Advertisement

ಬೆಂಬಲಿಸದ ವಿರಕ್ತರ ವಿರುದ್ಧವೇ ಹೋರಾಟ

06:00 AM Nov 06, 2017 | Harsha Rao |

ಹುಬ್ಬಳ್ಳಿ: ಲಿಂಗಾಯತ ಸ್ವತಂತ್ರ ಧರ್ಮ ಹೋರಾಟಕ್ಕೆ ವೀರಶೈವ ಮಹಾಸಭಾ ಸ್ಪಂದಿಸದಿದ್ದರೆ ಪ್ರತ್ಯೇಕ ಲಿಂಗಾಯತ ಮಹಾಸಭಾ ರಚನೆ ಹಾಗೂ ಹೋರಾಟ ಬೆಂಬಲಿಸದ ವಿರಕ್ತ ಮಠಾಧೀಶರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ’! ಇದು ರವಿವಾರ ನಡೆದ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಾವೇಶದಲ್ಲಿ ಮೂಡಿ ಬಂದ ಎಚ್ಚರಿಕೆಯ ಸಂದೇಶ.

Advertisement

ಇಲ್ಲಿನ ನೆಹರೂ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಪ್ರಮುಖವಾಗಿ ವೀರಶೈವ ಮಹಾಸಭಾ ಹಾಗೂ ಹೋರಾಟ ಬೆಂಬಲಿ ಸದ ವಿರಕ್ತ ಮಠಾಧೀಶರ ವಿರುದ್ಧ ಕಿಡಿ ಕಾರಲಾಯಿತಲ್ಲದೆ, ಪಂಚ ಪೀಠಾಧೀಶ್ವರರ ವಿರುದ್ಧವೂ ತೀವ್ರ ಟೀಕೆಗಳು ಕೇಳಿ ಬಂದವು. ಲಿಂಗಾಯತ ಸ್ವತಂತ್ರ ಧರ್ಮದ ಶಿಫಾರಸನ್ನು ರಾಜ್ಯ ಸರಕಾರ ಆದಷ್ಟು ಶೀಘ್ರ ಕೇಂದ್ರಕ್ಕೆ ಕಳುಹಿಸಿ ಕೊಡಬೇಕೆಂಬ ಒಕ್ಕೊರಲಿನ ಒತ್ತಾಯ ಮೊಳಗಿತು.

ತಾಳ್ಮೆ ಪರೀಕ್ಷೆ ಬೇಡ: ಸಮಾವೇಶದಲ್ಲಿ ಮಾತನಾಡಿದ ಅನೇಕ ಮಠಾಧೀಶರು ಹಾಗೂ ಲಿಂಗಾಯತ ಸ್ವತಂತ್ರ ಧರ್ಮದ ವೇದಿಕೆ ನಾಯಕರು ವೀರಶೈವ ಮಹಾಸಭಾದ ದ್ವಂದ್ವ ನಿಲುವನ್ನು ಕಟುವಾಗಿ ಟೀಕಿಸಿದರು.
ಬಸವಣ್ಣನೇ ಲಿಂಗಾಯತ ಧರ್ಮದ ಸಂಸ್ಥಾಪಕ, ಲಿಂಗಾಯತ ಪ್ರತ್ಯೇಕ ಧರ್ಮದ ಆವಶ್ಯಕತೆ ಇದೆ ಎಂದು ವೀರಶೈವ ಮಹಾಸಭಾದಿಂದಲೇ ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ನೀಡಿದ್ದು, ಈಗ ಸತ್ಯ ಹೇಳಲು ಯಾಕೆ ಹಿಂದೇಟು ಹಾಕಲಾಗುತ್ತಿದೆ. ಯಾರ ಒತ್ತಡ ಇದಕ್ಕೆ ಕಾರಣವಾಗಿದೆ ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಲಾಯಿತು. ಅಖೀಲ ಭಾರತ ವೀರಶೈವ ಮಹಾಸಭಾ ದವರು ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಬೆಂಬಲ ನೀಡಬೇಕು. ಅವರು ಸ್ಪಂದಿಸು ತ್ತಾರೆಂಬ ವಿಶ್ವಾಸ ಹಾಗೂ ಸಮಾಜ ಒಡೆಯುತ್ತಾರೆ ಎಂಬ ಆಪಾದನೆಗೆ ಒಳಗಾಗುವುದು ಬೇಡ ಎಂದು ತಾಳ್ಮೆಯಿಂದ ಕಾಯುತ್ತಿದ್ದೇವೆ. ಇದೇ ಮೊಂಡುತನ ಮುಂದುವರಿದರೆ ಅಖೀಲ ಭಾರತ ಲಿಂಗಾಯತ ಮಹಾ ಸಭಾ ಅಸ್ತಿತ್ವ ಅನಿವಾರ್ಯವಾಗಲಿದೆ ಎಂಬುದು ಬಹುತೇಕರ ಅನಿಸಿಕೆಯಾಗಿತ್ತು. ಕೆಲ ಮಠಾಧೀಶರು ಇನ್ನು ಕಾಯುವುದು ಬೇಡ, ಲಿಂಗಾಯತ ಮಹಾಸಭಾ ರಚನೆಗೆ ಮುಂದಾಗಿ ಎಂದು ಸಲಹೆ ನೀಡಿದರು.

ಲಿಂಗಾಯತ ಸ್ವತಂತ್ರ ಧರ್ಮಕ್ಕೆ ವೀರ ಶೈವ ಮಹಾಸಭಾ ಹಾಗೂ ಪಂಚ ಪೀಠಾಧೀಶ್ವರರು ಪ್ರಮುಖ ಅಡ್ಡಿಯಾಗಿದ್ದಾರೆ. ಪಂಚ ಪೀಠಾಧೀಶ್ವರರು ಜಂಗಮ ಜಾತಿಗೆ ಮೀಸಲಾತಿ ಕೇಳಲು ಆಗ ಪ್ರಧಾನಿಯಾಗಿದ್ದ ವಾಜಪೇಯಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದರು. ಆದರೆ ಮಠಗಳ ಭಕ್ತರಾದ 99 ಉಪಪಂಗಡ ಹೊಂದಿದ ಲಿಂಗಾಯತ ಸಮಾಜಕ್ಕೆ ಸೌಲಭ್ಯ ಬೇಡ ಎಂದರೆ ಹೇಗೆ? ಇಲ್ಲಿಯವರೆಗೆ ನಂಬಿಸಿ ನಮ್ಮನ್ನು ಕತ್ತಲಲ್ಲಿಟ್ಟಿದ್ದು ಸಾಕು, ನಾವಿನ್ನು ಜಾಗೃತರಾಗಿದ್ದೇವೆ. ಸ್ವತಂತ್ರ ಧರ್ಮದ ಮಾನ್ಯತೆ ಪಡೆಯುತ್ತೇವೆ ಎಂಬುದು ಸಮಾವೇಶದ ಒಟ್ಟಾರೆ ಆಶಯವಾಗಿತ್ತು.

ಗದಗ ತೋಂಟದಾರ್ಯಮಠದ ಡಾ| ಸಿದ್ಧಲಿಂಗ ಸ್ವಾಮೀಜಿ, ಚಿತ್ರದುರ್ಗದ ಡಾ| ಶಿವಮೂರ್ತಿ ಮುರುಘಾ ಶರಣರು, ಬೆಳಗಾವಿ ನಾಗನೂರು ಮಠದ ಡಾ| ಸಿದ್ದರಾಮ ಸ್ವಾಮೀಜಿ, ಮಾತೆ ಮಹಾದೇವಿ, ಶ್ರೀಶೈಲ ಸಾರಂಗಮಠದ ಡಾ| ಸಾರಂಗಧರೇಶ್ವರ ಸ್ವಾಮೀಜಿ, ಅಕ್ಕ ಅನ್ನಪೂರ್ಣ, ಕೂಡಲಸಂಗಮದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಸಚಿವರಾದ ಎಂ.ಬಿ. ಪಾಟೀಲ, ವಿನಯ ಕುಲಕರ್ಣಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ವಿಧಾನಸಭೆ ಸದಸ್ಯ ಬಿ.ಆರ್‌. ಪಾಟೀಲ, ನಿವೃತ್ತ ಐಎಎಸ್‌ ಅಧಿಕಾರಿ ಡಾ| ಎಸ್‌.ಎಂ. ಜಾಮದಾರ ಮಾತನಾಡಿದರು. ನಾಡೋಜ ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Advertisement

ಸಚಿವ ಶರಣ ಪ್ರಕಾಶ ಪಾಟೀಲ, ಸಂಸದ ಪ್ರಕಾಶ ಹುಕ್ಕೇರಿ, ವಿಧಾನಸಭೆ ಸದಸ್ಯರಾದ ಅಶೋಕ ಪಟ್ಟಣದ, ಗಣೇಶ ಹುಕ್ಕೇರಿ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್‌, ಮಾಜಿ ಸಚಿವರಾದ ಎಸ್‌.ಎಸ್‌. ಪಾಟೀಲ, ಎ.ಬಿ. ಪಾಟೀಲ, ಪಿ.ಸಿ. ಸಿದ್ದನಗೌಡರ, ಮಾಜಿ ಸಂಸದ ಮಂಜುನಾಥ ಕುನ್ನೂರು, ವಿಧಾನ ಪರಿಷತ್‌ ಮಾಜಿ ಸದಸ್ಯ ನಾಗರಾಜ ಛಬ್ಬಿ ಸಹಿತ ವಿವಿಧ ಮಠಾಧೀಶರು, ಮುಖಂಡರು ಇದ್ದರು.

ವಿರಕ್ತ ಮಠಾಧೀಶರಿಗೆ ಎಚ್ಚರಿಕೆ: ಬಸವ ತತ್ತÌದಡಿಯಲ್ಲಿ ಅಸ್ತಿತ್ವಕ್ಕೆ ಬಂದ ವಿರಕ್ತ ಮಠಗಳಲ್ಲಿ ಅನೇಕ ಮಠಾಧೀಶರು ಲಿಂಗಾಯತ ಸ್ವತಂತ್ರ ಧರ್ಮದ ಹೋರಾಟದಿಂದ ದೂರ ಇದ್ದಾರೆ. ಅಷ್ಟೇ ಅಲ್ಲ ಹೋರಾಟದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ವಿರಕ್ತ ಮಠಾಧೀಶರು ಮುಂದಿನ ಸಮಾವೇಶದಲ್ಲಿ ಪಾಲ್ಗೊಳ್ಳದಿದ್ದರೆ ಅವರ ವಿರುದ್ಧವೇ ಹೋರಾಟ ಶುರುವಾಗುವುದು ಖಂಡಿತ ಎಂದು ಎಚ್ಚರಿಕೆ ನೀಡಲಾಯಿತು. ವಿರಕ್ತ ಮಠಗಳಿಗೆ ಇರುವ ಆಸ್ತಿ ಭಕ್ತರು ನೀಡಿದ ದಾನವಾಗಿದೆ. ಭಕ್ತರ ನೋವಿಗೆ ಸ್ಪಂದಿಸುವುದು ಮಠಾಧೀಶರ ಕರ್ತವ್ಯ. ಮಠಾಧೀಶರು ಜನರಿಗಾಗಿ ಇದ್ದಾರೆ ವಿನಾ ಮಠಾಧೀಶರಿಗಾಗಿ ಜನ ಇಲ್ಲ ಎಂಬ ಸತ್ಯ ಅರಿಯಬೇಕು. ಇಲ್ಲವಾದರೆ ಬಸವತತ್ವ ಒಪ್ಪದ ಮಠಾಧೀಶರನ್ನು ಮಠ ಖಾಲಿ ಮಾಡಿಸುವ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಮಾವೇಶದಲ್ಲಿ ಅಭಿಪ್ರಾಯ ಪಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next