Advertisement

Belthangady ರಸ್ತೆಗೆ ಬಿದ್ದ ಮರ; ವಾಹನಗಳಿಗೆ ಹಾನಿ

12:57 AM Jun 25, 2024 | Team Udayavani |

ಬೆಳ್ತಂಗಡಿ: ಉಜಿರೆ ಬಸ್‌ ನಿಲ್ದಾಣದಿಂದ ಅನತಿ ದೂರದ ಬೆಳ್ತಂಗಡಿ ರಸ್ತೆಯಲ್ಲಿ ಸೋಮವಾರ ಮರವೊಂದು ಬುಡ ಸಮೇತ ಹೆದ್ದಾರಿಗೆ ಬಿದ್ದು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಆಟೋ ಸಹಿತ ಇತರ ಹಲವು ವಾಹನ ಜಖಂಗೊಂಡಿದೆ.

Advertisement

ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ರಿಕ್ಷಾದ ಮೇಲೆಯೇ ಮರ ಬಿದ್ದಿದ್ದು, ಚಾಲಕ ಉಜಿರೆ ಹಳೆಪೇಟೆಯ ರತ್ನಾಕರ (50) ಹಾಗೂ ಪ್ರಯಾಣಿಕ ಹಳೆಪೇಟೆಯ ಸಾಂತಪ್ಪ (47) ಗಾಯಗೊಂಡು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಎರಡು ಕಾರುಗಳಿಗೂ ಹಾನಿಯಾಗಿದೆ.ಘಟನೆಯಿಂದ ಸುಮಾರು ಒಂದು ತಾಸು ಸಂಚಾರ ವ್ಯತ್ಯಯವಾಗಿದ್ದು, ಇಕ್ಕೆಲಗಳಲ್ಲಿ ಮೂರು ಕಿ.ಮೀ.ಗಿಂತ ಉದ್ದದ ವಾಹನಗಳ ಸಾಲು ಕಂಡು ಬಂತು.

ಉಜಿರೆ ಪ್ರದೇಶದಲ್ಲಿ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಲ್ಲಿ ಯಂತ್ರಗಳಿಂದ ಅಗೆದ ಕಾರಣ ಮರಗಳ ಬುಡ ಸಡಿಲಗೊಂಡಿದೆ. ಚಾರ್ಮಾಡಿಯಿಂದ ಉಜಿರೆ ತನಕ ಇನ್ನೂ ಇಂಥ ಸಾಕಷ್ಟು ಅಪಾಯಕಾರಿ ಮರಗಳಿವೆ.

ಅರಣ್ಯ ಇಲಾಖೆ ವಿರುದ್ಧ
ಕ್ರಮಕ್ಕೆ ಆಗ್ರಹ
ಹೆದ್ದಾರಿ ಕಾಮಗಾರಿ ನಡೆದ ಸ್ಥಳಗಳಲ್ಲಿ ಮರಗಳ ಬುಡದವರೆಗೂ ಮಣ್ಣು ಅಗೆಯಲಾಗಿದ್ದು, ಮರಗಳು ದಿನದಿಂದ ದಿನಕ್ಕೆ ರಸ್ತೆಗೆ ಬಾಗುತ್ತಿವೆ. ರಸ್ತೆ ಬದಿಗಳಲ್ಲಿ ಅನೇಕ ಅಪಾಯಕಾರಿ ಮರಗಳಿವೆ. ಆದರೆ ಅರಣ್ಯ ಇಲಾಖೆ ಮಳೆಗಾಲಕ್ಕೂ ಮುನ್ನ ಗೆಲ್ಲು ತೆರವು ನಡೆಸುವುದಿಲ್ಲ. ಇದರಿಂದ ವಾಹನಗಳ ಮೇಲೆ ಬಿದ್ದು ಅಮಾಯಕರ ಜೀವಹಾನಿ ಸಂಭವಿಸುತ್ತದೆ. ಉಜಿರೆಯಲ್ಲಿ ಕೆಲವು ವರ್ಷಗಳ ಹಿಂದೆ ಇಬ್ಬರು ಮೃತಪಟ್ಟಿದ್ದರು. ಸಾರ್ವಜನಿಕರ ಜೀವದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ದ.ಕ. ಜಿಲ್ಲೆಯಲ್ಲಿ ಸಾಧಾರಣ ಮಳೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಹಗಲು ವೇಳೆಯಲ್ಲಿ ಸಾಧಾರಣ ಮಳೆಯಾಗಿದೆ. ಮುಂಜಾನೆ ವೇಳೆ ಸ್ವಲ್ಪ ಮಳೆಯಾಗಿದ್ದು, ಬಳಿಕ ಮೋಡ- ಬಿಸಿಲಿನ ವಾತಾವರಣದೊಂದಿಗೆ ಬಿಟ್ಟು ಬಿಟ್ಟು ಒಂದೆರಡು ಬಾರಿ ಮಳೆಯಾಗಿದೆ.

ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ, ಧರ್ಮಸ್ಥಳ, ಪುತ್ತೂರು, ಬಂಟ್ವಾಳ ಭಾಗದಲ್ಲೂ ಮಳೆ ಸಾಧಾರಣ ಮಳೆಯಾಗಿದೆ. ಆಗಾಗ್ಗೆ ದಟ್ಟ ಮೋಡ ಕವಿದು ಮಳೆ ಸುರಿದಿದೆ. ಜತೆಗೆ ಜೋರಾದ ಗಾಳಿಯೂ ಇತ್ತು. ಕೆಲವು ಕಡೆಗಳಲ್ಲಿ ಮರ, ಕೊಂಬೆಗಳು ಮುರಿದು ಬಿದ್ದಿದೆ.

ಆರೆಂಜ್‌ ಅಲರ್ಟ್‌
ಕರಾವಳಿಗೆ ಮಂಗಳವಾರ ಮತ್ತು ಬುಧವಾರ ಆರೆಂಜ್‌ ಅಲರ್ಟ್‌ ಇದೆ. ಗಾಳಿಯೊಂದಿಗೆ ಅಲ್ಲಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸಮುದ್ರದಿಂದ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸಲಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 30.1 ಡಿಗ್ರಿ ಸೆಲ್ಸಿಯಸ್‌ ಮತ್ತು ಕನಿಷ್ಠ ತಾಪಮಾನ 22.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಆಟೋ ಚಾಲಕರಿಂದ ಪ್ರತಿಭಟನೆ
ಮರ ತೆರವುಗೊಂಡ ಬಳಿಕ ಅಪಾಯಕಾರಿ ಮರ, ಗೆಲ್ಲುಗಳನ್ನು ತೆರವುಗೊಳಿಸದ ಬಗ್ಗೆ ಹಾಗೂ ಹೆದ್ದಾರಿ ರಸ್ತೆ ಕಾಮಗಾರಿಯ ಅವ್ಯವಸ್ಥೆ ಕುರಿತು ರಿûಾ ಚಾಲಕರು ಸಹಿತ ಸ್ಥಳೀಯರು ಪ್ರತಿಭಟಿಸಿದರು.

ಉಡುಪಿಯಲ್ಲಿ
ಸಾಧಾರಣ ಮಳೆ
ಉಡುಪಿ: ಜಿಲ್ಲೆಯಲ್ಲಿ ಸೋಮವಾರ ಹಲವೆಡೆ ಸಾಧಾರಣ ಮಳೆಯಾಗಿದೆ. ಮಲ್ಪೆ, ಉಡುಪಿ, ಮಣಿಪಾಲ, ಕಾಪು, ಹಿರಿಯಡಕ, ಬ್ರಹ್ಮಾವರ ಸುತ್ತಮುತ್ತ ಬಿಸಿಲು-ಮೋಡ ಕವಿದ ವಾತಾವರಣದ ನಡುವೆ ಕೆಲಕಾಲ ಬಿಟ್ಟುಬಿಟ್ಟು ಮಳೆ ಸುರಿದಿದೆ. ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ 8.30ರ ಹಿಂದಿನ 24 ಗಂಟೆಗಳ ಕಾಲ 33.5 ಮಿ. ಮೀ. ಸರಾಸರಿ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next