ಬೆಂಗಳೂರು: ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ(ಐಜಿಐಸಿಎಚ್)ಯಲ್ಲಿ ಮಕ್ಕಳ ರಕ್ತದ ಕ್ಯಾನ್ಸರ್ ಸೇರಿದಂತೆ ಕೆಲ ಅಪರೂಪದ ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಮಕ್ಕಳ ರಕ್ತದ ಕ್ಯಾನ್ಸರ್ ಸೇರಿದಂತೆ ಕೆಲ ಅಪರೂಪದ ಕಾಯಿಲೆಗಳಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಒದಗಿಸಲು 100 ಕೋಟಿ ರೂ. ವೆಚ್ಚದಲ್ಲಿ ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಯೋಜನೆ ರೂಪಿಸಲಾಗಿದೆ.
ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಇದುವರೆಗೆ ಮಕ್ಕಳ ಅಪರೂಪದ ಕಾಯಿಲೆಗಳಿಗೆ ಕರ್ನಾಟಕದಲ್ಲಿ ಚಿಕಿತ್ಸೆ ಒದಗಿಸಲು ಸೂಕ್ತ ವ್ಯವಸ್ಥೆಗಳು, ಮೆಡಿಕಲ್ ಉಪಕರಣಗಳು, ತಜ್ಞ ವೈದ್ಯರ ಕೊರತೆ ಎದುರಾಗಿತ್ತು. ಹೀಗಾಗಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಈ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಲವು ಬಗೆಯ ಆಧುನಿಕ ಚಿಕಿತ್ಸೆಗಳು ಲಭ್ಯವಿರಲಿವೆ. ಮೂತ್ರಪಿಂಡ ಹಾಗೂ ಲಿವರ್ ಸಮಸ್ಯೆ ಅನುಭವಿಸುತ್ತಿರುವ ಮಕ್ಕಳಿಗಾಗಿ ನಿರ್ಮಿಸಲಾಗುತ್ತಿರುವ ಅಂಗಾಂಗ ಕಸಿ ಶಸ್ತ್ರ ಚಿಕಿತ್ಸಾ ಘಟಕವು ಹಲವು ವಿಶೇಷತೆ ಒಳಗೊಂಡಿದೆ. ಜತೆಗೆ, ಮಕ್ಕಳ ರಕ್ತದ ಕ್ಯಾನ್ಸರ್ ಸೇರಿದಂತೆ ಮಕ್ಕಳಿಗೆ ಸಂಬಂಧಿಸಿದ ಅಪರೂಪದ ಕಾಯಿಲೆಗಳಿಗೆ ಅಸ್ಥಿಮಜ್ಜೆ ಕಸಿ ಚಿಕಿತ್ಸೆಯು ಲಭ್ಯವಿರಲಿದೆ.
ಸುಸಜ್ಜಿತ ಆಧುನಿಕ ಸವಲತ್ತುಗಳನ್ನು ಒಳಗೊಂಡಿರುವ ಬೋನ್ ಮ್ಯಾರೋ ಟ್ರಾನ್ಸ್ ಪ್ಲೆಂಟ್ ಘಟಕ ನಿರ್ಮಿಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಚಿಕಿತ್ಸೆಗಳಿಗೆ ಲಕ್ಷ-ಲಕ್ಷ ರೂ. ವ್ಯಯಿಸಬೇಕಾಗುತ್ತದೆ. ಆದರೆ, ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಅತ್ಯಂತ ರಿಯಾಯಿತಿ ದರದಲ್ಲಿ ತಜ್ಞ ವೈದ್ಯರಿಂದ ಚಿಕಿತ್ಸೆಗಳು ಲಭ್ಯವಿರಲಿದೆ ಎಂದು ಇಂದಿರಾಗಾಂಧಿ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್‌ನ ನಿರ್ದೇಶಕ ಡಾ.ಕೆ.ಎಸ್.ಸಂಜಯ್ “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನ ಕಾಮಗಾರಿಯು ಅಂತಿಮ ಹಂತದಲ್ಲಿದೆ. ಕೆಲ ತಿಂಗಳುಗಳಲ್ಲೇ ಮಕ್ಕಳ ಚಿಕಿತ್ಸೆಗೆ ಸಿದ್ಧವಾಗಲಿದೆ. 9 ಅಂತಸ್ತಿನ 500 ಹಾಸಿಗೆಗಳ ಕಟ್ಟಡ ಇದಾಗಿದ್ದು, ಈಗಾಗಲೇ 8ನೇ ಅಂತಸ್ತಿನವರೆಗಿನ ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಇರುವ 9ನೇ ಅಂತಸ್ತಿನ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ದೇಶದ ಮೂಲೆ-ಮೂಲೆಗಳಿಂದ ಮಕ್ಕಳನ್ನು ಚಿಕಿತ್ಸೆಗಾಗಿ ಇಂದಿರಾ ಗಾಂಧಿ ಆಸ್ಪತ್ರೆಗೆ ಕರೆತರುತ್ತಾರೆ. ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳು ಆಸ್ಪತ್ರೆಗೆ ಬಂದರೆ ಇಲ್ಲಿ ಹಾಸಿಗೆ ಕೊರತೆ ಹಾಗೂ ಕೆಲ ಚಿಕಿತ್ಸೆಗಳಿಗೆ ವ್ಯವಸ್ಥೆಗಳಿಲ್ಲದೇ ಸಮಸ್ಯೆ ಎದುರಾಗುತ್ತಿದ್ದವು. ಆದರೆ, ಇದೀಗ ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನಿಂದ ಈ ಸಮಸ್ಯೆ ಬಗೆಹರಿಯಲಿವೆ ಎಂದು ತಿಳಿಸುತ್ತಾರೆ.
ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳು : ಸೂಪರ್ ಸ್ಪೆಷಾಲಿಟಿ ಬ್ಲಾಕ್‌ನಲ್ಲಿ ಹೊರ ರೋಗಿಗಳ ವಿಭಾಗ, ಪ್ರಯೋಗಾಲಯ, ಶಸ್ತ್ರಚಿಕಿತ್ಸಾ ಕೊಠಡಿಗಳು, ಸಾಮಾನ್ಯ ವಾರ್ಡ್, ತೀವ್ರ ನಿಗಾ ಘಟಕ, ನವಜಾತ ಶಿಶುಗಳ ನಿಗಾ ಘಟಕ ಸೇರಿದಂತೆ ಮಕ್ಕಳ ಚಿಕಿತ್ಸೆಗೆ ಬೇಕಾಗಿರುವ ಆಧುನಿಕ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿದೆ. ಇದೇ ಕಟ್ಟಡದಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಫೀಟಲ್ ಮೆಡಿಕಲ್ ವಿಭಾಗದಲ್ಲಿ ಶಿಶುಗಳು ಗರ್ಭದಲ್ಲಿರುವಾಗಲೇ ಆರೋಗ್ಯ ಸಮಸ್ಯೆ ಬಗ್ಗೆ ಪರಿಶೀಲಿಸಿ ಯಾವುದಾದರೂ ಸಮಸ್ಯೆಯಿದ್ದರೆ ಗರ್ಭದಲ್ಲಿರುವಾಗಲೇ ಚಿಕಿತ್ಸೆ ಒದಗಿಸಲು ಅವಕಾಶಗಳಿವೆ. ಹಲವಾರು ಸವಲತ್ತುಗಳನ್ನೊಳಗೊಂಡ ಸುಧಾರಿತ ವೈದ್ಯಕೀಯ ಉಪಕರಣವಿರುವ ಪ್ರಯೋಗಾಲಯ ನಿರ್ಮಾಣವಾಗುತ್ತಿದೆ.
ಮಕ್ಕಳಿಗಾಗಿ ಇರುವ ಏಕೈಕ ಆರೋಗ್ಯ ಸಂಸ್ಥೆ : ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯು ವಿಶೇಷವಾಗಿ ಮಕ್ಕಳಿಗಾಗಿಯೇ ಇರುವ ರಾಜ್ಯದ ಏಕೈಕ ಆರೋಗ್ಯ ಸಂಸ್ಥೆಯಾಗಿದೆ. ಉಚಿತವಾಗಿ ಅಥವಾ ಅತ್ಯಲ್ಪ ಶುಲ್ಕವನ್ನು ಪಡೆದು ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಿಂದ ಬರುವ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದೆ. ಪ್ರತಿದಿನ ಸುಮಾರು 500 ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದು, ಆ ಪೈಕಿ 70-80 ಮಕ್ಕಳು ಒಳರೋಗಿಗಳಾಗಿ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಶಿಶು ಶಸ್ತ್ರಚಿಕಿತ್ಸೆ, ಮಕ್ಕಳ ನರರೋಗ ಚಿಕಿತ್ಸೆ, ಮಕ್ಕಳ ಅಸ್ಥಿ ಚಿಕಿತ್ಸೆ, ಕ್ಲಿನಿಕಲ್ ಜೆನೆಟಿಕ್ಸ್, ಹೃದ್ರೋಗ ಶಾಸ್ತ್ರ ಸೇರಿದಂತೆ 22 ಬಗೆಯ ಚಿಕಿತ್ಸೆಗಳನ್ನು ಸಂಸ್ಥೆಯು ನೀಡುತ್ತಿದೆ. 10 ಒಳರೋಗಿ ವಿಭಾಗ ಹೊಂದಿದೆ.
-ಅವಿನಾಶ್ ಮೂಡಂಬಿಕಾನ