ಬೆಂಗಳೂರು: ಸರ್ಕಾರಿ ನೌಕರರ ಸರಿಸಮಾನ ವೇತನಕ್ಕೆ ಆಗ್ರಹಿಸಿ ಕರೆ ನೀಡಲಾದ ಸಾರಿಗೆ ನೌಕರರ ಮುಷ್ಕರದ ಪೂರ್ವಭಾವಿ ಹೋರಾಟಕ್ಕೆ ಚಾಲನೆ ದೊರಕಿದೆ.
ಸರ್ಕಾರಿ ನೌಕರರ ಸರಿಸಮಾನ ವೇತನ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಎಸ್‌ಆರ್‌ಟಿಸಿ ನೌಕರರ ಕೂಟದ ಅಧ್ಯಕ್ಷ ಆರ್. ಚಂದ್ರಶೇಖರ್ (ಚಂದ್ರು) ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಕೇಂದ್ರ ಕಚೇರಿ ಆವರಣದಲ್ಲಿ ಮಂಗಳವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಇದರೊಂದಿಗೆ ಮುಷ್ಕರಕ್ಕೆ ಮುನ್ನುಡಿ ಬರೆಯಲಾಗಿದೆ.
“ಪ್ರಸ್ತುತ ನೀಡಿರುವ ವೇತನ ಪರಿಷ್ಕರಣೆಗೆ ಯಾವುದೇ ರೀತಿಯಿಂದಲೂ ನಮ್ಮ ಸಮ್ಮತಿ ಇಲ್ಲ. ಮಾರ್ಚ್ 24ರಿಂದ ನಡೆಯಲಿರುವ ಸಾರಿಗೆ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇಲ್ಲ. ಬೇಡಿಕೆ ಈಡೇರುವವರೆಗೂ ಹಿಂದೆಸರಿಯುವ ಪ್ರಶ್ನೆಯೇ ಇಲ್ಲ. ಅದಕ್ಕೆ ಪೂರ್ವಭಾವಿಯಾಗಿ ಈ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ. ಇದು ಮಾಡು ಇಲ್ಲವೇ ಮಡಿ ಹೋರಾಟ. ಇಲ್ಲಿ ಯಾವ ತ್ಯಾಗಕ್ಕೂ ನಾವು ಸಿದ್ಧ’ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
“ಸತ್ಯಾಗ್ರಹ ಆರಂಭಿಸುವಾಗ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾತುಕತೆಗೆ ಆಹ್ವಾನಿಸಿದರು. ಆದರೆ, ಅಲ್ಲಿ ಭರವಸೆಗಳಿಗಿಂತ ಬೆದರಿಕೆಗಳೇ ಹೆಚ್ಚಿದ್ದವು. ಉಪವಾಸ ಸತ್ಯಾಗ್ರಹದ ವೇಳೆಯೂ ಸಮಸ್ಯೆ- ಸವಾಲುಗಳು ಎದುರಾಗಬಹುದು. ಅದಾವುದಕ್ಕೂ ಬಗ್ಗುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಒಂದು ವೇಳೆ ಸಾರಿಗೆ ನೌಕರರ ಮುಷ್ಕರ ಖಚಿತವಾದರೆ ಯುಗಾದಿ ಹಬ್ಬಕ್ಕೆ ತೆರಳಿದವರಿಗೆ ಇದರ ಬಿಸಿ ತಟ್ಟುವ ಸಾಧ್ಯತೆ ಇದೆ. ಬೆಂಗಳೂರಿನಿಂದ ಬೇರೆ ಬೇರೆ ಊರುಗಳಿಗೆ ಈಗಾಗಲೇ ತೆರಳಿದವರು ವಾಪಸ್ ಬರುವಾಗ ಬಸ್‌ಗಳ ಸೇವೆಯಲ್ಲಿ ವ್ಯತ್ಯಯ ಆಗಬಹುದು ಎನ್ನಲಾಗಿದೆ.