ಉಡುಪಿ: ನಾಲ್ಕು ದಶಕಗಳಿಂದ ಪಿಗ್ಮಿ ಠೇವಣಿ ಸಂಗ್ರಹ ಮಾಡುತ್ತಿರುವ ಒಬ್ಬರು ಕಳೆದ 11 ದಿನಗಳಿಂದ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವರ ಪ್ರತಿಭಟನೆಯಿಂದ ಇವರ ಜೇಬಿಗೇ ಕತ್ತರಿ. ಇನ್ನೊಂದೆಡೆ ಪಿಗ್ಮಿ ಠೇವಣಿ ಕೊಡುವ ಗ್ರಾಹಕರಿಗೂ ಅವರಿಂದ ಠೇವಣಿ ಸಂಗ್ರಹವಾಗದಿರುವುದು ಅವರಿಗೆ ಆಗುತ್ತಿರುವ ತೊಂದರೆ.
ಕಲ್ಯಾಣಪುರ ಕೆನರಾ ಬ್ಯಾಂಕ್‌ನ ಪಿಗ್ಮಿ ಏಜೆಂಟ್ ಪ್ರಭಾಕರ ನಾಯ್ಕ ಮನೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸುವ ವಿಶಿಷ್ಟ ವ್ಯಕ್ತಿ. ಇವರು 43 ವರ್ಷಗಳಿಂದ ಪಿಗ್ಮಿ ಠೇವಣಿಯನ್ನು ಸುಮಾರು ನೂರು ಜನರಿಂದ ಸಂಗ್ರಹಿಸುತ್ತಿದ್ದಾರೆ.
ನಿತ್ಯ ರಿಜಿಸ್ಟರ್‌ನಲ್ಲಿ ಬರೆದು ಹಣವನ್ನು ಬ್ಯಾಂಕಿಗೆ ಕಟ್ಟುವುದು, ತಿಂಗಳ ಕೊನೆಯಲ್ಲಿ ಎಲ್ಲ ದಿನಗಳ ಮೊತ್ತವನ್ನು ನಮೂದಿಸು ವುದು ಇವರ ಕೆಲಸ. ಬ್ಯಾಂಕ್‌ನವರು ತಿಂಗಳ ಕೊನೆಯಲ್ಲಿ ಪಾಸ್‌ಬುಕ್‌ಗೆ ಎಂಟ್ರಿ ಮಾಡುತ್ತಾರೆ. ಜು. 25ರಂದು ಒಟ್ಟು ಮೊತ್ತ ನಮೂದಿಸಬೇಕು ಎಂದು ನಾಯ್ಕರಿಗೆ ಕರೆ ಬಂತು. ಯಾವಾಗಲೂ 1ನೇ ತಾರೀಕಿಗೆ ಮೊತ್ತ ನಮೂದಿಸುವುದು ಕ್ರಮ. ಉಳಿದ ಆರು ದಿನಗಳ ಮೊತ್ತ ಸೇರಿಸಲಾಗುವುದು ಎಂದು ಬ್ಯಾಂಕ್‌ನವರು ಸಮಜಾಯಿಸಿಕೆ ನೀಡಿದರು. ಒಂದನೇ ತಾರೀಕಿಗೆ ಪಿಗ್ಮಿ ಸಂಗ್ರಹದ ಯಂತ್ರ ಬರುತ್ತದೆ ಎಂದರೂ ಬಂದಿರಲಿಲ್ಲ. ಸೆಪ್ಟೆಂಬರ್ ಕೊನೆಯಲ್ಲಿ ಯಂತ್ರ ಬಂತು. ಆದರೆ ಇದಕ್ಕೆ ಫೀಡ್ ಮಾಡಿಲ್ಲ. ಈಗ ಪಾಸ್‌ಬುಕ್ ಎಂಟ್ರಿ ಇರುವುದು ಜು. 25ರ ವರೆಗಿನದು ಮಾತ್ರ. ಕಂಪ್ಯೂಟರ್‌ನಲ್ಲಿ ಫೀಡ್ ಆಗದೆ ಇದ್ದರೆ ಗ್ರಾಹಕರಿಗೆ ಹಣ ಸಿಗುತ್ತಿಲ್ಲ.
ಇದನ್ನೂ ಓದಿ:ನಾನೂ ಹೆಣ್ಣು ಮಗುವಿನ ತಂದೆ, ಹೇಳಿಕೆ ತಪ್ಪಾಗಿ ಅರ್ಥೈಸಿದ್ದು ದುರದೃಷ್ಟಕರ : ಡಾ.ಸುಧಾಕರ್
ಇನ್ನೊಂದೆಡೆ ಗ್ರಾಹಕರು ಬ್ಯಾಂಕ್‌ಗೆ ಹೋದರೆ ಕೆಲ ದಿನ ಬಿಟ್ಟು ಬನ್ನಿ ಎನ್ನುತ್ತಿದ್ದಾರೆ. ಗ್ರಾಹಕರು ನನಗೆ ಫೋನ್ ಮಾಡಿ”ನಮಗೆ ಹಣ ಬೇಕು. ನೀವು ಉತ್ತರಿಸಬೇಕು’ ಎಂದು ಬೈಯುತ್ತಿದ್ದಾರೆ. ನಾನು 21 ಗ್ರಾಹಕರ ಸಹಿ ಮಾಡಿ ಸಮಸ್ಯೆ ಕುರಿತು ಗಮನಹರಿಸುವಂತೆ ಶಾಖಾ ಪ್ರಬಂಧಕ
ರಿಂದ ಹಿಡಿದು ಮೇಲಾಧಿಕಾರಿಯವರ ವರೆಗೆ, ಡಾ|ರವೀಂದ್ರನಾಥ ಶ್ಯಾನುಭಾಗ್ ನೇತೃತ್ವದ ಮಾನವ ಹಕ್ಕುಗಳ ರಕ್ಷಣ ಪ್ರತಿಷ್ಠಾನಕ್ಕೆ ಪತ್ರ ಬರೆದಿದ್ದೇನೆ. ಅ. 1ರಿಂದ ಪಿಗ್ಮಿ ಸಂಗ್ರಹ ಮಾಡದೆ ಮನೆಯಲ್ಲಿದ್ದೇನೆ ಎನ್ನುತ್ತಾರೆ ಪ್ರಭಾಕರ ನಾಯ್ಕ.
ಶೀಘ್ರ ತಾಂತ್ರಿಕ ಸಮಸ್ಯೆ ಇತ್ಯರ್ಥ
ಕಲ್ಯಾಣಪುರ ಕೆನರಾ ಬ್ಯಾಂಕ್ ಶಾಖೆಯಲ್ಲಿ ತಾಂತ್ರಿಕ ಕಾರಣಗಳಿಂದ ಈ ಸಮಸ್ಯೆ ಕಂಡುಬಂದಿದೆ. ನಮ್ಮ ಪ್ರಾದೇಶಿಕ ಕಚೇರಿಯಿಂದ ತಂತ್ರಜ್ಞರ ತಂಡವನ್ನು ಶಾಖೆಗೆ ಕಳುಹಿಸಿ ಸಮಸ್ಯೆ ಬಗೆಹರಿಸಲು ಯತ್ನಿಸಲಾಗಿದೆ. ಅತಿ ಶೀಘ್ರದಲ್ಲಿ ಸಮಸ್ಯೆ ಬಗೆ ಹರಿಯಲಿದೆ.
-ಜಗದೀಶ ಶೆಣೈ,
ಎಜಿಎಂ, ಪ್ರಾದೇಶಿಕ ಕಚೇರಿ 1, ಕೆನರಾ ಬ್ಯಾಂಕ್, ಉಡುಪಿ.