Advertisement

ಕಬ್ಬು ಕಟಾವಿಗೆ ಸರಳ ಯಂತ್ರ!

07:05 AM Jul 31, 2017 | Harsha Rao |

20ಜನರ ಕೆಲಸ ಇಬ್ಬರೇ ಮಾಡಬಹುದು ಈ ಯಂತ್ರದಿಂದ ಒಂದು ಎಕರೆ ಕಬ್ಬನ್ನು ಕೇವಲ 2 ಗಂಟೆಯಲ್ಲಿ ಕಟಾವು ಮಾಡಬಹುದು. 

Advertisement

ಸಮೀರವಾಡಿ ಸಕ್ಕರೆ ಕಾರ್ಖಾನೆಯ ಕಾರ್ಮಿಕನ ಮಗ ಹಾಗೂ ಕೆಎಲ್‌ಇ ಪಾಲಿಟೆಕ್ನಿಕ್‌ ಕಾಲೇಜಿನ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಸೇರಿ ರೈತರು ಸರಳವಾಗಿ ಕಬ್ಬು ಕಟಾವು ಮಾಡಲು ಅನುಕೂಲವಾಗುವಂತಹ ಯಂತ್ರವನ್ನು ಅಭಿವೃದ್ಧಿಪಡಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ಮಹಾಲಿಂಗಪುರದ ಗೋದಾವರಿ ಸಕ್ಕರೆ ಕಾರ್ಖಾನೆಯ ಕಾರ್ಮಿಕ ರಾಘವೇಂದ್ರ ಉಮರ್ಜಿ ಅವರ ಮಗ ಪುನೀತ ಉಮರ್ಜಿ ಸದ್ಯ ಬೆಂಗಳೂರಿನ ಗೋಪಾಲನ್‌ ಎಂಜಿನಿಯರಿಂಗ್‌ ಅಂಡ್‌ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದಾನೆ.  ಆತ ಸ್ನೇಹಿತರೊಂದಿಗೆ ಸೇರಿ ಈ ಯಂತ್ರವನ್ನು ತಯಾರಿಸಿದ್ದಾರೆ.

20 ಜನರ ಬದಲು ಇಬ್ಬರೇ ಸಾಕು
ಈ ಯಂತ್ರ 6.29 ಎಚ್‌ಪಿ ಸಾಮರ್ಥ್ಯದ 2 ಸ್ಟ್ರೋಕ್‌ ಆಟೋ ಎಂಜಿನ್‌ ಹೊಂದಿದ್ದು, 145.45 ಸಿಸಿ ಮೂಲಕ ಕಾರ್ಯ ನಿರ್ವಹಿಸುತ್ತದೆ. ಇದಕ್ಕೆ 2 ಔಟ್‌ಪುಟ್‌, ಫ್ರಂಟ್‌ ಮತ್ತು ರೇರ್‌ ಎಕ್ಸಲೇಟರ್‌, ಜೊತೆಗೆ ಹೆಚ್ಚುವರಿ ಬ್ಯಾಟರಿ ಅಳವಡಿಸಿ, ಮೇಲೆ ಮತ್ತು ಕೆಳಗೆ 2 ಕಟ್ಟರ್‌ ಅಲಗುಗಳನ್ನು ಜೋಡಿಸಲಾಗಿದೆ. ಮೇಲಿನ ಅಲಗು ಕಬ್ಬಿನ ಗರಿಯನ್ನು ಕತ್ತರಿಸಿದರೆ, ಕೆಳಗಿನ ಅಲಗು ಕಬ್ಬಿನದ ಗಣಿಕೆಯನ್ನು ಕತ್ತರಿಸುತ್ತದೆ. ಕಬ್ಬಿನ ಎತ್ತರಕ್ಕೆ ತಕ್ಕಂತೆ ಎರಡೂ ಅಲುಗುಗಳನ್ನು ಹೊಂದಿಸಿ ಜೋಡಿಸಬಹುದು. 20 ಜನರು ಮಾಡುವ ಕೆಲಸವನ್ನು ಸುಲಭವಾಗಿ ಮಾಡಬಲ್ಲ ಈ ಯಂತ್ರದ ಸಹಾಯಕ್ಕೆ ಇಬ್ಬರೇ ಕಾರ್ಮಿಕರು ಸಾಕು.

ತಯಾರಿಗೆ 3 ತಿಂಗಳು ಶ್ರಮ
ನಾನು ಸಮೀರವಾಡಿಯಲ್ಲಿ ಹುಟ್ಟಿ ಬೆಳೆದವನು. ಸುತ್ತಲಿನ ರೈತರು ಕಬ್ಬು ಕಟಾವು ಮಾಡಲು ಪಡುತ್ತಿದ್ದ ಕಷ್ಟವನ್ನು ಕಂಡಿದ್ದೆ. ರೈತರ ಕಷ್ಟವನ್ನು ಹೇಗಾದರೂ ಕಡಿಮೆ ಮಾಡಬೇಕು ಎಂಬ ಯೋಚನೆಯೇ ಈ ಯಂತ್ರದ ಅನ್ವೇಷಣೆಗೆ ಕಾರಣವಾಯಿತು. ಬೆಂಗಳೂರಲ್ಲಿ ಪ್ರೊ| ಅರಸುಕುಮಾರ ಅವರ ಮಾರ್ಗದರ್ಶನದಲ್ಲಿ ಸಹಪಾಠಿಗಳಾದ ಶಶಾಂಕ, ಪ್ರವೀಣಗೌಡ, ಮನೋಜ್‌, ಭೀಮಪ್ಪ ಸೇರಿ 6 ಜನ ಸತತ 3 ತಿಂಗಳು ಶ್ರಮವಹಿಸಿ, ಈ ಯಂತ್ರದ ಅನ್ವೇಷಣೆ ಮಾಡಿದ್ದೇವೆ. ಈ ಯಂತ್ರಕ್ಕೆ ಇನ್ನೂ ಪೇಟೆಂಟ್‌ ಸಿಕ್ಕಿಲ್ಲ. ಒಂದು ಯಂತ್ರ ತಯಾರಿಸಲು ಅಂದಾಜು 22 ಸಾವಿರ ರೂ. ವೆಚ್ಚವಾಗಿದೆ. ರೈತರು ಒಮ್ಮೆ ಮಾತ್ರ ಹಣ ತೊಡಗಿಸಿ ಈ ಯಂತ್ರ ಖರೀದಿಸಿದರೆ ಸಾಕು. ಇದರ ನಿರ್ವಹಣೆ ತುಂಬಾ ಸರಳವಾಗಿದೆ. ಸಾಮೂಹಿಕ ಉತ್ಪಾದನೆಯಿಂದ ಕೇವಲ 15 ಸಾವಿರ ರೂ.ಗೆ ಈ ಯಂತ್ರ ರೈತರಿಗೆ ಸಿಗಬಹುದು. ಈ ಯಂತ್ರದಿಂದ ಒಂದು ಎಕರೆ ಕಬ್ಬನ್ನು ಕೇವಲ 2 ಗಂಟೆಯಲ್ಲಿ ಕಟಾವು ಮಾಡಬಹುದು ಎನ್ನುತ್ತಾರೆ ಪುನೀತ ರಾಘವೇಂದ್ರ ಉಮರ್ಜಿ.
ಮಾಹಿತಿಗೆ– 8792184407.

Advertisement

– ಚಂದ್ರಶೇಖರ ಮೋರೆ

Advertisement

Udayavani is now on Telegram. Click here to join our channel and stay updated with the latest news.

Next