Advertisement

ಪೋರ್ಟ್‌ ಆಫ್ ಸ್ಪೇನ್‌ ಟೆಸ್ಟ್‌ ಪಂದ್ಯ: ವಿಂಡೀಸ್‌ ಮೇಲೆ ಸಿರಾಜ್‌ ಸವಾರಿ

12:04 AM Jul 24, 2023 | Team Udayavani |

ಪೋರ್ಟ್‌ ಆಫ್ ಸ್ಪೇನ್‌: ವೆಸ್ಟ್‌ ಇಂಡೀಸ್‌ ಮೇಲೆ ಸವಾರಿ ಮಾಡಿದ ಮೊಹಮ್ಮದ್‌ ಸಿರಾಜ್‌ ಪೋರ್ಟ್‌ ಆಫ್ ಸ್ಪೇನ್‌ ಟೆಸ್ಟ್‌ ಪಂದ್ಯದಲ್ಲಿ ಭಾರತಕ್ಕೆ 183 ರನ್ನುಗಳ ದೊಡ್ಡ ಲೀಡ್‌ ತಂದಿತ್ತಿದ್ದಾರೆ. ಟೀಮ್‌ ಇಂಡಿಯಾದ 438 ರನ್ನುಗಳ ಮೊದಲ ಇನ್ನಿಂಗ್ಸ್‌ ಮೊತ್ತಕ್ಕೆ ಜವಾಬು ನೀಡಿದ ವಿಂಡೀಸ್‌ 4ನೇ ದಿನದಾಟದಲ್ಲಿ ಕ್ಷಿಪ್ರ ಕುಸಿತ ಅನುಭವಿಸಿ 255ಕ್ಕೆ ಆಲೌಟ್‌ ಆಯಿತು. ಸಿರಾಜ್‌ 60 ರನ್ನಿಗೆ 5 ವಿಕೆಟ್‌ ಕೆಡವಿ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶನವಿತ್ತರು.
ಬಿರುಸಿನಿಂದಲೇ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿರುವ ಭಾರತ, ಮಳೆಯಿಂದ ಪಂದ್ಯ ಸ್ಥಗಿತಗೊಂಡಾಗ ಒಂದು ವಿಕೆಟಿಗೆ 98 ರನ್‌ ಮಾಡಿತ್ತು. ಲೀಡ್‌ 281ಕ್ಕೆ ಏರಿದೆ. ರೋಹಿತ್‌ 57 ರನ್‌ ಮಾಡಿ ಔಟಾಗಿದ್ದು, ಇಶಾನ್‌ ಕಿಶನ್‌ 37 ರನ್‌ ಮಾಡಿ ಆಡುತ್ತಿದ್ದಾರೆ. ಒಟ್ಟು ಮುನ್ನಡೆಯನ್ನು 350ರ ತನಕ ವಿಸ್ತರಿಸಿ ಡಿಕ್ಲೇರ್‌ ಮಾಡುವುದು ರೋಹಿತ್‌ ಶರ್ಮ ಕಾರ್ಯತಂತ್ರ ಆಗಿರಬಹುದು. ಆಗ ಟೆಸ್ಟ್‌ ಸರಣಿಯನ್ನು ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಳ್ಳುವ ಭಾರತದ ಯೋಜನೆ ಯಶಸ್ವಿಯಾಗುವ ಎಲ್ಲ ಸಾಧ್ಯತೆ ಇದೆ.

Advertisement

ವಿಂಡೀಸ್‌ ಕ್ಷಿಪ್ರ ಕುಸಿತ
ಶನಿವಾರ ಮಳೆಯಿಂದ ಅಡಚಣೆಯಾದ ಕಾರಣ 4ನೇ ದಿನದಾಟವನ್ನು ಅರ್ಧ ಗಂಟೆ ಮೊದಲು ಆರಂಭಿಸಲಾಗಿತ್ತು. ವೆಸ್ಟ್‌ ಇಂಡೀಸ್‌ 5 ವಿಕೆಟಿಗೆ 229 ರನ್‌ ಗಳಿಸಿದಲ್ಲಿಂದ ಬ್ಯಾಟಿಂಗ್‌ ಮುಂದುವರಿಸಿತು. ಅಲಿಕ್‌ ಅಥನಾಝ್ 37 ಮತ್ತು ಜೇಸನ್‌ ಹೋಲ್ಡರ್‌ 11 ರನ್‌ ಮಾಡಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು.
ಆದರೆ ದಿನದ ಮೊದಲ ಓವರ್‌ನಲ್ಲೇ ಮುಕೇಶ್‌ ಕುಮಾರ್‌ ಆತಿಥೇಯರಿಗೆ ಬಲವಾದ ಆಘಾತವಿಕ್ಕಿದರು. 4ನೇ ಎಸೆತದಲ್ಲಿ ಅಥನಾಝ್ ಅವರನ್ನು ಲೆಗ್‌ ಬಿಫೋರ್‌ ಮೂಲಕ ಪೆವಿಲಿಯನ್ನಗೆ ಕಳುಹಿಸಿದರು. ಆಗ ಅಥನಾಝ್ ಮತ್ತು ವೆಸ್ಟ್‌ ಇಂಡೀಸ್‌ ಖಾತೆಗೆ ಯಾವುದೇ ರನ್‌ ಸೇರ್ಪಡೆ ಆಗಿರಲಿಲ್ಲ. ಮುಕೇಶ್‌ ಅವರದು “ವಿಕೆಟ್‌ ಮೇಡನ್‌’ ಓವರ್‌ ಆಗಿತ್ತು.

ಮುಂದಿನ ಓವರ್‌ನಲ್ಲೇ ಮೊಹಮ್ಮದ್‌ ಸಿರಾಜ್‌ ಕೆರಿಬಿಯನ್ನರಿಗೆ ಮತ್ತೂಂದು ಏಟು ನೀಟಿದರು. ಜೇಸನ್‌ ಹೋಲ್ಡರ್‌ ವಿಕೆಟ್‌ ಕೀಪರ್‌ ಇಶಾನ್‌ ಕಿಶನ್‌ಗೆ ಕ್ಯಾಚ್‌ ನೀಡಿ ವಾಪಸಾದರು. ಅವರ ಖಾತೆಗೆ ಬೌಂಡರಿಯೊಂದು ಸೇರ್ಪಡೆಗೊಂಡಿತು (15 ರನ್‌). ಸಿರಾಜ್‌ ಮ್ಯಾಜಿಕ್‌ ಮುಂದಿನ ಓವರ್‌ನಲ್ಲೂ ಪುನರಾವರ್ತನೆಗೊಂಡಿತು. ಈ ಬಾರಿ ವಾಪಸಾಗುವ ಸರದಿ ಅಲ್ಜಾರಿ ಜೋಸೆಫ್ ಅವರದಾಗಿತ್ತು. 4 ರನ್‌ ಮಾಡಿದ ಜೋಸೆಫ್ ಕೂಡ ಎಲ್‌ಬಿಡಬ್ಲ್ಯು ಆದರು. ಹೀಗೆ 15 ರನ್‌ ಒಟ್ಟುಗೂಡಿಸುವಷ್ಟರಲ್ಲಿ ವಿಂಡೀಸ್‌ನ 3 ವಿಕೆಟ್‌ ಉರುಳಿತು.
ಸಿರಾಜ್‌ ತಮ್ಮ 4ನೇ ಓವರ್‌ನಲ್ಲಿ ಅವಳಿ ಬೇಟೆಯಾಡಿ ವೆಸ್ಟ್‌ ಇಂಡೀಸ್‌ ಇನ್ನಿಂಗ್ಸ್‌ಗೆ ತೆರೆ ಎಳೆದರು. 3ನೇ ಎಸೆತದಲ್ಲಿ ಕೆಮರ್‌ ರೋಚ್‌ಗೆ ಕಂಟಕ ಎದುರಾಯಿತು. ಕೇವಲ 4 ರನ್‌ ಮಾಡಿದ ಅವರು ಇಶಾನ್‌ ಕಿಶನ್‌ಗೆ ಕ್ಯಾಚ್‌ ನೀಡಿ ನಡೆದರು. ಮುಂದಿನ ಎಸೆತದಲ್ಲೇ ಶಾನನ್‌ ಗ್ಯಾಬ್ರಿಯಲ್‌ ಚೆಂಡನ್ನು ಕಾಲಿನ ಮೇಲೆಳೆದುಕೊಂಡರು. ಅಲ್ಲಿಗೆ 26 ರನ್‌ ಆಗುವಷ್ಟರಲ್ಲಿ ಉಳಿದ 5 ವಿಕೆಟ್‌ಗಳನ್ನು ಕಳೆದುಕೊಂಡ ವಿಂಡೀಸ್‌ ಸಂಕಟಕ್ಕೆ ಸಿಲುಕಿತು. ಒಂದು ಹಂತದಲ್ಲಿ ವೆಸ್ಟ್‌ ಇಂಡೀಸ್‌ 2 ವಿಕೆಟಿಗೆ 157 ರನ್‌ ಬಾರಿಸಿ ಸಮಬಲದ ಹೋರಾಟದ ಸೂಚನೆ ನೀಡಿತ್ತು.

ಮೊಹಮ್ಮದ್‌ ಸಿರಾಜ್‌ ಜೀವನಶ್ರೇಷ್ಠ ಸಾಧನೆ
ಮೊಹಮ್ಮದ್‌ ಸಿರಾಜ್‌ ಸಾಧನೆ 60 ರನ್ನಿಗೆ 5 ವಿಕೆಟ್‌. ಅವರು ಟೆಸ್ಟ್‌ ಇನ್ನಿಂಗ್ಸ್‌ ಒಂದರಲ್ಲಿ 5 ವಿಕೆಟ್‌ ಉರುಳಿ ಸಿದ 2ನೇ ನಿದರ್ಶನ. ಇದಕ್ಕೂ ಮುನ್ನ 2021ರ ಆಸ್ಟ್ರೇಲಿಯ ಎದುರಿನ ಬ್ರಿಸ್ಬೇನ್‌ ಟೆಸ್ಟ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ ನಲ್ಲಿ 73 ರನ್ನಿಗೆ 5 ವಿಕೆಟ್‌ ಕೆಡವಿದ್ದರು.

ಸ್ಕೋರ್‌ ಪಟ್ಟಿ
ಭಾರತ ಪ್ರಥಮ ಇನ್ನಿಂಗ್ಸ್‌ 438
ವೆಸ್ಟ್‌ ಇಂಡೀಸ್‌ ಪ್ರಥಮ ಇನ್ನಿಂಗ್ಸ್‌
ಕ್ರೆಗ್‌ ಬ್ರಾತ್‌ವೇಟ್‌ ಬಿ ಅಶ್ವಿ‌ನ್‌ 75
ಟಿ. ಚಂದರ್‌ಪಾಲ್‌ ಸಿ ಅಶ್ವಿ‌ನ್‌ ಬಿ ಜಡೇಜ 33
ಕರ್ಕ್‌ ಮೆಕೆಂಝಿ ಸಿ ಇಶಾನ್‌ ಬಿ ಮುಕೇಶ್‌ 22
ಜೆ. ಬ್ಲ್ಯಾಕ್‌ವುಡ್‌ ಸಿ ರಹಾನೆ ಬಿ ಜಡೇಜ 20
ಅಲಿಕ್‌ ಅಥನಾಝ್ ಎಲ್‌ಬಿಡಬ್ಲ್ಯು ಮುಕೇಶ್‌ 37
ಜೋಶುವ ಡ ಸಿಲ್ವ ಬಿ ಸಿರಾಜ್‌ 10
ಜೇಸನ್‌ ಹೋಲ್ಡರ್‌ ಸಿ ಇಶಾನ್‌ ಬಿ ಸಿರಾಜ್‌ 15
ಅಲ್ಜಾರಿ ಜೋಸೆಫ್ ಎಲ್‌ಬಿಡಬ್ಲ್ಯು ಸಿರಾಜ್‌ 4
ಕೆಮರ್‌ ರೋಚ್‌ ಸಿ ಇಶಾನ್‌ ಬಿ ಸಿರಾಜ್‌ 4
ಜೊಮೆಲ್‌ ವ್ಯಾರಿಕ್ಯಾನ್‌ ಔಟಾಗದೆ 7
ಶಾನನ್‌ ಗ್ಯಾಬ್ರಿಯಲ್‌ ಎಲ್‌ಬಿಡಬ್ಲ್ಯು ಸಿರಾಜ್‌ 0
ಇತರ 18
ಒಟ್ಟು (ಆಲೌಟ್‌) 255
ವಿಕೆಟ್‌ ಪತನ: 1-71, 2-117, 3-157, 4-178, 5-208, 6-229, 7-233, 8-244, 9-255.
ಬೌಲಿಂಗ್‌:
ಮೊಹಮ್ಮದ್‌ ಸಿರಾಜ್‌ 23.4-6-60-5
ಜೈದೇವ್‌ ಉನಾದ್ಕತ್‌ 16-3-44-0
ಆರ್‌. ಅಶ್ವಿ‌ನ್‌ 33-10-61-1
ಮುಕೇಶ್‌ ಕುಮಾರ್‌ 18-6-48-2
ರವೀಂದ್ರ ಜಡೇಜ 25-10-37-2

Advertisement
Advertisement

Udayavani is now on Telegram. Click here to join our channel and stay updated with the latest news.

Next