Advertisement
ಮಾತಾಡುತ್ತದೆ“ಸ್ವಚ್ಛತೆ, ಸ್ವಚ್ಛತೆ, ಸ್ವಚ್ಛತೆ. ಹೇಳುವುದಕ್ಕೆ ಎಲ್ಲ ಹೇಳುತ್ತಾರೆ. ಆದರೆ ಕಸ ಡಬ್ಬಿಯಲ್ಲಿ ಹಾಕೋದಕ್ಕೆ ಮಾತ್ರ ಉದಾಸೀನ. ಇಡೀ ಊರಲ್ಲಿ ಕಸದ ಡಬ್ಬಿ ಇಟ್ಟರೂ ಕಸ ಮಾತ್ರ ಡಬ್ಬಿಗೆ ಹಾಕ್ಲಿಕ್ಕೆ ಆಗುವುದಿಲ್ಲ….ಅಲ್ವಾ?’ ಎಂದು ನಯವಾದ ಧ್ವನಿಯಲ್ಲಿ ಮಾತನಾಡುತ್ತಾ ಓಡಾಡುತ್ತದೆ.ಹೀಗೆ ಮಾತಾಡುವ ಡಸ್ಟ್ ಬಿನ್ ಕಂಡು ಹಿಡಿದ ಬೈಂದೂರು ತಾಲೂಕಿನ ನಾವುಂದ ಅರೆಹೊಳೆ ಗ್ರಾಮದ ಕಂತಿಹೊಂಡ ನಿವಾಸಿ ಸಯ್ಯದ್ ಶಯಾನ್ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದರೂ ವಿಜ್ಞಾನದ ಮಾಡೆಲ್ ತಯಾರಿಸಿ ಭೇಷ್ ಎಂದು ಕರೆಸಿಕೊಳ್ಳಲು ಇಚ್ಛಾಶಕ್ತಿ ಹಾಗೂ ಸಾಮಾಜಿಕ ಬದ್ಧತೆ ಕಾರಣ. ಮನೆ ನಿರ್ಮಾಣದಲ್ಲಿ ಶಿಲೆಕಲ್ಲು ಕೆಲಸ ಮಾಡುವ ಖಾದರ್ ಸಾಹೇಬ್, ಗೃಹಿಣಿ ಜಮೀಲಾ ದಂಪತಿಯ ಪುತ್ರ. ಒಂದನೇ ತರಗತಿಯಿಂದ ಪಿಯುಸಿ ತನಕ ಸರಕಾರಿ ಶಾಲೆ-ಕಾಲೇಜಿನಲ್ಲಿ ವಿದ್ಯಾಭ್ಯಾಸ. ಬಾಲ್ಯದಲ್ಲಿಯೇ ಎಲೆಕ್ಟ್ರಾನಿಕ್ ವಸ್ತು, ಯಂತ್ರಗಳ ಬಗ್ಗೆ ಕುತೂಹಲ. ಇಂತಹ ವಸ್ತುಗಳನ್ನಿಟ್ಟುಕೊಂಡು ಏನಾದರೂ ಸಾಧಿಸುವ ಹಂಬಲ. ಶಾಲೆಗಳಲ್ಲಿನ ಪ್ರಾಜೆಕ್ಟ್ ವಸ್ತುಗಳನ್ನು ತಾನೇ ತಯಾರಿಸುವ ಕೌಶಲ.
ಸಯ್ಯದ್ ಶಯಾನ್ ಕಷ್ಟಜೀವಿ. ಕಾಲೇಜಾದ ಬಳಿಕ ಪಾರ್ಟ್ ಟೈಂ ಕೆಲಸಕ್ಕೆ ಹೋಗುತ್ತಾರೆ. ತ್ರಾಸಿ ಸಮುದ್ರದ ಬಳಿ ಹಾಗೂ ಹಬ್ಬಗಳಲ್ಲಿ ಸಿಹಿಜೋಳ ಮಾರುತ್ತಿದ್ದ ಶಯಾನ್ ಇದೀಗ ವೆಲ್ಡಿಂಗ್, ಫೈಬರ್ ಸೀಲಿಂಗ್ ನಿರ್ಮಾಣ, ಸಿಸಿ ಟಿವಿ ನಿರ್ವಹಣೆ ಹಾಗೂ ಎಲೆಕ್ಟ್ರೀಶಿಯನ್ ಆಗಿ ರಾತ್ರಿ ತನಕ ಕೆಲಸ ಮಾಡಿ ಮನೆಯ ಪುಟ್ಟ ಕೊಠಡಿಯಲ್ಲಿ ಆಸಕ್ತಿದಾಯಕ ಕ್ಷೇತ್ರವಾದ ಮಾಡೆಲ್ ತಯಾರಿಯಲ್ಲಿ ಮಗ್ನರಾಗುತ್ತಾರೆ. ಬರುವ ಆದಾಯದಲ್ಲಿ ಸ್ವಲ್ಪ ಮೊತ್ತ ಮನೆ ನಿರ್ವಹಣೆಗೆ ನೀಡಿ, ಉಳಿದ ಹಣವನ್ನು ವಿದ್ಯಾಭ್ಯಾಸ ಹಾಗೂ ತನ್ನ ಆಸಕ್ತಿಯ ಕ್ಷೇತ್ರಕ್ಕೆ ವಿನಿಯೋಗಿಸುತ್ತಾರೆ. ರೋಬೋಟಿಕ್ ಡಸ್ಟ್ ಬಿನ್
ಆಧುನಿಕ ಜೀವನಶೈಲಿಯಿಂದ ತ್ಯಾಜ್ಯದ ಸಮಸ್ಯೆ ಎಲ್ಲೆಡೆ ಇದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯ ನಡೆದರೂ ಸಾಕಾಗುತ್ತಿಲ್ಲ. ಆಧುನಿಕತೆ ಸ್ಪರ್ಷದೊಂದಿಗೆ ನಿರ್ಮಿಸಿದ “ರೋಬೋಟಿಕ್ ಡಸ್ಟ್ ಬಿನ್’ ಎಲ್ಲರನ್ನೂ ಆಕರ್ಷಿಸುತ್ತಿದೆ. ಅತ್ತಿತ್ತ ಓಡಾಡುತ್ತಾ ಕಸದ ವಿಚಾರದಲ್ಲಿ ಮಾತಾಡುತ್ತಾ ಜನಜಾಗೃತಿ ಮೂಡಿಸುವ ಜತೆಗೆ ಎರಡು ಕಣ್ಣುಗಳ ಚಲನ-ವಲನ ಈ ಆಧುನಿಕ ಯಂತ್ರದ ವಿಶೇಷಗಳು.
Related Articles
ಯಂತ್ರ ಸಿದ್ದಪಡಿಸಲು 120 ಲೀ. ಸಾಮರ್ಥಯದ ಕಸದ ಬುಟ್ಟಿ ಬಳಸಿದ್ದು ಚಲನೆಗಾಗಿ ಸ್ಕ್ವೇರ್ ಗೇರ್ ಮೋಟಾರ್, ಗಾಲಿ ಚಕ್ರ ಅಳವಡಿಸಲಾಗಿದೆ. ಚಲನೆ, ಕಣ್ಣುಗಳ ಮಿಸುಕಾಟ, ಧ್ವನಿಗಾಗಿ ರಿಮೋಟ್ ಕಂಟ್ರೋಲ್, ಬ್ರಷ್ ಎಲೆಕ್ಟ್ರಾನಿಕ್ ಸ್ಪೀಡ್ ಕಂಟ್ರೋಲರ್, ಸರ್ವೋ ಮೋಟಾರ್, ಲಿಥಿಯಂ ಅಯಾನ್ ಬ್ಯಾಟರಿ, ಲಿಪ್ಪೋ ಬ್ಯಾಟರಿ, ಬ್ಲೂಟೂತ್, ಮೈಕ್, ಸ್ಪೀಕರ್ ಅಳವಡಿಸಲಾಗಿದೆ. ಈ ಕಸದ ಬುಟ್ಟಿ ರೇಡಿಯೋ ಫ್ರೀಕ್ವೆನ್ಸಿ ಮೂಲಕ ಕಾರ್ಯನಿರ್ವಹಿಸುತ್ತದೆ. ಓರ್ವ ಈ ಯಂತ್ರವನ್ನು ನಿರ್ವಹಿಸಬಹುದು.ಅಂದಾಜು 60 ಸಾವಿರಕ್ಕೂ ಅಧಿಕ ವೆಚ್ಚವಾಗಿದೆ.
Advertisement
ವಿಶೇಷಗಳುಜನ ಸೇರಿರುವ ಕಡೆ ಹೋಗಿ ಜನರಿಗೆ ಅವರದ್ದೇ ಶೈಲಿಯಲ್ಲಿ ಮನರಂಜನೆ ಕೊಡುತ್ತಾ ಮಾತಿನ ಕೊನೆಯಲ್ಲಿ ಜನರಿಗೆ ಕಸವನ್ನು ಕಸದ ಬುಟ್ಟಿಗೆ ಹಾಕಲು ಪ್ರೇರೇಪಿಸುತ್ತದೆ. ಮನುಷ್ಯರ ತರಹ ಮುಖದ ಹಾವ ಭಾವಗಳನ್ನು ತೋರಿಸುತ್ತದೆ ಹಾಗೂ ಮಾತನಾಡುತ್ತದೆ. ಮಲ್ಪೆ ಬೀಚ್ ಹಾಗೂ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಈಗಾಗಲೇ ಈ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ. ಜನರಿಗೆ ಕಸದ ಬುಟ್ಟಿಯನ್ನು ಉಪಯೋಗಿಸಿ ಎಂದು ಪ್ರೇರೇಪಿಸುವುದು ಈ ವಿಶಿಷ್ಟ ಯಂತ್ರದ ಕೆಲಸ. ಪ್ರಾತ್ಯಕ್ಷಿಕೆ
ಕಸವನ್ನು ಕಸದ ಬುಟ್ಟಿಗೆ ಹಾಕಬೇಕು ಎನ್ನುವ ಅಲ್ಪ ಜ್ಞಾನವು ನಾಪತ್ತೆಯಾಗಿದೆ. ಈ ಸಮಸ್ಯೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಯಂತ್ರ ಸಿದ್ದಪಡಿಲಾಗಿದೆ. ಸಾಮಾಜಿಕ ಕಳಕಳಿಯಿಂದ ಈ ಕೆಲಸ ಮಾಡುತ್ತಿರುವೆ. ಮುಂದಿನ ದಿನದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಯಂತ್ರದ ಪ್ರಾತ್ಯಕ್ಷಿಕೆಯನ್ನು ನೀಡುವ ಚಿಂತನೆಯಿದೆ. ಮುಂದಿನ ದಿನಗಳಲ್ಲಿ “ರೋವರ್ ಯಂತ್ರ’ ಸಿದ್ಧಪಡಿಸಿ ಬೀಚ್ ಕ್ಲೀನಿಂಗ್ ಮೊದಲಾದ ಕೆಲಸಕ್ಕೆ ಬಳಸುವಂತೆ ಮಾಡಬೇಕೆಂದಿದೆ.
– ಸಯ್ಯದ್ ಶಯಾನ್, ಸಂಶೋಧಕ ವಿದ್ಯಾರ್ಥಿ