ ವರ್ಷ ನಾವೇ ಇರುತ್ತೇವೆ. “ಈಗಲೇ ನಿಮಗೆ ಅಡ್ರೆಸ್‌ ಇಲ್ಲ. ಮೂರೂವರೆ ವರ್ಷದ ಬಳಿಕ ಏನಾಗುತ್ತದೆ ಎಂಬ ಬಗ್ಗೆ ನೀವು ಯೋಚಿಸಬೇಕೆ ಹೊರತು, ನಮ್ಮ ಬಗ್ಗೆ ಕುಮಾರಸ್ವಾಮಿಯವರು ಯಾಕೆ ತಲೆ ಕೆಡಿಸಿಕೊಂಡಿದ್ದಾರೋ ಗೊತ್ತಿಲ್ಲ’ ಎಂದು ತಿರುಗೇಟು ನೀಡಿದರು.

ಎಸ್‌ಐಟಿ ತನಿಖೆ?: ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಲು ಚಿಂತನೆ ನಡೆಸಿದಂತಿದೆ ಎಂಬ ಮಾತುಗಳಿವೆ. ಪ್ರತಿಪಕ್ಷಗಳು ಹಾಗೂ ಮುಸ್ಲಿಂ ಮುಖಂಡರು ನ್ಯಾಯಾಂಗ ತನಿಖೆಗೆ ವಹಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಸರ್ಕಾರ ಎಸ್‌ಐಟಿ ತನಿಖೆಗೆ ವಹಿಸಲು ಚಿಂತಿಸಿದೆ ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಪೊಲೀಸ್‌ ಠಾಣೆಯ ಶಸ್ತ್ರಾಗಾರದ ಗೋಡೆ ಒಡೆದಿದ್ದಾರೆ. ಅಲ್ಲಿ ಹೋದರೆ ಯಾರು ಬೇಕಾದರೂ ನೋಡಬಹುದು. ಗೋಡೆಯನ್ನು ಇನ್ಯಾರು ಒಡೆಯಲು ಸಾಧ್ಯ? ಗುಂಪಿನಲ್ಲಿದ್ದವರು ಗೋಡೆ ಒಡೆದು ಠಾಣೆಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ಎಲ್ಲ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿವೆ. ಅದನ್ನೆಲ್ಲಾ ಬಿಡುಗಡೆ ಮಾಡಬೇಕಿದೆ.

ಸಿದ್ದರಾಮಯ್ಯ, ಕುಮಾರಸ್ವಾಮಿಯವರು ಏನೆಲ್ಲಾ ದಾಖಲೆ ಕೇಳುತ್ತಾರೋ ಅದನ್ನೆಲ್ಲಾ ಬಿಡುಗಡೆ ಮಾಡೋಣ ಎಂದು ಹೇಳಿದರು. ಯಾವ ರೀತಿಯ ತನಿಖೆಯಾಗಬೇಕು ಎಂದು ತೀರ್ಮಾನ ಮಾಡಿಲ್ಲ. ಗೃಹ ಸಚಿವರೊಂದಿಗೆ ಚರ್ಚಿಸಿ ತನಿಖೆ ಮಾಡಲಾಗುವುದು. ಎಸ್‌ಐಟಿ ತನಿಖೆಗೆ ವಹಿಸಬೇಕೆ ಎಂಬ ಬಗ್ಗೆಯೂ ಈವರೆಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ತಿಳಿಸಿದರು.

ನೈತಿಕತೆಯಿದ್ದರೆ ಗೃಹಸಚಿವರ ವಜಾಗೊಳಿಸಲಿ
ಮಂಗಳೂರು: ನಗರದಲ್ಲಿ ಡಿ.19ರಂದು ನಡೆದಿರುವುದು ಸಾರ್ವಜನಿಕ ಹಾಗೂ ಪೊಲೀಸ್‌ ಇಲಾಖೆ ನಡುವಿನ ಸಂಘರ್ಷ. ಇಬ್ಬರ ಸಾವಿಗೆ ಪೊಲೀಸರೇ ಕಾರಣ. ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳನ್ನು ಕೂಡಲೇ ಅಮಾನತುಗೊಳಿಸಬೇಕು. ಮುಖ್ಯಮಂತ್ರಿಗೆ ನೈತಿಕತೆ ಇದ್ದರೆ ಗೃಹಸಚಿವರನ್ನು ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಭಾನುವಾರ ಮಂಗಳೂರಿಗೆ ಆಗಮಿಸಿದ ಅವರು, ಗೋಲಿಬಾರ್‌ನಿಂದ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಆಸ್ಪತ್ರೆಯಲ್ಲಿರುವ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ವಿವಿಧೆಡೆಗಳಲ್ಲಿ ಪ್ರತಿಭಟನೆಗಳು ನಡೆದಿವೆ. ಎಲ್ಲಿಯೂ ಅಹಿತಕರ ಘಟನೆಗಳಾಗಿಲ್ಲ. ಮಂಗಳೂರಲ್ಲಿ ಮಾತ್ರ ಯಾಕಾಯಿತು? ಕರಾವಳಿಯೇನು ಪೊಲೀಸ್‌ ರಾಜ್ಯವೇ? ತಪ್ಪಿತಸ್ಥ ಪೊಲೀಸರನ್ನು ತಕ್ಷಣ ಜೈಲಿಗಟ್ಟಬೇಕು ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಕರಾವಳಿಯಲ್ಲಿ ಒಂದೇ ಒಂದು ಶಾಂತಿ ಕದಡುವ ಘಟನೆ ನಡೆದಿಲ್ಲ. ಈಗ ಯಾಕೆ ನಡೆಯುತ್ತಿವೆ ಎಂದು ಪ್ರಶ್ನಿಸಿದರು. “ಶುಕ್ರವಾರ ರಾತ್ರಿ ಖಾಸಗಿ ಆಸ್ಪತ್ರೆಗೆ ಖಾಕಿಧಾರಿಗಳು ನುಗ್ಗಿ ದಾಂಧಲೆ ಎಸಗಿದ್ದಾರೆ ಎನ್ನುವ ಮಾಹಿತಿ ಇದೆ. ಅವರು ಪೊಲೀಸರೇ ಇರಬೇಕು. ಅಲ್ಲದೇ ಹೋದರೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಪೊಲೀಸ್‌ ಉಡುಪು ಧರಿಸಿ ನುಗ್ಗಿದರೇ ಎಂಬ ಅನುಮಾನವೂ ಉಂಟಾಗುತ್ತಿದೆ’ ಎಂದು ಸಂಶಯ ವ್ಯಕ್ತಪಡಿಸಿದರು.

ಯಾರು ಹೊಣೆ?: ಮೃತಪಟ್ಟವರು ಅಮಾಯಕರು. ಪೊಲೀಸ್‌ ಅಧಿಕಾರಿಗಳು ಮಾಧ್ಯಮಗಳಿಗೆ ತಪ್ಪು ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಯವರು ನಗರಕ್ಕೆ ಭೇಟಿ ನೀಡಿದರೂ ಆಸ್ಪತ್ರೆಯಲ್ಲಿರುವ ಗಾಯಾಳುಗಳನ್ನು ಮಾತನಾಡಿಸುವ ಕನಿಷ್ಠ ಸೌಜನ್ಯವನ್ನೂ ತೋರಿಲ್ಲ. ಸಂಸದ ನಳಿನ್‌ ಕುಮಾರ್‌ ಅವರು ಸಿದ್ದರಾಮಯ್ಯರನ್ನು ಸ್ಯಾಡಿಸ್ಟ್‌ ಎಂದಿದ್ದಾರೆ. ಸ್ಯಾಡಿಸ್ಟ್‌ ಅವರಲ್ಲ, ನೀವುಗಳು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಬೆಂಕಿ ಹಾಕುವವರು ಯಾರು?: ಸಿದ್ದರಾಮಯ್ಯ ಮಂಗಳೂರಿಗೆ ಬಂದರೆ ಬೆಂಕಿಗೆ ತುಪ್ಪ ಸುರಿದಾರು ಎನ್ನುತ್ತಿರುವ ಬಿಜೆಪಿ, ಸರಕಾರ, ಈ ಹಿಂದೆ ಯಡಿಯೂರಪ್ಪ ಅವರು ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧಿಸಿದರೆ ರಾಜ್ಯ ಹೊತ್ತಿ ಉರಿದೀತು ಎಂದಿಲ್ಲವೇ? ಹೊನ್ನಾವರದಲ್ಲಿ ಪರಮೇಶ ಮೇಸ್ತ ಸಾವಿನ ವೇಳೆ ಶೋಭಾ ಕರಂದ್ಲಾಜೆ ಆಡಿದ ಮಾತು, ನಳಿನ್‌ ಕುಮಾರ್‌ ಅವರು ಜಿಲ್ಲೆ ಹೊತ್ತಿ ಉರಿದೀತು ಎಂದು ಹೇಳಿದ್ದ ಹೇಳಿಕೆಗಳಿಗೆ ಎಫ್‌ಐಆರ್‌ ಹಾಕಿದ್ದಾರಾ? ಈಗ ಮಂಗಳೂರು ಗಲಭೆಗೆ ಶಾಸಕ ಖಾದರ್‌ ಹೇಳಿಕೆ ಕಾರಣ ಎನ್ನುತ್ತಿದ್ದಾರೆ. ಹಾಗಾದರೆ ಬಿಜೆಪಿಯವರ ಮಾತುಗಳಿಗೆ ಬೆಲೆ ಇಲ್ಲವೇ ಎಂದು ಕುಮಾ ರ ಸ್ವಾಮಿ ಪ್ರಶ್ನಿಸಿದರು.

ಚೆಕ್‌ ವಿತರಣೆ: ಗೋಲಿಬಾರ್‌ನಲ್ಲಿ ಸಾವನ್ನಪ್ಪಿದ ಇಬ್ಬರ ಕುಟುಂಬಕ್ಕೆ ತಲಾ 5 ಲಕ್ಷ ರೂ.ಗಳ ಪರಿಹಾರದ ಚೆಕ್ಕನ್ನು ಕುಮಾರಸ್ವಾಮಿ ವಿತರಿಸಿದರು. ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸುವುದರ ಜತೆಗೆ ಅವಶ್ಯವಿದ್ದವರಿಗೆ ಉದ್ಯೋಗ ಹಾಗೂ ಮನೆ ನಿರ್ಮಾಣಕ್ಕೆ ನೆರವಾಗುವುದಾಗಿ ಭರವಸೆ ನೀಡಿದರು.

ಸಿದ್ದು ಪರ ಬ್ಯಾಟಿಂಗ್‌: ಸಂತ್ರಸ್ತರ ಭೇಟಿಗೆ ಮಾಜಿ ಸಿಎಂ ಸಿದ್ದರಾಮಯ್ಯಗೆ ಅವಕಾಶ ನಿರಾಕರಿಸಿದ ಸರಕಾರದ ಕ್ರಮವನ್ನು ಕುಮಾರಸ್ವಾಮಿ ಆಕ್ಷೇಪಿಸಿದರು. ಯಡಿಯೂರಪ್ಪ ಅವರು “ಸಿದ್ದರಾಮಯ್ಯ ವಾರದ ಬಳಿಕ ಬರಲಿ’ ಎನ್ನುತ್ತಿದ್ದಾರೆ. ನಾವೇನು ಗತಿ ಇಲ್ಲದೆ ಇಲ್ಲಿಗೆ ಬರುತ್ತಿಲ್ಲ. ವಾರ ಕಳೆದರೆ ಇಲ್ಲಿ ಎಲ್ಲವನ್ನೂ ಮುಗಿಸಿರುತ್ತೀರಿ. ಇಂತಹ ವಿದ್ಯಮಾನ ಬಹಳ ದಿನ ನಡೆಯದು ಎಂದರು.

“ಕಾಂಗ್ರೆಸ್‌ನಲ್ಲಿ ಹುದ್ದೆ ಅನುಭವಿಸಿರುವ ಮಾಜಿ ಮುಖ್ಯಮಂತ್ರಿಯೊಬ್ಬರು ಪ್ರಸ್ತುತ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ. ತನ್ನ ಅಳಿಯನನ್ನು ನೇತ್ರಾವತಿ ನದಿಯಲ್ಲಿ ಕೆಡವಿದ ಅವರಿಗೆ ನಾಚಿಕೆ ಆಗಬೇಕು’ ಎಂದು ಎಸ್‌.ಎಂ.ಕೃಷ್ಣ ಅವರ ಹೆಸರು ಹೇಳದೆ ಕುಮಾರಸ್ವಾಮಿ ಕುಟುಕಿದರು.

ನಿಮ್ಮ ಮೂರು ವರ್ಷ ಯಾವ ಲೆಕ್ಕ?
ಬೆಂಗಳೂರು: ಕುಮಾರಸ್ವಾಮಿಯವರು ಅಡ್ರೆಸ್‌ಗೆ ಇಲ್ಲದಂತಾಗಿದ್ದಾರೆ ಎಂಬ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮೂಲಕ ತಿರುಗೇಟು ನೀಡಿದ್ದಾರೆ. ಮೂರೂವರೆ ವರ್ಷ ನಾನೇ ಸಿಎಂ. ಕುಮಾರಸ್ವಾಮಿ ಅಡ್ರೆಸ್‌ಗೆ ಇಲ್ಲದಂತಾಗಿದ್ದಾರೆ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಶತಮಾನಗಳ ಕಾಲ ಭಾರತವನ್ನು ದಾಸ್ಯದಲ್ಲಿಟ್ಟುಕೊಂಡು ಬ್ರಿಟೀಷರ ಅಂಕುಶವಿಲ್ಲದಂತಿದ್ದ ಸಾಮ್ರಾಜ್ಯವನ್ನೇ ಈ ನೆಲದ ಜನ ಕೊನೆಗಾಣಿಸಿದ್ದಾರೆ. ಇನ್ನು ನಿಮ್ಮ ಮೂರು ವರ್ಷ ಯಾವ ಲೆಕ್ಕ? ಎಂದು ಪ್ರಶ್ನಿಸಿದ್ದಾರೆ. ಅಧಿಕಾರದ ಮದದಲ್ಲಿ ಆಣೆಗಳನ್ನಿಟ್ಟವರನ್ನೇ ನಮ್ಮ ಜನ ಬಿಟ್ಟಿಲ್ಲ. ಅವರಿಗೆ ನನ್ನ ಅಡ್ರೆಸ್‌ ತೋರಿಸಿದ್ದಾರೆ. ಇನ್ನು ನೀವು ಅಡ್ರೆಸ್‌ ಕೇಳಿದ್ದಾಗ್ಯೂ ಜನ ನನ್ನ ಅಡ್ರೆಸ್‌ ತೋರಿಸದೇ ಬಿಟ್ಟಾರೆಯೇ?, ಎಚ್ಚರದಿಂದಿರಿ ಎಂದು ಕುಟುಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next