ಢಾಕಾ: ಬಾಂಗ್ಲಾದೇಶದ ಸ್ವಾತಂತ್ರ್ಯ ಘೋಷಿಸಿದ್ದು ಶೇಖ್ ಮುಜೀಬುರ್ ರೆಹಮಾನ್ ಅಲ್ಲ, ಬದಲಿಗೆ ಅಂದು ಸೇನಾ ಮುಖ್ಯಸ್ಥರಾಗಿದ್ದ ಜಿಯಾವುರ್ ರೆಹಮಾನ್!
ಮೊಹಮ್ಮದ್ ಯೂನುಸ್ ನೇತೃತ್ವದ ಬಾಂಗ್ಲಾ ಮಧ್ಯಾಂತ ರ ಸರ ಕಾ ರವು ಶಾಲಾ ಪಠ್ಯ ಪುಸ್ತಕಗಳಲ್ಲಿ ಇಂಥ ದ್ದೊಂದು ಹೊಸ ಬದಲಾವಣೆ ತಂದಿದೆ. ಅಲ್ಲದೇ, ಪಠ್ಯಗಳಲ್ಲಿ ಮುಜೀಬುರ್ ಅವರನ್ನು ರಾಷ್ಟ್ರಪಿತ ಎಂದು ಉಲ್ಲೇಖೀಸಿದ್ದನ್ನೂ ತೆಗೆದು ಹಾಕಲಾಗಿದೆ.
ಈ ಬಗ್ಗೆ ಬಾಂಗ್ಲಾ ರಾಷ್ಟ್ರೀಯ ಪಠ್ಯಕ್ರಮ ಮತ್ತು ಪಠ್ಯ ಪುಸ್ತಕ ಮಂಡಳಿ ಅಧ್ಯಕ್ಷ ಪ್ರೊ| ಎ.ಕೆ.ಎಂ. ರಿಯಾಜುಲ್ ಹಸನ್ ಮಾಹಿತಿ ನೀಡಿದ್ದು, 2025ನೇ ಶೈಕ್ಷಣಿಕ ವರ್ಷಕ್ಕೆ ರಚಿಸಿರುವ ಹೊಸ ಪಠ್ಯಕ್ರಮವು 1971ರ ಮಾರ್ಚ್ 26ರಂದು ಜಿಯಾವುರ್ ರೆಹಮಾನ್ ಸ್ವಾತಂತ್ರ್ಯ ಘೋಷಿಸಿದರು. ಮಾ.27ರಂದು ಬಂಗಬಂಧು ಅವರ ಪರವಾಗಿ ಸ್ವಾತಂತ್ರ್ಯ ಘೋಷಣೆಯನ್ನು ಪುನರುಚ್ಚರಿಸಿದರು ಎಂದು ಉಲ್ಲೇಖೀಸಿದೆ. ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳ ಪಠ್ಯಕ್ರಮಗಳಲ್ಲಿ ಈ ಬದಲಾವಣೆ ತರಲಾಗಿದೆ ಎಂದಿದ್ದಾರೆ. ಜಿಯಾವುರ್ ರೆಹಮಾನ್ ಅವರು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಯ ಮುಖ್ಯಸ್ಥೆ ಖಾಲಿದಾ ಜಿಯಾ ಅವರ ಪತಿಯೂ ಆಗಿದ್ದಾರೆ.
ಇನ್ನು ಪಠ್ಯಕ್ರಮ ಬದಲಾವಣೆ ಮಾಡಿದ ತಂಡದಲ್ಲಿ ಒಬ್ಬರಾಗಿರುವ ಸಂಶೋಧಕಿ ರಖಲ್ ರಾಹಾ ಕೂಡ ಮಾತನಾಡಿ, ಪಠ್ಯಪುಸ್ತಕದಲ್ಲಿ ವೈಭವೀಕರಿಸಿ ಹೇರಿಕೆ ಮಾಡಲಾಗಿದ್ದ, ನೈಜವಲ್ಲದ ಇತಿಹಾಸವನ್ನು ತೆಗೆದುಹಾಕುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಪಾಕ್ ಸೇನೆಯಿಂದ ಬಂಧನಕ್ಕೊಳಗಾದರೂ ಮುಜೀಬುರ್ ಸ್ವಾತಂತ್ರ್ಯ ಘೋಷಿಸಿದರು ಎಂಬುದು ಸುಳ್ಳು ಎಂದು ತಿಳಿದುಬಂದ ಕಾರಣ ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ.
ಹಸೀನಾ ಸರಕಾರ ಪತನವಾದ ಬಳಿಕ ಮುಜೀಬುರ್ ಅವರ ಹೆಸರನ್ನು ಮಧ್ಯಾಂತರ ಸರಕಾರ ಹಲವೆಡೆ ತೆಗದುಹಾಕಿದೆ. ಇದಕ್ಕೂ ಮೊದಲು ಆ.15 ರಂದು ಮುಜೀಬುರ್ ಪುಣ್ಯಸ್ಮರಣೆಗಾಗಿ ನೀಡಲಾಗುತ್ತಿದ್ದ ಸರಕಾರಿ ರಜೆಯನ್ನು ರದ್ದುಗೊಳಿಸಿತು. ಬಳಿಕ ದೇಶದ ನೋಟುಗಳಿಂದಲೂ ಮುಜೀಬುರ್ ಫೋಟೋವನ್ನು ತೆಗೆದುಹಾಕಲು ನಿರ್ಧಾರ ಹೊರಡಿಸಿತ್ತು.