Advertisement

ಬಸ್ರೂರಿನಲ್ಲಿ ಹಾಳು ಬಿದ್ದ ರೇಡಿಯೋ ಪಾರ್ಕ್‌

01:00 AM Feb 11, 2019 | Harsha Rao |

ಬಸ್ರೂರು: ಬಸ್ರೂರು ಬಸ್‌ ನಿಲ್ದಾಣದ ಸಮೀಪ ಅಶೋಕ ಪಾರ್ಕ್‌ ಹೆಸರಿನ ಉದ್ಯಾನವಿದೆ. ಈ ಪಾರ್ಕ್‌ ಹಿಂದೆ ರೇಡಿಯೋ ಪಾರ್ಕ್‌ ಕೂಡ ಆಗಿತ್ತು. ಆದರಿದು ಇತಿಹಾಸ ಪುಟ ಸೇರಲು ಸಜ್ಜಾಗಿದೆ.  

Advertisement

ಬಸ್ರೂರು ಗ್ರಾ.ಪಂ.ನ ಹಿಂಬದಿಯ ಸರಕಾರಿ ಜಾಗದಲ್ಲಿರುವ ಈ ಪಾರ್ಕ್‌ ಹಾಳುಬಿದ್ದಿದೆ. ಗಿಡಗಂಟಿಗಳು ಬೆಳೆದಿದೆ. 
ಮುಸ್ಸಂಜೆ ವಿಹಾರಕ್ಕೆಂದು ಬಂದವರು ಕುಳಿತುಕೊಳ್ಳುವಂತಿಲ್ಲ. 

ಈ ರೇಡಿಯೋ ಪಾರ್ಕ್‌ನ ಮಧ್ಯೆ ಜಾರುಬಂಡಿಯಿದ್ದರೂ ಮಕ್ಕಳು ಇದನ್ನು ಬಳಸುತ್ತಿಲ್ಲ.  

ಅವಶೇಷ ಮಾತ್ರ
ಅಂದಾಜು ಒಂದೂವರೆ ಎಕರೆ ವಿಸ್ತೀರ್ಣದಲ್ಲಿರುವ ಪಾರ್ಕ್‌ ಉತ್ತರಕ್ಕೆ ಎತ್ತರದ ಪ್ರದೇಶದಲ್ಲಿ ಗಿಡಗಂಟಿಗಳ ನಡುವೆ ಒಂದು ಹಳೆಯ ರೇಡಿಯೋ ಸ್ತಂಭದ ಅವಶೇಷ ಮಾತ್ರ ಈಗ ಉಳಿದುಕೊಂಡಿದೆ.  

30 ವರ್ಷಗಳ ಹಿಂದೆ ಬಳಕೆಯಲ್ಲಿತ್ತು
ಸುಮಾರು ಮೂವತ್ತಕ್ಕೂ ಹೆಚ್ಚು ವರ್ಷಗಳ ಹಿಂದೆ ಅಂತರ್ಜಾಲ, ಟೀವಿಯಂತ ಮಾಧ್ಯಮಗಳಿಲ್ಲದ ಕಾಲದಲ್ಲಿ ಸಂಜೆ ಹೊತ್ತು ಜನರಿಗೆ ಈ ಸ್ಥಳ ಮನರಂಜನೆ ನೀಡುತ್ತಿತ್ತು. ಪಾರ್ಕ್‌ಗೆ ಬಂದು ಕುಳಿತರೆ ಎತ್ತರದ ಗೋಪುರದ ಮೇಲಿನಿಂದ ರೇಡಿಯೋ ಕಾರ್ಯಕ್ರಮ ಕೇಳುತ್ತಿತ್ತು. ಈಗ ಕಾಲ ಬದಲಾಗಿದೆ. ರೇಡಿಯೋ ಪಾರ್ಕ್‌ ಹಾಳುಬಿದ್ದಿದೆ. ಪಾರ್ಕ್‌ ಅನ್ನು ಅದೇ ಹೆಸರಿನಲ್ಲಿ ಕಾಯಕಲ್ಪಗೊಳಿಸಿದರೆ ಊರ ಜನರಿಗೆ ವಿಹಾರಧಾಮವಾಗಿ, ಉದ್ಯಾನವನವಾಗಿ ರೂಪುಗೊಳ್ಳುತ್ತದೆ. ಈ ಬಗ್ಗೆ ಸ್ಥಳೀಯಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Advertisement

 ಒಂದು ಲಕ್ಷ ರೂ.ಅನುದಾನ
ರೇಡಿಯೋ ಪಾರ್ಕ್‌  ಪುನಃ ನಿರ್ಮಾಣಕ್ಕಾಗಿ ಗ್ರಾ.ಪಂ.ನಿಂದ ಶಾಸನಬದ್ಧ ಅನುದಾನದಿಂದ ರೂ.1ಲಕ್ಷ ಮಂಜೂರಾಗಿದೆ. ಆದರೆ ಈ ಹಣದಿಂದ ಇಡೀ ಪಾರ್ಕ್‌ ಪುನರ್‌ನಿರ್ಮಾಣ ಅಸಾಧ್ಯ. ಉಳಿದ ಹಣವನ್ನು ತಾ.ಪಂ., ಜಿ.ಪಂ. ಅಥವಾ ದಾನಿಗಳಿಂದ ಅಪೇಕ್ಷಿಸುತ್ತೇವೆ. ಇದನ್ನು ಸುಂದರ ವಿಶ್ರಾಂತಿಧಾಮವನ್ನಾಗಿ ರೂಪಿಸುವ ಆಶಯವಿದೆ. 
– ನಾಗರಾಜ ಗಾಣಿಗ ಸಂತೆಕಟ್ಟೆ, ಅಧ್ಯಕ್ಷರು, ಗ್ರಾ.ಪಂ. ಬಸ್ರೂರು

 ಅನುದಾನಕ್ಕೆ ಪ್ರಯತ್ನ
ಈಗಿನ ಬಜೆಟ್‌ ಮಾರ್ಚ್‌ಗೆ ಮುಕ್ತಾಯವಾಗುತ್ತದೆ. ನಂತರದ ಅನುದಾನದಲ್ಲಿ ರೇಡಿಯೋ ಪಾರ್ಕ್‌ನ ಅಭಿವೃದ್ಧಿಗಾಗಿ ಲಭ್ಯ ಅನುದಾನ ನೀಡಲು ಪ್ರಯತ್ನಿಸುತ್ತೇನೆ.
– ರಾಮ್‌ ಕಿಶನ್‌ ಹೆಗ್ಡೆ, ತಾ.ಪಂ. ಉಪಾಧ್ಯಕ್ಷರು

– ದಯಾನಂದ ಬಳ್ಕೂರು

Advertisement

Udayavani is now on Telegram. Click here to join our channel and stay updated with the latest news.

Next