Advertisement

ಕರಾವಳಿ ಪ್ರವಾಸೋದ್ಯಮಕ್ಕೆ ಪ್ರತ್ಯೇಕ ಮಾಸ್ಟರ್‌ ಪ್ಲಾನ್‌

01:51 AM Jan 28, 2023 | Team Udayavani |

ಕಾರ್ಕಳ: ಕರಾವಳಿ ಭಾಗದ ಸಾಂಸ್ಕೃತಿಕ, ದೇಗುಲ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಮಾಸ್ಟರ್‌ ಪ್ಲಾನ್‌ ರೂಪಿಸಿ, ಕೈಗಾರಿಕೆಗಳ ಅಭಿವೃದ್ಧಿಗಾಗಿ ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಕಾರ್ಕಳದ ಬೈಲೂರಿನ ಉಮಿಕ್ಕಳ ಬೆಟ್ಟದ ಮೇಲೆ ಸ್ಥಾಪಿಸಿ ರುವ ಪರಶುರಾಮನ 33 ಅಡಿಯ ಕಂಚಿನ ಪ್ರತಿಮೆಯನ್ನು ಶುಕ್ರವಾರ ಅನಾವರಣಗೊಳಿಸಿ ಅವರು ಮಾತನಾಡಿ, ಕರಾವಳಿಯಲ್ಲಿ ಪ್ರವಾಸೊದ್ಯಮಕ್ಕೆ ವಿಪುಲ ಅವಕಾಶಗಳಿವೆ. ಜತೆಗೆ ಕೈಗಾರಿಕೋದ್ಯಮ ಬೆಳೆಯಬೇಕು. ಇದಕ್ಕೆ ಮೂಲಭೂತ ಸೌಕರ್ಯಗಳ ಅಗತ್ಯವಿದೆ. ಬಂದರು, ಲಾಜಿಸ್ಟಿಕ್‌ ಪಾರ್ಕ್‌, ರಸ್ತೆ ಸಂಪರ್ಕ ಆದಾಗ ಸಮಗ್ರ ಅಭಿವೃದ್ದಿ ಸಾಧ್ಯವಿದೆ.

ಕರಾವಳಿಯಲ್ಲಿ ಸುಮಾರು 1.5 ಲ. ಕೋ. ರೂ.ಗಳ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ಇಂಧನ, ಹೈಡ್ರೋಜನ್‌, ಅಮೋನಿಯಾ ಉತ್ಪಾದನೆಗೆ ಹೂಡಿಕೆಯಾಗಲಿದೆ. ಕರಾವಳಿಗೆ ಸಣ್ಣಪುಟ್ಟ ಪ್ಯಾಕೇಜ್‌ ನೀಡಿದರೆ ಬದುಕು ಬದಲಾಗುವುದಿಲ್ಲ. ಬಂದರುಗಳ ಸಾಮರ್ಥ್ಯ, ಹೂಡಿಕೆ, ದೊಡ್ಡ ಪ್ರಮಾಣದ ಆರ್ಥಿಕ ಚಟುವಟಿಕೆಗಳು ನಡೆಯಬೇಕು. ಪ್ಯಾಕೇಜ್‌ ಕೊಡುವುದು ಮುಖ್ಯವಲ್ಲ. ಜನರಿಗೆ ಬದುಕು ಕಟ್ಟಿಕೊಡುವುದು ನಮ್ಮ ಗುರಿ ಎಂದರು.

ಸೃಷ್ಟಿಕರ್ತ
ಕರ್ನಾಟಕಕ್ಕೆ ವಿಶೇಷವಾಗಿ ಕರಾವಳಿಗೆ ಐತಿಹಾಸಿಕ ದಿನವಿದು. ಪರಶುರಾಮ ಥೀಮ್‌ ಪಾರ್ಕ್‌ ಹಾಗೂ ಅತ್ಯಂತ ಎತ್ತರದ ಸ್ಥಾನದಲ್ಲಿ ಪರಶು ರಾಮನ ಪ್ರತಿಮೆ ಸ್ಥಾಪನೆಯಾಗಿ ರುವುದು ಇತಿಹಾಸ ಸೃಷ್ಟಿಸಿದೆ. ಪರಶುರಾಮ ಸೃಷ್ಟಿಕರ್ತನ ಪ್ರಮುಖ ಅಂಗ. ಕರ್ಣನ ವ್ಯಕ್ತಿತ್ವದಂತೆಯೇ ಪರಶುರಾಮನ ವ್ಯಕ್ತಿತ್ವವೂ ಹೌದು. ಆತ ವೀರ, ಶೂರ, ಶಿವನಿಂದ ವರ ಪಡೆದು, ಅಗಾಧ ಶಕ್ತಿಹೊಂದಿದ್ದ. ತಾಯಿಯ ಅತ್ಯಂತ ಪ್ರೀತಿಯ ಮಗನಾದರೂ ತಂದೆಯ ಆಜ್ಞೆಯಂತೆ ತಾಯಿಯ ಶಿರಚ್ಛೇದ ಮಾಡುತ್ತಾನೆ. ಇಡೀ ಭೂಮಂಡಲದಲ್ಲಿ ತನಗೆ ಒಂದು ಸ್ಥಳ ಬೇಕೆಂದು ಕೊಡಲಿ ಎಸೆದು ಸಂಪೂರ್ಣ ಕರಾವಳಿ ಪ್ರದೇಶವನ್ನು ದಾಟಿ ಸಮುದ್ರಕ್ಕೆ ಬಿದ್ದು ಈ ಪ್ರದೇಶ ಸೃಷ್ಟಿಯಾಗುತ್ತದೆ ಎಂಬ ಪ್ರತೀತಿಯಿದೆ ಎಂದರು.

ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್‌ ಕುಮಾರ್‌ ಪ್ರಸ್ತಾವನೆಗೈದರು. ಕೇಂದ್ರ ಕೃಷಿ (ರಾಜ್ಯಖಾತೆ) ಸಚಿವೆ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಅಂಗಾರ, ವಿಧಾನ ಪರಿಷತ್‌ ಸದಸ್ಯ ರವಿಕುಮಾರ್‌, ಶಾಸಕರಾದ ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ಸಿ.ಟಿ.ರವಿ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ, ದಿ ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಮ್ಮಪ್ಪ ಶೆಟ್ಟಿ ಚಣಿಲ, ಮಾಜಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಟ, ನಿರ್ದೇಶಕ ರಿಷಬ್‌ ಶೆಟ್ಟಿ, ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ., ಜಿ.ಪಂ. ಸಿಇಒ ಪ್ರಸನ್ನ ಎಚ್‌., ಎಸ್ಪಿ ಹಾಕೆ ಅಕ್ಷಯ್‌ ಮಚ್ಚೀಂದ್ರ ಉಪಸ್ಥಿತರಿದ್ದರು. ವಿಕ್ರಮ ಹೆಗ್ಡೆ ಸ್ವಾಗತಿಸಿ, ಸಂಗೀತಾ ನಿರ್ವಹಿಸಿದರು. ಕನ್ನಡ ಸಂಸ್ಕೃತಿ ಇಲಾಖೆ ನಿರ್ದೇಶಕಿ ಪೂರ್ಣಿಮಾ ವಂದಿಸಿದರು.

Advertisement

ಕಾರ್ಕಳಕ್ಕೆ ಹೊಸ ಸಂಕೇತ: ರವಿ
ಸೃಷ್ಟಿಕರ್ತನನ್ನೇ ದಿಟ್ಟಿಸಿ ನೋಡುವಂತೆ ಅದ್ಭುತ ಪ್ರತಿಮೆ ನಿರ್ಮಾಣವನ್ನು ಮಿತ್ರ ಸುನಿಲ್‌ ಮಾಡಿ ಕಾರ್ಕಳಕ್ಕೆ ಹೊಸ ಸಂಕೇತ ನೀಡಿದ್ದಾರೆ ಎಂದು ಬಿಜೆಪಿ ಪ್ರ.ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಬೈಲೂರಿನ ಪರಶುರಾಮ ಥೀಂ ಪಾರ್ಕ್‌ ಉದ್ಘಾಟನೆಯ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೀನುಗಾರಿಕೆ, ಒಳನಾಡು ಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌. ಅಂಗಾರ ಸಭಾ ಕಾರ್ಯಕ್ರಮ ಉದ್ಘಾಟಿಸಿ, ಭಕ್ತಿ ಬಂದ ಜಾಗದಲ್ಲಿ ದೈವಿಕಶಕ್ತಿ ಉಂಟಾಗಿ ನೆಮ್ಮದಿ ಮೂಡುತ್ತದೆ. ಅಂತಹ ನೆಮ್ಮದಿ ತಾಣವನ್ನು ಸಚಿವ ಮಿತ್ರ ಸುನಿಲ್‌ ಸೃಷ್ಟಿಸಿದ್ದು. ಭಕ್ತಿಯ ಭಾವನೆ ಅಲ್ಲಿ ಉದ್ದೀಪನವಾಗಿದೆ ಎಂದರು.

ಚಲನಚಿತ್ರ ನಟ, ನಿರ್ಮಾಪಕ ರಿಷಬ್‌ ಶೆಟ್ಟಿ ಮಾತನಾಡಿ ಧರ್ಮ ಬಾಯಿ ಮಾತಿನ ವಿಚಾರವಲ್ಲ. ಸಮಾಜ ಕಟ್ಟುವ ರೀತಿಯಲ್ಲಿ ಆಗಬೇಕು. ಯೋಚನೆ, ವಿಚಾರ, ಆಚಾರಗಳಿಂದ ಆಗಬೇಕು. ಇವೆಲ್ಲವೂ ಬದುಕಿನ ರೀತಿಯಾಗಿದೆ ಎಂದರು.

ನೆಲದಿಂದ 450 ಅಡಿ ಎತ್ತರದ ಬೆಟ್ಟದ ಮೇಲೆ 57 ಅಡಿ ಎತ್ತರದಲ್ಲಿ 33 ಅಡಿಯ ನೀಲಾ ಕಾಯದ ಕಂಚಿನ ಪ್ರತಿಮೆ ವೀಕ್ಷಣೆಗೆ ತೆರೆದಿದೆ. ದೇಶದ ವಿವಿಧೆಡೆಯಿಂದ ಜನರು ಪ್ರತಿಮೆ ವೀಕ್ಷಣೆ ನಡೆಸಲು ಬರಲಾರಂಭಿಸಿದ್ದಾರೆ. ಭಜನ ಮಂದಿರ, ಆರ್ಟ್‌ ಮ್ಯೂಸಿಯಂ ಆಕರ್ಷಣೆ, ತೆರೆದ ಬಯಲು ರಂಗಮಂದಿರ, ಪರಶುರಾಮನ ಜೀವನ ಚರಿತ್ರೆ ತಿಳಿಸುವ ಉಬ್ಬುಚಿತ್ರಗಳು, ಆಡಿಯೋ ವಿಶುವಲ್‌ ಗ್ಯಾಲರಿ, ಪ್ರವಾಸಿಗರಿಗಾಗಿ ರೆಸ್ಟೋರೆಂಟ್‌ ಇದೆ.

ಇತಿಹಾಸ ಸೃಷ್ಟಿಸಬೇಕು
ಪರಶುರಾಮನ ಕುರುಹುಗಳಿದ್ದರೆ ಮುಂದಿನ ಜನಾಂಗಕ್ಕೆ ಆತನ ಕಥೆ ತಿಳಿಯುತ್ತದೆ. ಪರಶುರಾಮನ ದೇವಸ್ಥಾನ ಪಾಜಕದಲ್ಲಿದೆ. ಪುರಾಣಕ್ಕೆ ಐತಿಹಾಸಿಕ ಸಾಕ್ಷಿ ಪ್ರತಿಮೆ ಮೂಲಕ ದೊರೆತಿದೆ. ಬರುವ ದಿನಗಳಲ್ಲಿ ಇದು ಇತಿಹಾಸವಾಗುತ್ತದೆ. ಇತಿಹಾಸದ ಪ್ರಮುಖ ಭಾಗವಾಗಬೇಕು ಇಲ್ಲದಿದ್ದರೆ ಇತಿಹಾಸವನ್ನು ಸೃಷ್ಟಿಸಬೇಕು. ಸಚಿವ ಸುನಿಲ್‌ ಕುಮಾರ್‌ ಈ ಕೆಲಸವನ್ನು ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

ಪುಣ್ಯ ಭೂಮಿ
ಸವದತ್ತಿಯಲ್ಲಿ ಪರಶುರಾಮ ದೇವಾಲಯವನ್ನು ದೊಡ್ಡ ಪ್ರಮಾಣದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಪರಶುರಾಮನ ಪ್ರತಿಮೆ ನೋಡಿದಾಗ ಇಲ್ಲಿಂದಲೇ ತನ್ನ ಕೊಡಲಿಯನ್ನು ಬೀಸಿದ್ದನೇನೋ ಎಂಬ ಭಾವನೆ ಬರುತ್ತದೆ. ಪುಣ್ಯಭೂಮಿಯಾಗಿ ಪ್ರವಾಸೋದ್ಯಮ ಕೇಂದ್ರವಾಗಿ ಇದು ಬೆಳೆಯಲಿದೆ ಎಂದರು.

ವಿಶ್ವ ಭೂಪಟದಲ್ಲಿ ಸ್ಥಾನ ಪಡೆದ ಉಮಿಕ್ಕಳ ಬೆಟ್ಟ
ಶಂಖನಾದಕ್ಕೆ ಪರಶುರಾಮನ ಪ್ರತಿಮೆ ಲೋಕಾರ್ಪಣೆಗೊಂಡಿತು. ಐತಿಹಾಸಿಕ ಕ್ಷಣಕ್ಕೆ ಉಮಿಕ್ಕಳ ಬೆಟ್ಟ ಸಾಕ್ಷಿಯಾಯಿತು. ತುಳುನಾಡಿನ ಪುಣ್ಯ ಭೂಮಿ ಸಾರ್ಥಕತೆ ಪಡೆದುಕೊಂಡಿತು. ಎಲ್ಲರೂ ಪ್ರತಿಮೆಯನ್ನು ಕಣ್ತುಂಬಿಕೊಂಡರು. ಲೋಕಾರ್ಪಣೆ ಕ್ಷಣದಿಂದ ಪ್ರವಾಸಿ ಕೇಂದ್ರವಾಗಿ ಉಮಿಕ್ಕಳ ಬೆಟ್ಟ ವಿಶ್ವ ಭೂಪಟದಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತು.

ಮಾರ್ದನಿಸಿದ ಶಂಖನಾದ
ಪರಶುರಾಮದ ಪಾದದಡಿಯಲ್ಲಿ ಸಹಸ್ರಾರು ಮಂದಿಯಿಂದ ಶಂಖನಾದದ ಸ್ವರ ಮೊಳಗಿತು. ಜಾಗಟೆ ಗಂಟೆ ಬಡಿಯುತ್ತಲೇ ಅಲ್ಲಿ 4 ಕಡೆ ಕೈಯಲ್ಲಿ ಶಂಖ ಹಿಡಿದು ನಿಂತಿದ್ದ ಸಹಸ್ರಾರು ಮಂದಿ ಏಕಕಾಲದಲ್ಲಿ ಶಂಖನಾದ ಮೊಳಗಿಸಿದರು. ಆರಂಭದಲ್ಲಿ ಮೂರು ಬಾರಿ ಶಂಖನಾದ ಮೊಳಗಿಸಲಾಯಿತು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಮೆ ಮೇಲಿನ ಪರದೆ ಎಳೆದು ಲೋಕಾರ್ಪಣೆಗೊಳಿಸಿ ಪ್ರತಿಮೆ ಪಾದಕ್ಕೆ ಪುಷ್ಪಾರ್ಚನೆ ಮಾಡುತ್ತಿದ್ದಂತೆ ಮತ್ತೆ ಐದು ಬಾರಿ ಶಂಖ ಮೊಳಗಿಸಲಾಯಿತು. ನಾದದ ಅಲೆ ತೇಲಿ ಬಂದಾಗ ನೆರೆದ ಪ್ರೇಕ್ಷಕರು ಮೂಕವಿಸ್ಮಿತರಾದರು. ಸೇರಿದ ಜನರು ಪರಶುರಾಮನನ್ನು ಸ್ತುತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next