Advertisement

ಮುಳಿ ಮಾಡಿನ ಕಟ್ಟಡದಲ್ಲಿ ಆರಂಭವಾದ ಶಾಲೆಗೀಗ 112ರ ಹರೆಯ

01:09 PM Nov 09, 2019 | mahesh |

1907 ಶಾಲೆ ಆರಂಭ
ಜಿಲ್ಲೆಯ ಮೊದಲ ಬೋರ್ಡ್‌ ಶಾಲೆ

Advertisement

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ಕೈಕಂಬ: ಕಿನ್ನಿಕಂಬಳ ಹೈಯರ್‌ ಎಲಿಮೆಂಟರಿ ಶಾಲೆಯು 1907ರಲ್ಲಿ ಸ್ಥಾಪನೆಗೊಂಡಿತ್ತು. ದಿ| ಬಾಗಲೋಡಿ ರಾಮರಾಯರು ಇದರ ಸ್ಥಾಪಕರು. ಈ ಪ್ರದೇಶದಲ್ಲಿ ಶಾಲೆ ಇಲ್ಲದ ಕಾರಣ ಹಾಗೂ ಓದು ಬರಹ ಕಲಿಕೆಗೆ ಜನರು ಕಷ್ಟ ಪಡುತ್ತಿದ್ದ ಕಾಲದಲ್ಲಿ ಈ ಶಾಲೆಯ ಸ್ಥಾಪನೆಯಾಗಿತ್ತು. ದಿ.ಬಾಗಲೋಡಿ ರಾಮರಾಯರು ಅವರ ಸ್ವಂತ ಜಾಗದಲ್ಲಿಯೇ ಈ ಶಾಲೆಯನ್ನು ಸ್ಥಾಪಿಸಿದ್ದರು. 1912ರಲ್ಲಿ ಶಾಲೆಯ ಕಟ್ಟಡ, ಉಪಕರಣ, 27 ಸೆಂಟ್ಸ್‌ ಜಾಗವನ್ನು ಮಂಗಳೂರು ತಾಲೂಕು ಬೋರ್ಡ್‌ಗೆ ದಾನಪತ್ರನೀಡಿ ಬಿಟ್ಟು ಕೊಟ್ಟರು. ಇದು ಜಿಲ್ಲೆಯಲ್ಲಿ ಬೋರ್ಡ್‌ನಿಂದ ತೆರೆಯಲ್ಪಟ್ಟ ಪ್ರಥಮ ಹೈಯರ್‌ ಎಲಿಮೆಂಟರಿ ಶಾಲೆಯಾಗಿದೆ.

8 ಶಿಕ್ಷಕರು, 8 ತರಗತಿ
ಬಾಗಲೋಡಿ ರಾಮರಾಯರೇ ಮೊದಲ ಮುಖ್ಯೋಪಾಧ್ಯಾಯರು. ಶಾಲೆ ಆರಂಭವಾದಾಗ 8 ಶಿಕ್ಷಕರು, 8 ತರಗತಿಗಳಿದ್ದವು. 30ವಿದ್ಯಾರ್ಥಿಗಳು ಶಿಕ್ಷಣ ಪಡೆಯಲು ಹಾಜರಾಗಿದ್ದರು. 150 ಅಡಿ ಉದ್ದ, 30 ಅಡಿ ಅಗಲದ ಮಣ್ಣಿನ ಗೋಡೆ ಮುಳಿ ಮಾಡಿನ ಕಟ್ಟಡದಲ್ಲಿ ಆರಂಭವಾದ ಶಾಲೆ ಹೂ ತೋಟಗಳ ನಿಸರ್ಗದ ಮಡಿಲಲ್ಲಿ ಪಾಠ ನಡೆದಿತ್ತು.

ಶಾಲೆಯಲ್ಲಿ ಶಿಕ್ಷಣದ ಜತೆಗೆ ವೃತ್ತಿ ತರಗತಿಗಳು, ಸೋಪು ತಯಾರಿಕೆ, ಕತ್ತದ ಹಗ್ಗ ಮಾಡುವುದು, ನೇಯ್ಗೆ, ತಕಲಿ ಚರಕಗಳಲ್ಲಿ ನೂಲು ತೆಗೆಯುವುದು, ಶಾಲೆಯಿಂದ ಪತ್ರಿಕೆ ಹೊರಡಿಸುವುದು, ಸಂಗೀತ ನೃತ್ಯ ಕಲಿಕೆ, ಪದಬಂಧ ರಚನೆ ಅನೇಕ ಜೀವನೋಪಯೋಗಿ ವಿದ್ಯೆಗಳನ್ನು ಕಲಿಸುವುದರೊಂದಿಗೆ ಮುಂದಿನ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕೆಂಬ ದೃಷ್ಟಿಯಲ್ಲಿ ಉತ್ತಮ ಪ್ರಜೆಗಳಾಗಿ ಮೂಡಿ ಬರಲಿ ಎಂಬ ಧ್ಯೇಯೋದ್ದೇಶದೊಂದಿಗೆ ಸ್ಥಾಪಿಸಲಾಗಿತ್ತು.

Advertisement

ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿಯಾಗಿದ್ದ ಹೆಸರಾಂತ ಕನ್ನಡ ಸಾಹಿತಿ ದಿ|ಬಾಗಲೋಡಿ ದೇವರಾಯರು, ಕರ್ನಾಟಕ ರಾಜ್ಯ ಸಂಪುಟದಲ್ಲಿ ಸಚಿವರಾಗಿದ್ದ ದಿ| ಪಿ.ಎಫ್‌. ರೊಡ್ರಿಗಸ್‌, ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ದಿ| ಅ. ಬಾಲಕೃಷ್ಣ ಶೆಟ್ಟಿ ಪೊಳಲಿ, ನಿವೃತ್ತ ಡಿಐಜಿ ಕೆ. ಶ್ರೀನಿವಾಸ ಆಳ್ವ, ವೈದ್ಯರಾದ ಡಾ| ಎಂ.ಎನ್‌. ನಾಯಕ್‌ ಮಣೇಲ್‌, ಡಾ| ಪಿ. ವಿಟuಲರಾಯರು, ಪತ್ರಕರ್ತ ಬಾಗಲೋಡಿ ಮಾಧವ ರಾಯರು, ಬಾಗಲೋಡಿ ಸುಬ್ರಹ್ಮಣ್ಯ ಶರ್ಮ, ನಿವೃತ್ತ ಡಿ.ಎಫ್‌.ಒ. ಮಿಜಾರು ರಾಮಗೌಡ, ಕಂಪ್ಯೂಟರ್‌ಗೆ ಕನ್ನಡವನ್ನು ಕಲಿಸಿದ ಖ್ಯಾತಿಯ ವಿಜ್ಞಾನಿ, ಭಾಷಾ ತಜ್ಞ ಕೆ.ಪಿ. ರಾವ್‌, ಪೊಲೀಸ್‌ ಅಧಿಕಾರಿ ದಿ| ಮುಂಡಬೆಟ್ಟು ಮಹಾಬಲ ಹೆಗ್ಡೆ, ಪಶು ವೈದ್ಯಾಧಿಕಾರಿ, ನಿರ್ದೇಶರಾಗಿದ್ದ ದಿ| ಡಾ| ವಿಟuಲ ಮಲ್ಲಿ, ಮಿಜಾರು ಮುಂಡಬೆಟ್ಟು ದೇಜು ನಾಯ್ಕ, ಮಿಜಾರುಗುತ್ತು ಆನಂದ ಆಳ್ವ, ಮುಂಬಯಿನ ನಿವೃತ್ತ ಪೊಲೀಸ್‌ಅಧಿಕಾರಿ ಪ್ರಕಾಶ್‌ ಭಂಡಾರಿ ಈ ಶಾಲೆಯ ಹಳೆ ವಿದ್ಯಾರ್ಥಿಗಳು.

ಮಿಜಾರು, ಎಡಪದವು, ಮೂಡುಶೆಡ್ಡೆ, ಪೊಳಲಿ, ಕೊಂಪದವು, ಗಂಜಿಮಠ,ಪೆರಾರ, ಕೊಳಂಬೆ, ಕಂದಾವರ, ಗುರುಕಂಬಳ ಮುಂತಾದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಈ ಶಾಲೆಯೇ ಮುಖ್ಯ ಆಸರೆ. ಸದ್ಯ ಶಾಲೆಯಲ್ಲಿ 6 ಶಿಕ್ಷಕರು ಮತ್ತು 188 ವಿದ್ಯಾರ್ಥಿಗಳಿದ್ದಾರೆ. ಈಗ ಈ ವ್ಯಾಪ್ತಿಯಲ್ಲಿ 25ಶಾಲೆಗಳಿವೆ. ನಿವೃತ್ತ ಮುಖ್ಯೋಪಾಧ್ಯಾಯಿನಿ ಯು. ಲಲಿತಾ ರಾವ್‌ ಜಿಲ್ಲಾ ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ ಪಡೆದಿದ್ದಾರೆ. ಈ ಶಾಲೆ ತಾಲೂಕು ಮಟ್ಟದ ಪರಿಸರ ಸ್ವತ್ಛತೆ ಪ್ರಶಸ್ತಿಯನ್ನು ಪಡೆದಿದೆ.

2004ರಲ್ಲಿ ಸಂಘ ಸ್ಥಾಪನೆ
2004ರಲ್ಲಿ ಕಿನ್ನಿಕಂಬಳ ವಿದ್ಯಾವರ್ಧಕ ಸಂಘ ಸ್ಥಾಪನೆ ಯಾಗಿತ್ತು. ಇದರ ನೇತೃತ್ವದಲ್ಲಿ ಶಾಲಾ ಶತಮನೋತ್ಸವ ನೆನಪಿಗಾಗಿ 2007ರಲ್ಲಿ ಕಿನ್ನಿಕಂಬಳ ಶಾಲಾ ಶತಮಾನೋತ್ಸವ ಸೌಧ ನಿರ್ಮಾಣವಾಗಿತ್ತು. ಈ ಸಂಘದಿಂದ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಎಸೆಸೆಲ್ಸಿಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪಿಯುಸಿ, ಪದವಿ ವರಗೆ ವಿದ್ಯಾರ್ಥಿವೇತನ ನೀಡಲಾಗುತ್ತದೆ. 70 ವಿದ್ಯಾರ್ಥಿಗಳು ಈ ಬಾರಿ ವಿದ್ಯಾರ್ಥಿವೇತನ ಪಡೆದಿದ್ದಾರೆ. ಈ ಸಂಘದ ಸ್ಥಾಪಕಾಧ್ಯಕ್ಷರು ಹಾಗೂ ಅಧ್ಯಕ್ಷರು ಶತಾಯುಷಿ ಮಿಜಾರು ಗುತ್ತು ಆನಂದ ಆಳ್ವ, ಕಾರ್ಯಾಧ್ಯಕ್ಷ ಎಂ. ನರಸಿಂಗ ರೈ, ಕಾರ್ಯದರ್ಶಿ ಡಾ| ಶ್ರೀಪತಿ ಕಿನ್ನಿಕಂಬಳ ಅವರ ನೇತೃತ್ವದಲ್ಲಿ, ಹಳೆವಿದ್ಯಾರ್ಥಿಗಳು ಆಧಾರಸ್ತಂಭವಾಗಿ ಶಾಲೆಯ ಉಳಿವಿಗೆ ಪ್ರಯತ್ನಿಸುತ್ತಿದ್ದಾರೆ. 2007ರಲ್ಲಿ ಸರಕಾರಿ ಪ್ರೌಢಶಾಲೆ ಆರಂಭವಾಗಿತ್ತು.

112 ವರ್ಷಗಳನ್ನು ಪೊರೈಸಿದ ಶಾಲೆ, ಲಕ್ಷಾಂತರ ವಿದ್ಯಾರ್ಥಿಗಳು ಶಿಕ್ಷಣ ಪಡೆದು ದೇಶ ವಿದೇಶದಲ್ಲಿ ದೊಡ್ಡದೊಡ್ಡ ಹುದ್ದೆಯನ್ನು ಆಲಂಕರಿಸಿರುವುದು ಹೆಮ್ಮಯಾಗುತ್ತಿದೆ. ಚಸಂಘ ಶಾಲಾ ಸರ್ವತೋಮುಖ ಅಭಿವೃದ್ಧಿಗೆ ಸಹಕರಿಸುತ್ತಿದೆ. ಉತ್ತಮ ಶಿಕ್ಷಕ ವೃಂದಕೂಡ ಇಲ್ಲಿದೆ. ಶಿಕ್ಷಣಕ್ಕೆ ಬೇಕಾದ ವಾತಾವರಣ, ಮೂಲ ಸೌಕರ್ಯ ಇಲ್ಲಿದೆ.
-ಪುಷ್ಪಾಲತಾ ಎಸ್‌., ಶಾಲಾ ಮುಖ್ಯೋಪಾಧ್ಯಾಯಿನಿ

ಶಿಸ್ತು, ಶಿಕ್ಷಣಕ್ಕೆ ಹೆಸರಾಗಿತ್ತು. ಕಲಿಕೆಗೆ ಪೂರಕ ವಾತಾವರಣವಿತ್ತು. ಉತ್ತಮ ವ್ಯಕ್ತಿತ್ವ, ಬದುಕನ್ನು ರೂಪಿಸುವಲ್ಲಿ ಶಿಕ್ಷಕರು ಸದಾ ಮಾರ್ಗದರ್ಶನ ನೀಡಿದ ಫಲ ಇಂದು ನಾವು ಈ ಮಟ್ಟಕ್ಕೇರಿದ್ದೇವೆ. ಪ್ರತಿಯೊಬ್ಬನ ಪ್ರಾಥಮಿಕ ಶಿಕ್ಷಣ ಪ್ರಾಮುಖ್ಯವಾಗಿದೆ. ಅದು ಯಶಸ್ಸು ಗಳಿಸುವಲ್ಲಿ ಮುಖ್ಯ ಭೂಮಿಕೆ ವಹಿಸುತ್ತದೆ.
ಷಣ್ಮುಗಂ, ಶಾಲಾ ಹಳೆ ವಿದ್ಯಾರ್ಥಿ

Advertisement

Udayavani is now on Telegram. Click here to join our channel and stay updated with the latest news.

Next