ಕನ್ನಡದಲ್ಲಿ ಈಗಾಗಲೇ ವಿಭಿನ್ನ ಶೀರ್ಷಿಕೆ ಇರುವ ಚಿತ್ರಗಳು ಬಂದಿವೆ, ಬರುತ್ತಲೂ ಇವೆ. ಆ ಸಾಲಿಗೆ “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಚಿತ್ರವೂ ಒಂದು. ಚಿತ್ರ ಈಗ ಬಿಡುಗಡೆಗೆ ಸಿದ್ಧವಾಗಿದ್ದು, ಇತ್ತೀಚೆಗೆ ಚಿತ್ರತಂಡ ಹಾಡುಗಳನ್ನು ಬಿಡುಗಡೆ ಮಾಡಿತು. ಪಂಚರಂಗಿ ಆಡಿಯೋ ಸಂಸ್ಥೆ ಮೂಲಕ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದ್ದು ವಿಶೇಷ.
ಅಂದು ಹಲವು ಗಣ್ಯರ ಉಪಸ್ಥಿತಿಯಲ್ಲಿ ಹಾಡುಗಳನ್ನು ಬಿಡುಗಡೆ ಮಾಡಿದ ಚಿತ್ರತಂಡ, ಮಾತು ಶುರುವಿಟ್ಟುಕೊಂಡಿತು. ಇದಕ್ಕೂ ಮುನ್ನ ಮೂರು ಹಾಡುಗಳನ್ನು ತೋರಿಸಲಾಯಿತು. ನಿರ್ದೇಶಕ ಕುಶಾಲ್ ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಪತ್ರಿಕೋದ್ಯಮದಲ್ಲಿ ಕಲಿತ ಪಾಠವನ್ನು ದೃಶ್ಯಕ್ಕೆ ಅಳವಡಿಸಿಕೊಳ್ಳಲಾಗಿದೆ. “ಇದೊಂದು ಜರ್ನಿ ಕಥೆ. ಇಲ್ಲಿ ಚಿಕ್ಕಣ್ಣ ಕನ್ನಡ ಪರ ಹೋರಾಟಗಾರರಾಗಿ ಎರಡು ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ರೀತಿಯ ವಿಶೇಷ ಕಥೆವುಳ್ಳ ಚಿತ್ರ’ ಎಂಬುದು ನಿರ್ದೇಶಕರ ಮಾತು.
ಅವಿನಾಶ್ ಚಿತ್ರದ ಹೀರೋ. ಅವರಿಗೆ ಒಂದೊಳ್ಳೆಯ ಕಥೆ, ಪಾತ್ರ ಇರುವ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಇತ್ತಂತೆ. ಅದರಂತೆ, ಅವರಿಗೆ ಈ ಚಿತ್ರ ಸಿಕ್ಕಿದೆ. ಚಿಕ್ಕಣ್ಣ ಅವರ ಗೆಳೆಯರಾಗಿ ಕಾಣಿಸಿಕೊಂಡಿದ್ದಲ್ಲದೆ, ಸಾಕಷ್ಟು ಸಲಹೆ ಕೊಟ್ಟದ್ದನ್ನೂ ಹೇಳಿಕೊಂಡರು ಅವಿನಾಶ್. ಅಂದು ಅರ್ಜುನ್ ಜನ್ಯಾ, ತಮ್ಮ ಹಾಡುಗಳನ್ನು ಬಿಡುಗಡೆ ಮಾಡಲು ಗುರು ಹಂಸಲೇಖ ಬಂದಿದ್ದಕ್ಕೆ ಖುಷಿಗೊಂಡರು. “ಅವರ ಹಾಡುಗಳನ್ನು ಕೇಳಿಕೊಂಡು ಬಂದವನು ನಾನು. ಇಲ್ಲಿ ಒಳ್ಳೆಯ ಹಾಡು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾಗಿ’ ಹೇಳಿಕೊಂಡರು ಅವರು.
ಯೋಗರಾಜ್ ಭಟ್ ಅವರು ಚಿತ್ರತಂಡಕ್ಕೆ ಶುಭ ಕೋರಿದರು. ಚಿಕ್ಕಣ್ಣ ಅವರಿಗಿಲ್ಲಿ ಒಳ್ಳೆಯ ಅನುಭವ ಆಗಿದೆಯಂತೆ. ಎಲ್ಲರೂ ಇಷ್ಟಪಟ್ಟು, ಕಷ್ಟಪಟ್ಟು, ಗುದ್ದಾಡಿಕೊಂಡೇ ಸಿನಿಮಾ ಮಾಡಲಾಗಿದೆ. ಯಾಕೆ ಕನ್ನಡಕ್ಕಾಗಿ ಒಂದನ್ನು ಒತ್ತಬೇಕು ಎಂಬುದನ್ನು ತಿಳಿಯಲು ಚಿತ್ರ ನೋಡಬೇಕು ಅಂದರು ಚಿಕ್ಕಣ್ಣ. ನಾಯಕಿ ಕೃಷಿ ತಾಪಂಡ ಅವರಿಗೆ ಇದೊಂದು ಹೊಸ ಬಗೆಯ ಚಿತ್ರವಾಗುವ ನಂಬಿಕೆ ಇದೆಯಂತೆ.
ಅಂದು ಹಂಸಲೇಖ ಅವರಿಗೆ ಪಂಚರಂಗಿ ಆಡಿಯೋ ಸಂಸ್ಥೆಯಿಂದ ಹಾರ್ಮೋನಿಯಂ ಕಾಣಿಕೆಯಾಗಿ ನೀಡಲಾಯಿತು. ಹಂಸಲೇಖ ಅವರು ಆ ಹಾರ್ಮೋನಿಯಂ ಮೂಲಕ “ಮುಂಗಾರು ಮಳೆ’ ಹಾಡಿನ ಸಾಲನ್ನು ನುಡಿಸಿದರು. “ಭಟ್ಟರ ಪಂಚರಂಗಿ ಆಡಿಯೋ ಸಂಸ್ಥೆ ಪ್ರಪಂಚ ರಂಗಿಯಾಗಲಿ, ಚಿತ್ರದ ಶೀರ್ಷಿಕೆ ಚೆನ್ನಾಗಿದೆ. ಚಿತ್ರವೂ ಪ್ರೇಕ್ಷಕರಿಗೆ ಇಷ್ಟವಾಗಬಹುದು. ನಮ್ಮ ಕನ್ನಡ ಚಿತ್ರಗಳು ಗಡಿಯಾಚೆ ಬೆಳೆಯಬೇಕು’ ಎಂದರು. ನಿರ್ಮಾಪಕ ಗೌತಮ್ ವೆಂಕಟೇಶ್ ಇತರರು ಇದ್ದರು.