ಮಂಗಳೂರು: ಸಮುದಾಯ ವೈದ್ಯಕೀಯ ತಜ್ಞರು ದೇಶದ ಆರೋಗ್ಯ ಸುಧಾರಣೆಯ ಶಿಲ್ಪಿಗಳು. ಸಮಾಜದ ಶ್ರೇಯಸ್ಸಿನ ಹಿತದೃಷ್ಟಿಯಿಂದ ಇನ್ನಷ್ಟು ಹೊಸತನದ ವೈದ್ಯಕೀಯ ಅನ್ವೇಷಣೆಗಳು ಈ ಕ್ಷೇತ್ರದಲ್ಲಿ ಮೂಡಿಬರಲಿ ಎಂದು “ಕೆಪಾಸಿಟಿ ಬಿಲ್ಡಿಂಗ್ ಕಮಿಷನ್ ಆಫ್ ಇಂಡಿಯಾ’ದ ಹ್ಯೂಮನ್ ರಿಸೋರ್ಸಸ್ ಸದಸ್ಯ ಡಾ| ಆರ್. ಬಾಲಸುಬ್ರಹ್ಮಣ್ಯಂ ಹೇಳಿದರು.
ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಸಮುದಾಯ ವೈದ್ಯಕೀಯ ವಿಭಾಗವು ಇಂಡಿಯನ್ ಅಸೋಸಿಯೇಶನ್ ಆಫ್ ಪ್ರಿವೆಂಟಿವ್ ಆ್ಯಂಡ್ ಸೋಶಿಯಲ್ ಮೆಡಿಸಿನ್ ವತಿಯಿಂದ ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನನ್ ಸೆಂಟರ್‌ನಲ್ಲಿ ಗುರುವಾರ ಆಯೋಜಿಸಿದ 51ನೇ ವಾರ್ಷಿಕ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ವಿದೇಶಿ ತಜ್ಞರು ಬರೆದ ಪುಸ್ತಕಗಳನ್ನು ನಮ್ಮ ದೇಶದ ವೈದ್ಯ ಸಮೂಹ ಓದಬೇಕಾದ ಪರಿಸ್ಥಿತಿ ಇದ್ದು ಇದು ಬದಲಾಗಬೇಕು. ನಮ್ಮ ದೇಶದ ವೈದ್ಯಕೀಯ ಪ್ರಮುಖರು ಪುಸ್ತಕಗಳನ್ನು ಬರೆಯುವ ಮೂಲಕ ವೈದ್ಯಕೀಯ ಲೋಕದಲ್ಲಿಯೂ ಆತ್ಮನಿರ್ಭರ ಪರಿಕಲ್ಪನೆ ಜಾರಿಯಾಗಬೇಕು. ನಮ್ಮ ಪುಸ್ತಕವನ್ನು ವಿದೇಶಿಯರು ಓದುವಂತಾಗಬೇಕು ಎಂದರು.
ಪ್ರಸಕ್ತ ದಿನದಲ್ಲಿ ಆತ್ಮಹತ್ಯೆ ಪ್ರಕರಣ ಅಧಿಕವಾಗುತ್ತಿದೆ. ಅದರಲ್ಲಿಯೂ 25 ವರ್ಷಕ್ಕಿಂತ ಕಡಿಮೆ ಪ್ರಾಯದವರು ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವುದು ಬೇಸರದ ಸಂಗತಿ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವೈದ್ಯಕೀಯ ಕ್ಷೇತ್ರ ಭರವಸೆಯ ಯೋಜನೆಯನ್ನು ಜಾರಿಗೊಳಿಸಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆ ಸಹ ಕುಲಾಧಿಪತಿ ಡಾ| ಎಚ್.ಎಸ್. ಬಳ್ಳಾಲ್ ಅವರು, ದೇಶದ 700 ಮೆಡಿಕಲ್ ಕಾಲೇಜುಗಳ ಪೈಕಿ ಮಣಿಪಾಲ ಹಾಗೂ ಮಂಗಳೂರಿನ ಕೆಎಂಸಿ ಅಗ್ರಗಣ್ಯ ರ್‍ಯಾಂಕ್‌ಗಳ ಮೂಲಕ ನಿರಂತರ ಸಾರ್ಥಕ ಸಾಧನೆ ಬರೆದಿದೆ. ಗುಣಮಟ್ಟದ ಶಿಕ್ಷಣದಿಂದ ಇದು ಸಾಧ್ಯವಾಗಿದೆ. ಸ್ಕಿಲ್ ಡೆವೆಲಪ್‌ಮೆಂಟ್ ಬಗ್ಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ ಎಂದರು.
ಮಾಹೆ ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್ ಅವರು ಮಾತನಾಡಿ, ಕೊರೊನಾ ಬಳಿಕ ವೈದ್ಯಕೀಯ ಕ್ಷೇತ್ರ ಹಾಗೂ ಸಮಾಜದಲ್ಲಿ ಸಾಕಷ್ಟು ಸವಾಲುಗಳು ಎದುರಾಗಿವೆ. ಇದೆಲ್ಲದರ ಬಗ್ಗೆ ಸ್ಥೂಲ ಅವಲೋಕನ ಮಾಡಿಕೊಂಡು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕಿದೆ ಎಂದರು.
ಐಎಪಿಎಸ್‌ಎಂ ರಾಷ್ಟ್ರೀಯ ಅಧ್ಯಕ್ಷ ಡಾ| ಎ.ಎಂ. ಖಾದ್ರಿ, ಪ್ರಧಾನ ಕಾರ್ಯದರ್ಶಿ ಡಾ| ಪುರುಷೋತ್ತಮ್ ಗಿರಿ ಮುಖ್ಯ ಅತಿಥಿಗಳಾಗಿದ್ದರು.
ಕೆಎಂಸಿ ಮಂಗಳೂರು ಡೀನ್ ಡಾ| ಬಿ. ಉನ್ನಿಕೃಷ್ಣನ್ ಸ್ವಾಗತಿಸಿದರು. ಸಮ್ಮೇಳನ ಸಂಘಟನ ಸಮಿತಿ ಅಧ್ಯಕ್ಷೆ ಡಾ| ರೇಖಾ ಟಿ., ಕಾರ್ಯದರ್ಶಿ ಡಾ| ರಮೇಶ್ ಹೊಳ್ಳ ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ದೇಶ, ವಿದೇಶಗಳಿಂದ 1,200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದಾರೆ.