ವಾಡಿ: 1994ರಿಂದ 2004ರ ವರೆಗೆ ಚಿತ್ತಾಪುರ ತಾಲೂಕಿನ ಸನ್ನತಿ ಪ್ರದೇಶದ ಕನಗನಹಳ್ಳಿಯಲ್ಲಿಭಾರತೀಯ ಸರ್ವೇಕ್ಷಣಾ ಇಲಾಖೆ ಕೈಗೊಂಡ ಉತVನನದಲ್ಲಿ ಕ್ರಿ.ಪೂ 3ನೇ ಶತಮಾನಕ್ಕೆ ಸೇರಿದ ಮೌರ್ಯ ಸಾಮ್ರಾಜ್ಯದ ದೊರೆ ಸಾಮ್ರಾಟ್ ಅಶೋಕನ ಕಾಲಘಟ್ಟದ ಬೌದ್ಧ ಪರಂಪರೆಯ ಶಿಲಾ ಶಾಸನ ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿದ್ದು, ಕೇಂದ್ರ ಸರ್ಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಗುರಿಯಾಗಿರುವ ಈ ಐತಿಹಾಸಿಕ ತಾಣವೀಗ ಕುರಿದೊಡ್ಡಿಯಾಗಿ ಪರಿವರ್ತನೆಯಾಗಿದೆ.
ಕಳೆದ ಎರಡು ದಶಕಗಳ ಹಿಂದೆ ಬೆಳಕಿಗೆ ಬಂದ ಬೌದ್ಧ ಮಹಾಸ್ತೂಪ ಸಮುಚ್ಚಯದ ಅವಶೇಷಗಳು,ಪ್ರಗತಿಯಹಿನ್ನಡೆಯಿಂದಾಗಿ ನೆಲದಡಿ ಹರಡಿಕೊಂಡು ಪುನಃ ಮಣ್ಣಿಗೆ ಸೇರಿಕೊಳ್ಳುತ್ತಿವೆ. ಇಲ್ಲಿ ದೊರೆತ ಬೃಹತ್ ಬೌದ್ಧ ಸ್ತೂಪವು 22ಮೀ. ವಿಸ್ತೀರ್ಣ ಮತ್ತು 17ಮೀ. ಎತ್ತರವಾಗಿತ್ತು ಎನ್ನಲಾಗಿದೆ.
ಮೌರ್ಯರ ಆರಂಭ ಹಾಗೂ ಶಾತವಾಹನರ ಅಂತ್ಯದ ಕಾಲಘಟ್ಟದಲ್ಲಿ ಮೂರು ಹಂತದಲ್ಲಿ ಸ್ತೂಪ ನಿರ್ಮಾಣವಾಗಿದೆ. ಅದೀಗ ಸಂಪೂರ್ಣ ನೆಲಸಮದ ರೀತಿಯಲ್ಲಿ ಪತ್ತೆಯಾಗಿದ್ದು, ಸಾವಿರಾರು ಶಿಲೆಗಳು ಮತ್ತು ಬುದ್ಧನ ಮೂರ್ತಿಗಳು ಉತ್ಖನನದ ವೇಳೆ ಪ್ರಾಚ್ಯವಸ್ತು ಇಲಾಖೆ ಕೈಸೇರಿವೆ. ಹೀಗೆ ಬೆಳಕಿಗೆ ಬಂದ ಐತಿಹಾಸಿಕ ಬೌದ್ಧ ಕುರುಹುಗಳನ್ನು ರಕ್ಷಣೆ ಮಾಡಲಾಗದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೌದ್ಧ ಪರಂಪರೆಯ ನಾಶಕ್ಕೆ ಮುನ್ನುಡಿ ಬರೆದಿವೆ ಎಂಬುದು ಅಂಬೇಡ್ಕರ್‌ವಾದಿಗಳ ಆರೋಪವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಉಪನ್ಯಾಸಕರು, ಸಂಶೋಧಕರು, ಪದವಿ ಕಾಲೇಜು ವಿದ್ಯಾರ್ಥಿಗಳು ಇಲ್ಲಿಗೆ ಆಗಮಿಸಿ, ಸನ್ನತಿ ಬೌದ್ಧ ತಾಣ ವೀಕ್ಷಿಸಿ ಅಧ್ಯಯನ ಮಾಡುತ್ತಾರೆ. ವಿದೇಶಗಳಿಂದಲೂ ಪ್ರವಾಸಿ ಗರು ಬಂದು ಹೋಗುತ್ತಾರೆ. ಭೀಮಾ ನದಿ ದಂಡೆಯಲ್ಲಿರುವ ಈ ಬೌದ್ಧ ನೆಲೆ ಪ್ರವಾಸಿಗರ ಆಕರ್ಷಣೀಯ ತಾಣವಾಗಿದೆ.
ದುರಂತವೆಂದರೆ ಕೇಂದ್ರ ಪ್ರಾಚ್ಯವಸ್ತು ಇಲಾಖೆ ಇದರ ಅಭಿವೃದ್ಧಿ ಕೈಗೊಳ್ಳುವುದನ್ನೇ ಮರೆತಿದೆ. ಶಿಲಾ ಶಾಸನಗಳು ಬೆಳಕಿಗೆ ಬಂದು 26 ವರ್ಷಗಳೇ ಉರುಳಿದರೂ ಬುದ್ಧನ ಮೂರ್ತಿಗಳಿಗೆ ಸುರಕ್ಷಿತ ಗೌರವ ದೊರೆತಿಲ್ಲ. ಭದ್ರತಾ ಸಿಬ್ಬಂದಿ ನೇಮಿಸಲಾಗಿದ್ದರೂ ಕುರಿಗಳು ಮತ್ತು ದನ ಕರುಗಳು ಪ್ರವೇಶಿಸಿ ಬೌದ್ಧ ಕುರುಹುಗಳನ್ನು ತುಳಿದು ಹಾಕುತ್ತಿವೆ. ಸರ್ಕಾರಗಳ ಬೇಜವಾಬ್ದಾರಿಯಿಂದಾಗಿ ಅದೆಷ್ಟೋ ಶಿಲೆಗಳು ಕಾಣೆಯಾಗಿವೆ.
ಕುಡಿಯುವ ನೀರು, ಶೌಚಾಲಯ, ವಿಶ್ರಾಂತಿ ಗೃಹ, ಉದ್ಯಾನವನ, ಉಪಹಾರ ತಾಣಗಳಂತಹ ಸೌಲಭ್ಯಗಳು ಇಲ್ಲಿ ಕಾಣುವುದಿಲ್ಲ. ಪ್ರವಾಸೋದ್ಯಮ ಇಲಾಖೆ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕನಿಷ್ಟ ಮೂಲಭೂತ ಸೌಕರ್ಯವನ್ನೂ ಒದಗಿಸಿಲ್ಲ. ಸನ್ನತಿಬೌದ್ಧ ಸ್ತೂಪ ತಾಣವೀಗ ಅಕ್ಷರಶಃ ಕುರಿ ದೊಡ್ಡಿಯಾಗಿ ಪರಿವರ್ತನೆ ಆಗಿರುವುದು ಮಾತ್ರ ವಿಪರ್ಯಾಸದ ಸಂಗತಿ.
ಸನ್ನತಿಯಲ್ಲಿ ದೊರೆತಿರುವ ಕ್ರಿ.ಪೂ. 3ನೇ ಶತಮಾನದ ಬೌದ್ಧ ಸಮುಚ್ಚಯ ಅವಶೇಷಗಳು, ನಾಗಾ ಜನಾಂಗದ ಮೂಲ ನಿವಾಸಿಗಳಾದ ದಲಿತರ ಸ್ವಾಭಿಮಾನ ಹೆಚ್ಚಿಸಿವೆ. ಸುರಕ್ಷತೆ ಕಾಪಾಡಬೇಕಾದ ಕೇಂದ್ರ ಸರ್ಕಾರ ಸುದೀರ್ಘ ಬೇವಾಬ್ದಾರಿ ವಹಿಸಿದೆ. ದನ, ಕರು ,ಕುರಿಗಳು ಶಿಲೆಗಳ ಮೇಲೆ ಓಡಾಡಿಹುಲ್ಲು ಮೇಯುತ್ತಿವೆ. ಶಿಲೆಗಳು ಮತ್ತು ಶಾಸನಗಳು ಮುರಿಯುತ್ತಿವೆ. ಈಗಾಗಲೇ ಬಹುತೇಕ ಶಿಲಾಕಲೆಗಳು, ವಿವಿಧ ಮೂರ್ತಿಗಳುಕಣ್ಮರೆಯಾಗಿವೆ. ಭದ್ರತೆ ಎನ್ನುವುದು ಇಲ್ಲಿ ನಾಮಕೇವಾಸ್ತೆ ಎಂಬಂತಾಗಿದೆ. ಸರ್ಕಾರಕಿಂಚಿತ್ತೂ ಅಭಿವೃದ್ಧಿ ಮಾಡಿಲ್ಲ. ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಇದು ದಲಿತರ ಸ್ವಾಭಿಮಾನಕೆರಳಿಸಿದೆ. ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ, ಹೋರಾಟ ರೂಪಿಸಲಾಗುವುದು.
ಸಂದೀಪ ಎಸ್. ಕಟ್ಟಿ, ಬೌದ್ಧ ಅನುಯಾಯಿ
*ಮಡಿವಾಳಪ್ಪ ಹೇರೂರ