Advertisement

ಅಡುಗೆ ಕೆಲಸಗಾರರ ವಯೋನಿವೃತ್ತಿ ಕೈ ಬಿಡಿ

03:05 PM Apr 12, 2022 | Team Udayavani |

ರಾಯಚೂರು: ಬಿಸಿಯೂಟ ಯೋಜನೆ ಶುರುವಾದಾಗಿನಿಂದ ಕೆಲಸ ಮಾಡಿಕೊಂಡು ಬಂದಿರುವ ಅಡುಗೆಯವರನ್ನು 60 ವರ್ಷ ವಯೋಮಾನ ನೆಪವೊಡ್ಡಿ ನಿವೃತ್ತಿ ಮಾಡುತ್ತಿರುವ ಕ್ರಮ ಖಂಡಿಸಿ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಪಬ್ಲಿಕ್‌ ಗಾರ್ಡ್‌ನ್‌ನಿಂದ ಡಿಸಿ ಕಚೇರಿ ಎದುರಿನ ಉದ್ಯಾನವದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿ ಧರಣಿ ನಡೆಸಲಾಯಿತು. ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಮೂಲಕ ಸರ್ಕಾರಕ್ಕೆ ಪ್ರತ್ಯೇಕ ಮನವಿ ಸಲ್ಲಿಸಲಾಯಿತು.

19 ವರ್ಷ ಸೇವೆ ಸಲ್ಲಿಸಿದವರನ್ನು ವಯಸಿನ ಕಾರಣವೊಡ್ಡಿ ನಿವೃತ್ತಿ ಮಾಡಲಾಗಿದೆ. ಬಡ, ರೈತ, ಕೃಷಿ ಕೂಲಿಕಾರರ, ದೀನದಲಿತ ಮಕ್ಕಳಿಗೆ ಬಿಸಿಯೂಟ ಮಾಡುವಲ್ಲಿ ಇವರ ಪಾತ್ರ ದೊಡ್ಡದಿದೆ. 2001-02ರಲ್ಲಿ ಅಡುಗೆ ಕೆಲಸಕ್ಕೆ ಸೇರಿದಾಗ ವಿದ್ಯಾಭ್ಯಾಸ ಮತ್ತು ವಯಸ್ಸಿನ ಅರ್ಹತೆ ಮಾತ್ರ ನಿಗದಿ ಮಾಡಲಾಗಿತ್ತು. ಅದರಲ್ಲಿ ನಿವೃತ್ತಿ ವಯಸ್ಸನ್ನು ಸರ್ಕಾರದ ಕೈಪಿಡಿಯಲ್ಲಿ ನಿಗದಿಪಡಿಸಿಲ್ಲ ಎಂದು ವಿವರಿಸಿದರು.

ಬಿಸಿಯೂಟ ನೌಕರರ ನಿವೃತ್ತಿ ವಿಷಯದಲ್ಲಿ ಹಲವು ಬಾರಿ ಸಭೆಗಳಾಗಿವೆ. ಎಲ್‌ಐಸಿ ಮೂಲಕ ವಿಶೇಷ ಪಿಂಚಣಿ ಯೋಜನೆ ರೂಪಿಸಲು ಒಪ್ಪಿಗೆ ಸೂಚಿಸಲಾಗಿತ್ತು. ಇಲಾಖೆ ಅಧಿಕಾರಿಗಳು ಮತ್ತು ನಮ್ಮ ಸಂಘಟನೆಯ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಈ ಎಲ್ಲ ಕ್ರಮಗಳು ಜಾರಿಯಾಗುವ ಮೊದಲೇ ಸರ್ಕಾರ ಏಕಾಏಕಿ ಬಿಸಿಯೂಟ ನೌಕರರನ್ನು ಕೆಲಸದಿಂದ ನಿವೃತ್ತಿ ಮಾಡುತ್ತಿರುವುದು ಖಂಡನೀಯ ಎಂದು ದೂರಿದರು.

ರಾಜ್ಯದಲ್ಲಿ ಸುಮಾರು 11-12 ಸಾವಿರ ನೌಕರರ ಕೆಲಸವನ್ನು ಯಾವುದೇ ನಿವೃತ್ತಿ, ಸೌಲಭ್ಯವಿಲ್ಲದೆ ಸರ್ಕಾರ ತೆಗೆದು ಹಾಕಲು ಮುಂದಾಗಿದೆ. ಸರ್ಕಾರ ಕೂಡಲೇ ಈ ಸುತ್ತೋಲೆ ಹಿಂಪಡೆಯಬೇಕು. ಬಜೆಟ್‌ನಲ್ಲಿ ಬಿಸಿಯೂಟ ನೌಕರರಿಗೆ ಹೆಚ್ಚಿಸಿದ 1000 ರೂ. ವೇತನವನ್ನು ಜನವರಿ 2022ರಿಂದ ಅನ್ವಯಿಸಿ ಜಾರಿ ಮಾಡಬೇಕು. ಬಿಸಿಯೂಟ ನೌಕರರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಸರ್ಕಾರ ನಿವೃತ್ತಿ ವೇತನ ನಿಗದಿ ಮಾಡುವವರೆಗೆ ತಕ್ಷಣದಲ್ಲಿ ಬಿಡುಗಡೆ ಮಾಡುವ ಬಿಸಿಯೂಟ ನೌಕರರಿಗೆ ಒಂದು ಲಕ್ಷ ರೂ. ಇಡಿಗಂಟು ಪರಿಹಾರ ನೀಡಬೇಕು. ಸರ್ಕಾರ ಒಪ್ಪದಿದ್ದರೆ ನಮ್ಮ ಬೇಡಿಕೆಗಳ ಜಾರಿಗಾಗಿ ಆಗ್ರಹಿಸಿ ಏ.18ರಿಂದ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಬೃಹತ್‌ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

Advertisement

ಸಂಘಟನೆ ಮುಖಂಡರಾದ ರೇಣುಕಮ, ಮರಿಯಮ್ಮ, ಮಹ್ಮದ್‌ ಅನೀಫ್‌, ಡಿ.ಎಸ್‌. ಶರಣಬಸವ, ವಿಶಾಲಾಕ್ಷಿ, ಶರಣಮ್ಮ ಪಾಟೀಲ್‌, ಶ್ರೀಲೇಖಾ, ಶೋಭಾ, ನಾಗಮ್ಮ, ಅಕ್ಕಮಹಾದೇವಿ, ಕಲ್ಯಾಣಮ್ಮ, ನಾಗರತ್ನ ಸಂತೆಕಲ್ಲೂರು, ಅಕ್ಕಮ್ಮ ಹಟ್ಟಿ, ಗಂಗಮ್ಮ, ರೇಣುಕಾ, ಬಸಮ್ಮ, ತುಳಜಾಬಾಯಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next