ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ದಾಖಲೆಯ 71 ಕೋವಿಡ್ 19 ವೈರಸ್ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿಗೊಳಗಾದವರ ಸಂಖ್ಯೆ ಸಾವಿರ ಗಡಿದಾಟಿದೆ. ರಾಜ್ಯವಾರು ಸಾವಿರ ಗಡಿದಾಟಿದ 12ನೇ ರಾಜ್ಯ ಕರ್ನಾಟಕವಾಗಿದ್ದು, ಸೋಂಕಿತರ ಸಂಖ್ಯೆಯಲ್ಲಿಯೂ 12ನೇ ಸ್ಥಾನದಲ್ಲಿದೆ. ಸದ್ಯ ರಾಜ್ಯದಲ್ಲಿ ಒಟ್ಟಾರೆ ಸೋಂಕಿಗೊಳಗಾದವರ ಸಂಖ್ಯೆ 1058 ಇದ್ದು, ಈ ಪೈಕಿ 480 ಮಂದಿ ಗುಣಮುಖರಾಗಿದ್ದು, 36 ಮಂದಿ ಮೃತಪಟ್ಟಿದ್ದಾರೆ. ಬೀದರ್ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಸಾವಿಗೀಡಾಗಿದ್ದ 52 ವರ್ಷದ ಪುರುಷನಿಗೆ ಸೋಂಕು ತಗುಲಿತ್ತು ಎಂದು ಪರೀಕ್ಷಾ ವರದಿಯಲ್ಲಿ ದೃಢಪಟ್ಟಿದೆ.
ಜಿಲ್ಲೆಯ ಚಿಟಗುಪ್ಪ ಪಟ್ಟಣದಲ್ಲಿ ಈ ವ್ಯಕ್ತಿ ಹೈದರಾಬಾದ್ ಪ್ರಯಾಣ ಮಾಡಿದ ಹಿನ್ನೆಲೆ ಹೊಂದಿದ್ದು, ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಇನ್ನು ರಾಜ್ಯದಲ್ಲಿ ಶುಕ್ರವಾರ ದೃಢಪಟ್ಟ 69 ಪ್ರಕರಣಗಳ ಪೈಕಿ ದಕ್ಷಿಣ ಕನ್ನಡದಲ್ಲಿ 16, ಮಂಡ್ಯ ಹಾಗೂ ಬೆಂಗಳೂರಿನಲ್ಲಿ ತಲಾ 13 ಮಂದಿ, ಬೀದರ್ ಹಾಗೂ ಹಾಸನದಲ್ಲಿ ತಲಾ ಏಳು ಮಂದಿ, ಉಡುಪಿ 6, ಕಲಬುರಗಿಯಲ್ಲಿ ಮೂರು, ಚಿತ್ರದುರ್ಗ ಇಬ್ಬರು, ಬಾಗಲಕೋಟೆ, ಶಿವಮೊಗ್ಗ, ಕೋಲಾರದಲ್ಲಿ ತಲಾ ಒಬ್ಬರು, ಅನ್ಯ ರಾಜ್ಯಕ್ಕೆ ಸೇರಿದ ಪ್ರಯಾಣಿಕರೊಬ್ಬರು ಸೋಂಕಿತರಾಗಿದ್ದಾರೆ.
ದುಬೈನಿಂದ ಬಂದ 178 ಮಂದಿ ಪೈಕಿ 20 ಮಂದಿಗೆ ಸೋಂಕು: ಮಂಗಳವಾರ ದುಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 178 ಮಂದಿ ಪೈಕಿ 20 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ 16 ಮಂದಿ ದಕ್ಷಿಣ ಕನ್ನಡ, 5 ಮಂದಿ ಉಡುಪಿ, ಒಬ್ಬ ಉತ್ತರ ಕನ್ನಡ ಜಿಲ್ಲೆಯವರು. ಒಂದು ಮಗು, ಐವರು ವಯೋವೃದ್ಧರು, 14 ಮಂದಿ ವಯಸ್ಕರಿದ್ದಾರೆ. ಮುಂಜಾಗ್ರತಾ ಹಿನ್ನೆಲೆ ಎಲ್ಲಾ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಿ ಪರೀಕ್ಷಿಸಿದಾಗ ಸೋಂಕು ತಗುಲಿರುವುದು ಪತ್ತೆಯಾಗಿದೆ. ಸೋಂಕಿತರನ್ನು ಆಯಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ವಿಮಾನದಲ್ಲಿ ಬಂದ ಸಹ ಪ್ರಯಾಣಿಕರನ್ನು ಪ್ರಾಥಮಿಕ ಸಂಪರ್ಕ ಎಂದು ಪರಿಗಣಿಸಿದ್ದು, 12ನೇ ದಿನ ಮತ್ತೂಮ್ಮೆ ಸೋಂಕು ಪರೀಕ್ಷೆ ಮಾಡಲಾಗುತ್ತದೆ.
ಮುಂಬೈನಿಂದ ಬಂದ 20 ಮಂದಿಗೆ ಸೋಂಕು: ಮಂಡ್ಯ ಹಾಗೂ ಹಾಸನ ಜಿಲ್ಲೆಗಳಿಗೆ ಮುಂಬೈನಿಂದ ಬಂದವರದಲ್ಲಿ ಹೆಚ್ಚು ಸೋಂಕು ಪತ್ತೆಯಾಗುತ್ತಿದ್ದು, ಶುಕ್ರವಾರ ಮತ್ತೆ ಐವರು ಮಕ್ಕಳು ಸೇರಿ 20 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಏಳು ಮಂದಿ ಹಾಸನ, 13 ಮಂದಿ ಮಂಡ್ಯದವರಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ ಹಾಸನದಲ್ಲಿ 16, ಮಂಡ್ಯದಲ್ಲಿ 49ಕ್ಕೆ ಏರಿಕೆಯಾಗಿದೆ.
ಬೀದರ್‌ನಲ್ಲಿ ಸೋಂಕು ನಿರಂತರ ಏರಿಕೆ: ಈ ವಾರ ಬೀದರ್‌ನಲ್ಲಿ ಸೋಂಕು ನಿರಂತರ ಏರಿಕೆಯಾಗುತ್ತಿದೆ. ನಿತ್ಯ ಸರಾಸರಿ ಐದು ಪ್ರಕರಣಗಳು ದೃಢಪಡುತ್ತಿದೆ. ಸೋಂಕಿತರ ಸಂಪರ್ಕದಿಂದ ಇಬ್ಬರಿಗೆ, ನಗರದ ಕಂಟೈನ್ಮೆಂಟ್ ಪ್ರದೇಶದ ಮೂವರಿಗೆ, ಮುಂಬೈ ಪ್ರಯಾಣ ಮಾಡಿದ ಒಬ್ಬ, ಹೈದರಾಬಾದ್ ಪ್ರಯಾಣ ಮಾಡಿದ ಒಬ್ಬನಿಗೆ ಸೋಂಕು ತಗುಲಿದೆ. ಕಲಬುರಗಿಯಲ್ಲಿಯೂ ಕಂಟೈನ್ಮೆಂಟ್ ಪ್ರದೇಶ ಸಂಕರ್ಪದಿಂದ ಒಬ್ಬರಿಗೆ, ಮುಂಬೈ ಪ್ರಯಾಣ ಮಾಡಿದ್ದ ಒಬ್ಬರಿಗೆ, ವಿಷಮಶೀತ ಜ್ವರ ಹಿನ್ನಲೆಯುಳ್ಳ ವೃದ್ಧನಿಗೆ ಸೋಂಕು ದೃಢಪಟ್ಟಿದೆ.
ಉಳಿದಂತೆ ಬಾಗಲಕೋಟೆಯಲ್ಲಿ ಸೋಂಕಿತ ಸಂಪರ್ಕ ದಿಂದ ಒಬ್ಬರು, ಚೆನ್ನೈ ಪ್ರಯಾಣ ಮಾಡಿದ ಹಿನ್ನೆಲೆ ಯಿಂದ ಚಿತ್ರದುರ್ಗದಲ್ಲಿ ಇಬ್ಬರು, ಕೋಲಾರದಲ್ಲಿ ಒಬ್ಬರು , ಶಿವಮೊಗ್ಗದಲ್ಲಿ ಮುಂಬೈ ಪ್ರಯಾಣ ಹಿನ್ನೆಲೆ ಯಿಂದ ಒಬ್ಬರು ಸೋಂಕಿತರಾಗಿದ್ದಾರೆ. ರಾಜ್ಯದ ಸೋಂಕಿತರ ಪೈಕಿ ಬೆಂಗಳೂರಿನಲ್ಲಿ ನಾಲ್ಕು, ಬೆಳಗಾವಿ ಯಲ್ಲಿ 13, ಮೈಸೂರಿನಲ್ಲಿ ಇಬ್ಬರು ಸೇರಿ 20 ಮಂದಿ ಶುಕ್ರವಾರ ಬಿಡುಗಡೆಯಾಗಿದ್ದಾರೆ. ಇನ್ನು ರಾಜ್ಯದ ಎಲ್ಲಾ ಕೋವಿಡ್ 19 ಲ್ಯಾಬ್‌ಗಳನ್ನು ಸೇರಿಸಿ ಒಟ್ಟು 5351 ಮಂದಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 69 ಪಾಸಿಟಿವ್, 5308 ನೆಗೆಟಿವ್ ವರದಿಯಾಗಿದೆ.
ಸೋಂಕಿತನೊಬ್ಬನಿಂದ 11 ಮಂದಿಗೆ ಸೋಂಕು: ಬೆಂಗಳೂರಿನಲ್ಲಿ ಸೋಂಕು ಪ್ರಕರಣಗಳು ನಿರಂತರ ಹೆಚ್ಚಳವಾಗುತ್ತಿದ್ದು, ಸೋಂಕಿತರ ಸಂಖ್ಯೆ 200ರ ಗಡಿ ದಾಟಿದೆ. ಶಿವಾಜಿನಗರದ ಸೋಂಕಿತ ಪಿ-653ನಿಂದ ಪ್ರಾಥಮಿಕ ಸಂಪರ್ಕದಲ್ಲಿದ್ದ 11 ಮಂದಿಗೆ ಸೋಂಕು ಹರಡಿದೆ. ಬುಧವಾರ ಸೋಂಕು ಪತ್ತೆಯಾಗಿದ್ದ 35 ವರ್ಷದ ವ್ಯಕ್ತಿಯಿಂದ ಇಬ್ಬರಿಗೆ ಸೋಂಕು ತಗುಲಿದೆ. ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 202 ಇದ್ದು, ಅರ್ಧದಷ್ಟು (101) ಮಂದಿ ಗುಣಮುಖರಾಗಿದ್ದಾರೆ.