Advertisement

ಆನ್‌ಲೈನ್‌ ವಂಚನೆ: 6 ವರ್ಷದಲ್ಲಿ 4 ಕೋಟಿ ರೂ. ಕಳೆದುಕೊಂಡ ವಿದ್ಯಾವಂತರು!

05:22 PM May 14, 2024 | Team Udayavani |

ಬಾಗಲಕೋಟಿ ಜಿಲ್ಲೆಯಲ್ಲಿ ಈವರೆಗೆ ದಾಖಲಾದ ಆನ್‌ಲೈನ್‌ ವಂಚನೆಯ 50 ಪ್ರಕರಣಗಳಲ್ಲಿ ಬರೊಬ್ಬರಿ 4,39, 47,677 ಕೋಟಿ ರೂ. ಕಳೆದುಕೊಂಡಿದ್ದಾರೆ. ವಂಚನೆಗೊಳಗಾದವರು ಸುಶಿಕ್ಷಿತರೇ ಹೆಚ್ಚು ಎಂಬುದು ವಿಶೇಷ. ಕೊರೊನಾ ಲಾಕ್‌ಡೌನ್‌ ಬಳಿಕ ಆನ್‌ಲೈನ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಅದರಲ್ಲೂ ಆನ್‌ಲೈನ್‌ ಶಾಪಿಂಗ್‌ ಕೂಡಾ ಹೆಚ್ಚಾಗಿದೆ. ಆನ್‌ಲೈನ್‌ ವಂಚನೆಗೆ ಇದೂ ಒಂದು ಕಾರಣ ಎನ್ನಲಾಗಿದೆ.ಆನ್‌ಲೈನ್‌ ವಂಚನೆಗೆ ಬ್ಯಾಂಕ್‌ ಅಧಿಕಾರಿಗಳೂ ಬಿದ್ದಿದ್ದಾರೆ ಎಂದರೆ ನೀವು ನಂಬಲೇಬೇಕು.

Advertisement

ಉದಯವಾಣಿ ಸಮಾಚಾರ
ಬಾಗಲಕೋಟೆ: ಆನ್‌ಲೈನ್‌ ವಂಚನೆಗೊಳಗಾದವರು ಯಾರೂ ಅನಕ್ಷರಸ್ಥರಲ್ಲ. ಸುಶಿಕ್ಷಿತರೇ. ಮೇಲಾಗಿ ಉದ್ಯಮಿಗಳು, ಸರ್ಕಾರಿ -ಖಾಸಗಿ ನೌಕರರೇ  ವಂಚನೆಯ ಜಾಲಕ್ಕೆ ಬಿದ್ದಿದ್ದಾರೆ. ಕೆಲವರು ಪೊಲೀಸ್‌ ಠಾಣೆ ಮೆಟ್ಟಿಲು ಹತ್ತಿದ್ದರೆ, ಇನ್ನೂ ಹಲವು ಜನ, ಮಾನಕ್ಕೆ ಹೆದರಿ ಲಕ್ಷಾಂತರ ಹಣ ಕಳೆದುಕೊಂಡರೂ ಸುಮ್ಮನಿದ್ದಾರೆ.

ಹೌದು. ಜಿಲ್ಲೆಯಲ್ಲಿ ಈವರೆಗೆ ದಾಖಲಾದ ಆನ್‌ಲೈನ್‌ ವಂಚನೆಯ 50 ಪ್ರಕರಣಗಳಲ್ಲಿ ಬರೋಬ್ಬರಿ 4,39,47,677 ಕೋಟಿ ಕಳೆದುಕೊಂಡವರಿದ್ದಾರೆ ಎಂದರೆ ನಂಬಲೇಬೇಕು. 4.39 ಕೋಟಿ ಕಳೆದುಕೊಂಡವರು, ಸಿಇಎನ್‌ ಪೊಲೀಸ್‌ ಠಾಣೆಗೆ ಬಂದು ದೂರು ಕೊಟ್ಟಿದ್ದಾರೆ. ಅವರಲ್ಲಿ ಗೋಲ್ಡನ್‌ ಟೈಂ(ಹಣ ಕಳ್ಕೊಂಡ ಗಂಟೆಯಲ್ಲೇ ಪೊಲೀಸರಿಗೆ ತಿಳಿಸುವುದು ಅಥವಾ 1930 ಉಚಿತ ಕರೆ) ಸದ್ಭಳಕೆ ಮಾಡಿಕೊಂಡವರು ಬಹಳ ವಿರಳ.

ಆರು ವರ್ಷದಲ್ಲಿ 4 ಕೋಟಿ: ಆನ್‌ಲೈನ್‌ ವಂಚನೆಗಳ ಜಾಗೃತಿ ಮತ್ತು ಅವುಗಳ ನಿಯಂತ್ರಣಕ್ಕಾಗಿಯೇ ಸರ್ಕಾರ ಕಳೆದ 2017ರಲ್ಲಿ ಸಿಇಎನ್‌ ಪೊಲೀಸ್‌ ಠಾಣೆ ಆರಂಭಿಸಿದೆ. ಈ ಠಾಣೆಯಡಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 93 ಪ್ರಕರಣ ದಾಖಲಾಗಿದ್ದು, 50 ಪ್ರಮುಖ
ಪ್ರಕರಣಗಳಲ್ಲಿ ಬರೋಬ್ಬರಿ 4.39 ಕೋಟಿ ಹಣ ವಂಚನೆಗೆ ಒಳಗಾದವರಿದ್ದಾರೆ. ಅವರೆಲ್ಲ ವಿದ್ಯಾವಂತರು ಎಂಬುದು ವಿಶೇಷ.

2019ರಲ್ಲಿ ಬರೀ ಎರಡು ಪ್ರಕರಣಗಳಲ್ಲಿ 21,11,295 ರೂ. ವಂಚನೆಗೊಳಗಾಗಿದ್ದು, ಪೊಲೀಸರ ತಕ್ಷಣದ ಕಾರ್ಯಾಚರಣೆ
ಯಿಂದ ವಂಚನೆಗೊಳಗಾದ ಹಣದಲ್ಲಿ 5,91,322 ರೂ. ಅನ್ನು ವಂಚಕರ ಖಾತೆಯಲ್ಲೇ ಸ್ಥಗಿತಗೊಳಿಸಲಾಗಿತ್ತು. ಸ್ಥಗಿತಗೊಂಡ ಆ ಹಣವನ್ನು ನ್ಯಾಯಾಲಯ ಆದೇಶದ ಬಳಿಕ ಹಿಂದಿರುಗಿಸಲಾಗಿದೆ.

Advertisement

ಇನ್ನು 2020ರಲ್ಲಿ 2 ಪ್ರಕರಣದಲ್ಲಿ 1,00,22,207 ರೂ. ವಂಚನೆಗೆ ಒಳಗಾಗಿದ್ದು, ಅದರಲ್ಲಿ 42,82,756 ರೂ. ಸ್ಥಗಿತಗೊಳಿಸಲಾಗಿತ್ತು. ಸ್ಥಗಿತಗೊಂಡ ಹಣದಲ್ಲಿ 42,82,756 ರೂ. ವಂಚನೆ ಗೊಳಗಾದವರಿಗೆ ಮರಳಿ ಕೊಡಿಸಲಾಗಿದೆ. 2021ರಲ್ಲಿ 11 ಪ್ರಕರಣದಲ್ಲಿ 65,22,774 ರೂ. ವಂಚನೆಗೊಳಗಾಗಿದ್ದು, ಅದರಲ್ಲಿ 14,63,556 ರೂ. ಸ್ಥಗಿತಗೊಳಿಸಲಾಗಿತ್ತು. ಅದರಲ್ಲಿ 14,63,556 ಹಣವನ್ನು ದೂರುದಾರರಿಗೆ ಹಿಂದುರಿಗಿಸಿ ಕೊಡಲಾಗಿದೆ.

ಮೂರೇ ವರ್ಷದಲ್ಲಿ 45 ಪ್ರಕರಣ: 2020ರವರೆಗೂ ಆನ್‌ಲೈನ್‌ ವಂಚನೆ ಪ್ರಕರಣಗಳು ಅಲ್ಲೊಂದು ಇಲ್ಲೊಂದು ನಡೆಯುತ್ತಿದ್ದವು. ಕೊರೊನಾ ಲಾಕ್‌ಡೌನ್‌ ಬಳಿಕ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗಿವೆ. ಅದರಲ್ಲೂ ಲಾಕ್‌ಡೌನ್‌ ಬಳಿಕ ಆನ್‌ಲೈನ್‌ ಶ್ಯಾಪಿಂಗ್‌ ಕೂಡಾ ಹೆಚ್ಚಾಗಿದ್ದು, ಈ ಆನ್‌ಲೈನ್‌ ವಂಚನೆಗೆ ಇದೂ ಒಂದು
ಕಾರಣ ಎನ್ನಬಹುದಾಗಿದೆ.

ಕಳೆದ 2022ರಲ್ಲಿ 14 ಪ್ರಕರಣದಲ್ಲಿ 69,67,583 ರೂ. ವಂಚನೆಗೆ ಒಳಗಾಗಿದ್ದು, ಅದರಲ್ಲಿ 35,31,829 ರೂ. ಸ್ಥಗಿತಗೊಳಿಸಲಾಗಿತ್ತು. ಅಷ್ಟೂ ಹಣವನ್ನು ಆ ವರ್ಷ ದೂರುದಾರರಿಗೆ ಹಿಂದುರಿಗಿಸಲಾಗಿದೆ. 2023ರಲ್ಲಿ 26 ಪ್ರಕರಣದಲ್ಲಿ 96,94,809 ರೂ. ವಂಚನೆಯಾಗಿದ್ದು, ಅದರಲ್ಲಿ 52,31,096 ರೂ. ಸ್ಥಗಿತಗೊಳಿಸಲಾಗಿತ್ತು. ಅದರಲ್ಲಿ 37,14,218 ರೂ. ಹಣವನ್ನು ದೂರುದಾರರಿಗೆ ಮರಳಿಸಲಾಗಿದೆ.

ಇನ್ನು ಪ್ರಸಕ್ತ 2024ರ ಏಪ್ರಿಲ್‌ ಅಂತ್ಯದವರೆಗೆ ಒಟ್ಟು 5 ಪ್ರಕರಣ ನಡೆದಿದ್ದು, ಅದರಲ್ಲಿ 86,29,009 ರೂ. ವಂಚನೆಗೊಳಗಾಗಿದೆ. ಅದರಲ್ಲಿ 7,27,508 ಹಣವನ್ನು ವಂಚಿತರ ಹಾಕಿಕೊಂಡಿದ್ದ ಖಾತೆಯಲ್ಲೇ ಸ್ಥಗಿತಗೊಳಿಸಲಾಗಿದೆ. ಈ ಹಣ ನ್ಯಾಯಾಲಯ ಪ್ರಕ್ರಿಯೆ ಬಳಿಕ ದೂರುದಾರರಿಗೆ ಹಿಂದಿರುಗಿಸುವ ಕಾರ್ಯ ನಡೆಯಲಿದೆ.

ವಂಚಿತರೆಲ್ಲ ವಿದ್ಯಾವಂತರು: ಜಿಲ್ಲೆಯಲ್ಲಿ ಈವರೆಗೆ ಆನ್‌ಲೈನ್‌ ವಂಚನೆಗೊಳಗಾದ ಪ್ರಕರಣಗಳಲ್ಲಿ ಶೇ.98 ವಿದ್ಯಾವಂತರೇ ಇದ್ದಾರೆ. ಮುಖ್ಯವಾಗಿ ಸರ್ಕಾರಿ ನೌಕರರು, ಉಪನ್ಯಾಸಕರು, ವರ್ಕ್‌ ಫಾರ್ಮ್ ಹೋಂ ನೌಕರರು, ಎಂಜಿನಿಯರ್‌ಗಳು, ಉದ್ಯಮಿಗಳೂ ಒಳಗೊಂಡಿದ್ದಾರೆ. ಇನ್ನೊಂದು ವಿಶೇಷವೆಂದರೆ ಬ್ಯಾಂಕ್‌ ಅಧಿಕಾರಿಗಳು ನೂರಾರು ಜನರಿಗೆ ಸಾಲ ಕೊಡುವ ಅಧಿಕಾರ ಹೊಂದಿರುತ್ತಾರೆ. ಆದರೆ ಈ ಆನ್‌ಲೈನ್‌ ವಂಚನೆಗೆ ಬ್ಯಾಂಕ್‌ ಅಧಿಕಾರಿಗಳೂ ಬಿದ್ದಿದ್ದಾರೆ ಎಂದರೆ ನಂಬಲೇಬೇಕು.

ಆನ್‌ಲೈನ್‌ ವಂಚನೆ ಪ್ರಕರಣದಲ್ಲಿ ಹೆಚ್ಚು ವಿದ್ಯಾವಂತರೇ ಮೋಸಕ್ಕೊಳಗಾಗಿದ್ದಾರೆ. ಒಂದೆರಡು ಪ್ರಕರಣದಲ್ಲಿ ಬ್ಯಾಂಕ್‌ ಅಧಿಕಾರಿಗಳೂ ಹಣ ಕಳೆದುಕೊಂಡಿದ್ದಾರೆ. ಇಂತಹ ಪ್ರಕರಣ ನಿಯಂತ್ರಣಕ್ಕಾಗಿ ಬ್ಯಾಂಕರ್ ಗಳ ಸಭೆಯೂ ನಡೆಸಲಾಗಿದೆ.
●ಅಮರನಾಥ ರಡ್ಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು

■ ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next