Advertisement

Mangaluru: ಸಾಕು ಪ್ರಾಣಿಗಳ ಅಂತ್ಯಕ್ರಿಯೆಗೆ ಪ್ರತ್ಯೇಕ ಶ್ಮಶಾನ

04:22 PM Jul 30, 2024 | Team Udayavani |

ಮಹಾನಗರ: ಮುದ್ದಿನಿಂದ ಸಾಕಿದ ನಾಯಿ, ಬೆಕ್ಕುಗಳು ಮೃತಪಟ್ಟಾಗ ಅವುಗಳ ಅಂತ್ಯಕ್ರಿಯೆ ಹೇಗೆ, ಎಲ್ಲಿ ಮಾಡುವುದು ಎಂದು ತಿಳಿಯದೆ ಕಂಗಾಲಾಗುವ ಪ್ರಾಣಿಪ್ರಿಯರ ಸಂಕಟಕ್ಕೆ ಕೊನೆಗೂ ಮುಕ್ತಿ ಸಿಗುವ ಕಾಲ ಸನ್ನಿಹಿತವಾಗಿದೆ. ನಂದಿಗುಂಡ್ಡದಲ್ಲಿರುವ ಶ್ಮಶಾನದ ಪಕ್ಕದ ಜಾಗವನ್ನು ಇದೀಗ ಪ್ರಾಣಿಗಳ ಅಂತ್ಯಸಂಸ್ಕಾರಕ್ಕಾಗಿ ಮೀಸಲಿಡಲು ಮಂಗಳೂರು ಪಾಲಿಕೆ ತೀರ್ಮಾನಿಸಿದೆ. ನಂದಿಗುಡ್ಡೆ ಶ್ಮಶಾನದ ಒಂದು ಭಾಗದಲ್ಲಿ 20 ಸೆಂಟ್ಸ್‌ ಜಾಗ ಗುರುತಿಸಲಾಗಿದ್ದು, ಪಾಲಿಕೆ ಸಭೆಯಲ್ಲಿ ಅನುಮತಿ ಪಡೆಯಲಾಗಿದೆ. ಅನುದಾನ ಕಾಯ್ದಿರಿಸಿ ಶೀಘ್ರ ಕಾಮಗಾರಿ ಆರಂಭಗೊಳ್ಳುವ ನಿರೀಕ್ಷೆ ಇದೆ.

Advertisement

ಪ್ರಾಣಿಗಳ ಶವ ಸಂಸ್ಕಾರಕ್ಕೆ ನಗರದಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ವಿಶಾಲ ಜಾಗ ಉಳ್ಳವರು ತಮ್ಮ ಮನೆಯ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರೆ, ಅಪಾರ್ಟ್‌ಮೆಂಟ್‌,ಸಣ್ಣ ಜಾಗದಲ್ಲಿ ವಾಸ ಮಾಡುವವರಿಗೆ ತೊಂದರೆ ಆಗುತ್ತಿತ್ತು. ನಗರದೊಳಗೆ ಸಣ್ಣ ಜಾಗ ಗುರುತಿಸಿ ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಬೇಕು ಎಂದು ಪ್ರಾಣಿ ಪ್ರಿಯರು ಅನೇಕ ವರ್ಷದಿಂದ ಆಗ್ರಹಿಸುತ್ತಿದ್ದರು.

ಕೆತ್ತಿಕಲ್‌ನಲ್ಲಿ ಉದ್ದೇಶಿಸಲಾಗಿತ್ತು
ಈ ಹಿಂದೆ ಮಂಗಳೂರಿನ ತಿರುವೈಲು ಗ್ರಾಮದ ಕೆತ್ತಿಕಲ್‌ನಲ್ಲಿ ಪ್ರಾಣಿಗಳ ಶ್ಮಶಾನ ನಿರ್ಮಾಣಕ್ಕೆ ನಿರ್ಧರಿಸಲಾಗಿತ್ತು. ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಾರ್ವಜನಿಕ ಶ್ಮಶಾನದ ಪಕ್ಕದಲ್ಲೇ ಮೂಕಪ್ರಾಣಿಗಳ ಅಂತ್ಯಕ್ರಿಯೆಗೂ ಅವಕಾಶ ನೀಡಲು ಸಿದ್ಧತೆ ನಡೆಸಲಾಗಿತ್ತು. 2024-25 ಬಜೆಟ್‌ನಲ್ಲಿ 1.50 ಕೋ. ರೂ. ಕಾಯ್ದಿರಿಸಲಾಗಿತ್ತು. ಗ್ರಾಮಾಂತರಕ್ಕಿಂತ ನಗರದಲ್ಲಿನಿರ್ಮಿಸಬೇಕೆಂಬ ಆಗ್ರಹ ಹೆಚ್ಚಿರುವ ಕಾರಣ ಮೊದಲ ಹಂತದಲ್ಲಿ ನಗರ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಗ ಹೇಗೆ ನಡೆಯುತ್ತಿದೆ ಅಂತ್ಯಕ್ರಿಯೆ?

ನಗರ ಫ್ಲ್ಯಾಟ್‌ವಾಸಿಗಳಲ್ಲಿ ಶೇ.40ಕ್ಕೂ ಅಧಿಕ ಜನ ನಾಯಿ ಹಾಗೂ ಬೆಕ್ಕುಗಳನ್ನುಸಾಕುತ್ತಾರೆ. ಸಣ್ಣಪುಟ್ಟ ಮನೆಗಳಲ್ಲೂ ನಾಯಿ, ಬೆಕ್ಕುಗಳಿವೆ. ಅನಾರೋಗ್ಯ ಸಂದರ್ಭಗಳಲ್ಲಿ ವೈದ್ಯರಲ್ಲಿಗೆ ಕೊಂಡೊಯ್ದು ಚಿಕಿತ್ಸೆಕೊಡಿಸುತ್ತಾರೆ. ಆದರೆ ಸಾವು ಸಂಭವಿಸಿದ ವೇಳೆ ಅಂತ್ಯಕ್ರಿಯೆ ನಡೆಸಲು ಭಾರಿ ಸಮಸ್ಯೆ ಎದುರಿಸುತ್ತಾರೆ.

Advertisement

ಕೆಲವರು ಖಾಸಗಿ ಜಾಗಗಳಲ್ಲಿರುವ ತಮ್ಮ ಸ್ನೇಹಿತರಲ್ಲಿ ವಿನಂತಿ ಮಾಡಿಕೊಂಡು ಅವುಗಳನ್ನು ಮಣ್ಣು ಮಾಡುತ್ತಾರೆ.

ಹೆಚ್ಚಿನವರು ಒಲ್ಲದ ಮನಸ್ಸಿನಿಂದ ಪಾಲಿಕೆಯ ಕಸದೊಂದಿಗೆ ಎಸೆಯುತ್ತಾರೆ. ವಿಷಯ ಗೊತ್ತಾದರೆ ಸಿಬ್ಬಂದಿಯೂ ಅದನ್ನು ಒಯ್ಯಲು ನಿರಾಕರಿಸುವುದೂ ಇದೆ.

ಭಾವನಾತ್ಮಕ ಸಂಬಂಧವಿದ್ದರೂ ನ್ಯಾಯಯುತ ಅಂತ್ಯ ಸಂಸ್ಕಾರ ನೀಡಲು ಸಾಧ್ಯವಾಗುತ್ತಿಲ್ಲ ಎನ್ನುವ ಅಳಲು ಪ್ರಾಣಿಪ್ರಿಯರನ್ನು ಕಾಡುತ್ತದೆ.

ಎಲ್ಲ ನಗರಗಳಲ್ಲೂ ಪ್ರಾಣಿಗಳ ಶ್ಮಶಾನ ನಿರ್ಮಿಸಬೇಕು ಎಂದು ಕೇಂದ್ರದ ಪ್ರಾಣಿ ದಯಾ ಸಂಘದಿಂದ ಸೂಚನೆ ಇದೆ. ಮುದ್ದಿನಿಂದ ಸಾಕಿದ ಪ್ರಾಣಿಗಳನ್ನು ಗೌರವಯುತವಾಗಿ ದಫನ ಮಾಡಬೇಕು. ಇದಕ್ಕಾಗಿ ನಗರದಲ್ಲಿ ಶ್ಮಶಾನದ ಅಗತ್ಯವಿದ್ದು, ನಂದಿಗುಡ್ಡೆಯಲ್ಲಿ ಪಾಲಿಕೆ ನಿರ್ಮಾಣಕ್ಕೆ ಮುಂದಾಗಿರುವುದು ಸ್ವಾಗತಾರ್ಹ.

– ಕಟೀಲು ದಿನೇಶ್‌ ಪೈ, ಪ್ರಾಣಿ ದಯಾ ಸಂಘದ ಸದಸ್ಯರು

ಮೂಕ ಪ್ರಾಣಿಗಳಿಗೂ ಗೌರವಯುತ ಅಂತ್ಯಕ್ರಿಯೆ ನಡೆಸಬೇಕು. ಪ್ರಾಣಿಗಳ ಶವ ಸಂಸ್ಕಾರಕ್ಕೆ ನಗರದೊಳಗೆ ಶ್ಮಶಾನ ಬೇಕೆಂಬುವುದು ಪ್ರಾಣಿ ಪ್ರಿಯರ ಆಗ್ರಹ. ಅದರಂತೆ ಅತ್ತಾವರ ನಂದಿಗುಡ್ಡ ರುದ್ರಭೂಮಿಯಲ್ಲಿ ಜಾಗ ಗುರುತಿಸಲಾಗಿದೆ. ಶೀಘ್ರದಲ್ಲೇ ಈ ಕಾಮಗಾರಿ ಆರಂಭಗೊಳ್ಳಲಿದೆ.

– ಸುಧೀರ್‌ ಶೆಟ್ಟಿ ಕಣ್ಣೂರು, ಪಾಲಿಕೆ ಮೇಯರ್‌

– ಸಂತೋಷ್‌ ಮೊಂತೇರೊ

Advertisement

Udayavani is now on Telegram. Click here to join our channel and stay updated with the latest news.

Next