ಚಿತ್ತಾಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನ್ಯಾಯಬೆಲೆ ಅಂಗಡಿ ಡೀಲರ್‌ಗಳ ಸಂಘದ ಕಾರ್ಯಕರ್ತರು ಪಟ್ಟಣದಲ್ಲಿ ಶುಕ್ರವಾರ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಗೌರವಾಧ್ಯಕ್ಷ ವೀರಭದ್ರಯ್ಯ ಸಾಲಿಮಠ, ತಾಲೂಕು ಅಧ್ಯಕ್ಷ ರಾಮಲಿಂಗಪ್ಪ ಬಾನರ್ ಮಾತನಾಡಿ, ಸರ್ಕಾರದ ಕೆಲವು ನಿಲವುಗಳಿಂದ ಡೀಲರ್‌ಗಳು ಕಷ್ಟ ಪಡುವಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಅಳಲಿಗೆ ಸ್ಪಂದಿಸುತ್ತಾರೆ ಎಂಬ ಮನೋಭಾವನೆ ಹೊಂದ್ದಿದೇವೆ ಎಂದರು. ಮಾರ್ಚ್ ತಿಂಗಳೊಳಗಾಗಿ ಎಲ್ಲಾ ಡೀಲರ್ ಗಳು ಸ್ವಂತ ಖರ್ಚಿನಲ್ಲಿ ಲ್ಯಾಪ್ ಟ್ಯಾಪ್, ಪ್ರಿಂಟರ್ ಮತ್ತು ಯುಪಿಎಸ್ ಖರೀದಿಸಿ ಎಂದು ಆದೇಶ ಮಾಡಿರುವುದು ಎಷ್ಟು ಸರಿ ಎಂಬುದು ತಿಳಿಯುತ್ತಿಲ್ಲ.
ಖರೀದಿ ಮಾಡಲು ಸುಮಾರು 50 ಸಾವಿರ ರೂ. ವೆಚ್ಚ ತಗುಲುತ್ತಿದ್ದು, ಅಷ್ಟೊಂದು ಖರ್ಚು ಮಾಡಿ ಖರೀದಿಸಲು ನಮ್ಮಿಂದ ಸಾಧ್ಯವಾಗದ ಕಾರಣ ಸರ್ಕಾರವೇ ಎಲ್ಲ ಉಪಕರಣಗಳನ್ನು ನೀಡಬೇಕು. ಇಲ್ಲವಾದರೇ ಚೆಕ್‌ಲಿಸ್ಟ್ ಮೂಲಕ ಪಡಿತರ ಧಾನ್ಯ ವಿತರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಪಡಿತರದಾರರಿಗೆ ಆಹಾರ ಧಾನ್ಯದ ಬದಲು ನಗದು ಕೂಪನ್ ಜಾರಿಗೊಳಿಸಿರುವುದನ್ನು ತಕ್ಷಣವೇ ಹಿಂಪಡೆಯಬೇಕು. ಪ್ರತಿ ಕ್ವಿಂಟಾಲ್ ಗೆ ನೀಡುವ 70 ರೂ. ಕಮೀಷನ್ ಬದಲಾಗಿ 150 ರೂ.ಗೆ ಹೆಚ್ಚಿಸಬೇಕು. ಕರ್ನಾಟಕ ರಾಜ್ಯ ಲೋಡಿಂಗ್ ಮತ್ತು ಅನ್ ಲೋಡಿಂಗ್ ಕಾರ್ಮಿಕರಿಗೆ ಕೇಂದ್ರ ಸರ್ಕಾರ ನೀಡುತ್ತಿರುವ ಮಾದರಿಯಲ್ಲೇ ಎಲ್ಲಾ ಕಾರ್ಮಿಕರಿಗೆ ಕೊಡಬೇಕು ಎಂದು ಮನವಿ ಮಾಡಿದರು.
ಪಟ್ಟಣದ ಕಪಡಾ ಬಜಾರದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ತಹಶೀಲ್ದಾರ ಕಚೇರಿಗೆ ತೆರಳಿ ಗ್ರೇಡ್-2 ತಹಶೀಲ್ದಾರ ರವೀಂದ್ರ ದಾಮಾ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.
ಪ್ರಧಾನ ಕಾರ್ಯದರ್ಶಿ ಧನರಾಜ ಯಾದವ್ ಪದಾಧಿಕಾರಿಗಳಾದ ನಾಗರಾಜ ಮೋಟನಳ್ಳಿ, ನಾಗರಾಜ ಹೂಗಾರ್, ಕಲ್ಯಾಣರಾವ್ ಡೊಣ್ಣುರ, ಸುಭಾಸ ತೊನಸಳ್ಳಿ, ಶಿವಾನಂದಯ್ಯ ಸ್ವಾಮಿ, ಪ್ರಕಾಶ ಗಂಜಿ, ಲಿಂಗಣ್ಣ ಮಲಬೋ, ಸಿದ್ದಣ್ಣಗೌಡ ಆರ್.ಡಿ, ಸರ್ವೇಶ್ವರ ಹೂಗಾರ, ಬಸವರಾಜ ಕೊಲ್ಲೂರ್,
ದೇವಿಂದ್ರ ಗಂಗಾಣಿ, ಚಂದ್ರು, ಮಲ್ಕಪ್ಪ ಕದ್ದರಗಿ, ಎಕ್ಬಾಲ್ ಸೌದಾಗರ್, ನೀಲಕಂಠ ಮೊಗಲಾ, ಶರಣಯ್ಯ ಕುಡಿ, ಹಮಾಲರ ಅಧ್ಯಕ್ಷ ಸುಭಾಸ ಕಾಶಿ, ಸಂತೋಷ ಪಾಟೀಲ್, ಬಸವರಾಜ ಲಾಳಿ, ಮುನ್ನಾ ಪಟೇಲ್, ಮೇಘನಾಥ, ಮಹ್ಮದ್ ರಹೀಮ, ಅಹ್ಮದ್ ಪಟೇಲ್, ಗುರುನಾಥ ಗುದಗಲ್, ಶಿವಕುಮಾರ, ಠಾಕೋರ್ ಇದ್ದರು.