ನವಲಗುಂದ: ಪಟ್ಟಣದ ಆನೇಗುಂದಿ ಪ್ಲಾಟ್ ರಸ್ತೆಗೆ ಹೊಂದಿಕೊಂಡು ಶ್ರೀ ಲಾಲಗುಡಿ ದೇವಸ್ಥಾನದ ಜಾಗೆಯಲ್ಲಿ 15 ಲಕ್ಷ ರೂ. ಅನುದಾನದಲ್ಲಿ ಶೌಚಾಲಯ ನಿರ್ಮಾಣ ಮಾಡಬೇಕೆಂಬ ಯೋಜನೆಯನ್ನು ಪುರಸಭೆಯವರು ಹಾಕಿಕೊಂಡಿರುವುದನ್ನು ಖಂಡಿಸಿ ಅಲ್ಲಿನ ನಿವಾಸಿಗಳು ಮಂಗಳವಾರ ಪುರಸಭೆಗೆ ಮನವಿ ನೀಡಿ ಒತ್ತಾಯಿಸಿದ್ದಾರೆ.
ಶೌಚಾಲಯ ಅವಶ್ಯಕತೆ ಇಲ್ಲದ ಜಾಗೆಯಲ್ಲಿ ಶೌಚಾಲಯವನ್ನು ಹಾಕಿದರೆ ಮುಂದಿನ ದಿನಗಳಲ್ಲಿ ಇಲ್ಲಿಯ ಪರಿಸರ ಶುದ್ಧವಾಗಿ ಉಳಿಯುವುದಿಲ್ಲ. ಈ ಶೌಚಾಲಯವನ್ನು ಸಾರ್ವಜನಿಕರಿಗೆ ಅನುಕೂಲವಾಗುವಂತಹ ಪ್ರದೇಶಗಳಲ್ಲಿ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಇತ್ತೀಚೆಗೆ “ಪುರಸಭೆ ನಿರ್ಲಕ್ಷ್ಯ; ನಿಸರ್ಗದ ಕರೆಗೆ ಬಯಲೇ ಆಸರೆ’ ಎಂಬ ಶೀರ್ಷಿಕೆಯಡಿ ಮೂತ್ರ ವಿಸರ್ಜನೆಗಾಗಿ ಸರಿಯಾದ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರದಾಡುತ್ತಿರುವ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು. ಈ ನಡುವೆಯೇ ಜನದಟ್ಟಣೆ ಇಲ್ಲದ ಪ್ರದೇಶಗಳಲ್ಲಿ ಲಕ್ಷಗಟ್ಟಲೆ ಹಣ ವ್ಯಯ ಮಾಡಿ ಶೌಚಾಲಯ ಕಟ್ಟಲು ಮುಂದಾಗುತ್ತಿರುವುದು ಯಾರಿಗೂ ತಿಳಿಯದಂತಾಗಿದೆ.
ಮಾರುಕಟ್ಟೆ, ಇತರೆ ಪ್ರಮುಖ ಜನದಟ್ಟಣೆ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ ಹಾಗೂ ಶೌಚಾಲಯ ಇಲ್ಲದೇ ಪರಿತಪಿಸುತ್ತಿರುವ ಜನರ ಸಮಸ್ಯೆಗೆ ಪರಿಹಾರ ನೀಡುವುದನ್ನು ಬಿಟ್ಟು ಸುಸಜ್ಜಿತವಾಗಿ ಆರ್‌ಸಿಸಿ ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರುವ ಪ್ರದೇಶಗಳಲ್ಲಿ ಶೌಚಾಲಯವನ್ನು ಕಟ್ಟುತ್ತೇವೆ ಎಂದು ಮಂಕು ತಿಮ್ಮನ ಲೆಕ್ಕಾಚಾರ ಪುರಸಭೆ ಮಾಡುತ್ತಿರುವುದು ಈ ಭಾಗದ ಜನರಿಗೆ ಬೇಸರವನ್ನುಂಟು ಮಾಡಿದೆ.
ಪುರಸಭೆ ವಾಣಿಜ್ಯ ಮಳಿಗೆಯಲ್ಲಿಯೂ ಮೂತ್ರ ವಿಸರ್ಜನೆಗಾಗಿ ಯಾವುದೇ ಸವಲತ್ತು ಇಲ್ಲ. ಈ ಮೊದಲು ತರಕಾರಿ ಮಾರುಕಟ್ಟೆಯಲ್ಲಿದ್ದ ಮೂತ್ರಾಲಯವನ್ನು ಪುರಸಭೆಯವರು ತೆಗೆದುಹಾಕಲಾಗಿದೆ. ಹೀಗಾಗಿ ಮೂತ್ರ ವಿಸರ್ಜನೆಗೆ ಜಾಗೆ ಇಲ್ಲದೆ ಇರುವುದರಿಂದ ಪುರಸಭೆ ವಾಣಿಜ್ಯ ಸಂಕೀರ್ಣದ ಮೇಲುಗಡೆ, ಬಾಲೋದ್ಯಾನ ಬಯಲು, ಟಾಕೀಜ್ ರಸ್ತೆ, ಬಿಎಸ್‌ಎನ್‌ಎಲ್ ಕಾರ್ಯಾಲಯ ಮುಂದಿನ ಬಯಲಲ್ಲಿ ಮೂತ್ರ ವಿಸರ್ಜಿಸುತ್ತಾರೆ.
ಈ ಭಾಗದಲ್ಲಿ ಚಿಕ್ಕ ಮಕ್ಕಳ ಆಸ್ಪತ್ರೆ, ಸರಕಾರಿ ಶಾಲೆ ಹಾಗೂ ತುಂಬಾ ಜನದಟ್ಟಣೆ ಇರುತ್ತಿದ್ದು, ದುರ್ನಾತ ಬೀರುವಂತಾಗಿದೆ. ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ. ಈಗ ಪಟ್ಟಣದ ಆನೇಗುಂದಿ ಪ್ಲಾಟ್‌ನಲ್ಲಿ ಕಟ್ಟುತ್ತಿರುವ 15 ಲಕ್ಷ ಅನುದಾನದ ಶೌಚಾಲಯ ಅಸಮರ್ಪಕವಾಗಿದೆ. ಇದರ ಅಕ್ಕಪಕ್ಕಕ್ಕೂ ದೇವಸ್ಥಾನಗಳು ನಿರ್ಮಾಣವಾಗುತ್ತಿರುವುದರಿಂದ ಶೌಚಾಲಯವನ್ನು ಇಲ್ಲಿ ಕಟ್ಟಬಾರದೆಂಬ ಕೂಗು ಈ ಭಾಗದ ಜನರದ್ದಾಗಿದೆ.
ಈ ಭಾಗದಲ್ಲಿ ಶೌಚಾಲಯ ಅವಶ್ಯಕತೆ ಇಲ್ಲ. ಜನದಟ್ಟಣೆ ಇರುವಂತಹ ಮಾರ್ಕೆಟ್‌ನಲ್ಲಿ ಒಂದು ಶೌಚಾಲಯ, ಮೂತ್ರ ವಿಸರ್ಜನೆ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸುತ್ತಾರೆ. ಅವಶ್ಯಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಹಾಗೂ ಶೌಚಾಲಯವನ್ನು ಮಾಡಿ ಸರಕಾರದ ಅನುದಾನ ಸರಿಯಾಗಿ ಉಪಯೋಗಿಸವಂತಾಗಬೇಕು.
∙ಬಿ.ಕೆ. ರಾಯನಗೌಡರ, ಆನೇಗುಂದಿ ಪ್ಲಾಟ್ ನಿವಾಸಿ
*ಪುಂಡಲೀಕ ಮುಧೋಳ