Advertisement

ರೂಪ ರೂಪಗಳನು ದಾಟಿ…ದೂರದೊಂದು ತೀರದಿಂದ ಫೋನಿನಲ್ಲಿ ಪ್ರೇಮ, ಗಂಧ 

12:57 PM May 31, 2017 | Harsha Rao |

ಹುಡುಗಿಗೆ ಕಣ್ಣು ದಪ್ಪ, ಮುಖ ಚಿಕ್ಕದು, ಕಾಲ್ಬೆರಳು ವಕ್ರ, ನಡಿಗೆಯ ಶೈಲಿ ಸರಿಯಿಲ್ಲ, ಮೈಬಣ್ಣ ವಿಪರೀತ ಕಪ್ಪು. ಮುಖದ ತುಂಬಾ ಮೊಡವೆ… ಇಂಥವೇ ಸಣ್ಣ ಪುಟ್ಟ ಕಾರಣಗಳಿಗೆ ಮದುವೆ ನಿಂತು ಹೋಗುವುದರ ಬಗ್ಗೆ ಕೇಳಿದ್ದೀರಿ. ಆದರೆ ಈ ಸ್ಟೋರಿ ಡಿಫ‌ರೆಂಟು. ಹುಡುಗಿ ಆ್ಯಸಿಡ್‌ ದಾಳಿಗೆ ತುತ್ತಾಗಿದ್ದಾಳೆ. ಅವಳಿಗೆ ಈಗಾಗಲೇ 17 ಆಪರೇಷನ್‌ ಆಗಿದೆ. ಇನ್ನೂ 12 ಆಪರೇಷನ್‌ ಆಗಬೇಕು ಎಂಬ ಸಂಗತಿ ತಿಳಿದ ಮೇಲೂ ಅದೇ ಹುಡುಗೀನ ಮದುವೆಯಾಗಲು ಹೊರಟ ಹೆಂಗರುಳ ಹುಡುಗನ ಕಥೆ ಇದು.   

Advertisement

ಸ್ಥಳ: ಸಾಹಸ್‌(ಸಹಾಸ್‌) ಫೌಂಡೇಶನ್‌, ಮುಂಬೈ 
ಅದು ನಿರ್ಗತಿಕರ ಪಾಲಿನ ಆಶ್ರಯತಾಣ. ಅಲ್ಲಿ ಹೆಚ್ಚಾಗಿ, ಆ್ಯಸಿಡ್‌ ದಾಳಿಗೆ ತುತಾದ ಹೆಣ್ಣು ಮಕ್ಕಳೇ ಇದ್ದಾರೆ. ಅವರಿಗೆ ಧೈರ್ಯ ಹೇಳುವುದು, ಚಿಕಿತ್ಸೆ ಕೊಡಿಸುವುದು, ಕೌನ್ಸೆಲಿಂಗ್‌ ಏರ್ಪಡಿಸುವುದು, ಅಗತ್ಯ ಬಿದ್ದಾಗ ಕಾನೂನು ಸಲಹೆ ಕೊಡಿಸುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ನಿಮಗೂ ಒಳ್ಳೆಯ ದಿನ ಬಂದೇ ಬರುತ್ತೆ ಎಂದು ಆ್ಯಸಿಡ್‌ ದಾಳಿಗೆ ತುತ್ತಾದ ಹೆಣ್ಣು ಮಕ್ಕಳಿಗೆ ಧೈರ್ಯ ಹೇಳುವ ಮೂಲಕ ಅವರಿಗೆ ಜೀವನೋತ್ಸಾಹ ತುಂಬುವುದು ಸಾಹಸ್‌ ಫೌಂಡೇಶನ್‌ನ ಕೆಲಸ ಮತ್ತು ಧ್ಯೇಯ. ಅಲ್ಲಿಯೇ ಇದ್ದವಳು ಲಲಿತಾ ಬನ್ಸಿ. ಈಕೆಯೂ ಆ್ಯಸಿಡ್‌ ದಾಳಿಗೆ ತುತ್ತಾಗಿ ಆನಂತರದಲ್ಲಿ ಸಾಹಸ್‌ ಫೌಂಡೇಶನ್‌ನಲ್ಲಿ ಆಶ್ರಯ ಪಡೆದವಳೇ. ಅವತ್ತೂಂದು ದಿನ, ಪರಿಚಯದ ಒಬ್ಬರಿಗೆ ಈಕೆ ಫೋನ್‌ ಮಾಡಿದ್ದಾಳೆ. ಗಡಿಬಿಡಿಯಲ್ಲಿ ಒಂದು ನಂಬರನ್ನು ತಪ್ಪಾಗಿ ಒತ್ತಿಬಿಟ್ಟಿದ್ದರಿಂದ ಆ ಕರೆ ಮತಾöರಿಗೋ ಹೋಗಿದೆ.

ಮಾತು ಶುರುವಾದ ಕೆಲವೇ ಕ್ಷಣಗಳಲ್ಲಿ ಆಗಿರುವ ತಪ್ಪಿನ ಬಗ್ಗೆ ಲಲಿತಾಗೆ ಅರಿವಾಗಿದೆ. ಸಾರಿ, ರಾಂಗ್‌ ನಂಬರ್‌ ಎಂದು ಈಕೆ ಕಟ್‌ ಮಾಡಿದ್ದಾಳೆ. ಕಥೆ ಶುರುವಾಗುವುದೇ ಇಲ್ಲಿಂದ! 

ಹದಿನೈದು ದಿನಗಳ ನಂತರ, ಲಲಿತಾಳ ನಂಬರಿಗೆ ಒಂದು ಫೋನ್‌ ಬಂದಿದೆ. ಈಕೆ ಹಲೋ ಅನ್ನುತ್ತಿದ್ದಂತೆಯೇ “ನಾನು ರವಿ… ರವಿಶಂಕರ್‌ ಸಿಂಗ್‌. ಇಲ್ಲೇ ಮಲಾಡ್‌ನ‌ಲ್ಲಿದೀನಿ. ಸಿಸಿ ಟಿವಿ ಆಪರೇಟರ್‌ ಆಗಿ ಕೆಲಸ ಮಾಡ್ತಿದೀನಿ…’ ಅಂದಿದೆ ದನಿ. ಅದೆಷ್ಟೇ ಯೋಚಿಸಿದರೂ ತನ್ನ ಪರಿಚಯದವರ ಪೈಕಿ ಸಿಸಿಟಿವಿ ಆಪರೇಟರ್‌ ಆಗಿ ಕೆಲಸ ಮಾಡುವ ರವಿ ಎಂಬ ವ್ಯಕ್ತಿ ಇರುವುದು ಲಲಿತಾಗೆ ನೆನಪಾಗಲೇ ಇಲ್ಲ. ತುಂಬಾ ಸ್ಪಷ್ಟವಾಗಿ ಇದೇ ಸಂಗತಿ ಹೇಳಿದ ಲಲಿತಾ “ನೀವು ಯಾರು, ನನಗೆ ಯಾಕೆ ಫೋನ್‌ ಮಾಡಿದ್ರಿ ಎಂಬುದೇ ಗೊತ್ತಾಗ್ತಿಲ್ಲ’ ಅಂದಿದ್ದಾಳೆ. 

ಆಗ ಈ ಹುಡುಗ ಎಲ್ಲವನ್ನೂ ನೆನಪಿಸಿದ್ದಾನೆ. “ಹದಿನೈದು ದಿನಗಳ ಹಿಂದೆ ನೀವೇ ಫೋನ್‌ ಮಾಡಿದ್ರಿ. ಒಂದೂವರೆ ನಿಮಿಷ ಮಾತಾಡಿದ್ರಿ. ಆಮೇಲೆ, ಸಾರಿ, ರಾಂಗ್‌ನಂಬರ್‌, ಒಂದು ನಂಬರ್‌ನ ತಪ್ಪಾಗಿ ಪ್ರಸ್‌ ಮಾಡಿದ್ದರಿಂದ ಈ ಥರಾ ಎಡವಟ್ಟಾಗಿದೆ. ಸಾರಿ… ಎಂದು ಹೇಳಿ ಫೋನ್‌ ಕಟ್‌ ಮಾಡಿದ್ರಲ್ಲ..’ ಅಂದಿದ್ದಾನೆ. ಈಕೆ “ಹೌದು ಹೌದೂ… ಎಲ್ಲವೂ ನೆನಪಿದೆ’ ಎಂದಿದ್ದಾಳೆ. “ನಿಮ್ಗೆ ಬೇಜಾರಿಲ್ಲ ಅಂದ್ರೆ, ಫ್ರೀ ಆದಾಗ ಒಂದೊಂದು ನಿಮಿಷ ನಿಮಗೆ ಫೋನ್‌ ಮಾಡಬಹುದಾ?’- ಹುಡುಗನ ಈ ಕೋರಿಕೆಗೆ ಲಲಿತಾಳ ಕಡೆಯಿಂದ ಗ್ರೀನ್‌ಸಿಗ್ನಲ್‌ ಸಿಕ್ಕಿದೆ. 

Advertisement

ಆರಂಭದಲ್ಲಿ  ಗುಡ್‌ ಮಾರ್ನಿಂಗ್‌, ಗುಡ್‌ ಈವ್ನಿಂಗ್‌, ಕಾಫಿ ಆಯ್ತಾ, ಊಟ-ತಿಂಡಿ ಆಯ್ತಾ, ಇವತ್ತೇನ್‌ ವಿಶೇಷ?… ಎಂದಷ್ಟೇ ಮಾತಾಡುತ್ತಿದ್ದ ರವಿ- ಲಲಿತಾರ ಗೆಳೆತನ, ಫೋನ್‌ ಮಾತುಕತೆಯ ಮೂಲಕವೇ ದಿನೇ ದಿನೆ ಗಟ್ಟಿಯಾಗುತ್ತಾ ಹೋಯಿತು. ಕ್ರಮೇಣ, ಫೋನ್‌ ಮಾತುಕತೆಯ ಅವಧಿ ಕೂಡ ಹೆಚ್ಚುತ್ತಲೇ ಹೋಯಿತು. ಹೀಗಿರುವಾಗ ಅವತ್ತೂಂದು ದಿನ ಅದೂ ಇದೂ ಮಾತಾಡಿ ಕಡೆಗೆ ರವಿಶಂಕರ್‌ ಹೇಳಿಯೇ ಬಿಟ್ಟದ್ದಾನೆ. “ಲಲಿತಾ, ನಿನ್ನ ವಾಯ್ಸನಲ್ಲಿ ಏನೋ ಒಂಥರಾ ಆಕರ್ಷಣೆಯಿದೆ. ನಾನಂತೂ ನಿನ್ನ ಧ್ವನಿಗೆ ಮರುಳಾಗಿ ಹೋಗಿದೀನಿ. ಜೀವನಪೂರ್ತಿ ಈ ವಾಯ್ಸ ಕೇಳಿಕೊಂಡೇ ಬಾಳಬೇಕು ಅನ್ನೋದು ನನ್ನಾಸೆ. ನಾವಿಬ್ರೂ ಮದುವೆ ಆಗೋಣಾÌ?’ 

ಆನಂತರದಲ್ಲಿ ಏನೇನಾಯ್ತು ಎಂಬುದನ್ನು ಲಲಿತಾ ವಿವರಿಸುವುದು ಹೀಗೆ: ಉತ್ತರ ಪ್ರದೇಶದ ಅಜಂಗಡಕ್ಕೆ ಸಮೀಪದ ಒಂದು ಹಳ್ಳಿ ನನ್ನೂರು. 2012ರಲ್ಲಿ ನಮ್ಮ ಕುಟುಂಬದ ಮದುವೆ ನಡೀತಿತ್ತು. ಅವತ್ತು ಯಾವುದೋ ಕಾರಣಕ್ಕೆ ಕುಟುಂಬ ಸದಸ್ಯರ ನಡುವೆ ಮಾತಿಗೆ ಮಾತು ಬೆಳೆದು ಮದುವೆ ಮನೆಯಲ್ಲೇ ಜಗಳ ಶುರುವಾಯಿತು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಒಂದು ಗುಂಪಿನವರು ಮತ್ತೂಂದು ಗುಂಪಿನ ಯಜಮಾನರ ಮೇಲೆ ಆ್ಯಸಿಡ್‌ ಹಾಕಲು ಮುಂದಾದರು. ರಕ್ತ ಸಂಬಂಧಿಗಳು ಹೀಗೆ ಜಗಳ ಮಾಡುವುದನ್ನು ನೋಡುತ್ತಾ ಸುಮ್ಮನಿರಲು ನನ್ನಿಂದ ಸಾಧ್ಯವಾಗಲಿಲ್ಲ. ಜಗಳ-ಹೊಡೆದಾಟ ನಿಲ್ಲಿಸಬೇಕೆಂದು ನಾನು ಮಧ್ಯೆ ಹೋದೆ. ಆಗ, ಕುಟುಂಬದ ಹಿರಿಯರಿಗೆ ಎರಚಿದ ಆ್ಯಸಿಡ್‌, ಮಧ್ಯೆ ಪ್ರವೇಶಿಸಿದ ನನ್ನ ದೇಹದ ಮೇಲೆ ಬಿತ್ತು. ಪರಿಣಾಮ, ಅವತ್ತಿನವರೆಗೂ ಸುಂದರಿಯಾಗಿದ್ದ ನಾನು, ಆ ಕ್ಷಣವೇ ಕುರೂಪಿಯಾದೆ. ಆ್ಯಸಿಡ್‌ ದಾಳಿಯ ಕಾರಣಕ್ಕೆ ಮುಖ-ಮೈ ಚರ್ಮವೆಲ್ಲಾ ಸುಟ್ಟು ಹೋಯಿತು. ಆಸ್ಪತ್ರೆಯಿಂದ ತುಂಬ ದೂರವಿದ್ದ ಹಳ್ಳಿಯಲ್ಲಿ ಒಡೆದು ಹೋದ ಮನಸ್ಸುಗಳ ಮಧ್ಯೆ ಬಾಳಲು ಮನಸ್ಸು ಒಪ್ಪಲಿಲ್ಲ. ಹಾಗಾಗಿ, ಆ್ಯಸಿಡ್‌ ದಾಳಿಗೆ ತುತ್ತಾದವರನ್ನು ಸಲಹುವ “ಸಾಹಸ್‌ ಫೌಂಡೇಶನ್‌’ಗೆ ಬಂದೆ. ನನ್ನ ಬದುಕಿನ ಸಂಭ್ರಮದ ಕ್ಷಣಗಳು ಮುಗಿದು ಹೋಗಿವೆ ಎಂದು ನನಗೆ ನಾನೇ ಹೇಳಿಕೊಂಡು, ಒಂಟಿಯಾಗಿ ಬಾಳುವುದೇ ಜೀವನ ಅಂದುಕೊಂಡಿದ್ದೆ. ಹೀಗಿರುವಾಗಲೇ, “ನಿಮ್ಮ ವಾಯುÕ ಅದ್ಭುತ ಕಣ್ರೀ. ನಿಮ್ಮ ವಾಯ್ಸಗೆ ಫಿದಾ ಆಗಿದೀನಿ ಕಣ್ರೀ..’ ಎಂಬ ಮಾತು ಕೇಳಿಸಿದರೆ ನನ್ನ ಕತೆ ಏನಾಗಬೇಡ? 

ಯಾವುದೇ ಭಾವೋದ್ವೇಗಕ್ಕೂ ಒಳಗಾಗದೆ ರವಿ ಅವರಿಗೆ ಮತ್ತೆ ಫೋನ್‌ ಮಾಡಿದೆ. ನನ್ನ ಕತೆಯನ್ನೆಲ್ಲಾ ಹೇಳಿಕೊಂಡೆ. “ನಾನು ಆ್ಯಸಿಡ್‌ ದಾಳಿಗೆ ತುತ್ತಾಗಿರುವ ನತದೃಷ್ಟೆ. ಈಗಾಗಲೇ 17 ಆಪರೇಷನ್‌ಗಳಾಗಿವೆ. ಇನ್ನೂ 12 ಆಪರೇಷನ್‌ಗಳು ಆಗಬೇಕು. ಮದುವೆ ಅಂದ್ರೆ ಕೇವಲ ಆಕರ್ಷಣೆಯಲ್ಲ. ಹುಡುಗಾಟವಲ್ಲ. ಅವಸರಕ್ಕೆ ಬಿದ್ದು ಯಾವುದೇ ನಿರ್ಧಾರಕ್ಕೆ ಬರಬೇಡಿ. ನಾವಿಬ್ರೂ ಫೋನ್‌ ಫ್ರೆಂಡ್ಸ್‌ ಆಗಿಯೇ ಇರೋಣ. ಅದರಿಂದಾಚೆಗೆ ಯಾವುದೇ ರಿಲೇಷನ್‌ಶಿಪ್‌ ಬೇಡ. ನನ್ನ ಮಾತಿಂದ ಬೇಜಾರಾಗಬೇಡಿ. ದಯವಿಟ್ಟು ಪ್ರಾಕ್ಟಿಕಲ್‌ ಆಗಿ ಯೋಚನೆ ಮಾಡಿ’ ಅಂದೆ. ಮರುದಿನದಿಂದ ರವಿಯ ಫೋನ್‌ ಬರುವುದು ನಿಂತುಹೋಯಿತು. ಆನಂತರದಲ್ಲಿ ಒಂದು, ಎರಡು, ಮೂರು…ನಾಲ್ಕು ಐದು ದಿನಗಳೂ ಕಳೆದವು. ಊಹುಂ, ಆ ಕಡೆಯಿದ ಫೋನ್‌ ಬರಲಿಲ್ಲ. ಬಹುಶಃ ವಾಸ್ತವ ಹೇಗಿರುತ್ತೆ, ಅನ್ನೋದು ರವಿಗೆ ಈಗ ಅರ್ಥವಾಗಿರಬಹುದು. ಆ ಕಾರಣದಿಂದಲೇ ಫೋನ್‌ ಮಾಡಿಲ್ಲ ಅನ್ಸುತ್ತೆ…’ ಅಂದುಕೊಂಡೆ. 

ಆದರೆ, ಆರನೇ ದಿನ ನನ್ನ ಅಂದಾಜುಗಳೆಲ್ಲಾ ಉಲ್ಟಾ ಆದವು. ಆವತ್ತು ನನಗೆ ಫೋನ್‌ ಬರಲಿಲ್ಲ. ಬದಲಾಗಿ, ನಾನಿದ್ದ ಸಂಸ್ಥೆಯ ವಿಳಾಸ ಹುಡುಕಿಕೊಂಡು ರವಿಶಂಕರ್‌ಸಿಂಗ್‌ ಅವರೇ ಬಂದುಬಿಟ್ಟರು. ಆ್ಯಸಿಡ್‌ ಬಿದ್ದ ಕಾರಣಕ್ಕೆ ವಿಕಾರಗೊಂಡಿರುವ ನನ್ನನ್ನು ನೋಡಿದ ಮರುಕ್ಷಣವೇ ಈತ ಕಾಲ್ಕಿàಳುವುದು ಗ್ಯಾರಂಟಿ ಎಂಬ ನಂಬಿಕೆ ನನ್ನದಾಗಿತ್ತು. ಆದರೆ, ಹಾಗಾಗಲಿಲ್ಲ. ಈ ಮೊದಲು ಹೇಳಿದ ಮಾತಿಗೇ ನಾನು ಬದ್ಧನಾಗಿದ್ದೇನೆ. ನಿನ್ನನ್ನೇ ಮದುವೆ ಆಗ್ತೀನೆ’ ಅಂದರು. 
**** 
ವಾರದ ಹಿಂದಷ್ಟೇ ಮುಂಬಯಿಯ ದಾದರ್‌ನಲ್ಲಿರುವ ಡಿಸಿಲ್ವಾ ಟೆಕ್ನಿಕಲ್‌ ಕಾಲೇಜಿನ ಸಭಾಭವನದಲ್ಲಿ ರವಿಶಂಕರ್‌ ಸಿಂಗ್‌- ಲಲಿತಾರ ಮದುವೆ ನಡೆದಿದೆ. ಯುವತಿಯೊಬ್ಬಳು ಆ್ಯಸಿಡ್‌ ದಾಳಿಗೆ ತುತ್ತಾಗಿದ್ದಾಳೆ ಎಂದು ತಿಳಿಯುವ ಮೊದಲೇ ಅವಳ ದನಿಗೆ ಮರುಳಾಗಿ, ಅದೇ ಕಾರಣಕ್ಕೆ ಅವಳನ್ನು ಮದುವೆಯಾಗಲು ನಿರ್ಧರಿಸಿದ. ಮುಂದೊಂದು ದಿನ ಸತ್ಯ ಸಂಗತಿ ತಿಳಿದ ಮೇಲೂ ತನ್ನ ನಿಲುವಿನಿಂದ ಹಿಂದೆ ಸರಿಯದೆ, ಬದ್ಧತೆ ಪ್ರದರ್ಶಿಸಿದ ರವಿಶಂಕರ್‌ ಸಿಂಗ್‌ಗೆ ಎಲ್ಲರ ಪ್ರಶಂಸೆ ದಕ್ಕಿದೆ. ಈ ಸುದ್ದಿ ತಿಳಿದು ಖುಷಿಯಾದ ಹೆಸರಾಂತ ವಸ್ತ್ರವಿನ್ಯಾಸಕರಾದ ಅಬುಜಾನಿ ಸಂದೀಪ್‌ ಖೋಸ್ಲಾ, ರವಿ ಹಾಗೂ ಲಲಿತಾಗೆ ಮದುವೆಗೆಂದೇ ವಿಶೇಷ ವಿನ್ಯಾಸದ ಬಟ್ಟೆಗಳನ್ನು ಉಡುಗೊರೆಯ ರೂಪದಲ್ಲಿ ನೀಡಿ ಶುಭ ಹಾರೈಸಿದ್ದಾರೆ. ಹುಡುಗಿ ಕಡೆಯ ವಿಶೇಷ ಅತಿಥಿ ಎಂದು ಹೇಳಿಕೊಂಡೇ ಮದುವೆ ಮನೆಗೆ ಬಂದ ಹೃದಯವಂತ ನಟ ವಿವೇಕ್‌ ಒಬೆರಾಯ್‌, ನವ ದಂಪತಿಗೆ ಒಂದು ಫ್ಲಾಟನ್ನು ಗಿಫ್ಟ್ ಕೊಟ್ಟು ನನ್ನ ತಂಗಿಯ ಬಾಳು ಚೆನ್ನಾಗಿರಲಿ ಎಂದು ಹರಸಿದ್ದಾರೆ.

– ಪಾರಿಜಾತ

Advertisement

Udayavani is now on Telegram. Click here to join our channel and stay updated with the latest news.

Next