ಉಕ್ರೇನ್ ವಿರುದ್ಧ ರಷ್ಯಾ ಇನ್ನೆಷ್ಟು ದಿನ ಪ್ರಹಾರ ನಡೆಸಲಿದೆ? ಇಂಥ ಒಂದು ಪ್ರಶ್ನೆಯನ್ನು ಜಗತ್ತಿನ ಸಾರ್ವಜನಿಕರು ಎಲ್ಲರೂ ಈಗ ಕೇಳಲು ಆರಂಭಿಸಿದ್ದಾರೆ. ಸೋಮವಾರಕ್ಕೆ ಪುಟಿನ್ ಸೇನೆ ದಾಳಿ ನಡೆಸಲು ಆರಂಭಿಸಿ ಬರೋಬ್ಬರಿ 236 ದಿನಗಳು ಪೂರ್ಣಗೊಂಡಿವೆ.
ಇತ್ತೀಚೆಗೆ ಮುಕ್ತಾಯವಾಗಿದ್ದ ಜಿ20 ರಾಷ್ಟ್ರಗಳ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ನೇರವಾಗಿಯೇ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿಯವರು “ಸದ್ಯದ ದಿನಗಳು ಯುದ್ಧದ ಕಾಲ ಅಲ್ಲವೇ ಅಲ್ಲ. ಎಂತಹ ಬಿಕ್ಕಟ್ಟು ಇದ್ದರೂ, ಅದನ್ನು ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಬೇಕು’ ಎಂದು ಹೇಳಿದ್ದರು. ಇಷ್ಟು ಮಾತ್ರವಲ್ಲ ಜಗತ್ತಿನ ಹಲವು ರಾಷ್ಟ್ರಗಳ ಮುಖ್ಯಸ್ಥರೂ, ಮಾತುಕತೆ ಮೂಲಕ ಬಿಕ್ಕಟ್ಟು ಬಗೆಹರಿಸಿಕೊಳ್ಳಿ ಎಂದು ಸಲಹೆ ಮಾಡಿದ್ದರು. ಆದರೂ ಇದ್ಯಾವುದೂ ಪ್ರಯೋಜನವಾಗಿಲ್ಲ.
ಸೋಮವಾರ ಕೂಡ ರಷ್ಯಾದ ಸೇನಾ ಪಡೆಗಳು ಇರಾನ್ ನಿರ್ಮಿತ ಡ್ರೋನ್‌ಗಳ ಮೂಲಕ ಉಕ್ರೇನ್‌ನ ಪೂರ್ವ ಭಾಗದ ಸುಮಿ, ರಾಜಧಾನಿ ಕೀವ್‌ಗೆ ಹೊಂದಿಕೊಂಡು ಇರುವ ಶೆವ್‌ಜೆಂಕೋ ಜಿಲ್ಲೆ ಸೇರಿದಂತೆ ಹಲವು ಪ್ರದೇಶಗಳ ಮೇಲೆ ಮುಗಿಬಿದ್ದಿದೆ. ಇನ್ನೆಷ್ಟು ದಿನ ಎಂದು ಎಲ್ಲರೂ ಪ್ರಶ್ನೆ ಮಾಡಲಾರಂಭಿಸಿದ್ದಾರೆ. ಏಕೆಂದರೆ, ಈ ಯುದ್ಧದ ಪ್ರತಿಕೂಲ ಪರಿಣಾಮ ಉಂಟಾಗುವುದು ಇಡೀ ಜಗತ್ತಿನ ಮೇಲೆ. ಮುಂದಿನ ತಿಂಗಳಿಂದ ಒಪೆಕ್ ಮತ್ತು ಅದರ ಮಿತ್ರ ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆಯನ್ನು ಪ್ರತಿ ದಿನ 20 ಮಿಲಿಯನ್ ಬ್ಯಾರೆಲ್ ಕಡಿತಗೊಳಿಸುವ ಬಗ್ಗೆ ಈಗಾಗಲೇ ನಿರ್ಧರಿಸಿವೆ. ಅದಕ್ಕೆ ಪೂರಕವಾಗಿ ಅಮೆರಿಕ, ಯು.ಕೆ. ಸೇರಿದಂತೆ ಹಲವು ರಾಷ್ಟ್ರಗಳಿಗೆ “ಅತ್ಯಂತ ಭೀಕರ’ ಎನ್ನಬಹುದಾದ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳಲಿದೆ ಎಂದು ಹಲವು ಆರ್ಥಿಕ ವಿಶ್ಲೇಷಕರು ಹಾಗೂ ಪರಿಣತರು ಮುನ್ಸೂಚನಾ ವರದಿಗಳಲ್ಲಿ ಉಲ್ಲೇಖಿಸಿದ್ದಾರೆ.
ಹೀಗಾಗಿ, ವ್ಯಕ್ತಿಗತ ಪ್ರತಿಷ್ಠೆಗಾಗಿ ನಡೆಯುತ್ತಿರುವ ಈ ಕಾಳಗಕ್ಕೆ ಉಕ್ರೇನ್‌ನ ಪ್ರಜೆಗಳು ನೇರವಾಗಿ ಮತ್ತು ಜಗತ್ತಿನ ಜನರು ಪರೋಕ್ಷವಾಗಿ ಏಕೆ ಬಲಿಯಾಗಬೇಕು? ಹೊಸತಾಗಿ ನಡೆಸಲಾಗಿರುವ ದಾಳಿಯಲ್ಲಿ ಸದ್ಯ ಗೊತ್ತಾಗಿರುವ ಮಾಹಿತಿ ಪ್ರಕಾರ, ಏಳು ಮಂದಿ ಅಸುನೀಗಿದ್ದಾರೆ. ಕೀವ್‌ನ ಮೇಯರ್ ವಿಟಾವಿ ಕ್ಲಿಶೊ “ಇದೊಂದು ನರಮೇಧ’ ಎಂದು ಬಣ್ಣಿಸಿದ್ದಾರೆ.
ಹಾಗಿದ್ದರೆ ಸದ್ಯದ ಬಿಕ್ಕಟ್ಟಿಗೆ ಪರಿಹಾರ ಇಲ್ಲವೇ? ಇದೆ. ಕೇವಲ ಮನಸ್ಸಿದ್ದರೆ ಮಾತ್ರ. ಭಾರತ ಸೇರಿದಂತೆ ಜಗತ್ತಿನ ಎಲ್ಲಾ ರಾಷ್ಟ್ರಗಳ ಒತ್ತಾಸೆಯ ಪ್ರಕಾರ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೂಡಲೇ ದಾಳಿ ನಿಲ್ಲಿಸಬೇಕು ಮತ್ತು ಉಕ್ರೇನ್‌ನಿಂದ ಸೇನೆ ವಾಪಸ್ ಪಡೆಯಬೇಕು. ಬಿಕ್ಕಟ್ಟಿಗೆ ಕಾರಣವಾಗಿರುವ ಅಂಶಗಳ ಬಗ್ಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಮತ್ತು ಪುಟಿನ್ ಕುಳಿತು ಮಾತುಕತೆ ನಡೆಸಲಿ. ಅದಕ್ಕೆ ಪೂರಕವಾಗುವಂತೆ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳೂ ನಡೆದುಕೊಳ್ಳಬೇಕಿದೆ. ಮುಂಬಾಗಿಲಿನಿಂದ ಶಾಂತಿಯ ಮಾತನ್ನಾಡಿ ಹಿಂಬಾಗಿಲಿನಿಂದ ಉಕ್ರೇನ್‌ಗೆ ಕೋಟ್ಯಂತರ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ಮಾರಾಟ ಅಥವಾ ನೆರವಿನ ಮೂಲಕ ನೀಡಿದರೆ ಏನೂ ಪ್ರಯೋಜನವಿಲ್ಲ. ಗಾಯ ಗುಣವಾಗಬೇಕಾಗಿದ್ದರೆ ಕಹಿಯುಕ್ತ ಔಷಧ ಸೇವನೆ ಮಾಡಲೇಬೇಕಲ್ಲ? ಅದೇ ರೀತಿ, ದಾಳಿಗೆ ತುತ್ತಾಗಿರುವ ಮತ್ತು ಅದನ್ನು ನಡೆಸಿರುವ ರಾಷ್ಟ್ರ ಅವರವರ ತಪ್ಪುಗಳನ್ನು ಒಪ್ಪಿಕೊಳ್ಳಬೇಕು.ಆ ರೀತಿ ಆದಾಗ ಮಾತ್ರವೇ ಈ ಬಿಕ್ಕಟ್ಟಿಗೆ ಪೂರ್ಣ ವಿರಾಮ ದೊರೆಯಲು ಸಾಧ್ಯ.