ಸಾಗರ: ಇಲ್ಲಿನ ಶ್ರೀಗಂಧ ಸಂಕೀರ್ಣದ ಗಂಗಾಧರ್ ಗುಡಿಗಾರ್ ಶ್ರೀಗಂಧದಿಂದ ತಯಾರಿಸಿದ ಆಭರಣ ಪೆಟ್ಟಿಗೆ ದೆಹಲಿಯಲ್ಲಿ ನಡೆದ ಕರಕುಶಲ ವೈಭವ ಪ್ರದರ್ಶನದಲ್ಲಿ ರಾಷ್ಟ್ರಪ್ರಶಸ್ತಿಗೆ ಭಾಜನವಾಗಿದೆ. ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ರಾಷ್ಟ್ರಪ್ರಶಸ್ತಿ ಪುರಸ್ಕೃತ ಕುಶಲಕರ್ಮಿ ಗಂಗಾಧರ್ ಅವರನ್ನು ಸ್ವಗೃಹದಲ್ಲಿ ಸನ್ಮಾನಿಸಿದರು.
ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾದ ಶ್ರೀಗಂಧದ ಕಲಾಕೃತಿಯಲ್ಲಿ ರಾಮಾಯಣದ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗ, ಮಹಾಭಾರತದ ದಶಾವತಾರ ಪ್ರಸಂಗ, ರಾಷ್ಟ್ರೀಯ ಪ್ರಾಣಿ ಹುಲಿ, ರಾಷ್ಟ್ರೀಯ ಪಕ್ಷಿ ನವಿಲು ಹಾಗೂ ಆನೆ, ಜಿಂಕೆ ಸಂತತಿ ಸಂರಕ್ಷಿಸುವ ಕುರಿತ ನವಿರಾದ ಕೆತ್ತನೆಗಳಿವೆ. ಲವಂಗ ಹೂ, ಭತ್ತದ ತೆನೆಗಳ ಸಾಲುಗಳುಳ್ಳ ಅತ್ಯಂತ ಸೂಕ್ಷ್ಮ ಕೆತ್ತನೆ ಕೆಲಸ ನಿರ್ವಹಿಸಲಾಗಿದೆ.
ಈ ವಿಶೇಷ ಮಾದರಿಯ ಆಭರಣ ಪೆಟ್ಟಿಗೆ 19 ಇಂಚು ಅಗಲ ಮತ್ತು ೧೪ ಇಂಚು ಉದ್ದ ಇದ್ದು, ಅಂದಾಜು ಮೊತ್ತ ಸುಮಾರು 10 ಲಕ್ಷ ರೂ. ಎಂದು ಪೆಟ್ಟಿಗೆ ತಯಾರಕರು ಹೇಳುತ್ತಾರೆ. ಗಂಧದ ಪೆಟ್ಟಿಗೆ ಒಳಭಾಗದಲ್ಲಿ ಫೋಟೋ ಫ್ರೇಮ್, ಸಿಕ್ರೇಟ್ ಲಾಕರ್, ಒಡವೆಗಳನ್ನು ಇಡಲು ಸ್ಥಳಾವಕಾಶ ಕಲ್ಪಿಸಲಾಗಿದೆ.
ಗಂಗಾಧರ್ ಅವರು ಕೆತ್ತನೆ ಕಲಾಕೃತಿಗಳಿಗೆ ಈ ಹಿಂದೆ ನ್ಯಾಷನಲ್ ಮೆರಿಟ್ ಅವಾರ್ಡ್, ರಾಜ್ಯ ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ ಸಹ ಲಭಿಸಿದೆ. ರಾಷ್ಟ್ರಪ್ರಶಸ್ತಿ ಪಡೆದ ಕುಶಲ ಕರ್ಮಿಯನ್ನು ಗೌರವಿಸಿ ಮಾತನಾಡಿದ, ಶಾಸಕ ಹಾಲಪ್ಪ, ಇಂತಹ ಕುಶಲಕರ್ಮಿಗಳು ನಮ್ಮೂರಿನ ಆಸ್ತಿಯಾಗಿದ್ದಾರೆ. ಇವರನ್ನು ಗೌರವಿಸಿದರೆ ನಮ್ಮನ್ನು ಗೌರವಿಸಿಕೊಂಡಂತೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೀಪಕ್ ಮರೂರು ಹಾಗೂ ಕುಟುಂಬಸ್ಥರು ಹಾಜರಿದ್ದರು.