ತುಳುನಾಡು ಪರಶುರಾಮನ ಸೃಷ್ಠಿ ಎಂದೇ ಹೆಸರುವಾಸಿ ಪಡೆದ ಪರಿಸರ. ಇದು ದೈವಾರಾಧನೆ, ಯಕ್ಷಗಾನ, ಬೊಂಬೆಯಾಟ, ಕಂಬಳ, ಕೋಳಿ ಕಾಳಗ ಸೇರಿದಂತೆ ಅನೇಕ ಜಾನಪದ ಕ್ರೀಡೆ, ಕಲೆಗಳ ತವರೂರು. ಇತ್ತೀಚೆಗೆ ಪ್ರದರ್ಶನಗೊಂಡ ಕಾಂತಾರ ಚಿತ್ರದ ಅನಂತರ ತುಳುನಾಡು ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಸಂಚಲನದಲ್ಲಿದೆ. ತುಳುನಾಡ ಇತಿಹಾಸದ ಪುಟಗಳನ್ನು ಮಗುಚಿ ನೋಡಿದರೆ ಒಂದೊಂದು ಸ್ಥಳವೂ ಒಂದೊಂದು ಕಥೆಯನ್ನು ತೆರೆದಿಡುತ್ತದೆ. ಇದರ ಸಾಲಿಗೆ ಸೇರುವ ಒಂದು ಮನೋಹರ ತುಳುನಾಡ ಸ್ಥಳವೇ ತುಳುನಾಡ ರಾಜಧಾನಿ ಬಾರಕೂರು. ಸಾವಿರ ವರ್ಷಗಳ ಇತಿಹಾಸ ಇರುವ ಸಂಸ್ಥಾನದಲ್ಲಿ ತುಳುವರ ಅರಸರಾದ ಆಳುಪರು ಆಳಿದ ಭವ್ಯ ರಾಜಧಾನಿ ಈ ಬಾರಕೂರು.
ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ 13 ಕಿಲೋಮೀಟರ್ ಸಾಗಿದಾಗ ಸಿಗುವ ಸ್ಥಳ ಬ್ರಹ್ಮಾವರದಿಂದ ಬಲಬದಿಗೆ ಸಾಗುವ ರಸ್ತೆಯಲ್ಲಿ 3 ಕಿಲೋ ಮೀಟರ್ ಸಾಗಿದರೆ ಸಿಗುವುದೇ ಈ ಗತಕಾಲದ ವೈಭವದ ಪಳೆಯುಳಿಕೆಯ ನಾಡು, ತುಳುನಾಡ ಹಂಪೆ ಬಾಕೂìರು. ಆಗಿನ ಕಾಲದಲ್ಲಿ ಇದನ್ನು ಬಾರಕನ್ಯಾಪುರ ಅಥವಾ ಬರಕ್ಕನೂರು ಎಂದು ಕರೆಯುತ್ತಿದ್ದರು. ಬಾಕೂìರಿನ ಪರಿಸರದಲ್ಲಿ ಸಿಗುವ ಒಂದೊಂದು ಕಲ್ಲುಗಳು ತುಳುನಾಡಿನ ಅಂದಿನ ಗತವೈಭವದ ಪರಿಚಯ ಮಾಡಿಕೊಡುತ್ತದೆ.
ಬಾರಕೂರಿನ ವಿಶೇಷತೆ
ಬಾರಕೂರು ತುಳುನಾಡ ರಾಜಧಾನಿ ಮಾತ್ರವಲ್ಲದೇ ದೇವಾಲಯಗಳ ಬೀಡು ಎಂದು ಸಹ ಪ್ರಸಿದ್ಧಿ ಪಡೆದಿದೆ. ರಾಜಮನೆತನಗಳ ಆಳ್ವಿಕೆಯ ಕಾಲದಲ್ಲಿ ತುಳುನಾಡಿನ ಎಲ್ಲ ಜಾತಿಗಳ ಮೂಲ ಬಾರಕೂರಾಗಿದ್ದ ಕಾರಣ ಪ್ರತಿ ಸಮುದಾಯಕ್ಕೆ ಸಂಬಂಧಿಸಿದ ದೇವಸ್ಥಾನಗಳು ಬಾರಕೂರಲ್ಲಿದ್ದವಂತೆ. ಇಲ್ಲಿ 365 ದೇವಸ್ಥಾನಗಳಿದ್ದು, ಅದರಲ್ಲಿ ಈಗ ಶೇ. 75ಕ್ಕೂ ಅಧಿಕ ದೇವಾಲಯಗಳು ನಾಶವಾಗಿವೆ. ಬಹುಶಃ ಆ ದೇವಸ್ಥಾನಗಳು ನಾಶವಾಗದೆ ಇಂದಿಗೂ ಉಳಿದಿದ್ದರೆ ಇಂದು ಕೇರಳಕ್ಕೆ ಬದಲಾಗಿ ಕರ್ನಾಟಕ ದೇವಾಲಯಗಳ ನಾಡಾಗಿರುತ್ತಿತ್ತೇನೋ.
ಇದರ ಜತೆಗೆ ಚಾಲುಕ್ಯ, ಹೊಯ್ಸಳ ಕಾಲದ ಶಿಲ್ಪಕಲೆಗಳು, ಜೈನ ಬಸದಿಗಳು, ತುಳು ಲಿಪಿಯಲ್ಲಿರುವ ಶಾಸನದ ಕಲ್ಲುಗಳು, ಮಹಾಸತಿ ಕಲ್ಲುಗಳು, ರಾಣಿ ಸ್ನಾನ ಮಾಡುತ್ತಿದ್ದ ಕೆರೆ ಎನ್ನಲಾದ, ಕಲ್ಲಿನಿಂದ ಸುಂದರವಾಗಿ ಕಟ್ಟಿದ ಬಾವಿಯಲ್ಲಿ ಈಗಲೂ ನೀರನ್ನು ನೋಡಬಹುದು.
ಬಾರಕೂರಿನ ಇತಿಹಾಸ
ಭೂತಾಳ ಪಾಂಡ್ಯ ಎಂಬ ರಾಜ ಬಾರಕೂರನ್ನು ಆಳುತ್ತಿದ್ದನೆಂಬ ನಂಬಿಕೆ. ಸಂಸ್ಕೃತದ “ಭೂತಾಳ ಪಾಂಡ್ಯ ಚರಿತಂ’ ಕೃತಿಯ 13ನೇ ಅಧ್ಯಾಯದಲ್ಲಿ ಭೂತಾಳ ಪಾಂಡ್ಯ ಕ್ರಿ.ಶ 77ರಲ್ಲಿ ಬಾರ್ಕೂರಿನಲ್ಲಿ ಆಳ್ವಿಕೆ ನಡೆಸುತ್ತಿದ್ದ ಎಂಬ ಮಾಹಿತಿ ಇದೆ. ಪಾಂಡ್ಯ ವಂಶ 259 ವರ್ಷ ಆಡಳಿತ ನಡೆಸಿದೆ ಎಂದು ಕೂಡ ಈ ಕೃತಿಯಲ್ಲಿ ಮಾಹಿತಿ ಇದೆ. ಭೂತಾಳ ಪಾಂಡ್ಯನನ್ನು ಹೊರತುಪಡಿಸಿದರೆ ಬಾರಕೂರಿನ ಇತಿಹಾಸದಲ್ಲಿ ಆಳುಪರ ಆಡಳಿತವೇ ಕಾಣುವುದು.
ನೂರಾರು ವರ್ಷಗಳ ಕಾಲ ಇಂತಹ ಗತವೈಭವಗಳಿಂದ ಕಂಗೊಳಿಸುತ್ತಿದ್ದ ಬಾರಕೂರು ಈಗ ಮರೆಯಾಗಿ ಹೋಗಿದೆ. ಇದರ ಆಸುಪಾಸಿನಲ್ಲಿ ಇನ್ನೂ ಸಾಕಷ್ಟು ಜೀರ್ಣೋದ್ಧಾರ ಕಾಣದ ಶಿಥಿಲಗೊಂಡ ಭೂಗತವಾದ ದೇವಾಲಯಗಳಿವೆ. ಸರಕಾರ ಇಲ್ಲಿ ಇನ್ನಷ್ಟು ಸಂಶೋಧನೆಗಳನ್ನು ನಡೆಸಿ ರಕ್ಷಣೆಗೆ ಮುಂದಾದರೆ ಬಾರಕೂರು ಬಹುಶಃ ಮೊದಲಿನ ರಂಗನ್ನು ಪಡೆದುಕೊಂಡು ಮುಂದಿನ ದಿನಗಳಲ್ಲಿ ಕರ್ನಾಟಕದ ಒಂದೊಳ್ಳೆ ಪ್ರವಾಸಿ ತಾಣವಾಗಿ ಬದಲಾಗಬಹುದು.
-ದಿವ್ಯ ದೇವಾಡಿಗ
ಎಸ್.ಡಿ.ಎಂ., ಉಜಿರೆ