ಮಂಗಳೂರು: ವಿಶೇಷ ಚೇತನ ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಮತ್ತಷ್ಟು ಆದ್ಯತೆ ನೀಡಲು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಮುಂದಾಗಿದೆ. ನಗರದ ಪ್ರಮುಖ ಪಾರ್ಕ್ ಎನಿಸಿದ ಕದ್ರಿ ಪಾರ್ಕ್‌ನ ಒಳಗೆ ವಿಶೇಷ ಚೇತನ ಮಕ್ಕಳಿಗೆಂದೇ ಪ್ರತ್ಯೇಕ ಪಾರ್ಕ್ ನಿರ್ಮಾಣ ಮತ್ತು ಮೂಲಸೌಕರ್ಯ ಒದಗಿಸಲು ಮುಡಾ ನಿರ್ಧರಿಸಿದೆ.
ನಗರದಲ್ಲಿ ಕೆಲವೊಂದು ವಿಶೇಷ ಚೇತನರಿಗೆಂದೇ ಮೀಸಲಿಟ್ಟ ಶಾಲೆಗಳಿವೆ. ಶಾಲಾ ಮಟ್ಟದಲ್ಲಿ ಕ್ರೀಡಾಂಗಣ ಇದ್ದರೂ, ನಗರದಲ್ಲಿ ಪ್ರತ್ಯೇಕ ಸಾರ್ವಜನಿಕ ಕ್ರೀಡಾಂಗಣ ಇಲ್ಲ. ಇದರಿಂದಾಗಿ ವಿಶೇಷ ಚೇತನ ಮಕ್ಕಳು ಸಾರ್ವಜನಿಕವಾಗಿ ಆಟೋಟಗಳಲ್ಲಿ ಬೆರೆಯಲು ಸಾಧ್ಯವಾಗುತ್ತಿಲ್ಲ. ಇದನ್ನು ಮನಗಂಡು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಕದ್ರಿ ಪಾರ್ಕ್‌ನ ಒಂದು ಭಾಗದಲ್ಲಿ ಈ ಆಟದ ಪ್ರದೇಶ ನಿರ್ಮಾಣ ಮಾಡಲು ನಿರ್ಧರಿಸಿದೆ.
ಈ ಪ್ರದೇಶವನ್ನು ಕೇವಲ ವಿಶೇಷ ಚೇತನ ಮಕ್ಕಳ ಚಟುವಟಕೆಗಳಿಗೆ ಮಾತ್ರ ನಿಗದಿಪಡಿಸಲು ಮತ್ತು ಅಲ್ಲಿ ಸಂಬಂಧಿತ ಆಟಿಕೆ, ಶೌಚಾಲಯ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ. ಈ ಕುರಿತು ಸೂಕ್ತ ಸೌಲಭ್ಯ ಕಲ್ಪಿಸಲು ಈಗಾಗಲೇ ಸಭೆ ನಡೆಸಿದೆ. ಕದ್ರಿ ಪಾರ್ಕ್‌ನಲ್ಲಿ ಈಗಾಗಲೇ ಸಾಮಾನ್ಯ ಮಕ್ಕಳ ಆಟಕ್ಕೆಂದು ಪ್ರತ್ಯೇಕ ಜಾಗವಿದೆ. ಆದರೆ, ಅಲ್ಲಿ ವಿಶೇಷ ಚೇತನ ಮಕ್ಕಳು ಆಟವಾಡಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಪಾರ್ಕ್ ಒಳಗಿನ ಬಾಲ ಮಂಗಳ ರೈಲು ನಿಲುಗಡೆ ಭಾಗ ದಲ್ಲಿ ಪ್ರತ್ಯೇಕ ಆಟದ ಪ್ರದೇಶ ನಿರ್ಮಾಣವಾಗಲಿದೆ.
ಈ ಕುರಿತಂತೆ ಸದ್ಯದಲ್ಲೇ ರೂಪುರೇಷೆಗಳು ತಯಾರಾಗಲಿದೆ. ಕದ್ರಿ ಪಾರ್ಕ್‌ಗೆ ಈಗಾಗಲೇ ಮೂಲ ಸೌಕರ್ಯ ಕಲ್ಪಿಸಲಾಗುತ್ತಿದ್ದು, ಪಾರ್ಕ್‌ನ ಅಂದ ಹೆಚ್ಚಿಸಲಾಗಿದೆ. ಕಳೆದ ಅನೇಕ ವರ್ಷಗಳಿಂದ ಪಾಳು ಬಿದ್ದಿದ್ದ ಗಂಗನಪಳ್ಳವನ್ನು ಅಭಿವೃದ್ಧಿಪಡಿಸಲಾಗಿದೆ.
ಬಯಲು ರಂಗ ಮಂದಿರಕ್ಕೆ ಹೊಸ ರೂಪ
ಬಯಲು ರಂಗ ಮಂದಿರಕ್ಕೆ ಮುಡಾ ಹೊಸ ರೂಪ ನೀಡಲಿದೆ. ಕರಾವಳಿಯ ವೈಭವವನ್ನು ಸಾರುವ ತ್ರೀಡಿ ಕಲಾಕೃತಿಗಳ ಮೂಲಕರಂಗ ಮಂದಿರ ಮತ್ತಷ್ಟು ಗಮನ ಸೆಳೆಯಲಿದೆ. ರಂಗಮಂದಿರದಲ್ಲೂ ಯಕ್ಷಗಾನ, ಕಂಬಳ, ಬೂತಾರಾಧನೆ ಸಹಿತ ವಿವಿಧ ಕಲಾಕೃತಿಗಳನ್ನು ಇರಿಸಿ ಬಯಲು ರಂಗ ಮಂದಿರ ಅಭಿವೃದ್ಧಿಗೆ ನಿರ್ಧರಿಸಲಾಗಿದೆ
-ನವೀನ್ ಭಟ್ ಇಳಂತಿಲ