ನವದೆಹಲಿ: ಗಡಿಯಲ್ಲಿ ಸ್ನೆ„ಪರ್‌ಗಳನ್ನು ಬಳಸಿಕೊಂಡು ಭಾರತೀಯ ಯೋಧರ ಮೇಲೆ ದಾಳಿ ನಡೆಸುತ್ತಿದ್ದ ಪಾಕಿಸ್ತಾನಕ್ಕೆ ಭಾರತವು ತಕ್ಕ ಪಾಠ ಕಲಿಸಿದ್ದು, ಪಾಕ್ ಭಾರೀ ಬೆಲೆ ತೆತ್ತಿದೆ ಎಂದು ಬಿಎಸ್‌ಎಫ್ ನಿರ್ದೇಶಕ ಆರ್ ಕೆ ಮಿಶ್ರಾ ಹೇಳಿದ್ದಾರೆ. ಆದರೆ, ಈ ದಾಳಿ ನಡೆದ ದಿನಾಂಕ, ಸ್ಥಳದ ಬಗ್ಗೆ ಅವರು ವಿವರ ನೀಡಿಲ್ಲ. ಶುಕ್ರವಾರ ಬಿಎಸ್‌ಎಫ್ 54ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶೀಯವಾಗಿ ಅಭಿವೃದ್ಧಿಪಡಿಸಿದ ಗುಂಡು ನಿರೋಧಕ ಬಂಕರ್‌ಗಳನ್ನು ಬಳಸಿಕೊಂಡು ನಮ್ಮ ಸೇನೆಯನ್ನು ರಕ್ಷಿಸಿದ್ದೇವೆ. ಅಷ್ಟೇ ಅಲ್ಲ, ಗಡಿಯಾಚೆಗಿನ ಪಾಕ್ ನೆಲೆಗಳ ಮೇಲೆ ಹಠಾತ್ ದಾಳಿ ನಡೆಸಿದ್ದೇವೆ. ಇದರಿಂದ ಪಾಕ್‌ಗೆ ಭಾರೀ ನಷ್ಟ ಉಂಟಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಅಷ್ಟೇ ಅಲ್ಲ, ಪಾಕಿಸ್ತಾನದಲ್ಲಿ ಗಡಿ ಸಮೀಪ ಇರುವ ಗ್ರಾಮಗಳ ಭೌಗೋಳಿಕ ಮತ್ತು ಆರ್ಥಿಕ ವಿಶ್ಲೇಷಣೆಯನ್ನೂ ನಡೆಸುತ್ತಿದ್ದೇವೆ. ಇದರಿಂದ ಈ ಪ್ರದೇಶಗಳಲ್ಲಿ ಉಂಟಾಗುವ ಯಾವುದೇ ಬದಲಾವಣೆಯ ಬಗ್ಗೆ ಸರ್ಕಾರದ ಗಮನಕ್ಕೆ ತರಬಹುದಾಗಿದೆ ಎಂದು ಮಿಶ್ರಾ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ಪಾಕ್ ಸೇನೆಯು ಒಳನು ಸುಳುವಿಕೆ ಪ್ರಯತ್ನಗಳು, ಸ್ನೆ„ಪರ್ ದಾಳಿ ಮತ್ತು ಅಪ್ರಚೋದಿತ ಗುಂಡಿನ ದಾಳಿ ನಡೆಸುತ್ತಿದೆ. ಹೀಗಾಗಿ ಭಾರತ ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ನಿರ್ಧರಿಸಿತು. ಪಾಕಿ ಸ್ತಾನದ ಯೋಧರನ್ನು ಗುರಿಪಡಿಸಿ ನಾವು ದಾಳಿ ನಡೆಸಿದೆವು. ಇದರಿಂದ ಪ್ರತಿ ದಾಳಿ ನಡೆಸಲು ಯೋಧರಿಗೆ ಸಾಧ್ಯವಾಗ ದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಮಿಶ್ರಾ ವಿವರಿಸಿದ್ದಾರೆ.
ಪಾಕ್ ಜಾತ್ಯತೀತ ರಾಷ್ಟ್ರವಾಗಲಿ: ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರವಾಗಿರುವವರೆಗೂ ಭಾರತದೊಂದಿಗೆ ಸಂಬಂಧ ಸುಧಾರಿಸಿ ಕೊಳ್ಳಲಾಗದು. ಭಾರತದ ಜೊತೆಗೆ ಸಂಬಂಧ ಸುಧಾರಿಸುವ ಮನಸ್ಸಿದ್ದರೆ ಪಾಕ್ ಜಾತ್ಯತೀತ ರಾಷ್ಟ್ರವಾಗಬೇಕು ಎಂದು ಭೂ ಸೇನಾ ಮುಖ್ಯಸ್ಥ ಜ. ಬಿಪಿನ್ ರಾವತ್ ಹೇಳಿದ್ದಾರೆ. ತಾನು ಇಸ್ಲಾಮಿಕ್ ದೇಶ ಎಂದು ಕರೆದುಕೊಂಡರೆ ಇತರರಿಗೆ ಅಲ್ಲಿ ಅವಕಾಶವೇ ಇಲ್ಲ. ನಮ್ಮ ರೀತಿಯಲ್ಲೇ ಅವರು ಜಾತ್ಯತೀತರಾದರೆ, ಆಗ ಅವರಿಗೆ ಅವಕಾಶಗಳು ತೆರೆದುಕೊಳ್ಳುತ್ತವೆ ಎಂದು ರಾವತ್ ಹೇಳಿದ್ದಾರೆ.
ನಮಗೇನೂ ಕಷ್ಟವಾಗದು: ಬಿಎಸ್‌ಎಫ್: ಭಾರತ-ಪಾಕಿಸ್ತಾನದ ನಡುವೆ ನಿರ್ಮಾಣವಾಗುವ ಕರ್ತಾರ್ಪುರ ಕಾರಿಡಾರ್ ಅನ್ನು ನಿರ್ವಹಣೆ ಮಾಡುವುದು ಕಷ್ಟದ ಕೆಲಸವೇನೂ ಅಲ್ಲ. ನಾವು ಹಲವು ವರ್ಷಗಳಿಂದ ಅಟ್ಟಾರಿ -ವಾಘಾ ಗಡಿಯನ್ನು ನಿರ್ವಹಿಸುತ್ತಿದ್ದು, ಕರ್ತಾರ್ಪುರದ ಭದ್ರತೆ ಕಷ್ಟವೇನೂ ಆಗದು ಎಂದು ಬಿಎಸ್‌ಎ ಮುಖ್ಯಸ್ಥ ರಜನಿ ಕಾಂತ್ ಮಿಶ್ರಾ ತಿಳಿಸಿದ್ದಾರೆ. ಗಡಿಯು ಸಾರ್ವಜನಿಕರಿಗೆ ಮುಕ್ತವಾದರೆ, ಖಲಿಸ್ತಾನಿ ಉಗ್ರರ ಉಪಟಳ ಮತ್ತೆ ಶುರುವಾಗ ಬಹುದೇ? ಭದ್ರತೆ ಸಮಸ್ಯೆ ಉಂಟಾಗಬಹುದೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಮಿಶ್ರಾ ಈ ರೀತಿ ಉತ್ತರಿಸಿದ್ದಾರೆ.
ಭಾರತಕ್ಕೆ ಕರ್ತಾರ್ಪುರ ಗೂಗ್ಲಿ!
ಕರ್ತಾರ್ಪುರ ಕಾರಿಡಾರ್ ನಿರ್ಮಾಣ ವಿಚಾರದಲ್ಲಿ ಭಾರತಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೂಗ್ಲಿ ಎಸೆದಿದ್ದಾರೆ ಎಂದು ಪಾಕ್ ವಿದೇಶಾಂಗ ಸಚಿವ ಷಾ ಮೆಹಮೂದ್ ಖುರೇಶಿ ಹೇಳಿದ್ದಾರೆ. ಮಾತುಕತೆ ನಡೆಸಲು ಸಮ್ಮತಿಸದ ಭಾರತವನ್ನು ಪಾಕ್ ಈ ಮೂಲಕ ಬಗ್ಗಿಸಿದೆ. ಇದು ಇಮ್ರಾನ್ ಖಾನ್ ಎಸೆದ ಕರ್ತಾರ್ಪುರ ಗೂಗ್ಲಿ. ಇದಕ್ಕೆ ಸಿಕ್ಕ ಪ್ರತಿಫಲವನ್ನು ವಿಶ್ವವೇ ನೋಡಿದೆ. ನಮ್ಮೊಂದಿಗೆ ಮಾತುಕತೆ ನಡೆಸಲು ಬಯಸದ ಭಾರತ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತಾಯ್ತು ಎಂದಿದ್ದಾರೆ. ಆದರೆ ಕರ್ತಾರ್ಪುರ ವಿಚಾರವನ್ನು ನಾವು ಉಭಯ ದೇಶಗಳ ಮಾತುಕತೆ ನಿಟ್ಟಿನಲ್ಲಿ ಮುಂದಿಟ್ಟ ಹೆಜ್ಜೆ ಎಂದು ಪರಿಗಣಿಸುವಂತಿಲ್ಲ ಎಂದು ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಕರ್ತಾರ್ಪುರ ಕಾರಿಡಾರ್ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭದಲ್ಲಿ ಭಾರತದ ಇಬ್ಬರು ಸಚಿವರು ಭಾಗವಹಿಸಿದ್ದಲ್ಲದೆ, ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಕೂಡ ಪಾಲ್ಗೊಂಡಿದ್ದರು.