ದೇವನಹಳ್ಳಿ: ಕೇಂದ್ರ ಹಾಗು ರಾಜ್ಯ ಸರ್ಕಾರಗಳು ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೋಟ್ಯಾಂತರ ರೂ.ಖರ್ಚು ಮಾಡುತ್ತಿವೆ.ಆದರೆ,ತಾಲೂಕಿನ ನಲ್ಲೂರು ಗ್ರಾಪಂ ವ್ಯಾಪ್ತಿಯ ಮಲ್ಲೇನಹಳ್ಳಿ ರಸ್ತೆ ಸ್ವಾತಂತ್ರ್ಯ ಬಂದಾಗಿನಿಂದಲೂ ಡಾಂಬರು ಕಂಡಿಲ್ಲ ಅಂದ್ರೆ ನಂಬಲೇಬೇಕು.
ಕೆಸರು ಗದ್ದೆ: ಮಳೆ ಬಂದರೆ ಈ ರಸ್ತೆಯು ಕೆಸರು ಗದ್ದೆ ಬದಲಾಗುತ್ತೆ.ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡಬೇಕಾದರೆ ಯಮ ಯಾತನೆ ಪಡಬೇಕಾಗುತ್ತೆ.ಮಳೆಯಿಂದ ರಸ್ತೆಯ ಗುಂಡಿಗಳಲ್ಲಿ ನೀರು ನಿಂತು ರಸ್ತೆ ಹದಗೆಟ್ಟಿದ್ದು, ದ್ವಿಚಕ್ರ ವಾಹನ ಸವಾರರು ಕೆಸರು ಗದ್ದೆಯಂತಿರುವ ರಸ್ತೆಯ ಮೇಲೆ ಸವಾರಿ ಮಾಡಬೇಕಾದರೆ ಜೀವ ಕೈಯಲ್ಲಿ ಹಿಡಿದಿಟ್ಟುಕೊಳ್ಳುವ ಚಿಂತಾಜನಕ ಸ್ಥಿತಿ ಇದ್ದು, ಸವಾರರು ಸ್ವಲ್ಪ ಆಯಾ ತಪ್ಪಿದರೂ ಆಸ್ಪತ್ರೆಗೆ ಸೇರುವುದು ಖಚಿತ. ಇದರಿಂದ ಶಾಲಾ ಮಕ್ಕಳು ಸಹ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಬೇಸಿಗೆ ಕಾಲದಲ್ಲಿ ರಸ್ತೆಯ ಮೇಲಿನ ಧೂಳಿನಿಂದ ಮುಖ ಮುಚ್ಚಿಕೊಂಡು ಸಂಚರಿಸಬೇಕಾಗಿದೆ. ನಲ್ಲೂರಿಂದ ಕೇವಲ ಒಂದು ಕಿಮೀ ಡಾಂಬರು ರಸ್ತೆ ಮಂಜೂರು ಮಾಡಿಸಲು ಜನಪ್ರತಿನಿಧಿಗಳು ಮೀನಾಮೇಷ ಎಣಿಸುತ್ತಿದ್ದಾರೆ.ಆದಷ್ಟು ಬೇಗ ರಸ್ತೆ ಸರಿಪಡಿಸಿದರೆ ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುಕೂಲವಾಗಲಿದೆ. ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು, ಜನ ಪ್ರತಿನಿಧಿಗಳು ಇನ್ನಾದರೂ ರಸ್ತೆಯ ನಿರ್ಮಾಣಕ್ಕೆ ಮುಂದಾಗಬೇಕು ಎನ್ನವುದು ಗ್ರಾಮಸ್ಥರ ಒತ್ತಾಯ.
ಕಳೆದ 7 ದಶಕಗಳಿಂದ ಈ ರಸ್ತೆ ಡಾಂಬರು ಕಾಣದ ಮಣ್ಣಿನ ರಸ್ತೆ ಆಗಿ ಉಳಿದಿದೆ. ಇದರಿಂದ ಜನರ ಸಂಚಾರಕ್ಕೆ ಕಷ್ಟವಾಗುತ್ತಿದೆ.ಚುನಾವಣೆ ಬಂದಾಗ ಮಾತ್ರ ಜನ ಪ್ರತಿನಿಧಿಗಳು, ಈ ರಸ್ತೆಯು ಟೆಂಡರ್‌ನಲ್ಲಿದೆ ಶೀಘ್ರದಲ್ಲಿ ರಸ್ತೆ ಸರಿಯಾಗಲಿದೆ ಎಂದು ಹೇಳಿಕೊಂಡು ಹೋಗುತ್ತಾರೆ.ಆಮೇಲೆ ಇತ್ತ ಸುಳಿಯುವುದೇ ಇಲ್ಲ.
-ನಾರಾಯಣಸ್ವಾಮಿ ಗ್ರಾಮಸ್ಥ
ಮಲ್ಲೇನ ಹಳ್ಳಿ ರಸ್ತೆ ಡಾಂಬರೀಕರಣ ವ್ಯವಸ್ಥೆ ಮತ್ತು ಚರಂಡಿ ನಿರ್ಮಿಸಲು ಗ್ರಾಮ ಸಡಕ್ ಯೋಜನೆಗೆ ಸೇರಿಸಲಾಗಿದೆ. 3 ಕೋಟಿ 20 ಲಕ್ಷ ರೂ ವೆಚ್ಚದ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದ್ದು, ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ಆಗಬೇಕಾಗಿದೆ. ನಲ್ಲೂರು ಮಲ್ಲೇನ ಹಳ್ಳಿ, ಸೋಮತ್ತನ ಹಳ್ಳಿ ಮತ್ತು ದೇವನಾಯಕನ ಹಳ್ಳಿಯ ಸಂಪರ್ಕ ರಸ್ತೆ ಆಗಿದೆ. ಇನ್ನು 3.5 ಕಿ.ಮೀ ರಸ್ತೆ ನಿರ್ಮಾಣವಾಗಲಿದೆ.
-ಜಿ ಲಕ್ಷ್ಮೀ ನಾರಾಯಣ್ ಜಿಪಂ ಸದಸ್ಯ
ಮಲ್ಲೇನ ಹಳ್ಳಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅನುದಾನಕ್ಕೆ ಸೇರಿಸಲು ಕಳುಹಿಸಲಾಗಿದೆ. ಶಾಸಕರು ಸಹ ಈ ರಸ್ತೆಯ ಅಭಿವೃದ್ಧಿಗೆ ಶಾಸಕ ಪ್ರದೇಶಾಭಿವೃದ್ಧಿಯ ಅನುದಾನ ನೀಡುವುದಾಗಿ ತಿಳಿಸಿದ್ದಾರೆ.
-ಮಂಜುನಾಥ್, ಜಿಪಂ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗದ ಎಇಇ
* ಎಸ್ ಮಹೇಶ್