Advertisement

ನೆರೆ ಸಂಕಷ್ಟ ದೂರಕ್ಕೆ ವಿಶೇಷ ಪ್ರಾರ್ಥನೆ

01:24 AM Aug 13, 2019 | Lakshmi GovindaRaj |

ಬೆಂಗಳೂರು: ತ್ಯಾಗ-ಬಲಿದಾನದ ಸಂಕೇತವಾದ ಬಕ್ರೀದ್‌ ಹಬ್ಬವನ್ನು ರಾಜಧಾನಿ ಬೆಂಗಳೂರಿನಲ್ಲಿ ಮುಸ್ಲಿಮರು ಸಂಭ್ರಮದಿಂದ ಆಚರಿಸಿದರು. ರಾಜ್ಯದ ಬಹುತೇಕ ಭಾಗಗಳಲ್ಲಿ ನೆರೆ ಉಂಟಾದ ಹಿನ್ನೆಲೆ ಅಲ್ಲಿನ ಪರಿಸ್ಥಿತಿ ಹತೋಟಿಗೆ ಬರಲಿ ಹಾಗೂ ಸಂತ್ರಸ್ತರ ಸಂಕಷ್ಟಗಳು ದೂರವಾಗಲಿ ಎಂದು ವಿಶೇಷ ಪ್ರಾರ್ಥನೆಯನ್ನೂ ಸಲ್ಲಿಸಲಾಯಿತು.

Advertisement

ನಗರದ ಚಾಮರಾಜಪೇಟೆ, ಫ್ರೇಜರ್‌ ಟೌನ್‌, ಮಿಲ್ಲರ್ಸ್‌ ರಸ್ತೆ, ಆರ್‌.ಟಿ.ನಗರ, ಲಾಲ್‌ಬಾಗ್‌ ರಸ್ತೆ, ಕೋರಮಂಗಲ, ಯಲಹಂಕ, ಯಶವಂತಪುರ, ಇಂದಿರಾನಗರ, ಕೆ.ಆರ್‌.ಪುರ ಪ್ರಮುಖ ಬಡಾವಣೆಗಳ ಈದ್ಗಾ ಮೈದಾನಗಳಲ್ಲಿ ಶ್ವೇತ ವಸ್ತ್ರಧಾರಿಯಾಗಿದ್ದ ಸಾವಿರಾರು ಮಂದಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ನಡೆಸಿ ಬಳಿಕ ಪರಸ್ಪರ ಆಲಂಗಿಸಿಕೊಳ್ಳುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.

ಈದ್ಗಾ ಮೈದಾನದಲ್ಲಿ ಪ್ರಾರ್ಥನೆ: ಬಕ್ರೀದ್‌ ಹಿನ್ನೆಲೆಯಲ್ಲಿ ನಗರದ ಈದ್ಗಾ ಮೈದಾನಗಳಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಸ್ಲಿಂ ಸಮುದಾಯದ ಧರ್ಮಗುರುಗಳು ಸೇರಿದಂತೆ ಗಣ್ಯರು ಭಾಗವಹಿಸಿದ್ದರು. ಈ ವೇಳೆ ಮಾಜಿ ಸಚಿವ ಜಮೀರ್‌ ಅಹಮದ್‌ ಮಾತನಾಡಿ, “ಕಳೆದ ವರ್ಷ ವಿಜೃಂಭಣೆಯಿಂದ ಬಕ್ರೀದ್‌ ಆಚರಿಸಿದ್ದೆವು. ಆದರೆ ಈ ಬಾರಿ ರಾಜ್ಯದಲ್ಲಿ ಸಂಭವಿಸಿದ ನೆರೆಗೆ ಜನ ತತ್ತರಿಸಿ ಹೋಗಿದ್ದಾರೆ. ಅವರ ಕಷ್ಟಗಳು ದೂರಾಗಲಿ ಎಂದು ಪ್ರಾರ್ಥಿಸುವ ಮೂಲಕ ಬಹಳ ಬೇಸರದಿಂದ ಆಚರಿಸಲಾಗುತ್ತಿದೆ’ ಎಂದರು.

ಪೊಲೀಸ್‌ ಭದ್ರತೆ: ಬಕ್ರೀದ್‌ ಹಬ್ಬದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ನಗರದ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಾವಿರಕ್ಕೂ ಹೆಚ್ಚಿನ ಜನರು ಸೇರಿದ್ದರು. ಅದೇ ರೀತಿ ನಗರದ ವಿವಿಧ ಭಾಗಗಳಲ್ಲಿ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ನೆರೆ ಪರಿಹಾರ ಸಂಗ್ರಹ: ನೆರೆ ಸಂತ್ರಸ್ತರ ನೆರವಿಗಾಗಿ ನಗರದ ಎಲ್ಲಾ ಈದ್ಗಾ ಮೈದಾನದಲ್ಲಿ ನಿಧಿ ಸಂಗ್ರಹ ಮಾಡುವಂತೆ ಸೂಚಿಸಿದ್ದು, ಬೆಂಗಳೂರಿನಾದ್ಯಂತ ಏಳು ಲಕ್ಷ ರೂ. ಸಂಗ್ರಹಿಸಲಾಗಿದೆ. ಮಸೀದಿಗಳಲ್ಲೂ ಸಂಗ್ರಹ ಕಾರ್ಯ ಜತೆಗೆ ಜತೆಗೆ ಪ್ರವಾಹ ಪೀಡಿತರ ನೆರವಿಗಾಗಿ ಅಗತ್ಯ ವಸ್ತುಗಳು ಮತ್ತು ಹಣದ ಸಂಗ್ರಹ ಕಾರ್ಯವೂ ನಡೆಯುತ್ತಿದೆ ಎಂದು ತಿಳಿಸಿದರು.

Advertisement

ಬಕ್ರೀದ್‌ ಆಚರಣೆಗಳಲ್ಲಿ ಬಡವರಿಗೆ ದಾನ ಮಾಡುವುದು ಪ್ರಮುಖವಾಗಿದ್ದು, ಬಡವರಿಗೆ ಹಣ್ಣು, ಬಟ್ಟೆ ಮತ್ತಿತರ ವಸ್ತುಗಳನ್ನು ದಾನವಾಗಿ ನೀಡಿದರು. ಸಂಜೆಯ ವೇಳೆಗೆ ಬಂಧು-ಬಳಗದೊಂದಿಗೆ ಸಿಹಿ ಸಡಗರದಿಂದ ಹಬ್ಬದೂಟವನ್ನು ಸವಿದರು. ಇತರೆ ಧರ್ಮದ ಸ್ನೇಹಿತರನ್ನು ಆಹ್ವಾನಿಸಿ, ಸತ್ಕರಿಸಿದರು.

ಮಂತ್ರಿಮಂಡಲ ರಚನೆಯಾಗಿದ್ದರೆ ಉತ್ತಮವಿತ್ತು: “ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವಾರ ಕಳೆಯುತ್ತಾ ಬಂದರೂ ಇನ್ನೂ ಮಂತ್ರಿಮಂಡಲ ರಚನೆಯಾಗಿಲ್ಲ. ಪ್ರವಾಹದ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಲು ಯಾರೂ ಇಲ್ಲದಂತಾಗಿದೆ. ಮಂತ್ರಿಮಂಡಲ ರಚನೆಯಾಗಿದ್ದರೆ ಜನರಿಗೆ ಉಪಯೋಗವಾಗುತ್ತಿತ್ತು. ಮುಖ್ಯಮಂತ್ರಿ ಒಬ್ಬರೆ ನೆರೆ ಸಮಸ್ಯೆ ಬಗೆಹರಿಸಲು ಸಾಧ್ಯವಿಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳ ಮೇಲೆ ಹೆಚ್ಚಿನ ಜವಬ್ದಾರಿ ಇರುತ್ತೆ. ಆದರೆ, ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಇಲ್ಲ’ ಎಂದು ತಿಳಿಸಿದರು.

ವ್ಯಾಪಾರ ಸ್ಥಳದಲ್ಲಿ ತ್ಯಾಜ್ಯ: ಬಕ್ರೀದ್‌ ಹಬ್ಬದ ಹಿನ್ನೆಲೆ ರಾಜ್ಯ ವಿವಿಧೆಡೆಗಳಿಂದ ಬಂದಿದ ಕುರಿ ವ್ಯಾಪಾರಿಗಳು ಚಾಮರಾಜಪೇಟೆ, ಜಯಮಹಲ್‌, ಮೈಸೂರು ರಸ್ತೆ, ಯಶವಂತಪುರ ಸೇರಿದಂತೆ ನಗರದ ವಿವಿಧೆಡೆ ರಸ್ತೆಬದಿ, ಮೈದಾನಗಳಲ್ಲಿ ಕುರಿ-ಮೇಕೆ ಮಾರಾಟ ಮಾಡುತ್ತಿದ್ದರು. ಭಾನುವಾರ ಮಧ್ಯರಾತ್ರಿವರೆಗೂ ಮಾರಾಟ ನಡೆಯಿತು. ಸೋಮವಾರ ಬೆಳಗ್ಗೆ ವ್ಯಾಪಾರಿಗಳು ಜಾಗ ಖಾಲಿ ಮಾಡಿದ್ದು, ಈ ಸ್ಥಳಗಳಲ್ಲಿ ಸಾಕಷ್ಟು ಹುಲ್ಲು, ಕುರಿ ಕೂದಲು, ಇಕ್ಕೆ ಸೇರಿಂದತೆ ಇತರೆ ತ್ಯಾಜ್ಯಗಳ ಬಿದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next