Advertisement
ಹುಟ್ಟುಹಬ್ಬದಂದು ನನ್ನ ಕುಟುಂಬದೊಂದಿಗೆ ಒಂದು ಅನಾಥಾಶ್ರಮಕ್ಕೆ ಭೇಟಿಕೊಟ್ಟೆವು. ಅಲ್ಲಿ ಮಕ್ಕಳೆಲ್ಲ ಆಟವಾಡುತ್ತಿದ್ದರು. ಅಲ್ಲಿಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಒಬ್ಬ ಮೇಡಂ ಮತ್ತು ಅನಾಥ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಅಕ್ಕಂದಿರನ್ನು ನೋಡುವಾಗ ಆಶ್ರಮ ಒಂದು ಕುಟುಂಬದಂತೆ ಕಾಣುತ್ತಿತ್ತು. ಒಮ್ಮೆಲೇ ನಮ್ಮನ್ನು ನೋಡಿ ಅವರೆಲ್ಲ ಏನೋ ಖುಷಿಯಾದಂತೆ, ನನ್ನ ಬಳಿ ಓಡೋಡಿ ಬಂದು, “ಅಕ್ಕಾ’ ಎಂದು ಕರೆದು ನನ್ನನ್ನು ಒಳಕ್ಕೆ ಎಳೆದುಕೊಂಡೇ ಹೋದರು. ಬಳಿಕ ನಾನು ತಂದಿದ್ದ ಕೇಕ್ ಕತ್ತರಿಸಿದಾಗ ಎಲ್ಲರಲ್ಲೂ ಒಂದು ಲವಲವಿಕೆ ಕಂಡಿತು. ನಾನು ನಂತರ ಬಲೂನನ್ನು ಊದಿ ಮಕ್ಕಳಿಗೆಲ್ಲ ಕೊಟ್ಟೆ. ಅವರೆಲ್ಲ ಅದನ್ನು ತಮ್ಮ ಬದುಕಿನಲ್ಲಿ ನೋಡಿಯೇ ಇಲ್ಲವೆಂಬಂತೆ ಆಡುತ್ತಿದ್ದರು. ಅವರೊಂದಿಗೆ ಸಮಯ ಸರಿದದ್ದೇ ತಿಳಿಯಲಿಲ್ಲ. ಕೊನೆಗೆ ಹೊರಡಲನುವಾದಾಗ ಇಬ್ಬರು ನಮ್ಮನ್ನು ಬೀಳ್ಕೊಡಲು ಗೇಟಿನವರೆಗೆ ಬಂದರು. ಒಬ್ಬ, “ಅಮ್ಮಾ, ನೀನು ಹೋಗುತ್ತೀಯಾ?’ ಎಂದು ಕೇಳಿದ ತತ್‌ಕ್ಷಣವೇ ಇನ್ನೊಬ್ಬ, “ನೀನು ಹೋಗು, ಬರಬೇಡ’ ಎಂದು ನನ್ನನ್ನು ಸಿಟ್ಟಿನಿಂದ ನೂಕಿದ. ನಾನು ಇವನ್ನೆಲ್ಲ ನೋಡುತ್ತ ಏನೂ ಮಾತನಾಡದೇ ಸುಮ್ಮನೇ ಮನೆಗೆ ಹಿಂತಿರುಗಿದೆ.
ದ್ವಿತೀಯ ವಿಜ್ಞಾನ
ಅಮೃತಭಾರತಿ ಪದವಿಪೂರ್ವ ಕಾಲೇಜು, ಹೆಬ್ರಿ