ಬೆಂಗಳೂರು: ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಗಸ್ಟ್ 3 ಮತ್ತು 4ರಂದು ನೇರಳೆ ಮಾರ್ಗದಲ್ಲಿ “ನಮ್ಮ ಮೆಟ್ರೋ’ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. 3ರ ರಾತ್ರಿ 9.30ರಿಂದ 4ರಂದು ಬೆಳಗ್ಗೆ 11ರವರೆಗೆ ಬೈಯಪ್ಪನಹಳ್ಳಿ ನಿಲ್ದಾಣದಿಂದ ಎಂ.ಜಿ. ರಸ್ತೆವರೆಗೆ ಮೆಟ್ರೋ ಸೇವೆ ಲಭ್ಯ ಇರುವುದಿಲ್ಲ. 3ರಂದು ರಾತ್ರಿ 9.30ಕ್ಕೆ ಬೈಯಪ್ಪನಹಳ್ಳಿಯಿಂದ ಕೊನೆಯ ರೈಲು ಹೊರಡಲಿದೆ. ಅದೇ ರೀತಿ, ಅಂದು ರಾತ್ರಿ 9ಕ್ಕೆ ಮೈಸೂರು ರಸ್ತೆಯಿಂದ ಕೊನೆಯ ರೈಲು ಹೊರಡಲಿದೆ.
ಈ ಮಧ್ಯೆ ಎಂ.ಜಿ. ರಸ್ತೆಯಿಂದ ಮೈಸೂರು ರಸ್ತೆ ನಿಲ್ದಾಣದವರೆಗೆ ಹಾಗೂ ಹಸಿರು ಮಾರ್ಗದಲ್ಲಿ ಬರುವ ನಾಗಸಂದ್ರ-ಯಲಚೇನಹಳ್ಳಿ ನಡುವೆ ಮೆಟ್ರೋ ಸಂಚಾರ ಎಂದಿನಂತೆ ಇರಲಿವೆ. ಇನ್ನು ನಿರ್ವಹಣೆ ಕೈಗೆತ್ತಿಕೊಂಡ ಬೈಯಪ್ಪನಹಳ್ಳಿ-ಎಂ.ಜಿ. ರಸ್ತೆ ನಡುವೆ ಆಗಸ್ಟ್ 4ರ ಬೆಳಗ್ಗೆ 11ರ ನಂತರ ಮೆಟ್ರೋ ವಾಣಿಜ್ಯ ಸಂಚಾರ ಪುನರಾರಂಭಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್. ಯಶವಂತ್ ಚವಾಣ್ ತಿಳಿಸಿದ್ದಾರೆ.
ಬೇರಿಂಗ್ ಸಮಸ್ಯೆ?: ಬೈಯಪ್ಪನಹಳ್ಳಿ-ಎಂ.ಜಿ. ರಸ್ತೆ ನಡುವೆ ನಿರ್ವಹಣೆ ಕಾರ್ಯ ಎಂದು ಬಿಎಂಆರ್‌ಸಿ ತಿಳಿಸಿದೆ. ಆದರೆ, ಯಾವ ರೀತಿಯ ನಿರ್ವಹಣೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಮೂಲಗಳ ಪ್ರಕಾರ ಇಂದಿರಾನಗರ ಮೆಟ್ರೋ ನಿಲ್ದಾಣದ ಬಳಿ ಇರುವ ಸ್ಟೇಷನ್ ಪಿಲ್ಲರ್ ಸಂಖ್ಯೆ 8ರಲ್ಲಿ ಬೇರಿಂಗ್ ದುರಸ್ತಿಗೆ ಬಂದಿದೆ. ಇಷ್ಟೇ ಅಲ್ಲ, ಬೈಯಪ್ಪನಹಳ್ಳಿಯಲ್ಲಿರುವ ಮೆಟ್ರೋ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ಬಳಿಯ ಪಿಲ್ಲರ್ ಸಂಖ್ಯೆ 2 ಮತ್ತು 3ರಲ್ಲಿ ಕೂಡ ಇದೇ ಬೇರಿಂಗ್ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ. ಬೇರಿಂಗ್ ಸಮಸ್ಯೆ ಪುನರಾವರ್ತನೆ ಆಗುತ್ತಿರುವುದು ಸಾವಿರಾರು ಪ್ರಯಾಣಿಕರು ಸಂಚರಿಸುವ ಮೆಟ್ರೋ ಸುರಕ್ಷತೆಯನ್ನು ಪ್ರಶ್ನಿಸುವಂತೆ ಮಾಡಿದೆ.
ಪದೇ ಪದೆ ಈ ರೀತಿಯ ಸಮಸ್ಯೆಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಬಿಎಂಆರ್‌ಸಿಎಲ್ ಅಧಿಕಾರಿಗಳು, ಗುತ್ತಿಗೆದಾರರ ಲೋಪ ಎದ್ದುಕಾಣುತ್ತದೆ. ಆದ್ದರಿಂದ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಅಲ್ಲದೆ, ಮೂರನೇ ವ್ಯಕ್ತಿ ಅಥವಾ ಸಂಸ್ಥೆಯಿಂದ ಸಮಗ್ರ ತನಿಖೆ ಆಗಬೇಕು ಎಂದು ಬೆಂಗಳೂರು ಮೆಟ್ರೋ ರೈಲು ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಒತ್ತಾಯಿಸಿದ್ದಾರೆ. ಆದರೆ, ಬೇರಿಂಗ್ ಸಮಸ್ಯೆ ಇರುವುದನ್ನು ಬಿಎಂಆರ್‌ಸಿಎಲ್ ದೃಢಪಡಿಸಿಲ್ಲ.
ಆರ್.ವಿ. ರಸ್ತೆ ನಿಲ್ದಾಣ ಒಂದು ಪ್ರವೇಶ ದ್ವಾರ ಬಂದ್: ಹಸಿರು ಮಾರ್ಗದಲ್ಲಿ ಬರುವ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದ ಇಂಟಿಗ್ರೇಷನ್‌ಗೆ ಸಂಬಂಧಿಸಿದಂತೆ ಕೆಲವು ಮಾರ್ಪಾಡು ಮಾಡಬೇಕಾಗಿದ್ದು, ಈ ಹಿನ್ನೆಲೆಯಲ್ಲಿ ಉದ್ದೇಶಿತ ನಿಲ್ದಾಣದ ನೈರುತ್ಯ ಭಾಗದ ಪ್ರವೇಶವನ್ನು ಆಗಸ್ಟ್ 1ರಿಂದ ನಿರ್ಬಂಧಿಸಲಾಗಿದೆ. ಈ ನಿಲ್ದಾಣದ ನೈರುತ್ಯ ಭಾಗದ ಪ್ರವೇಶ ದ್ವಾರವು ಕ್ವಾಂಕರ್ಸ್ ಮೂಲಕ ಪ್ಲಾಟ್‌ಫಾರಂಗೆ ಸಂಪರ್ಕ ಕಲ್ಪಿಸುತ್ತದೆ.
ಇದೇ ನಿಲ್ದಾಣದ ಮತ್ತೂಂದು ದಿಕ್ಕಿನಲ್ಲಿ ಅಂದರೆ ವಾಯವ್ಯದಲ್ಲಿರುವ ಪ್ರವೇಶ ದ್ವಾರವು ಎಂದಿನಂತೆ ಸೇವೆಗೆ ಲಭ್ಯ ಇರುತ್ತದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ತಿಳಿಸಿದೆ. ಪ್ರಯಾಣಿಕರಿಗೆ ಅನಾನುಕೂಲ ಆಗದಿರಲೆಂದು ಹಂತ-ಹಂತವಾಗಿ ಮಾರ್ಪಾಡು ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಇನ್ನು ವೆಚ್ಚ ತಗ್ಗಿಸಲು ಮತ್ತು ಲಕ್ಷ್ಮಣ್‌ರಾವ್ ಉದ್ಯಾನದಲ್ಲಿನ ಮರಗಳ ಹನನವನ್ನು ತಪ್ಪಿಸಲು ಈ ನಿಲ್ದಾಣದ ಮಾರ್ಪಾಡು ಅಗತ್ಯ ಮತ್ತು ಅನಿವಾರ್ಯ. ಆದ್ದರಿಂದ ಪ್ರಯಾಣಿಕರು ಸಹಕರಿಸಬೇಕು ಎಂದೂ ನಿಗಮವು ಸಮಜಾಯಿಷಿ ನೀಡಿದೆ.