Advertisement

ಪ್ರತಿಮೆಯಾದ ಪತಿ

02:08 PM Apr 28, 2020 | mahesh |

ರಾಬರ್ಟ್‌ ಬಾಯ್ಲ್, ಜಾನ್‌ ಡಾಲ್ಟನ್‌, ಆಂಟನಿ ಲವೋಸಿಯೇ ಮುಂತಾದ 18ನೇ ಶತಮಾನದ ಪ್ರಸಿದ್ಧ ಭೌತ- ರಸಾಯನ ವಿಜ್ಞಾನಿಗಳ ಸಾಲಲ್ಲಿ ನಿಲ್ಲುವ ಮತ್ತೂಬ್ಬ ಐರೋಪ್ಯ ಪ್ರತಿಭೆ: ಜೋನ್ಸ್ ಜೇಕಬ್‌ ಬರ್ಜೆಲಿಯಸ್‌. ತನ್ನ 29ನೇ ವಯಸ್ಸಿನಲ್ಲೇ ಆತ ಪ್ರತಿಷ್ಠಿತ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್ ಸೈನ್ಸಸ್‌ನ ಸದಸ್ಯನಾಗಿದ್ದ. ಸಿರಿಯಂ ಮತ್ತು ಸೆಲೆನಿಯಂ ಎಂಬ ಎರಡು ಧಾತುಗಳನ್ನು ಕಂಡುಹಿಡಿದವನು ಬರ್ಜೆಲಿಯಸ್‌. ಹಾಗೆಯೇ, ಬೇರೆ ಸಂಯುಕ್ತಗಳಿಂದ ಸಿಲಿಕಾನ್‌ ಮತ್ತು ಥೋರಿಯಂ ಅನ್ನು ಮೊದಲ ಬಾರಿಗೆ ಪ್ರತ್ಯೇಕಿಸಿ ತೆಗೆದವನೂ ಆತನೇ. ಆತನ ವಿದ್ಯಾರ್ಥಿಗಳು ಮುಂದೆ ಲಿಥಿಯಂ, ಲ್ಯಾಂಥನಮ್‌ ಮತ್ತು ವೆನೇಡಿಯಂ ಎಂಬ ಮತ್ತೂ ಮೂರು ಧಾತುಗಳನ್ನು ಅನ್ವೇಷಿಸಿದರು.

Advertisement

ವಿಜ್ಞಾನದಲ್ಲಿ ಸರ್ವೇಸಾಮಾನ್ಯವಾಗಿ ಬಳಕೆಯಾಗುವ ಕೆಟಲಿಸಿಸ್‌, ಪಾಲಿಮರ್‌, ಐಸೋಮರ್‌, ಪೊ›ಟೀನ್‌, ಅಲ್ಲೋಟ್ರೋಪ್‌ – ಮುಂತಾದ ಶಬ್ದಗಳನ್ನು ಮೊದಲ ಬಾರಿಗೆ ಟಂಕಿಸಿ ಬಳಕೆಗೆ ತಂದವನು ಬರ್ಜೆಲಿಯಸ್‌. ಇವೆಲ್ಲ ಸಾಧನೆಗಳಿಗಾಗಿ ಆತನನ್ನು ಸ್ವೀಡಿಷ್‌ ಕೆಮಿಸ್ಟ್ರೀಯ ಪಿತಾಮಹ ಎಂದೂ ಕರೆಯುವ ಸಂಪ್ರದಾಯವುಂಟು. ಇಡೀ ಯುರೋಪಿನ ವಿಜ್ಞಾನ ವಲಯವನ್ನು ಬರ್ಜೆಲಿಯಸ್‌ ಎಷ್ಟು ಗಾಢವಾಗಿ ಪ್ರಭಾವಿಸಿದನೆಂದರೆ ಇಂದಿಗೂ ಪ್ರತಿವರ್ಷದ ಆಗಸ್ಟ್ 20ನ್ನು ಸ್ವೀಡನ್ನಿನಲ್ಲಿ ಬರ್ಜೆಲಿಯಸ್‌ ದಿನ ಎಂದು ಆಚರಿಸುತ್ತಾರೆ.

ಬಹುತೇಕ ಎಲ್ಲ ವಿಜ್ಞಾನಿಗಳಂತೆ ಬರ್ಜೆಲಿಯಸ್‌ ಕೂಡ ದಿನಕ್ಕೆ ಹದಿನೆಂಟಿಪ್ಪತ್ತು ತಾಸುಗಳಷ್ಟು ದುಡಿಯುತ್ತಿದ್ದುದರಿಂದ ಮೂವತ್ತರ ಎಳವೆಯಲ್ಲೇ ಆತನಿಗೆ ತಲೆಶೂಲೆ ಬಾಧಿಸತೊಡಗಿತು. ಅತಿಯಾದ ಒತ್ತಡದಿಂದಾಗಿ ನರವ್ಯೂಹ ಸಂಬಂಧೀ ಕಾಯಿಲೆಗಳೂ ಅಮರಿಕೊಂಡವು. ನೀವು ಕಡ್ಡಾಯವಾಗಿ ಒಂದಷ್ಟು ದಿನ ವಿರಾಮ ಪಡೆದುಕೊಂಡು ಪರವೂರಲ್ಲಿ ಎಲ್ಲಾದರೂ ಸುತ್ತಾಡಿಕೊಂಡು ಬನ್ನಿ ಎಂದು ವೈದ್ಯರು ಶಿಫಾರಸು ಮಾಡಿದಾಗ ಬರ್ಜೆಲಿಯಸ್‌ ಫ್ರಾನ್ಸಿಗೆ ಹೋದ; ಅಲ್ಲಿನ ವಿಜ್ಞಾನ ಸಂಸ್ಥೆಗಳ ಪ್ರಯೋಗಾಲಯಗಳಲ್ಲಿ ಸಂಶೋಧನೆ ಮುಂದುವರಿಸುವುದಕ್ಕೆ! ಬರ್ಜೆಲಿಯಸ್‌ನ ಜೀವನವು ಪ್ರಯೋಗ, ಸಂಶೋಧನೆ, ಅಧ್ಯಯನ, ಅಧ್ಯಾಪನಗಳಿಂದ ಅದೆಷ್ಟು ನಿಬಿಡವಾಗಿತ್ತೆಂದರೆ ಆತನಿಗೆ ಮದುವೆಯಾಗಬೇಕೆಂಬುದೂ ಮರೆತುಹೋಗಿತ್ತಂತೆ! ಜೊತೆಗಿರಲು ಜೀವನ ಸಂಗಾತಿ ಬೇಕು ಎಂದು ಅವನಿಗೆ ಅನ್ನಿಸಿದ್ದು 56ನೇ ವಯಸ್ಸಲ್ಲಿ. ಮದುವೆಯಾಗಿ ಬಂದ ಹೆಣ್ಣು, ಬೆಟ್ಟಿ ಪಾಪ್ಪಿಯಸ್‌, ಆತನಿಗಿಂತ ವಯಸ್ಸಲ್ಲಿ 33 ವರ್ಷ ಚಿಕ್ಕವಳು!

ಪತಿಪತ್ನಿಯರಾಗಿ ಅವರಿಬ್ಬರು ಜೊತೆಗಿದ್ದುದು 12 ವರ್ಷ. ತನ್ನ 68ನೆಯ ವಯಸ್ಸಿನಲ್ಲಿ ಬರ್ಜೆಲಿಯಸ್‌ ತೀರಿಕೊಂಡ. ಅದಾಗಿ ಹಲವು ವರ್ಷಗಳು ಕಳೆದ ಮೇಲೆ, ಯಾವುದೋ
ಚಹಾಕೂಟದಲ್ಲಿ ಮಾತಿಗೆ ಸಿಕ್ಕವರೊಬ್ಬರು ಬೆಟ್ಟಿಯಲ್ಲಿ ಔಪಚಾರಿಕವಾಗಿ, “ನಿಮ್ಮ ಗಂಡ ಏನು ಮಾಡುತ್ತಾರೆ?’ ಎಂದು ಕೇಳಿದರಂತೆ. ಬೆಟ್ಟಿ ಹೇಳಿದಳಂತೆ: “ನನ್ನವರಾ? ಅವರು ಬರ್ಜೆಲಿ ಉದ್ಯಾನದಲ್ಲಿ ಪ್ರತಿಮೆಯಾಗಿ ನಿಂತಿದ್ದಾರೆ.

ರೋಹಿತ್‌ ಚಕ್ರತೀರ್ಥ

Advertisement
Advertisement

Udayavani is now on Telegram. Click here to join our channel and stay updated with the latest news.

Next