ಕಲಬುರಗಿ: ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುವಾಗದೇ ಸಂಶೋಧನಾ ಮನೋಭಾವ ಕೂಡ ಬೆಳೆಸಿಕೊಳ್ಳಬೇಕು. ವೃತ್ತಿ ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಸರ್ವತೋಮುಖ ಅಭಿವೃದ್ಧಿ ಮಹತ್ವದ್ದಾಗಿದೆ ಎಂದು ಕೆಬಿಎನ್ ವಿವಿಯ ಡೀನ್ ಡಾ| ನಿಶಾತ ಆರಿಫ್ ಹುಸೇನಿ ಹೇಳಿದರು.
ನಗರದ ಖಾಜಾ ಬಂದೇನವಾಜ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ 2021ರ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಮೊದಲ ಬ್ಯಾಚ್‌ನ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವ ಬೆಳೆಯಲೆಂದೆಯೇ ವಿಶ್ವವಿದ್ಯಾಲಯ ಹೊಸ ಪರೀಕ್ಷಾ ಪದ್ಧತಿ ಜಾರಿಗೊಳಿಸಿದೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಹೆಚ್ಚಾಗಬೇಕು. ಸ್ನಾತಕೋತ್ತರ ಪದವಿಗೆ ಅಷ್ಟೆ ಸೀಮಿತವಾಗಿರದೇ ಡಾಕ್ಟರೆಟ್ ಬಗ್ಗೆಯೂ ಚಿಂತಿಸಬೇಕು ಎಂದರು.
ಉರ್ದು ವಿಭಾಗದ ಮುಖ್ಯಸ್ಥ ಡಾ| ಹಮೀದ್ ಅಕ್ಬರ್ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಗೌರವ ನೀಡಬೇಕು. ಶಿಸ್ತನ್ನು ಅಳವಡಿಸಿಕೊಂಡಲ್ಲಿ ಯಶಸ್ಸಿನ ದಾರಿ ಸುಗಮವಾಗುವುದು. ವಿದ್ಯಾರ್ಥಿ ಜೀವನ ಸ್ವರ್ಣ ಜೀವನ. ಕಾಲೇಜಿನ ದಿನಗಳು ನೆನಪು ಜೀವನಾದ್ಯಂತ ಇರುತ್ತದೆ. ಹೊಸ ಚಿಂತನೆಗಳು ಅತ್ಯಗತ್ಯ ಎಂದರು.
ಬಿ.ಬಿ.ರಜಾ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಜೇಬಾ ಪರ್ವೀನ್ ಮಾತನಾಡಿ, ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ಹೊಂದುವ ಬಗ್ಗೆ ಆಲೋಚಿಸಬೇಕು. ಆಧುನಿಕ ಯೋಚನಾ ಲಹರಿ ಮೈಗೂಡಿಸಿಕೊಂಡಿದ್ದು, ಸ್ಪರ್ಧಾತ್ಮಕ ಜಗತ್ತಿಗೆ ಬೇಕಾದ ಎಲ್ಲ ತರಬೇತಿ ವಿದ್ಯಾರ್ಥಿಗಳು ಪಡೆಯಬೇಕು ಎಂದರು.
ಭೌತ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಈರಮ್ ಫಾತಿಮಾ ಪ್ರಾರ್ಥಿಸಿದರು. ಗಣಿತ ವಿಭಾಗದ ವಿದ್ಯಾರ್ಥಿನಿ ಐಮನ್ ಸುಲ್ತಾನಾ ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ವಿದ್ಯಾರ್ಥಿನಿ ಗೌಸಿಯಾ ವಂದಿಸಿದರು. ಸಮೂಹ ಸಂವಹನ ಮತ್ತು ಮಾಧ್ಯಮ ವಿಭಾಗದ ವಿದ್ಯಾರ್ಥಿ ಜುಬೇರ ಅಹ್ಮದ್ ಮತ್ತು ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಸಫೂರಾ ನಿರೂಪಿಸಿದರು.