ಸಿಂಧನೂರು: ಇಲ್ಲಿನ ರೇಣುಕಾ ಆಸ್ಪತ್ರೆಯ ವೈದ್ಯರು ಕ್ಲಿಷ್ಟಕರ ಪ್ರಕರಣ ನಿಭಾಯಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಗರದ ಮಹೆಬೂಬಿಯಾ ಕಾಲೊನಿಯ ಆಯಿಷಾ ಬೇಗಂ (29) ಆರು ವಾರಗಳ ಗರ್ಭಿಣಿಯಾಗಿದ್ದರು. ಈಗಾಗಲೇ ನಾಲ್ಕು ಮಕ್ಕಳನ್ನು ಹೆತ್ತಿದ್ದ ಈ ತಾಯಿಗೆ ಗರ್ಭಾಶಯ ಹೊರಗೆ ಮಗುವಿನ ಬೆಳವಣಿಗೆಯಾದ ಹಿನ್ನೆಲೆಯಲ್ಲಿ ಜೀವಕ್ಕೆ ಕಂಟಕ ಎದುರಾಗಿತ್ತು. ಇನ್ನೇನು ಹಲವು ಖಾಸಗಿ ಆಸ್ಪತ್ರೆ ಸುತ್ತಾಡಿದ ಬಳಿಕ ಮಹಿಳೆಯನ್ನು ರಾಯಚೂರು ಇಲ್ಲವೇ ಬಳ್ಳಾರಿಗೆ ಕರೆದೊಯ್ಯಬೇಕೆಂಬ ಮಾಹಿತಿ ಕೇಳಿ ಕುಟುಂಬಸ್ಥರು ದಂಗಾಗಿದ್ದರು.
ದಾರಿ ಕಾಣದ ಕುಟುಂಬ ವರ್ಗ ಮಹಿಳೆಯನ್ನು ರೇಣುಕಾ ಆಸ್ಪತ್ರೆಗೆ ಕರೆ ತಂದಿದ್ದರು. 2 ಲೀಟರ್ ರಕ್ತಸ್ರಾವವಾಗಿದ್ದರಿಂದ ನಿಶ್ಯಕ್ತವಾಗಿದ್ದ ಮಹಿಳೆಗೆ ಡಾ|ಎಂ.ವೀರಭದ್ರಗೌಡ, ಪಿಜಿಷಿಯನ್ ಡಾ|ನಟರಾಜ್, ಡಾ| ಶಕುಂತಲಾ ಪಾಟೀಲ್ ನೇತೃತ್ವದ ತಂಡ ಸತತ ಆರು ತಾಸಿನ ಚಿಕಿತ್ಸೆ ನೀಡಿದ ಬಳಿಕ ಚೇತರಿಸಿಕೊಂಡಿದ್ದು ವೈದ್ಯರು ನಿಟ್ಟುಸಿರು ಬಿಟ್ಟಿದ್ದಾರೆ.
ಆರು ವಾರಗಳ ಗರ್ಭಿಣಿಗೆ ತೀವ್ರ ರಕ್ತಸ್ರಾವವಾಗಿತ್ತು. ಕ್ಲಿಷ್ಟವಾದರೂ ಚಿಕಿತ್ಸೆ ಕಲ್ಪಿಸುವ ಭರವಸೆ ನೀಡಿದ ಮೇಲೆ ಕುಟುಂಬದವರು ಒಪ್ಪಿದ್ದರಿಂದ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಸಾವಿರಕ್ಕೊಂದು ಬರಬಹುದಾದ ಇಂತಹ ಪ್ರಕರಣ ನಿಭಾಯಿಸಿದ ತೃಪ್ತಿಯಿದೆ.
-ಡಾ| ನಟರಾಜ್, ಪಿಜಿಷಿಯನ್, ರೇಣುಕಾ ಆಸ್ಪತ್ರೆ
ರಿಸ್ಕ್ ಪ್ರಕರಣವಾಗಿದ್ದರೂ ನಮ್ಮ ವೈದ್ಯರ ತಂಡದೊಟ್ಟಿಗೆ ಸತತ ಪ್ರಯತ್ನದ ಮೂಲಕ ಯಶಸ್ವಿ ಚಿಕಿತ್ಸೆ ಕಲ್ಪಿಸಲಾಗಿದೆ. ನಿರಂತರ ವೈದ್ಯರ ತೀವ್ರ ನಿಗಾದಲ್ಲಿದ್ದ ಪರಿಣಾಮ ಮಹಿಳೆ ಚೇತರಿಸಿ ಕೊಂಡಿದ್ದಾರೆ.
-ಡಾ| ಎಂ.ವೀರಭದ್ರಗೌಡ, ಮುಖ್ಯಸ್ಥರು, ರೇಣುಕಾ ಆಸ್ಪತ್ರೆ, ಸಿಂಧನೂರು