Advertisement

ಜಿಲ್ಲೆಯಲ್ಲಿ ಗರಿಗೆದರಿದ ಕ್ರೀಡಾ ಚಟುವಟಿಕೆ

09:24 PM Dec 28, 2020 | mahesh |

ಉಡುಪಿ: ಲಾಕ್‌ಡೌನ್‌ ಮುಕ್ತಾಯ ಬಳಿಕ ಜಿಲ್ಲೆಯಲ್ಲಿ ಕ್ರೀಡಾ ಇಲಾಖೆಯ ವ್ಯಾಪ್ತಿಯ ಕ್ರೀಡಾಂಗಣ ಹಾಗೂ ಜಿಮ್‌ ಕಾರ್ಯಾರಂಭಿಸಿದ್ದು, ಕ್ರೀಡಾಪಟುಗಳು ತರಬೇತಿ ಕೇಂದ್ರಗಳತ್ತ ಮುಖ ಮಾಡಿದ್ದಾರೆ.

Advertisement

ಲಾಕ್‌ಡೌನ್‌ ವೇಳೆ ನಷ್ಟ
ಕೊರೊನಾ ಲಾಕ್‌ಡೌನ್‌ ಜಿಲ್ಲೆಯ ಕ್ರೀಡೆ ಮತ್ತು ಯುವ ಜನ ಸಶಕ್ತೀಕರಣ ಇಲಾಖೆಯ ಆದಾಯಕ್ಕೆ ಬಹಳ ದೊಡ್ಡ ಹೊಡೆತ ನೀಡಿದೆ. ಎಪ್ರಿಲ್‌ -ಮೇ ತಿಂಗಳಲ್ಲಿ ಕ್ರೀಡಾಂಗಣ, ಈಜುಕೊಳ, ಬೇಸಗೆ ಶಿಬಿರಗಳಿಂದ ಬರುತ್ತಿದ್ದ ವಾರ್ಷಿಕ ಆದಾಯದ ಬಹುಪಾಲು ಸುಮಾರು 20 ಲ.ರೂ. ನಷ್ಟ ಉಂಟಾಗಿತ್ತು. ಇದೀಗ ಮತ್ತೆ ತೆರೆದುಕೊಂಡಿದ್ದರಿಂದ ಇಲಾಖೆಗೆ ಮಾಸಿಕ ಆದಾಯ ಹರಿದು ಬರುತ್ತಿದೆ.

ಮಾಸಿಕ 2.64 ಲಕ್ಷ ರೂ. ಆದಾಯ
ಲಾಕ್‌ಡೌನ್‌ಗೂ ಮುನ್ನ ಒಳಾಂಗಣ ಕ್ರೀಡಾಂಗಣ ದಲ್ಲಿರುವ ಅಂತಾರಾಷ್ಟ್ರೀಯ ಗುಣಮಟ್ಟದ ಜಿಮ್‌, ಲಾನ್‌ ಟೆನಿಸ್‌ ಒಳಾಂಗಣ, ಶಟ್ಲ ಬ್ಯಾಡ್ಮಿಂಟನ್‌, ಈಜುಕೊಳದಲ್ಲಿ ಸುಮಾರು 400ಕ್ಕೂ ಹೆಚ್ಚು ಮಂದಿ ಸದಸ್ಯರಿದ್ದರು. ಇವರಿಂದ ತಿಂಗಳಿಗೆ ಸುಮಾರು 3.5 ಲ.ರೂ. ಆದಾಯ ಇಲಾಖೆ ಬರುತ್ತಿತ್ತು. ಲಾಕ್‌ಡೌನ್‌ ತೆರೆವಾದ ಬಳಿಕ ಇದೀಗ ಜಿಮ್‌ನಲ್ಲಿ 120, ಲಾನ್‌ ಟೆನಿಸ್‌ನಲ್ಲಿ 28, ಶಟ್ಲ ಬ್ಯಾಡ್ಮಿಂಟನ್‌ನಲ್ಲಿ 140 ಜನರು ತರಬೇತಿ ಪಡೆಯುತ್ತಿದ್ದು, ಮಾಸಿಕ 2.64 ಲ.ರೂ. ಆದಾಯ ಬರುತ್ತಿದೆ.

ತೆರೆಯದ ಈಜುಕೊಳ
2 ಕೋ.ರೂ. ವೆಚ್ಚದಲ್ಲಿ ಅಜ್ಜರಕಾಡಿನಲ್ಲಿ 5 ವರ್ಷಗಳ ಹಿಂದೆ ಈಜುಕೊಳ ನಿರ್ಮಿಸಲಾಗಿದೆ. ಕಳೆದ ಮಾರ್ಚ್‌ ಲಾಕ್‌ಡೌನ್‌ ಬಳಿಕ ಇದನ್ನು ಬಂದ್‌ ಮಾಡಲಾಗಿದೆ. ಬೇಸಗೆಯ ಎರಡು ತಿಂಗಳುಗಳಲ್ಲಿ ಈಜುಕೊಳದಿಂದ ಇಲಾಖೆಗೆ 14-15 ಲ.ರೂ. ಆದಾಯ ಬರುತ್ತಿತ್ತು. ಲಾಕ್‌ಡೌನ್‌ನಿಂದಾಗಿ ಈ ಆದಾಯ ಖೋತಾ ಆಗಿದೆ. ಪ್ರಸ್ತುತ ದುರಸ್ತಿ ಹಿನ್ನೆಲೆಯಲ್ಲಿ ಈಜುಕೊಳ ಬಂದ್‌ ಆಗಿದೆ.

ನಿರ್ವಹಣೆಗೆ ಶುಲ್ಕವೇ ಆಧಾರ
ಈಜುಕೊಳ, ಒಳಾಂಗಣ ಹಾಗೂ ಜಿಲ್ಲಾ ಕ್ರೀಡಾಂ ಗಣಗಳಿಂದ ಬರುವ ಆದಾಯಗಳು ಇಲ್ಲಿನ ಗುತ್ತಿಗೆ ಸಿಬಂದಿ ಸಂಬಳ ಹಾಗೂ ಇವುಗಳ ನಿರ್ವಹಣೆಯ ಪ್ರಮುಖ ಮೂಲಗಳಾಗಿವೆ. ಈಜುಕೊಳದಲ್ಲಿ 11 ಮಂದಿ, ಶಟ್ಲ ಬ್ಯಾಡ್ಮಿಂಟನ್‌ನಲ್ಲಿ 7 ಮಂದಿ, ಲಾನ್‌ ಟೆನಿಸ್‌ನಲ್ಲಿ 4 ಮಂದಿ, ಜಿಮ್‌ನಲ್ಲಿ ಒಬ್ಬರು ಹಾಗೂ ಇಲಾಖೆ ಕಚೇರಿ ಮತ್ತು ಜಿಲ್ಲಾ ಕ್ರೀಡಾಂಗಣದಲ್ಲಿ ಆರು ಮಂದಿ ಗುತ್ತಿಗೆ ಸಿಬಂದಿ ದುಡಿಯುತ್ತಿದ್ದಾರೆ. ಇವರಿಗೆಲ್ಲ ಇದೇ ಆದಾಯದಿಂದಲೇ ಸಂಬಳ ನೀಡಬೇಕಾಗುತ್ತದೆ.

Advertisement

ಕ್ಯಾಂಪ್‌ಗಳಿಂದ ಅನುದಾನ
ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿ ಬೇಸಗೆಯಲ್ಲಿ ಇಲಾಖೆಯಿಂದ ಏರ್ಪಡಿಸಲಾಗುವ ಆ್ಯತ್ಲೆಟಿಕ್ಸ್‌ ಕ್ಯಾಂಪ್‌ನಲ್ಲಿ ಸುಮಾರು 200-300 ಮಂದಿ ಭಾಗವಹಿಸುತ್ತಾರೆ. ಈ ಶಿಬಿರಾರ್ಥಿಗಳಿಂದ 50,000-60,000 ರೂ.ವರೆಗೆ ಹಣ ಸಂಗ್ರಹಿಸಲಾಗುತ್ತದೆ. ಅದೇ ರೀತಿ ಸ್ವಿಮ್ಮಿಂಗ್‌ ಕ್ಯಾಂಪ್‌ಗ್ಳಲ್ಲಿ 200-250 ಮಂದಿ ಹಾಗೂ ಶಟಲ್‌ ಬ್ಯಾಡ್ಮಿಂಟನ್‌ ಶಿಬಿರದಲ್ಲಿ ಸುಮಾರು 80 ಮಂದಿ ಭಾಗವಹಿಸುತ್ತಾರೆ. ಇದರಲ್ಲಿ ಸುಮಾರು 20 ಲ.ರೂ. ವರೆಗೆ ಆದಾಯ ಬರುತ್ತಿತ್ತು. ಇದರಿಂದ ಕ್ರೀಡಾಂಗಣ ಹಾಗೂ ಜಿಮ್‌ ಸಂಬಂಧಿಸಿದ ದುರಸ್ತಿ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಕೋವಿಡ್‌ನಿಂದಾಗಿ ಈ ಆದಾಯಕ್ಕೆ ಹೊಡೆತ ಉಂಟಾಗಿದೆ.

ಮಾರ್ಗಸೂಚಿ ಅನ್ವಯ ತರಬೇತಿ
ಲಾಕ್‌ಡೌನ್‌ ತೆರವಾದ ಬಳಿಕ ಜಿಲ್ಲಾ ಕ್ರೀಡಾಂಗಣ, ಒಳಾಂಗಣ ಕ್ರೀಡಾಂಗಣಗಳನ್ನು ತೆರೆಯಲಾಗಿದೆ. ಕ್ರೀಡಾಪಟುಗಳು ಬಂದು ತರಬೇತಿ ಪಡೆದು ಕೊಳ್ಳುತ್ತಿದ್ದಾರೆ. ಕೋವಿಡ್‌ ಮಾರ್ಗಸೂಚಿ ಅನ್ವಯ ಕ್ರೀಡಾಪಟುಗಳಿಗೆ ತರಬೇತಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಈಜುಕೊಳದಲ್ಲಿ ದುರಸ್ತಿ ಇರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಿಲ್ಲ.
-ಡಾ| ರೋಶನ್‌ ಕುಮಾರ್‌ ಶೆಟ್ಟಿ, ಸಹಾಯಕ ನಿರ್ದೇಶಕ, ಯುವಜನ ಸಶಕ್ತೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next