ಕೊಳ್ಳೇಗಾಲ: ತಾಲೂಕಿನ ಕುರುಬನಕಟ್ಟೆ ಪವಾಡ ಪುರುಷ ಸಿದ್ಧಪ್ಪಾಜಿ ದೇವಾಲಯಕ್ಕೆ ಶಾಸಕ ಜಿ.ಟಿ.ದೇವೇಗೌಡ ಮತ್ತು ಕುಟುಂಬಸ್ಥರು ಭೇಟಿ ನೀಡಿ, ದೇವರಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. ಕಳೆದ ವಿಧಾನಸಭಾ ಚುನಾವಣೆ ವೇಳೆ ಜಿ.ಟಿ.ದೇವೇಗೌಡ ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರೆ ತಾಲೂಕಿನ ಕುರುಬನಕಟ್ಟೆ ಪವಾಡ ಸಿದ್ಧಪ್ಪಾಜಿಗೆ ಹರಕೆ ಹೊತ್ತಿದ್ದ ಹಿನ್ನೆಲೆಯಲ್ಲಿ ಹರಕೆಯನ್ನು ಪೂರೈಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡು, ನಮ್ಮ ಕಾರ್ಯಕರ್ತರು ನನ್ನ ಗೆಲುವಿಗಾಗಿ ಹರಕೆ ಹೊತ್ತಿದ್ದರು. ಅದನ್ನು ಪೂರೈಸಲು ಆಗಮಿಸಿದ್ದು, ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮನಸ್ಸಿಗೆ ಶಾಂತಿ ಸಿಕ್ಕಿದಂತೆ ಆಗಿದೆ. ಈ ಹಿಂದೆ ಮೈಸೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿದ್ದ ವೇಳೆ ತಾಲೂಕಿನ ಕುರುಬನಕಟ್ಟೆಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸುವ ವಾಡಿಕೆಯನ್ನು ಬೆಳೆಸಿಕೊಂಡಿದ್ದೆ. ಅದೇ ರೀತಿ ಚುನಾವಣೆಯ ಬಳಿಕ ದೇವಾಲಯಕ್ಕೆ ತೆರಳಿ ಹರಕೆ ಪೂರೈಸಬೇಕೆಂದುಕೊಂಡೆ. ಆದರೆ, ಬಹಳ ದಿನಗಳ ನಂತರ ದೇವಾಲಯಕ್ಕೆ ಆಗಮಿಸಿ ಪೂಜೆ ನೆರವೇರಿಸುವುದಾಗಿ ಹೇಳಿದರು.
ನಾನು ಜೆಡಿಎಸ್‌ನಲ್ಲೇ ಇರುತ್ತೇನೆ: ಚುನಾವಣೆಗೆ ಇನ್ನು ಮೂರುವರೆ ವರ್ಷ ಅವಧಿ ಇದೆ. ಅಲ್ಲಿಯವರಿಗೂ ನಾನು ಜೆಡಿಎಸ್‌ನಲ್ಲೇ ಇರುತ್ತೇನೆ. ನಾನು ಬಿಜೆಪಿಗೆ ಸೇರುವುದಿಲ್ಲ. ಉಪ ಚುನಾವಣೆಯಲ್ಲಿ ಅವರಿಗೆ ಬಹುಮತ ಬಂಧಿರುವುದರಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸರಾಗವಾಗಿ ಆಡಳಿತ ನಡೆಸುತ್ತಾರೆ ಎಂದರು.
ಪರಿಮಳ ನಾಗಪ್ಪರವರೊಂದಿಗೆ ಸಂಭಾಷಣೆ: ಹನೂರು ಕ್ಷೇತ್ರದ ಮಾಜಿ ಶಾಸಕಿ ಪರಿಮಳ ನಾಗಪ್ಪ ಅವರನ್ನು ಪೋನ್ ಮೂಲಕ ಸಂಪರ್ಕಿಸಿ ಅವರ ಕುಶಲೋಪರಿ ವಿಚಾರಿಸಿದರು. ಬಿಜೆಪಿ ಮುಖಂಡರ ಮನೆಗಳಿಗೆ ತೆರಳಿ ಅವರ ಕುಶಲ ವಿಚಾರಿಸಿದರು. ಈ ಎಲ್ಲಾ ವಿದ್ಯಾಮಾನಗಳನ್ನು ಕಂಡ ಕಾರ್ಯಕರ್ತರು ಗೌಡರು ಬಹುತೇಕ ಜೆಡಿಎಸ್ ತೊರೆದು ಬಿಜೆಪಿಗೆ ಸೇರುತ್ತಾರೆಂದು ಅಕ್ಕಪಕ್ಕದಲ್ಲೇ ಇದ್ದ ಅಭಿಮಾನಿಗಳು ಗುಸುಗುಸು ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಹೇಶ್ ಮತ್ತು ಕಾಳೇಗೌಡ ಅವರ ನಿವಾಸಗಳಿಗೆ ಭೇಟಿ ನೀಡಿ, ಮುಖಂಡರಿಗೆ ಅಭಿನಂದನೆ ಸಲ್ಲಿಸಿ ಮುಂದಿನ ದಿನಗಳಲ್ಲಿ ಭೇಟಿಯಾಗೋಣ ಅಭಿವೃದ್ಧಿಗೆ ಶ್ರಮಿಸೋಣ ಎಂದು ಮುಖಂಡರಿಗೆ ಭರವಸೆ ನೀಡಿದರು. ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಹರೀಶ್‌ಗೌಡ, ಬಿಜೆಪಿ ಮುಖಂಡರ ಸರ್ವೇಶ್ ಬಸವಯ್ಯ, ಸಿದ್ದೇಗೌಡ, ಪುಟ್ಟಣ್ಣ, ಮೈಸೂರು ಹಾಲು ಒಕ್ಕೂಟದ ಅಧ್ಯಕ್ಷ ಸಿದ್ದೇಗೌಡ ಸೇರಿದಂತೆ ಮುಖಂಡರು ಹಾಜರಿದ್ದರು.