Advertisement

ಬಲಿಗಾಗಿ ಕಾದುಕುಳಿತ ಅರಳಿ ಮರ; ಯಾವುದೇ ಅಹಿತಕರ ಘಟನೆಯಾಗುವ ಮುನ್ನ ಅರಳಿ ಮರ ತೆರವುಗೊಳಿಸಿ

01:13 PM Sep 15, 2024 | Team Udayavani |

ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಗ್ರಾಮದ ಅಂಚೆ ಕಚೇರಿ ಸಮೀಪವಿರುವ ಅರಳಿಮರ ಬಲಿಗಾಗಿ ಕಾದು ಕುಳಿತಿದ್ದು, ಪ್ರತಿನಿತ್ಯ ಸಾರ್ವಜನಿಕರು ಸಂಚರಿಸುವ ಜಾಗದಲ್ಲಿರುವ ಮರದಿಂದ ಅಪಾಯ ತಂದಿದೆ.

Advertisement

ಹೊಳವನಹಳ್ಳಿ ಗ್ರಾಮದ ಕ್ಯಾಮೇನಹಳ್ಳಿ ರಸ್ತೆಯಲ್ಲಿರುವ ಅಂಚೆ ಕಚೇರಿ, ಕಂದಾಯ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯಿಂದ ನಿರ್ಮಾಣ ಮಾಡಿರುವ ಶುದ್ದ ಕುಡಿಯುವ ನೀರಿನ ಘಟಕ ಹಾಗೂ ನೀರನ್ನು ಶೇಖರಿಸುವ ಓವರ್ ಟ್ಯಾಂಕ್ ಕೂಡ ಈ ಅರಳಿ ಮರಕ್ಕೆ ಬಲಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಅರಳಿ ಮರ ನೂರಾರು ವರ್ಷಗಳ ಹಳೆಯ ಮರವಾಗಿದ್ದು, ಸುಮಾರು 3 ಅಡಿ ವಾಲಿದೆ. ಮರದ ಬೇರುಗಳು ತುಂಡಾಗಿ ಭೂಮಿ ಬಾಯಿ ಬಿಟ್ಟಿದೆ ಎನ್ನಲಾಗಿದೆ.

ಪ್ರತಿನಿತ್ಯ ಶುದ್ದ ಕುಡಿಯುವ ನೀರಿನ ಘಟಕಕ್ಕೆ, ಅಂಚೆ ಕಚೇರಿಗೆ ಹಾಗೂ ಕಂದಾಯ ಇಲಾಖೆಗೆ ನೂರಾರು ಸಾರ್ವಜನಿಕರು ಆಗಮಿಸುತ್ತಾರೆ. ಮರವನ್ನು ಬೇಗ ತೆರವುಗೊಳಿಸದಿದ್ದರೆ ಸರ್ಕಾರಿ ಕಟ್ಟಡದ ಜೊತೆಗೆ ಸಾರ್ವಜನಿಕರು ಬಲಿಯಾಗುವ ಸಾಧ್ಯತೆ ಹೆಚ್ಚಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಕ್ಷಣ ಅರಳಿ ಮರವನ್ನು ತೊರವುಗೊಳಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗ್ರಾ.ಪಂ. ಮಾಜಿ ಸದಸ್ಯೆ ಜಯರಾಮು ಮಾತನಾಡಿ, ಅರಳಿಮರ ಸಾಕಷ್ಟು ಹಳೆಯದಾಗಿದ್ದು, ಬೆಳಿಗ್ಗೆ ಮರದ ಸಮೀಪ ನೋಡಿದಾಗ ಬೇರುಗಳು ತುಂಡಾಗಿ ಭೂಮಿ ಬಾಯಿ ಬಿಟ್ಟಿದೆ. ತಕ್ಷಣ ಗ್ರಾ.ಪಂ. ಪಿಡಿಒ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದಾಗ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆಗೆ ಮಾಹಿತಿ ಮಾಡಿದ್ದಾರೆ. ಈ ಮರದ ಕೆಳಗೆ ನೂರಾರು ಜನರು ಓಡಾಡುತ್ತಾರೆ. ಮುಂದೆ ಯಾವುದೇ ಅಹಿತಕರ ಘಟನೆ ಸಂಭವಿಸುವ ಮುನ್ನ ಅರಳಿ ಮರವನ್ನು ತೆರವುಗೊಳಿಸಿ ಎಂದರು.

ಸ್ಥಳೀಯರಾದ ಶ್ರೀನಿವಾಸ್ ಮಾತನಾಡಿ, ನಾವು ದಿನ ಅರಳಿ ಮರದ ಕೆಳಗಿರುವ ಶುದ್ದ ಕುಡಿಯುವ ನೀರಿನ ಘಟಕದಿಂದ ನೀರು ತರತ್ತೇವೆ. ಈಗ ಮರ ವಾಲಿರುವುದರಿಂದ ನೀರು ತರಲು ಭಯವಾಗುತ್ತಿದೆ. ಈಗ ಅಲ್ಲಿಗೆ ನೀರು ತರಲು ಹೋಗುವ ದಾರಿಯನ್ನು ಕೂಡಾ ಮುಚ್ಚಲಾಗಿದೆ. ಅರಳಿ ಮರವನ್ನು ತೆರವುಗೊಳಿಸುವವರೆಗೂ ನಮಗೆ ಶುದ್ದ ಕುಡಿಯುವ ನೀರು ಇಲ್ಲ. ಅದ್ದರಿಂದ ಮರವನ್ನು ಆದಷ್ಟು ಬೇಗ ತೆರವುಗೊಳಿಸಿ ಎಂದು ಮನವಿ ಮಾಡಿದರು.

Advertisement

ಗ್ರಾ.ಪಂ. ಪಿಡಿಒ ವಸಂತ ಕುಮಾರ್ ಮಾತನಾಡಿ, ನನಗೆ ಬೆಳಿಗ್ಗೆ ಸಾರ್ವಜನಿಕರಿಂದ ಮರ ವಾಲಿದೆ ಎಂದು ಕರೆ ಬಂತು. ತಕ್ಷಣ ಸ್ಥಳಕ್ಕೆ ಆಗಮಿಸಿದೆ. ಮರ 2-3 ಅಡಿ ಅಂಚೆ ಕಚೇರಿಯ ಕಡೆ ವಾಲಿದೆ. ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ. ತುರ್ತಾಗಿ ಅರಳಿ ಮರವನ್ನು ತೆರವುಗೊಳಿಸುವಂತೆ ಪತ್ರದ ಮೂಲಕವೂ ಬರೆದಿದ್ದೇನೆ. ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಆ ಮರದ ಕೆಳಗೆ ಹೋಗದಂತೆ ರಸ್ತೆ ಮುಚ್ಚಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರು ಹಾಗೂ ಗ್ರಾ.ಪಂ. ಅಧಿಕಾರಿಗಳು ಅರಳಿ ಮರ ಬೀಳುವಂತ ಪರಿಸ್ಥಿತಿ ಇರುವುದರಿಂದ ಮರವನ್ನು ತೆರವುಗೊಳಿಸುವಂತೆ ದೂರವಾಣಿ ಮೂಲಕ ತಿಳಿಸಿದ್ದು, ಮೇಲಾಧಿಕಾರಿಗಳ ಗಮನಕ್ಕೆ ತಂದು ಅದಷ್ಟು ಬೇಗ ಮರವನ್ನು ತೆರವುಗೊಳಿಸಲಾಗುವುದು. ಮರವನ್ನು ತೆರವುಗೊಳಿಸುವವರೆಗೆ ಸಾರ್ವಜನಿಕರು ಮರದ ಕೆಳಗಡೆ ಹೋಗಬಾರದು ಎಂದು ಮನವಿ. -ಸುರೇಶ್, ವಲಯ ಅರಣ್ಯಾಧಿಕಾರಿ, ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next